ಮುಂಬಯಿ: ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಕಳೆದ 18 ವರ್ಷಗಳಿಂದ ಮುಂಬಯಿಯಲ್ಲಿರುವ ನಾನಿಲ್ತಾರ್ ಪರಿಸರದ ಎಲ್ಲಾ ಸಮಾಜದವರು ಒಗ್ಗಟ್ಟಿನಿಂದ ಈ ಸೇವೆಯನ್ನು ಮಾಡುತ್ತಿದ್ದೇವೆ. ಈ ಪುಣ್ಯಕಾರ್ಯಕ್ಕೆ ಅಪಾರ ಭಕ್ತರು ಸಹಕಾರ ನೀಡಿದ್ದು, ಅವರೆಲ್ಲರ ಬೆಂಬಲದಿಂದ ಪ್ರತಿ ವರ್ಷವೂ ವೈಭವದಿಂದ ಪೂಜೆ ನೆರವೇರಿಸಲು ಸಾಧ್ಯವಾಗುತ್ತಿದೆ. ಧಾರ್ಮಿಕ ಕಾರ್ಯಗಳ ಮೂಲಕ ಮುಂಡ್ಕೂರು ಹಾಗೂ ನಾನಿಲ್ತಾರ್ ಗ್ರಾಮಸ್ಥರು ಅಪಾರ ಸಂಖ್ಯೆಯಲ್ಲಿ ಒಗ್ಗಟ್ಟಾಗುತ್ತಿದ್ದಾರೆ ಎಂದು ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು-ಮುಂಬಯಿ ಇದರ ಅಧ್ಯಕ್ಷ ಹರೀಶ್ ಡಿ. ಮೂಲ್ಯ ನಾನಿಲ್ತಾರ್ ತಿಳಿಸಿದರು.

ಆಗಸ್ಟ್ 30ರಂದು ವಿಲೇ ಪಾರ್ಲೆ ಪೂರ್ವದ ಮಾಳವೀಯ ರಸ್ತೆಯ ಗೋಮಾಂತಕ್ ಚೌಕ್‌ನಲ್ಲಿರುವ ಗೋಮಾಂತಕ್ ಸೇವಾ ಸಂಘದ ಸಭಾಂಗಣದಲ್ಲಿ ಜರುಗಿದ ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು-ಮುಂಬಯಿ ಇದರ 18ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಮಹೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿ, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಗಿರೀಶ್ ಬಿ. ಸಾಲ್ಯಾನ್ ಮಾತನಾಡಿ, ಈ ಸಂಸ್ಥೆಯಲ್ಲಿ ಕುಲಾಲ ಸಮಾಜದ ಬಂಧುಗಳು ಸಕ್ರಿಯವಾಗಿ ತೊಡಗಿಸಿಕೊಂಡು ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಿರುವುದು ಅಭಿಮಾನದ ಸಂಗತಿ. ನಿಮ್ಮ ಧಾರ್ಮಿಕ ಹಾಗೂ ಸೇವಾ ಕಾರ್ಯಗಳು ನಿರಂತರವಾಗಿರಲಿ, ಒಗ್ಗಟ್ಟಿನಿಂದ ಸಂಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಿ ಎಂದು ಹಾರೈಸಿದರು.
ಕುಲಾಲ ಸಂಘ ಮುಂಬಯಿ ಇದರ ಕಟ್ಟಡ ನಿರ್ಮಾಣ ಸಮಿತಿಯ ಉಪ ಕಾರ್ಯಾಧ್ಯಕ್ಷ, ಉದ್ಯಮಿ ಹಾಗೂ ಸಮಾಜದ ಮಹಾದಾನಿ ಸುನಿಲ್ ಸಾಲ್ಯಾನ್ ಮಾತನಾಡಿ, ಕಳೆದ 18 ವರ್ಷಗಳಿಂದ ಬಳಗವು ನಡೆಸಿಕೊಂಡು ಬರುತ್ತಿರುವ ಸೇವಾ ಕಾರ್ಯಗಳು ಶ್ಲಾಘನೀಯ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಶ್ರದ್ಧೆಯಿಂದ ಮುನ್ನಡೆಸಿಕೊಂಡು ಹೋಗಬೇಕು. ನಿಮ್ಮ ಇಂತಹ ಸೇವೆಗಳಿಗೆ ನನ್ನ ಸಂಪೂರ್ಣ ಬೆಂಬಲ ಸದಾ ಇರುತ್ತದೆ ಎಂದರು.
ನಾನಿಲ್ತಾರ್ ಕುಲಾಲ ಸಂಘ ಮುಂಡ್ಕೂರು ಇದರ ಅಧ್ಯಕ್ಷ ಜಯರಾಮ ಕುಲಾಲ್ ಮಾತನಾಡಿ, ಈ ಬಳಗದ ಮೂಲಕ ನಾನಿಲ್ತಾರ್ ಕುಲಾಲ ಸಂಘಕ್ಕೆ ಅಪಾರ ಸಹಕಾರ ದೊರೆಯುತ್ತಿದೆ. ನಮ್ಮ ಊರಿನ ಕುಲಾಲ ಸಮಾಜದ ಬಂಧುಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲೂ ಸಂಸ್ಥೆಯ ಅಭಿವೃದ್ಧಿ ಕಾರ್ಯಗಳಿಗೆ ಇದೇ ರೀತಿ ಸಹಕಾರ ಮುಂದುವರಿಯಲಿ ಎಂದು ಆಶಿಸಿದರು.
ವೇದಿಕೆಯಲ್ಲಿ ಹೋಟೆಲ್ ಉದ್ಯಮಿಗಳಾದ ಮೋಹನ್ ಶೆಟ್ಟಿ ಸಾಂತೂರು, ಪದ್ಮನಾಭ ಬಂಗೇರ, ಸಮಾಜ ಸೇವಕಿ ಲತಾ ಕೃಷ್ಣ ಬಂಗೇರ ಮಾಹಿಮ್, ಸಾಕೀನಾಕಾದ ಸಮಾಜ ಸೇವಕಿ ರುಕ್ಮಿಣಿ ಯಶೋಧರ್ ಸಾಲ್ಯಾನ್, ಕುಲಾಲ ಸಂಘದ ಸಿಎಸ್‌ಟಿ-ಮುಳುಂಡ್ ಸ್ಥಳೀಯ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ಇಂದಿರಾ ಆರ್. ಬಂಜನ್, ಚರ್ಚ್‌ಗೇಟ್-ದಹಿಸರ್ ಸ್ಥಳೀಯ ಸಮಿತಿಯ ಮಹಿಳಾ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್ ಹಾಗೂ ನಾಲಾಸೋಪಾರದ ಗೋಪಾಲ ಸಾಲ್ಯಾನ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿಯ ಭಕ್ತ ನವೀನ್ ಅಂಚನ್, ಬಳಗದ ಸದಸ್ಯ ಲೋಕೇಶ್ ಸಾಲ್ಯಾನ್ ದಂಪತಿ ಹಾಗೂ ಸಂಚಾಲಕ ಕೃಷ್ಣ ಎಸ್. ಮೂಲ್ಯ ನಾಲಾಸೋಪಾರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಕೃಷ್ಣ ಮೂಲ್ಯ ನಿರೂಪಿಸಿದರು. ಸರೋಜಾ ಎಚ್. ಮೂಲ್ಯ, ನಳಿನಿ ಎನ್. ಬಂಜನ್ ಮತ್ತು ಹೇಮಲತಾ ಬಂಗೇರ ಅವರು ಸನ್ಮಾನಿತರ ಪರಿಚಯ ವಾಚಿಸಿದರು.
ವೇದಿಕೆಯಲ್ಲಿದ್ದ ಗಣ್ಯರನ್ನು ಬಳಗದ ಸಂಚಾಲಕ ಕೃಷ್ಣ ಮೂಲ್ಯ ನಾಲಾಸೋಪಾರ, ಉಪಾಧ್ಯಕ್ಷ ದಿನೇಶ್ ಮೂಲ್ಯ ಅಂಧೇರಿ, ಕಾರ್ಯದರ್ಶಿ ದಿನೇಶ್ ಬಂಗೇರ ಖಾರ್ ದಾಂಡಾ, ಕೋಶಾಧಿಕಾರಿ ರೋಹಿದಾಸ್ ಕೆ. ಬಂಜನ್ ನಾಲಾಸೋಪಾರ, ಜೊತೆ ಕಾರ್ಯದರ್ಶಿಗಳಾದ ಲೋಕೇಶ್ ಮೂಲ್ಯ ಗೋರೆಗಾಂವ್, ಸದಾಶಿವ ಮೂಲ್ಯ ವಿರಾರ್, ಜೊತೆ ಕೋಶಾಧಿಕಾರಿಗಳಾದ ವಿಶ್ವನಾಥ ಕುಂದರ್ ಅಂಧೇರಿ ಹಾಗೂ ಶಶಿಕಾಂತ್ ಮೂಲ್ಯ ವಿರಾರ್ ಗೌರವಿಸಿದರು.
ಸಭೆಯಲ್ಲಿ ಊರಿನಿಂದ ಆಗಮಿಸಿದ ಸುರೇಂದ್ರ ಮೂಲ್ಯ, ಅಮೆರಿಕಾದಿಂದ ಆಗಮಿಸಿದ ಅಮಿತಾ ಅಂಚನ್, ಕುಲಾಲ ಸಂಘ ಮುಂಬಯಿಯ ಪದಾಧಿಕಾರಿಗಳು, ಮೀರಾ ರೋಡ್-ವಿರಾರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶಂಕರ್ ವೈ. ಮೂಲ್ಯ ಮುಂಡ್ಕೂರು, ಚರ್ಚ್‌ಗೇಟ್-ದಹಿಸರ್ ಸ್ಥಳೀಯ ಸಮಿತಿಯ ಪದಾಧಿಕಾರಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಮಧ್ಯಾಹ್ನದ ನಂತರ ಸ್ಥಳೀಯ ಪ್ರತಿಭೆಗಳು, ಮಹಿಳೆಯರು ಹಾಗೂ ಬಳಗದ ಸದಸ್ಯರಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.




