August 29, 2026
Mumbai News Kannada
ಪ್ರಕಟಣೆ

ಆಗಸ್ಟ್ 30: ಮಣ್ಣಿನ ಕಂಪು ಮತ್ತು ಸಾಹಿತ್ಯದ ಸಂಭ್ರಮ: ಪ್ರಫುಲ್ಲ ದಿನೇಶ್ ಕುಡೂರ್ ಅವರ ‘ಪೊಲ್ಲಕ್ಕೆನ ಅಜಕೆ’ ಲೋಕಾರ್ಪಣೆ





ಹಳ್ಳಿಯ ಮಣ್ಣಿನ ಸಿಂಧೂರದಿಂದ ಮಾಯಾನಗರಿಯ ಸಾಹಿತ್ಯ ಸಿರಿಯವರೆಗೆ: ಪ್ರಫುಲ್ಲ ಡಿ ಶೆಟ್ಟಿ ಪಡುಕುಡೂರ್ ಬದುಕು-ಬರಹದ ಯಶೋಗಾಥೆ

ಕೃಷ್ಣನ ನಗರಿ ಉಡುಪಿಯ ಹತ್ತಿರದ ಪುಟ್ಟ ಹಳ್ಳಿ ಪಡುಕುಡೂರ್. ಹಸಿರು ಕಾಡು-ಬೆಟ್ಟಗಳ ನಡುವಿನ ‘ಆಪೆದಬೊಟ್ಟು’ ಗುತ್ತು ಬರ್ಕೆಯ ಮನೆಯ ಸಣ್ಣ ಯಜಮಾನ ದಿ. ಭೋಜ ದೇಜಪ್ಪ ಶೆಟ್ಟಿ ಮತ್ತು ಶ್ರೀಮತಿ ಸುಶೀಲ ಭೋಜ ಶೆಟ್ಟಿ ದಂಪತಿಯ ಹಿರಿಯ ಮಗಳಾಗಿ ಜನಿಸಿದವರು ಪ್ರಫುಲ್ಲ ಶೆಟ್ಟಿ. ದೊಡ್ಡಮ್ಮ, ದೊಡ್ಡಪ್ಪ, ಅಜ್ಜ ಹಾಗೂ ಚಿಕ್ಕಪ್ಪನ ಮಕ್ಕಳೊಂದಿಗೆ ಅಂಗಳದ ಪೂಜಿ ನೆಲದಲ್ಲಿ, ಮನೆಯ ಮಾಡಿನ ತಂಪು ಗಾಳಿಯನ್ನಾಸ್ವಾದಿಸುತ್ತಾ ಬೆಳೆದ ಕೂಡು ಕುಟುಂಬದ ಬಾಲ್ಯ ಅವರದ್ದು.

ಊರಿನ ಸರ್ಕಾರಿ ಶಾಲೆಯಲ್ಲಿ ಅಕ್ಷರ ಕಲಿತ ಪ್ರಫುಲ್ಲ, ಬಾಲ್ಯದಿಂದಲೇ ಕಲಿಕೆ, ನಾಟಕ, ನೃತ್ಯ ಮತ್ತು ಆಟಗಳಲ್ಲಿ ಮುಂಚೂಣಿಯಲ್ಲಿದ್ದರು. ಶಾಲಾ-ಕಾಲೇಜು ದಿನಗಳಲ್ಲಿ ಖೋ-ಖೋ ತಂಡದ ನಾಯಕಿಯಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹೆಗ್ಗಳಿಕೆ ಇವರದ್ದು. ಜೊತೆಗೆ ಎಲ್ಲರ ಪ್ರೀತಿಪಾತ್ರರಾಗಿ ‘ಆದರ್ಶ ವಿದ್ಯಾರ್ಥಿ’ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದರು. ಹೆಬ್ರಿಯ ಸರ್ಕಾರಿ ಪಿಯು ಕಾಲೇಜು ಹಾಗೂ ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಮುಗಿಸಿದ ನಂತರ, ತಂದೆಯ ಅನಾರೋಗ್ಯದ ಕಾರಣದಿಂದ ಉನ್ನತ ವಿದ್ಯಾಭ್ಯಾಸಕ್ಕೆ ತೆರೆಬಿದ್ದರೂ ಬದುಕಿನ ಉತ್ಸಾಹ ಕುಂದಲಿಲ್ಲ.

ಕುಟುಂಬಕ್ಕೆ ಆಸರೆಯಾಗಲು ಮಾಯಾನಗರಿ ಮುಂಬೈಗೆ ಬಂದ ಪ್ರಫುಲ್ಲ, ಹಿಂದಿ-ಮರಾಠಿ ಕಲಿತು ಉದ್ಯೋಗಕ್ಕೆ ಸೇರಿದರು. ಮುಂದೆ ಕಿನ್ನಿಗೋಳಿ ಅತ್ತೂರಿನ ದಿನೇಶ್ ಸುಬ್ಬಯ್ಯ ಶೆಟ್ಟಿಯವರ ಕೈಹಿಡಿದು ಬೈಕುಲ್ಲಾದ ತುಂಬು ಕುಟುಂಬದ ಸೊಸೆಯಾದರು. ಮುದ್ದಿನ ಮಗ ಪ್ರಥಮೇಶ್‌ನ ಆಗಮನ ಬದುಕಿಗೆ ಹೊಸ ಕಳೆ ತಂದಿತು. ನಂತರ ಮುಂಬೈನ ‘ಮಿನಿ ಮಂಗಳೂರು’ ಎಂದೇ ಹೆಸರಾದ ಡೊಂಬಿವಲಿಗೆ ಬಂದು ನೆಲೆಸಿದ ಇವರು, ಅಲ್ಲಿನ ಸಂಘ-ಸಂಸ್ಥೆಗಳ ಸಾಂಸ್ಕೃತಿಕ ಚಟುವಟಿಕೆಗಳು, ನಾಟಕ-ನೃತ್ಯಗಳಲ್ಲಿ ಪಾಲ್ಗೊಂಡು ಕಲಾಪ್ರೇಮಿಯಾಗಿ ಗುರುತಿಸಿಕೊಂಡರು.

ಜಗತ್ತನ್ನೇ ತಲ್ಲಣಗೊಳಿಸಿದ ಕೊರೋನಾ ಲಾಕ್‌ಡೌನ್ ಸಂದರ್ಭ ಇವರ ಬದುಕಿಗೂ ಪರೀಕ್ಷೆಯಾಗಿತ್ತು. ಆ ಬಿಡುವಿನ ಹೊತ್ತಿನಲ್ಲಿ ನೃತ್ಯ ಗುರು ಸವಿತಾ ಚಂದ್ರಶೇಖರ ಸಾಲಿಯಾನ್ ಅವರ ಪ್ರೇರಣೆಯಿಂದ ಮೊಬೈಲ್‌ನಲ್ಲಿ ಸಾಹಿತ್ಯ ಕೃಷಿ ಆರಂಭಿಸಿದರು. ಇವರು ಬರೆದ ಮೊದಲ ತುಳು ಕವಿತೆ ‘ಎನ್ನ ಮೋಕೆದ ಅಜ್ಜ ಅಜ್ಜೀ’ ಮುಂಬೈನ ಪ್ರಸಿದ್ಧ ‘ಛಾಯಾ ಕಿರಣ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಬಳಿಕ ಕರ್ನಾಟಕ ಸಂಘ ಡೊಂಬಿವಲಿಯ ಮಂಜುನಾಥ ಶಾಲೆಯ ಕೇಂದ್ರ ಕಚೇರಿಯಲ್ಲಿ ಮುಖ್ಯ ಗುಮಾಸ್ತಿಯಾಗಿ ವೃತ್ತಿಜೀವನ ಆರಂಭಿಸಿದ ಇವರಿಗೆ, ಸಂಸ್ಥೆಯ ವ್ಯವಸ್ಥಾಪಕ ರಮೇಶ್ ಶ್ರೀನಿವಾಸ್ ಸುವರ್ಣರ ಪ್ರೋತ್ಸಾಹದಿಂದ ಸಾಹಿತ್ಯ ಬಳಗಗಳ ನಂಟು ಬೆಳೆಯಿತು.

ಕುಮುದಾ ಅವರ ಮೂಲಕ ‘ತುಳುವೆರೆ ಕಲ’ ಬಳಗದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅವರ ಪರಿಚಯವಾದದ್ದು ಇವರ ಸಾಹಿತ್ಯ ಪಯಣದ ಮಹತ್ವದ ತಿರುವು. ಬಳಗದಲ್ಲಿ ಪ್ರೀತಿಯಿಂದ ಎಲ್ಲರ ‘ಪೊಲ್ಲಕ್ಕೆ’ ಎಂದು ಕರೆಸಿಕೊಂಡ ಪ್ರಫುಲ್ಲ, ಪ್ರತಿಭೆಯ ಗುರುತಾಗಿ ‘ಕಲತ ಬೊಳ್ಳಿ’ ಪ್ರಶಸ್ತಿಯನ್ನೂ ಪಡೆದರು. ನಂತರ ಇವರ ಸಂಘಟನಾ ಸಾಮರ್ಥ್ಯವನ್ನು ಗುರುತಿಸಿ ‘ತುಳುವೆರೆ ಕಲ’ ಮುಂಬೈ ಘಟಕದ ಅಧ್ಯಕ್ಷೆಯನ್ನಾಗಿ ನೇಮಿಸಲಾಯಿತು.

ತಮ್ಮ ನೆಚ್ಚಿನ ಗೀತಕ್ಕನ ಬೆಂಬಲ ಮತ್ತು ಮಾರ್ಗದರ್ಶನದಿಂದ ಪ್ರಫುಲ್ಲ ಅವರ ಚೊಚ್ಚಲ ತುಳು ಕವನ ಸಂಕಲನ ‘ಪೊಲ್ಲಕ್ಕೆನ ಅಜಕೆ’ ಈಗ ಮುದ್ರಣಗೊಂಡು ಲೋಕಾರ್ಪಣೆಗೆ ಸಿದ್ಧವಾಗಿದೆ. ಕಷ್ಟ-ನಷ್ಟಗಳ ಮೆಟ್ಟಿಲುಗಳನ್ನು ಸಾಹಿತ್ಯಾಸಕ್ತಿಯಿಂದಲೇ ದಾಟಿ, ತುಳು ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಪ್ರಫುಲ್ಲ ದಿನೇಶ್ ಕುಡೂರ್ ಅವರ ಬದುಕಿನ ಯಾನ ಹೊಸ ತಲೆಮಾರಿಗೆ ನಿಜಕ್ಕೂ ಪ್ರೇರಣಾದಾಯಕ.

ಆಗಸ್ಟ್ 30: ಡೊಂಬಿವಲಿಯಲ್ಲಿ ಸಾಹಿತ್ಯಿಕ ರಸಸಂಜೆ

ಪ್ರಫುಲ್ಲ ದಿನೇಶ್ ಕುಡೂರ್ ಅವರ ಚೊಚ್ಚಲ ತುಳು ಕವನ ಸಂಕಲನ ‘ಪೊಲ್ಲಕ್ಕೆನ ಅಜಕೆ’ ಇದೇ ಬರುವ ಆಗಸ್ಟ್ 30ರಂದು (ಭಾನುವಾರ) ಡೊಂಬಿವಲಿ ಪಶ್ಚಿಮದ ಪ್ರೀತಿ ಬ್ಯಾಂಕ್ವೆಟ್ ಹಾಲ್‌ನಲ್ಲಿ ಲೋಕಾರ್ಪಣೆಗೊಳ್ಳಲಿದೆ.

  • ಸಮಯ ಮತ್ತು ಕಾರ್ಯಕ್ರಮ ವಿವರ:
    • ಸಂಜೆ 3:00 ರಿಂದ: ತುಳುವೆರೆ ಕಲ ಬಳಗದ 34 ಕವಿಗಳಿಂದ ‘ಪನಿ ಪರ್ಬ’ ಎಂಬ ಹಾಸ್ಯ ಪನಿಕವಿತೆಗಳ ಕವಿಗೋಷ್ಠಿ. ಇದರೊಂದಿಗೆ ‘ಐ ಲೇಸಾ’ ತಂಡದ ಮಕ್ಕಳಿಂದ ಸುಮಧುರ ತುಳು ಗೀತಗಾಯನ.
    • ಸಂಜೆ 5:00 ಕ್ಕೆ: ಗಣ್ಯರ ಉಪಸ್ಥಿತಿಯಲ್ಲಿ ಪ್ರಸಿದ್ಧ ಸಮಾಜ ಸೇವಕ ಶ್ರೀ ಹರೀಶ್ ಶೆಟ್ಟಿ ಪಡುಕುಡೂರು ಅವರಿಂದ ‘ಪೊಲ್ಲಕ್ಕೆನ ಅಜಕೆ’ ಕೃತಿ ಲೋಕಾರ್ಪಣೆ.

ತುಳುನಾಡಿನ ಗಂಡುಕಲೆ, ಸಂಸ್ಕೃತಿ ಮತ್ತು ಬದುಕಿನ ಸೂಕ್ಷ್ಮ ಭಾವಗಳನ್ನು ಕವಿತೆಗಳನ್ನಾಗಿಸಿ ತುಳು ಸಾಹಿತ್ಯದ ಮಡಿಲಿಗೆ ಅರ್ಪಿಸುತ್ತಿರುವ ಪ್ರಫುಲ್ಲ ಕುಡೂರ್ ಅವರ ಈ ಸಾಹಿತ್ಯಿಕ ಸಂಭ್ರಮಕ್ಕೆ ಸಾಹಿತ್ಯಾಭಿಮಾನಿಗಳು, ಬಂಧು-ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೋರಲಾಗಿದೆ.



Related posts

ತೋನ್ಸೆ ಗರೋಡಿ ಜೀರ್ಣೋದ್ಧಾರಕ್ಕೆ ಮುಂಬೈನಲ್ಲಿ ಮುಹೂರ್ತ: ‘ನಾಳೆ (ಎ. 5) ‘ದಿವ್ಯ ಮನವಿ’ ಬಿಡುಗಡೆ ಕಾರ್ಯಕ್ರಮ

Mumbai News Desk

ಓಂ ಶ್ರೀ ಜಗಧೀಶ್ವರಿ ಸೇವಾ ಸಮಿತಿ ದೇವುಲಪಾಡ, ಬೊರಿವಲಿ ಪೂರ್ವ : ಜ. 25ರಂದು 52ನೇ ವರ್ಷದ ಬೈದರ್ಕಳ ನೇಮೋತ್ಸವ

Mumbai News Desk

ಶ್ರೀ ಜಗದಂಬಾ ಮಂದಿರ ಡೊಂಬಿವಲಿ, ಫೆ. 26ಕ್ಕೆ ಮಹಾಶಿವರಾತ್ರಿ ಉತ್ಸವ

Mumbai News Desk

ಮೂಲ್ಕಿ: ಮಾರ್ಚ್ 10ರಂದು, ಹರಿಶ್ಚಂದ್ರ ಪಿ. ಸಾಲಿಯಾನ್ ಅವರ ‘ತುಳುನಾಡ್ಡ ತುಳು ಗಾದೆಲು’ ಕೃತಿ ಲೋಕಾರ್ಪಣೆ

Mumbai News Desk

ಜೂನ್ 15: ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ, ಮುಂಬಯಿ – 42ನೇ ವಾರ್ಷಿಕ ಮಹಾಪೂಜೆ

Mumbai News Desk

ಶ್ರೀ ಮಧೂರು ಮದನಂತೇಶ್ವರ-ಸಿದ್ಧಿವಿನಾಯಕ ದೇವಸ್ಥಾನ, ಬ್ರಹ್ಮ ಕಲಶೋತ್ಸವ, ಮಾ.13:ಮುಂಬಯಿ ಭಕ್ತರ ಸಭೆ,

Mumbai News Desk