30.9 C
Mumbai
June 8, 2026
Mumbai News Kannada
ಪ್ರಕಟಣೆ

ಗೋರೆಗಾಂವ್ ಕರ್ನಾಟಕ ಸಂಘದ ವತಿಯಿಂದ ಮಾರ್ಚ್ 8ರಂದು ಮಹಿಳಾ ದಿನಾಚರಣೆ: ಪ್ರೊ. ನಳಿನಿ ವಿಶ್ವನಾಥ ಕಾರ್ನಾಡ್ ಸಂಸ್ಮರಣ ಪ್ರಶಸ್ತಿಗೆ ಅಮಿತಾ ಭಾಗ್ವತ್ ಆಯ್ಕೆ





ಮುಂಬಯಿ :ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆಯನ್ನು ಮಾರ್ಚ್ 8ರಂದು ಆದಿತ್ಯವಾರ ಸಂಜೆ 5 ಗಂಟೆಗೆ ಸಂಘದ ಅಧ್ಯಕ್ಷರಾದ ವಿಶ್ವನಾಥ ಕೆ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಗೋರೆಗಾಂವ್ ಪಶ್ಚಿಮದ ಕೇಶವ ಗೋರೆ ಸ್ಮಾರಕ ಟ್ರಸ್ಟ್ ಸಭಾಗೃಹದಲ್ಲಿ ಆಚರಿಸಲಾಗುವುದು. ಸುಜಾತ ವಿ. ಕೋಟ್ಯಾನ್, ಶೈಲಜಾ ರವಿ ಅಂಚನ್ ಹಾಗೂ ಪ್ರೊ. ನಳಿನಿ ವಿಶ್ವನಾಥ ಕಾರ್ನಾಡ್ ರವರ ಸಂಸ್ಮರಣೆಯಲ್ಲಿ ದತ್ತಿನಿಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಡಾ. ವಿಶ್ವನಾಥ ಕಾರ್ನಾಡ್ ರವರು ಪತ್ನಿ ಪ್ರೊ. ನಳಿನಿ ವಿ. ಕಾರ್ನಾಡ್ ರವರ ಹೆಸರಿನಲ್ಲಿ ಪ್ರತಿ ವರ್ಷ ಮುಂಬೈಯ ಓರ್ವ ಮಹಿಳಾ ಸಾಹಿತಿಗೆ “ಸಾಹಿತ್ಯ ಪ್ರಶಸ್ತಿ” ನೀಡುತ್ತಾ ಬಂದಿದ್ದಾರೆ. ಈ ವರ್ಷ ಸಾಹಿತಿ, ಲೇಖಕಿ ಶ್ರೀಮತಿ ಅಮಿತಾ ಭಾಗ್ವತ್ ರವರನ್ನು ಪ್ರೊ. ನಳಿನಿ ವಿಶ್ವನಾಥ ಕಾರ್ನಾಡ್ ಸಂಸ್ಮರಣಾ ದತ್ತಿನಿಧಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಉದ್ಯಮಿ, ಸಂಘದ ಮಾಜಿ ಅಧ್ಯಕ್ಷ ಹಾಗೂ ಸಮಾಜಸೇವಕ ಪಯ್ಯಾರ್ ರಮೇಶ್ ಶೆಟ್ಟಿಯವರು ಆಗಮಿಸಲಿದ್ದಾರೆ.

ಅಮಿತಾ ಭಾಗ್ವತ್

ಪ್ರೊ. ನಳಿನಿ ವಿಶ್ವನಾಥ ಕಾರ್ನಾಡ್ ಸಂಸ್ಮರಣ ಪ್ರಶಸ್ತಿಗೆ ಕವಯಿತ್ರಿ, ಕಾದಂಬರಿಗಾರ್ತಿ ಹಾಗೂ ಹವ್ಯಕ ಸಂದೇಶದ ಮಾಜಿ ಸಂಪಾದಕಿ ಅಮಿತಾ ಭಾಗ್ವತ್ ಆಯ್ಕೆಯಾಗಿದ್ದಾರೆ. ನ್ಯಾಯವಾದಿಗಳಾದ ಅಮಿತಾ ಭಾಗ್ವತ್ ಅವರು ಸಾಹಿತ್ಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು.

ಹೊನ್ನಾವರ ತಾಲೂಕಿನ ಕಡತೋಕ ಮೂಲದವರಾದ ಇವರು ಸಿರ್ಸಿಯಲ್ಲಿ ಜನಿಸಿದ್ದು, ಕಾರವಾರದಲ್ಲಿ ಬೆಳೆದಿದ್ದಾರೆ. ತಾಯಿ ಅನುಸೂಯ ಹಾಗೂ ತಂದೆ ಕಾರವಾರದ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲರಾದ ದಿ. ವಿ. ಜಿ. ಬಟ್ಟರು. ಬಿ.ಕಾಂ. ಪದವೀಧರೆಯಾದ ಇವರು ಶಿವಕುಮಾರ ಭಾಗ್ವತ್ ಅವರನ್ನು ಮದುವೆಯಾಗಿ ಮುಂಬೈಗೆ ಬಂದು ನ್ಯೂ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಪಿ.ಆರ್. ಭಾಗ್ವತ್ ಆ್ಯಂಡ್ ಕಂಪೆನಿ ಜೊತೆ ವೃತ್ತಿಜೀವನ ಆರಂಭಿಸಿದರು.

16 ವರ್ಷಗಳ ಕಾಲ ಹವ್ಯಕ ವೆಲ್ಪೇರ್ ಟ್ರಸ್ಟ್‌ನ ‘ಹವ್ಯಕ ಸಂದೇಶ’ದ ಗೌರವ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸುಮಾರು 10 ವರ್ಷಗಳ ಕಾಲ ಹವ್ಯಕ ವೆಲ್ಪೇರ್ ಟ್ರಸ್ಟ್‌ನ ಮಹಿಳಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಇವರು ಅಗತ್ಯವಿರುವ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿಯ ಆಯ್ಕೆ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. 2017ರಲ್ಲಿ ಯಶಸ್ವಿಯಾಗಿ ನಡೆದ ಜಾಗತಿಕ ಹವ್ಯಕ ಮಹಿಳಾ ಸಮ್ಮೇಳನದಲ್ಲಿ ಆಯೋಜಕ ಸಮಿತಿಯ ಅಧ್ಯಕ್ಷರಾಗಿ ನೇತೃತ್ವ ವಹಿಸಿದ್ದರು. ಸುಮಾರು ಎಂಟು ವರ್ಷಗಳ ಕಾಲ ಕರ್ನಾಟಕ ಸಂಘ ಮುಂಬಯಿಯ ಗೌರವ ಕಾನೂನು ಸಲಹೆಗಾರರಾಗಿದ್ದರು.

ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿ ಹಾಗೂ ಸಾಹಿತ್ಯ ಬಳಗ ಮುಂಬೈಯ ಉಪಾಧ್ಯಕ್ಷೆಯಾಗಿ ಅನೇಕ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಸಹಭಾಗಿಯಾಗಿದ್ದರು. ಮುಂಬೈಯಲ್ಲಿ ನಡೆದ ಅನೇಕ ಕವಿ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಶ್ರಾವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ.

ತಮ್ಮ ರಾಜ್ಯೋತ್ಸವದ ಸಂಭ್ರಮದಲ್ಲಿ ಸಾಹಿತ್ಯ ಬಳಗವು ‘ಕಡತೋಕ ಕಣ್ಮಣಿ ಅಮಿತಾ ಭಾಗ್ವತ್’ ಕೃತಿಯನ್ನು ಪ್ರಕಟಿಸಿದೆ. ಇವರ ಕವನ ಸಂಕಲನ ‘ಕುಮುದಾಳ ಭಾನುವಾರ’. ಇವರು ಬರೆದ ಕಾದಂಬರಿ ‘ನೀಲಿ ನಕ್ಷೆ’ಗೆ ಕಾರ್ನಾಡ್ ಪ್ರತಿಷ್ಠಾನ ಮುಂಬೈ ವತಿಯಿಂದ ವಿಕಾಸ ಪುಸ್ತಕ ಬಹುಮಾನ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ವತಿಯಿಂದ ಭಾರತಿ ಸುತ ದತ್ತಿನಿಧಿ ಪ್ರಶಸ್ತಿ ದೊರೆತಿದೆ.

ಸಮಾರಂಭಕ್ಕೆ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸಬೇಕಾಗಿ ಗೋರೆಗಾಂವ್ ಕರ್ನಾಟಕ ಸಂಘದ ಪರವಾಗಿ ಗೌರವ ಕಾರ್ಯದರ್ಶಿ ಶಾಂತಾ ಎನ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಗುಣ ಎಸ್. ಬಂಗೇರ, ಸಂಚಾಲಕಿಯರಾದ ಮೇರಿ ಲಿಲ್ಲಿ ಡಿ’ಸೋಜಾ ಮತ್ತು ಸೀಮಾ ಕುಲಕರ್ಣಿ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ವಿನಂತಿಸಿದ್ದಾರೆ.



Related posts

ಬಂಟರ ಸಂಘ ಮುಂಬಯಿ ಅಂಧೇರಿ – ಬಾಂದ್ರಾ ಪ್ರಾದೇಶಿಕ ಸಮಿತಿ ಮಾ 30: ಮಾತಾ ಕಿ ಚೌಕಿ ಕಾರ್ಯಕ್ರಮ.

Mumbai News Desk

ಮಕರ ಜ್ಯೋತಿ ಫೌಂಡೇಶನ್ ಸಯನ್ ಕೋಲಿವಾಡ – ಜೂನ್ 30ರಂದು ಪುಸ್ತಕ ವಿತರಣೆ, ಅಭಿನಂದನಾ ಕಾರ್ಯಕ್ರಮ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಸಾವರ್ಕರ್ ನಗರ್ -ಥಾಣೆ : ಎ. 13ಕ್ಕೆ ಮಾಸಿಕ ಸಂಕ್ರಮಣ ಪೂಜೆ, ಶ್ರೀ ಶನೀಶ್ವರ ಗ್ರಂಥ ಪಾರಾಯಣ

Mumbai News Desk

ಶ್ರೀ ಮಹಾಕಾಳಿ ಮಂದಿರ ಜೋಗೇಶ್ವರಿ ಪೂರ್ವ :ನಾಳೆ (ನ. 30) ಶ್ರೀ ಶನಿಗ್ರಂಥ ಪಾರಾಯಣ

Mumbai News Desk

ಜ13:   ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನದ ಕಾರ್ಯಕರ್ತರ ಅಭಿನಂದನೆ ಮಹಾಸಭೆ

Mumbai News Desk

ಸಾಫಲ್ಯ ಸೇವಾ ಸಂಘ.ಮುಂಬಯಿ ಮಾ 9;ಸಾಫಲ್ಯ ಸ್ತ್ರೀ ಶಕ್ತಿ ಕಾರ್ಯಕ್ರಮ

Mumbai News Desk