
ಶ್ರೀ ರಾಮಚಂದ್ರಾಪುರ ಮಠದ ಭಾರತ ಮಂಡಲ – ಮುಂಬಯಿ ವಲಯದ ರಾಯಗಡ ಜಿಲ್ಲೆಯ ಕೊಲಾಡಿನಲ್ಲಿರುವ ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ವನಮಹೋತ್ಸವವನ್ನು ದಿನಾಂಕ 0೫/0೭/೨೦೨೬ ರವಿವಾರದಂದು ಬೆಳಿಗ್ಗೆಯಿಂದ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮುಂಬೈ ವೆಲ್ಫೇರ್ ಟ್ರಸ್ಟಿನ ಅಧ್ಯಕ್ಷರು .ವಿಷ್ಣು ಭಾಗವತ, ಮುಂಬೈ ವಲಯದ ಅಧ್ಯಕ್ಷರು.ಗಣಪತಿ ಹೆಗಡೆ,ಕಾರ್ಯದರ್ಶಿಗಳಾದ ಯು.ಟಿ.ಕೃಷ್ಣಮೂರ್ತಿ,ಹಾಗೆಯೇ ಮಾರಾಷ್ಟ್ರ ಪ್ರತಿಷ್ಠಾನದ ಅಧ್ಯಕ್ಷರು ಕೃಷ್ಣ ಭಟ್, ಕಾರ್ಯದರ್ಶಿ ಜ್ಯೋತಿ ಅನಂತ ಭಟ್,ಖಜಾಂಚಿ .ಈಶ್ವರಿ ಭಟ್, ಗೋ ಸೇವಾ ಗತಿವಿಧಿಯ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕ ದತ್ತಾತ್ರೇಯ ಭಟ್ಟ, ಹಾಗೆಯೇ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲೂ ಮುಂಬೈ ಮಹಾನಗರದಿಂದ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದ ಗೋ ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಂಬಯಿ – ಡೊಂಬಿವಲಿ ವಲಯಗಳ ಸಮಿತಿಯ ಹಲವಾರು ಸದಸ್ಯರು ಮತ್ತು ಮಹಾರಾಷ್ಟ್ರದ ಎಲ್ಲೆಡೆಯಿಂದ ಹಾಗೆಯೇ ಕೊಲಾಡ ಅರಣ್ಯ ವಿಭಾಗದ ಸನ್ಮೇಘ ಸಂಜಯ ಭಗತ ವನರಕ್ಷಕ, ಸುನೀತಾ ವಡಜೆ ವನರಕ್ಷಕ ಅಧಿಕಾರಿಗಳು, ಸತತವಾಗಿ ಸುರಿಯುತ್ತಿರು ಮಳೆಯಲ್ಲಿಯೂ ಅನೇಕ ಜಾತಿಯ ಸಸ್ಯಗಳನ್ನು ಅಮೃತಧಾರಾ ಗೋಶಾಲೆಯ ಪರಿಸರದಲ್ಲಿ ಮತ್ತು ಅದರ ಪಕ್ಕದಲ್ಲೇ ಇದ್ದ ವನದಲ್ಲಿ ನೆಡುವ ಮೂಲಕ ವನಮಹೋತ್ಸವವನ್ನು ಉತ್ಸಾಹದಿಂದ ಆಚರಿಸಿದರು.
ಅದರ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ರೀತಿಯಲ್ಲಿ ಗೋ ಸೇವೆಗೆ ಧನ ಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಯಿತು. ಮಾರಾಷ್ಟ್ರ ಪ್ರತಿಷ್ಠಾನದ ಅಧ್ಯಕ್ಷರು ಕೃಷ್ಣ ಭಟ್ಟ ಗುಡ್ಡೇಬಾಳ ಅವರು ತಮ್ಮ ಪ್ರಾಸ್ತಾವಿಕೆಯಲ್ಲಿ ಗೋಶಾಲೆ ನಿರ್ಮಾಣ ಮಾಡುವುದರ ಹಿಂದೆ ಇದ್ದ ಪ್ರೇರಣೆ, ಉದ್ದೇಶ ಹಾಗೆಯೇ ಭವಿಷ್ಯದಲ್ಲಿ ಮಾಡುವ ಕಾರ್ಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ,ಯುವಪೀಳಿಗೆಯ ತರುಣರು ಮುಂದೆ ಬಂದು ಈ ಕೆಲಸವನ್ನು ಮುಂದುವರೆಸಬೇಕೆಂದು ಆಹ್ವಾನಿಸಿದರು. ಇದೇ ಸಂದರ್ಭದಲ್ಲಿ ಗೋ ಸೇವಾ ಗತಿವಿಧಿಯ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕ ದತ್ತಾತ್ರೇಯ ಭಟ್ಟ ಅವರು ಗೋವಿನ ಮತ್ತು ಗವ್ಯೋತ್ಪನ್ನ ವಸ್ತುಗಳ ಮಹತ್ವದ ಕುರಿತು ಮಾತನಾಡಿದರು. ಸುಲಭವಾಗಿ ಪಂಚಗವ್ಯ ತಯಾರಿಸುವ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕೃಷ್ಣ ಭಟ್ಟ ಹಾಗೂ ಅವರ ಪರಿವಾರದವರು ಈ ಕಾರ್ಯಕ್ರಮದ ವ್ಯವಸ್ಥೆಯನ್ನು, ಊಟದ ವ್ಯವಸ್ಥೆಯನ್ನು . ಪ್ರವೀಣ ರಾವ್ ಇವರು ತುಂಬ ಚೆನ್ನಾಗಿ ನಿರ್ವಹಿಸಿದರು.ಮುಂಬಯಿಯ ಎಲ್ಲ ಹವ್ಯಕ ಬಾಂಧವರಲ್ಲದೇ ಇತರ ಪರಿಸರಪ್ರೇಮಿ ಬಾಂಧವರೊಂದಿಗೆ ಪರಿಸರ ಬೆಳೆಸಿ ಉಳಿಸುವ ಈ ಕಾರ್ಯಕ್ರಮ ಇತರರೂ ಮಾಡುವಂತೆ ಪ್ರೇರಣೆಯಾಗಲಿದೆ ಅನ್ನುವುದರಲ್ಲಿ ಸಂಶಯವಿಲ್ಲ.





