July 23, 2026
Mumbai News Kannada
ಸುದ್ದಿ

ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ಜೀರ್ಣೋದ್ಧಾರ ಸಮಾಲೋಚನಾ ಸಭೆ







ಮುಂಬೈ ಕನ್ನಡಿಗರು ಧಾರ್ಮಿಕ ಕರ್ತವ್ಯಕ್ಕೆ ಹಿಂಜರಿಯುವವರಲ್ಲ: ಮುನಿಯಾಲು ಉದಯ ಕುಮಾರ್ ಶೆಟ್ಟಿ

ವರದಿ ಮತ್ತು ಚಿತ್ರ: ದಿನೇಶ್ ಕುಲಾಲ್

ಮುಂಬೈ: “ಸುಮಾರು 1,300 ವರ್ಷಗಳ ಸುದೀರ್ಘ ಇತಿಹಾಸವಿರುವ ಕಾರ್ಕಳ ಶಿವಪುರದ ಶ್ರೀ ಶಂಕರದೇವ ದೇವಸ್ಥಾನವು ಆರು ಶತಮಾನಗಳ ಬಳಿಕ ಜೀರ್ಣೋದ್ಧಾರಗೊಳ್ಳುತ್ತಿರುವುದು ನಮ್ಮೆಲ್ಲರ ಭಾಗ್ಯ. ಮುಂಬೈನಲ್ಲಿ ನೆಲೆಸಿರುವ ತುಳು-ಕನ್ನಡಿಗರು ತಮ್ಮ ವೃತ್ತಿ ಬದುಕಿನ ಜೊತೆಗೆ ತಾಯ್ನಾಡಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕರ್ತವ್ಯಗಳಿಗೆ ಸದಾ ಸ್ಪಂದಿಸುವ ಗುಣದವರಾಗಿದ್ದು, ಈ ಕಾರ್ಯದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ,” ಎಂದು ದೇವಸ್ಥಾನದ ಜೀರ್ಣೋದ್ಧಾರ ಸಂಯೋಜಕ ಸಮಿತಿಯ ಕಾರ್ಯಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಹೇಳಿದರು.

​ದಹಿಸರ್ ಪೂರ್ವದ ‘ಸನ್ ಶೈನ್ ಇನ್’ ಹೋಟೆಲ್‌ನ ಸಭಾಗ್ರಹದಲ್ಲಿ ಇತ್ತೀಚೆಗೆ ನಡೆದ ದೇವಸ್ಥಾನದ ಪುನರುತ್ಥಾನ ಕುರಿತ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೈವಿಕ ಸನ್ನಿಧಾನದ ಪುನರುತ್ಥಾನ ನಮ್ಮ ಆದ್ಯತೆ:

“ಶಿವಪುರ ಎಂಬ ಹೆಸರೇ ಆ ಶಿವನ ಪುರ ಎಂಬುದನ್ನು ಸಾರುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಮನುಷ್ಯನ ಕಷ್ಟಕಾರ್ಪಣ್ಯಗಳಿಗೆ ದೈವಿಕ ಆರಾಧನೆ ಅನಿವಾರ್ಯ. ನಮ್ಮ ಗ್ರಾಮ ಇಂದು ಶೈಕ್ಷಣಿಕ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಪ್ರಗತಿ ಕಂಡಿದೆ ಎಂದರೆ ಅದು ದೇವರ ಅನುಗ್ರಹ. ಇಂತಹ ಪುರಾತನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಮ್ಮ ಪಾಲಿಗೆ ಬಂದಿರುವುದು ಪೂರ್ವಜರ ಪುಣ್ಯದ ಫಲ. ಮುಂಬೈ ಭಕ್ತಾದಿಗಳ ಸಹಕಾರದೊಂದಿಗೆ ಈ ಶಂಕರಲಿಂಗೇಶ್ವರನ ಆಲಯವನ್ನು ಭವ್ಯವಾಗಿ ನಿರ್ಮಿಸೋಣ,” ಎಂದು ಉದಯ ಕುಮಾರ್ ಶೆಟ್ಟಿ ಭಕ್ತರಲ್ಲಿ ಮನವಿ ಮಾಡಿದರು.

ಸತ್ಕಾರ್ಯಕ್ಕೆ ಕೈಜೋಡಿಸಿದ ಗಣ್ಯರು:

ಬಿಜೆಪಿ ಮೀರಾ ಭಯಂದರ್ ಜಿಲ್ಲಾ ಉಪಾಧ್ಯಕ್ಷ ಪೆಲತ್ತೂರು ಉದಯ ಶೆಟ್ಟಿ ಮಾತನಾಡಿ, “ಗ್ರಾಮದ ಪ್ರತಿಯೊಬ್ಬರಿಗೂ ತಮ್ಮ ಗ್ರಾಮದ ದೇವರ ಆರಾಧನೆ ಮುಖ್ಯ. ಮಹಾಲಿಂಗೇಶ್ವರ, ಶಂಕರಲಿಂಗೇಶ್ವರ ಹೀಗೆ ವಿವಿಧ ರೂಪದಲ್ಲಿ ನೆಲೆಸಿರುವ ಈಶ್ವರನ ಆಲಯವನ್ನು ಅಭಿವೃದ್ಧಿಪಡಿಸುವುದು ನಮ್ಮೆಲ್ಲರ ಕರ್ತವ್ಯ. ಈ ಕಠಿಣ ಜವಾಬ್ದಾರಿಯನ್ನು ಹೊತ್ತಿರುವ ಮುನಿಯಾಲು ಉದಯಣ್ಣನವರ ಜೊತೆ ನಾವಿದ್ದೇವೆ,” ಎಂದರು.

​ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಮಾತನಾಡಿ, “ಸಂಪಾದನೆಯ ಒಂದು ಭಾಗವನ್ನು ವಿದ್ಯಾಕ್ಷೇತ್ರ ಅಥವಾ ಧಾರ್ಮಿಕ ಕ್ಷೇತ್ರಕ್ಕೆ ವಿನಿಯೋಗಿಸುವುದರಿಂದ ಬದುಕು ಸಾರ್ಥಕವಾಗುತ್ತದೆ. ಮುಂಬೈ ಭಕ್ತರು ಎಂದಿಗೂ ಇಂತಹ ಸತ್ಕಾರ್ಯಗಳಲ್ಲಿ ಹಿಂದೆ ಬಿದ್ದಿಲ್ಲ,” ಎಂದು ಅಭಿಪ್ರಾಯಪಟ್ಟರು.

​ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿ ಮಾತನಾಡಿ, ಹಣದಾನವೊಂದೇ ಅಲ್ಲದೆ ತನು-ಮನದ ಸೇವೆಯೂ ಮುಖ್ಯ ಎಂದರು. ಸಂಯೋಜಕ ಸಮಿತಿಯ ಮತ್ತೋರ್ವ ಕಾರ್ಯಾಧ್ಯಕ್ಷ ಅಜಿತ್ ಕುಮಾರ್ ಶೆಟ್ಟಿ ಶಿವಪುರ ಅವರು ಮಾತನಾಡಿ, ಎರಡನೇ ಹಂತದ ನಿಧಿ ಸಂಗ್ರಹಕ್ಕಾಗಿ ಪುಣೆ, ಮುಂಬೈ ಹಾಗೂ ಗುಜರಾತ್ ನಗರಗಳಲ್ಲಿ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಶೆಟ್ಟಿ ಅವರು ಮಹಿಳಾ ಭಕ್ತರ ಪರವಾಗಿ ಬೆಂಬಲ ಸೂಚಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಪ್ರಮುಖರು:

ವೇದಿಕೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸಕ್ರಿಯ ಕಾರ್ಯಕರ್ತರಾದ ಶ್ರೀನಿವಾಸ ಭಟ್ ಮತ್ತು ಸುರೇಶ್ ಶೆಟ್ಟಿ ಶಿವಪುರ ಉಪಸ್ಥಿತರಿದ್ದರು. ಸಭೆಯಲ್ಲಿ ಬಂಟ್ಸ್ ಫಾರ್ಮ್ ಮೀರಾ ಭಯಂದರ್ ಅಧ್ಯಕ್ಷ ಉದಯ ಶೆಟ್ಟಿ, ಉದ್ಯಮಿಗಳಾದ ಸುಧಾಕರ ಶೆಟ್ಟಿ ಗುಂಡಲ, ಪ್ರಭಾಕರ ಶೆಟ್ಟಿ ಗುಂಡಲ, ಕಲಾಪೋಷಕ ಕುಕ್ಕುಂದೂರು ಕರುಣಾಕರ ಶೆಟ್ಟಿ, ಬೋರಿವಲಿ ಜಗದೀಶ್ವರಿ ದೇವಸ್ಥಾನದ ವಿಠಲ ಪೂಜಾರಿ ಪಡುಕುಡೂರು, ರಂಗ ನಿರ್ದೇಶಕ ಕರುಣಾಕರ ಕಾಪು, ಕಲಾವಿದ ಜಿ.ಕೆ. ಕೆಂಚನಕೆರೆ, ಸಂಘಟಕಿ ಲೀಲಾಗಣೇಶ್ ಕಾರ್ಕಳ, ಕೃಷ್ಣ ಟಿ. ಪೂಜಾರಿ, ಶಿವಪ್ರಸಾದ್ ಶೆಟ್ಟಿ ಮೀರಾ ರೋಡ್, ಎಳಗೊಳಿ ಸುಂದರ ಶೆಟ್ಟಿ, ಬಿಜೆಪಿ ಕಾರ್ಯಕರ್ತರಾದ ಸುರೇಶ್ ಮ್ಹಾತ್ರೆ, ರಂಜನಾಜಿ, ರವೀಂದ್ರ ಶೆಟ್ಟಿ ದೆರ್ಲಕಟ್ಟೆ, ಜಗದೀಶ್ ಶೆಟ್ಟಿ ಪಂಜಿನಡುಕ ಹಾಗೂ ಶಿವಪುರ ಗ್ರಾಮಸ್ಥರು ಪಾಲ್ಗೊಂಡಿದ್ದರು.

​ದೇವಸ್ಥಾನದ ಸಾಕ್ಷ್ಯಚಿತ್ರ ಪ್ರದರ್ಶನದೊಂದಿಗೆ ಆರಂಭವಾದ ಸಭೆಯಲ್ಲಿ ಸುರೇಶ್ ಶೆಟ್ಟಿ ಶಿವಪುರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂತೋಷ್ ಶೆಟ್ಟಿ ಸಹಕರಿಸಿದರು. ರಮೇಶ್ ಶಿವಪುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ಶೆಟ್ಟಿ ವಂದಿಸಿದರು.



Related posts

ಭಾರತ್ ಬ್ಯಾಂಕ್‌ಗೆ NAFCUB ಮತ್ತು ಬ್ಯಾಂಕಿಂಗ್ ಫ್ರಾಂಟಿಯರ್ಸ್ ವತಿಯಿಂದ ಶ್ರೇಷ್ಠ ಸೈಬರ್‌ ಸೆಕ್ಯೂರಿಟಿ ಪ್ರಶಸ್ತಿ ಹಾಗೂ ಶ್ರೇಷ್ಠ ಅಪಾಯ ನಿರ್ವಹಣಾ ಪ್ರಶಸ್ತಿ

Mumbai News Desk

ಪಾಣೆಮಂಗಳೂರಲ್ಲಿ ಶ್ರೀನಿವಾಸ ಸಾಫಲ್ಯ ದಂಪತಿಗೆ ಸನ್ಮಾನ 

Mumbai News Desk

ಎಸ್. ಎಸ್. ಸಿ. (CBSE) ಪರೀಕ್ಷೆ: ಶಮ ಸಂಜೀವ ಬಂಗೇರಗೆ 97.4% ಅಂಕ

Mumbai News Desk

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ: ಮುಖ್ಯ ರೂವಾರಿ, ಪುಣೆಯ ರಸಾಯನಶಾಸ್ತ್ರ ಉಪನ್ಯಾಸಕ ಸಿಬಿಐ ವಶಕ್ಕೆ

Mumbai News Desk

ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ ಗೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಉದಯ ಎಸ್. ಶೆಟ್ಟಿ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಸುಳ್ಳು ಸುದ್ದಿಗಳಿಗೆ ಸ್ಪಷ್ಟಿಕರಣ:

Mumbai News Desk