
ಸಮಸ್ಯೆಗಳಿಗೆ ಪರಿಹಾರ ಭಗವದ್ಗೀತೆಯಿಂದ ದೊರೆಯುತ್ತದೆ: ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು
ನವಿ ಮುಂಬಯಿ: ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಶೇಷ ಕಾರ್ಯಕ್ರಮವು ಉಡುಪಿ ಶ್ರೀ ಪುತ್ತಿಗೆ ಮಠದ ಪೀಠಾಧಿಪತಿ ಜಗದ್ಗುರು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಸೆಪ್ಟೆಂಬರ್ 4ರಂದು ಶುಕ್ರವಾರ ನವಿ ಮುಂಬಯಿ ವಾಶಿ ಸೆಕ್ಟರ್ 12ರಲ್ಲಿರುವ ಉಡುಪಿ ಶ್ರೀ ಪುತ್ತಿಗೆ ಮಠದ ನೂತನ ಶಾಖಾ ಮಠದಲ್ಲಿ ಅದ್ದೂರಿಯಾಗಿ ಜರುಗಿತು.
ಆಶೀರ್ವಚನ ನೀಡಿದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿಯವರು, “ಶ್ರೀ ಕೃಷ್ಣನ ಜೀವನ ಸಂದೇಶ ಸಮಸ್ತ ಮಾನವ ಜನಾಂಗಕ್ಕೆ ಸದಾ ಪ್ರೇರಣೆ ಹಾಗೂ ಮಾರ್ಗದರ್ಶನವಾಗಿದೆ. ಶ್ರೀ ಕೃಷ್ಣ ಬೋಧಿಸಿದ ಭಗವದ್ಗೀತೆಯ ಸಂದೇಶವನ್ನು ವಿಶ್ವಕ್ಕೆ ಸಾರಬೇಕು ಮತ್ತು ಪ್ರತಿಯೊಬ್ಬ ಮಾನವನೂ ಅದನ್ನು ಅರಿತುಕೊಳ್ಳಬೇಕು. ನಮ್ಮೆಲ್ಲ ಸಮಸ್ಯೆಗಳಿಗೂ ಪರಿಹಾರ ಭಗವದ್ಗೀತೆಯಿಂದಲೇ ದೊರೆಯುತ್ತದೆ. ಪ್ರತಿಯೊಬ್ಬರೂ ಭಗವದ್ಗೀತೆಯನ್ನು ಅಧ್ಯಯನ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯಿಂದ ನಾವು ಪ್ರಾರಂಭಿಸಿದ ‘ಕೋಟಿಗೀತಾ ಲೇಖನ ಯಜ್ಞ’ ಅಭಿಯಾನದಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಬೇಕು,” ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತನಾಡಿ, “ನಮ್ಮ ಸನಾತನ ಸಂಸ್ಕೃತಿಯಲ್ಲಿ ಗುರುಗಳಿಗೆ ಮತ್ತು ಯತಿಶ್ರೇಷ್ಠರಿಗೆ ವಿಶೇಷ ಗೌರವವಿದೆ. ಅವರ ಮಾರ್ಗದರ್ಶನ ಸಮಾಜಕ್ಕೆ ನಿರಂತರವಾಗಿ ಅಗತ್ಯವಾಗಿದೆ. ನಮ್ಮ ಸಂಸ್ಕೃತಿ ಹಾಗೂ ಧಾರ್ಮಿಕ ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸುವಲ್ಲಿ ಪುತ್ತಿಗೆ ಶ್ರೀಗಳ ಕಾರ್ಯ ಶ್ಲಾಘನೀಯ. ಅವರು ಕೇವಲ ಮಠಕ್ಕೆ ಸೀಮಿತವಾಗದೆ ಸನಾತನ ಧರ್ಮದ ಪ್ರಚಾರಕ್ಕಾಗಿ ಜಾಗತಿಕ ಮಟ್ಟದಲ್ಲಿ ನಿರಂತರ ಕಾರ್ಯಪ್ರವೃತ್ತರಾಗಿದ್ದಾರೆ. ಮುಂಬಯಿ ಮಹಾನಗರದಲ್ಲಿ ಪುತ್ತಿಗೆ ಮಠದ ಶಾಖೆ ಪ್ರಾರಂಭವಾಗಿರುವುದು ನಮಗೆಲ್ಲರಿಗೂ ಅತ್ಯಂತ ಸಂತೋಷ ತಂದಿದೆ. ಮಠದಲ್ಲಿ ನಿರಂತರ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಧರ್ಮ ಪ್ರಚಾರ ಮುಂದುವರಿಯಲಿ,” ಎಂದು ಹಾರೈಸಿದರು.
ಘನ್ಸೋಲಿಯ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಮಾತನಾಡಿ, “ಶ್ರೀಗಳ ಸಾನ್ನಿಧ್ಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸುತ್ತಿರುವುದರಿಂದ ಬೆಳೆಯುವ ಮಕ್ಕಳಿಗೆ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅರಿವು ಮೂಡಲು ಉತ್ತಮ ಅವಕಾಶ ದೊರೆತಂತಾಗಿದೆ,” ಎಂದರು.
ಯತಿಶ್ರೇಷ್ಠರಿಂದ ನವಿ ಮುಂಬಯಿಯಲ್ಲಿ ಮಠ ಸ್ಥಾಪನೆ ನಮ್ಮ ಸೌಭಾಗ್ಯ: ಸುಜಾತಾ ಪಾಟೀಲ್
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನವಿ ಮುಂಬಯಿ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಸುಜಾತಾ ಸೂರಜ್ ಪಾಟೀಲ್ ಮಾತನಾಡಿ, “ಶ್ರೀಗಳು ಸನಾತನ ಧರ್ಮ ಹಾಗೂ ಸಂಸ್ಕೃತಿಯ ಸಂರಕ್ಷಣೆಯಲ್ಲಿ ಮಾಡುತ್ತಿರುವ ಸೇವೆ ಅನನ್ಯ. ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ನಡೆಸುತ್ತಿರುವ ಧರ್ಮ ಪ್ರಚಾರ ಶ್ಲಾಘನೀಯ. ಇಂತಹ ಯತಿಶ್ರೇಷ್ಠರು ನವಿ ಮುಂಬಯಿಯಲ್ಲಿ ಶಾಖಾ ಮಠವನ್ನು ಪ್ರಾರಂಭಿಸಿರುವುದು ಈ ಪರಿಸರದ ಸೌಭಾಗ್ಯ. ಇದು ಇಲ್ಲಿನ ಸನಾತನ ಸಂಸ್ಕೃತಿ ಮತ್ತು ಭಾರತೀಯ ಪರಂಪರೆಯನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಹಕಾರಿಯಾಗಲಿದೆ,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಾತುರ್ಮಾಸ್ಯ ವ್ರತಾಚರಣೆ ಸಮಿತಿಯ ಕಾರ್ಯಾಧ್ಯಕ್ಷ ಗೋಪಾಲ್ ವೈ. ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ, ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯ, ಚಾತುರ್ಮಾಸ್ಯ ವ್ರತ ಸಮಿತಿಯ ಸದಸ್ಯರಾದ ಸಿಎ ಎನ್.ಆರ್. ರಾವ್, ಸಿಎ ಸುಧೀರ್ ಆರ್. ಶೆಟ್ಟಿ, ಶ್ರೀ ಧರ್ಮಸ್ಥಳ ಭಜನಾ ಪರಿಷತ್ ಮುಂಬಯಿ ಘಟಕದ ರವೀಂದ್ರ ಶಾಂತಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಘನ್ಸೋಲಿ ಶ್ರೀ ಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀ ಗುರುಪ್ರಸಾದ್ ಭಟ್ ಕಾರ್ಯಕ್ರಮ ನಿರೂಪಿಸಿದರು. ರತೀಶ್ ತಂತ್ರಿ ವಂದಿಸಿದರು.
ವಿವಿಧ ಧಾರ್ಮಿಕ, ಸಾಂಸ್ಕೃತಿಕ ವೈಭವ
ಅಷ್ಟಮಿಯ ಅಂಗವಾಗಿ ಸೆಪ್ಟೆಂಬರ್ 4ರಂದು ಶುಕ್ರವಾರ ಬೆಳಿಗ್ಗೆ ಲಕ್ಷ ತುಳಸಿ ಅರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಮಧ್ಯರಾತ್ರಿ ಶ್ರೀ ಕೃಷ್ಣ ದೇವರಿಗೆ ವಿಶೇಷ ಅರ್ಘ್ಯಪ್ರದಾನ ಜರುಗಿತು. ಜನ್ಮಾಷ್ಟಮಿಯ ಅಂಗವಾಗಿ 108 ವಿಧದ ವಿಶೇಷ ಲಡ್ಡುಗಳನ್ನು ಸಿದ್ಧಪಡಿಸಿ ದೇವರಿಗೆ ಅರ್ಪಿಸಿ, ‘ಲಡ್ಡು ಉತ್ಸವ’ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ನಂತರ ಮಕ್ಕಳಿಂದ ಆಕರ್ಷಕ ನೃತ್ಯ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸೆಪ್ಟೆಂಬರ್ 5ರಂದು ಶನಿವಾರ ಮಠದ ಸಭಾಭವನದಲ್ಲಿ ಮುದ್ದು ಕೃಷ್ಣ ವೇಷ ಸ್ಪರ್ಧೆ, ರಂಗೋಲಿ, ಚಿತ್ರಕಲೆ, ಭಕ್ತಿ ಸಂಗೀತ ಹಾಗೂ ಭಜನಾ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು. ಈ ಎಲ್ಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




