ಜಯ ಸಿ. ಪೂಜಾರಿ, ಕೆಳಾರ್ಕಳಬೆಟ್ಟು
ಕಲ್ಯಾಣಪುರ: ವಿಜಯದಶಮಿಯು ನವರಾತ್ರಿ ಉತ್ಸವದ ಕೊನೆಯ ದಿನವಾಗಿದ್ದು, ದುಷ್ಟಶಕ್ತಿಗಳ ವಿರುದ್ಧ ಒಳಿತು ವಿಜಯ ಸಾಧಿಸಿದ ಪವಿತ್ರ ದಿನವೆಂದು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವ ಪಡೆದಿದೆ. ಮಹಿಷಾಸುರನ ಸಂಹಾರ, ಶ್ರೀರಾಮನಿಂದ ರಾವಣನ ವಧೆ ಹಾಗೂ ಪಾಂಡವರು ಶತ್ರುಗಳ ವಿರುದ್ಧ ಜಯ ಸಾಧಿಸಿದ ಘಟನೆಗಳು ವಿಜಯದಶಮಿಯೊಂದಿಗೆ ತಳುಕು ಹಾಕಿಕೊಂಡಿವೆ. ಹೀಗಾಗಿ ಈ ಹಬ್ಬವನ್ನು ಸತ್ಯ, ಧರ್ಮ ಮತ್ತು ಒಳಿತಿನ ವಿಜಯದ ಸಂಕೇತವಾಗಿ ಆಚರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಕಲ್ಯಾಣಪುರದ ಗೃಹದಲ್ಲಿರುವ ಶ್ರೀ ದುರ್ಗಾದೇವಿ ಅಮ್ಮನವರ ಸನ್ನಿಧಾನದಲ್ಲಿ ಪಕ್ಕಿಬೆಟ್ಟು ಜಯ ಪಾತ್ರಿ ಅವರ ನೇತೃತ್ವದಲ್ಲಿ 21ನೇ ವರ್ಷದ ನವರಾತ್ರಿ ಪೂಜೆಯು ಭಕ್ತಿ, ಶ್ರದ್ಧೆ ಮತ್ತು ಸಂಭ್ರಮದಿಂದ ನೆರವೇರಿತು. ಈ ಸಂದರ್ಭದಲ್ಲಿ ಜಯ ಪಾತ್ರಿಯವರ ಆವೇಶದ ದರ್ಶನ ಸೇವೆ ನಡೆಯಿತು. ಸನ್ನಿಧಾನಕ್ಕೆ ಆಗಮಿಸಿದ ಭಕ್ತರಿಗೆ ಅಭಯನುಡಿ ಹಾಗೂ ಗಂಧಪ್ರಸಾದವನ್ನು ವಿತರಿಸಲಾಯಿತು.

ಮುಂಬಯಿಯಿಂದ ತವರೂರಿಗೆ ಮರಳಿದ ಬಳಿಕವೂ ದೇವಿಯ ಸೇವೆಯಲ್ಲಿ ನಿರತ
ಸಾಧನೆಗೆ ದೃಢಸಂಕಲ್ಪ, ಪರಿಶ್ರಮ ಮತ್ತು ಅಪಾರ ಶ್ರದ್ಧೆ ಅಗತ್ಯ. ತಮಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ತಮ್ಮ ಆಸಕ್ತಿ ಮತ್ತು ಭಕ್ತಿಯ ಮೂಲಕ ವಿಶಿಷ್ಟ ಗುರುತನ್ನು ಗಳಿಸಿದವರಲ್ಲಿ ಉಡುಪಿ ತಾಲೂಕಿನ ಕಲ್ಯಾಣಪುರದ ಜಯ ಆರ್. ಪೂಜಾರಿ ಅವರೂ ಒಬ್ಬರು.
1982–83ರ ಅವಧಿಯಲ್ಲಿ ಮುಂಬಯಿಯ ‘ಟೈಮ್ಸ್ ಆಫ್ ಇಂಡಿಯಾ’ ಕ್ಯಾಂಟೀನ್ನಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದ ಅವರು, ಹಗಲಿನಲ್ಲಿ ಕೆಲಸ ನಿರ್ವಹಿಸುತ್ತಾ ರಾತ್ರಿ ವೇಳೆ ಬೋರಾಬಜಾರ್ನ ಮದರ್ ಇಂಡಿಯಾ ಕನ್ನಡ ರಾತ್ರಿ ಶಾಲೆಯಲ್ಲಿ ಆರನೇ ತರಗತಿಯವರೆಗೆ ಶಿಕ್ಷಣ ಪಡೆದರು. ಇದೇ ಸಂದರ್ಭದಲ್ಲಿ ಟೈಮ್ಸ್ ಆಫ್ ಇಂಡಿಯಾ ಕ್ಯಾಂಟೀನ್ನಲ್ಲಿ ಪ್ರತಿ ಶುಕ್ರವಾರ ನಡೆಯುತ್ತಿದ್ದ ಮಹಿಷಾಸುರಮರ್ದಿನಿ ದೇವಿಯ ಪೂಜೆಯಲ್ಲಿ ಮದ್ದಳೆ ಬಾರಿಸುತ್ತಾ ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು.
2000ನೇ ಇಸವಿಯಲ್ಲಿ ಮುಂಬಯಿಯನ್ನು ತೊರೆದು ತವರೂರಾದ ಕಲ್ಯಾಣಪುರಕ್ಕೆ ಮರಳಿದ ಬಳಿಕವೂ ದೇವಿಯ ಮೇಲಿನ ಅವರ ಭಕ್ತಿ ಮುಂದುವರಿಯಿತು. ರಾಜು ಪೂಜಾರಿ ಹಾಗೂ ಸುಂದರಿ ಪೂಜಾರ್ತಿ ದಂಪತಿಯ ಹಿರಿಯ ಪುತ್ರನಾದ ಜಯ ಪಾತ್ರಿ ಅವರ ನಂಬಿಕೆಯ ಪ್ರಕಾರ, ಒಂದು ದಿನ ದುರ್ಗಾಮಾತೆಯು ಕನಸಿನಲ್ಲಿ ಕಾಣಿಸಿಕೊಂಡು, ತಾವು ಎಲ್ಲಿಗೆ ಹೋದರೂ ಜೊತೆಯಲ್ಲಿರುವುದಾಗಿ ಅಭಯ ನೀಡಿದಳು. ದೇವಿಯ ಕೃಪೆಯಿಂದ ಆಕೆ ತಮ್ಮ ನಾಲಿಗೆಯಲ್ಲಿ ನೆಲೆಸಿದಳು ಎಂಬುದು ಜಯ ಪಾತ್ರಿಯವರ ಭಕ್ತಿಯ ನಂಬಿಕೆಯಾಗಿದೆ.
ಈ ಅನುಭವವನ್ನು ಅವರು ಧರ್ಮದರ್ಶಿಗಳು ಹಾಗೂ ಕಟೀಲು ಕ್ಷೇತ್ರದ ಅರ್ಚಕರ ಗಮನಕ್ಕೆ ತಂದರು. ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹದೊಂದಿಗೆ ದೇವಿಯ ಸೇವೆಯನ್ನು ಮುಂದುವರಿಸಲು ಪ್ರೇರಣೆ ದೊರೆಯಿತು. ಭಕ್ತರ ಕಷ್ಟಗಳಿಗೆ ಸ್ಪಂದಿಸಿ, ಅವರ ಸಂಕಷ್ಟಗಳನ್ನು ನಿವಾರಿಸಲು ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ದೊರೆಯಿತು ಎಂಬುದು ಅವರ ಅನುಭವ.
ಅದರಂತೆ ತಮ್ಮ ಸ್ವಗೃಹದಲ್ಲಿಯೇ ಶ್ರೀ ದುರ್ಗಾದೇವಿ ಅಮ್ಮನವರಿಗೆ ಸಣ್ಣ ಸನ್ನಿಧಾನವನ್ನು ನಿರ್ಮಿಸಿ ಪೂಜಾ ಕೈಂಕರ್ಯಗಳನ್ನು ಆರಂಭಿಸಿದರು. ಅಂದಿನಿಂದ ನಿರಂತರವಾಗಿ ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿರುವ ಅವರು, ಇದೀಗ 21ನೇ ವರ್ಷದ ನವರಾತ್ರಿ ಪೂಜೆಯನ್ನು ಭಕ್ತಿಭಾವದಿಂದ ನೆರವೇರಿಸಿದ್ದಾರೆ.
ಭಕ್ತಿಭಾವದಿಂದ ಪೂಜಾ ಸಮಾರೋಪ
ನವರಾತ್ರಿ ಪೂಜೆಯ ಸಮಾರೋಪದ ಅಂಗವಾಗಿ ಸನ್ನಿಧಾನದ ಕಲಶಕ್ಕೆ ಮಂಗಳಾರತಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇವಿಯ ಪ್ರಸಾದ ಬೀಳುವ ಸೂಚನೆ ದೊರೆಯಿತು ಎಂದು ಭಕ್ತರು ಭಾವಿಸಿ, ದೇವಿಯು ತಮ್ಮ ಸೇವೆಯನ್ನು ಸ್ವೀಕರಿಸಿ ತೃಪ್ತಳಾಗಿದ್ದಾಳೆ ಎಂಬ ಭಕ್ತಿಭಾವದೊಂದಿಗೆ ಪೂಜಾ ವಿಧಿವಿಧಾನಗಳನ್ನು ಸಂಪನ್ನಗೊಳಿಸಿದರು.
ಬಳಿಕ ಸನ್ನಿಧಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ 21ನೇ ವರ್ಷದ ನವರಾತ್ರಿ ಪೂಜೆಯು ಧಾರ್ಮಿಕ ಶ್ರದ್ಧೆ, ಭಕ್ತಿ ಮತ್ತು ಸಂಭ್ರಮದಿಂದ ಸಂಪನ್ನಗೊಂಡಿತು.
ಪೂಜಾ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ತಮ್ಮ ತಾಯಿ, ಪತ್ನಿ ಚಂದ್ರಾವತಿ, ಪುತ್ರ ರಾಹುಲ್, ಎಲ್ಲ ಸೇವಾಕರ್ತರು ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಪಕ್ಕಿಬೆಟ್ಟು ಜಯ ಪಾತ್ರಿ ಅವರು ಕೃತಜ್ಞತೆ ಸಲ್ಲಿಸಿದರು.



