ತೊಕ್ಕೊಟ್ಟಿನ ಭಾಗದಲ್ಲಿ ಅಶಕ್ತ ಜನರಿಗೆ ಆಸರೆಯಾಗಿ ನಿಂತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡ ಶ್ರೀ ಸಾಯಿ ಪರಿವಾರ್ ಟ್ರಸ್ಟ್ (ರಿ.) ತೊಕ್ಕೊಟ್ಟು ಇದರ ಆಶ್ರಯದಲ್ಲಿ ‘ಹೊಂಬೆಳಕು’ ಸಭಾಂಗಣದಲ್ಲಿ ಗುರುಪೂರ್ಣಿಮೆ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ಕರಾವಳಿ ಕರ್ನಾಟಕದ ಹೆಮ್ಮೆಯ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡು, ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಯಕ್ಷಗಾನ ನಾಟ್ಯ ತರಬೇತಿ ನೀಡುತ್ತಿರುವ ಅಪ್ರತಿಮ ಕಲಾವಿದ ಶ್ರೀ ಅಶ್ವಥ್ ಮಂಜನಾಡಿ ಅವರಿಗೆ ಪ್ರೀತ್ಯಾದರದ ಸನ್ಮಾನ ಹಾಗೂ ಗೌರವ ಸಮರ್ಪಣೆ ಮಾಡಲಾಯಿತು.

ಅಂತೆಯೇ, ಅಚ್ಚತುಳುವಿನಲ್ಲಿ ‘ತುಳುವ ಬೊಳ್ಳಿ’ ಎಂದೇ ಹೆಸರುವಾಸಿಯಾದ, ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಮಾನ್ಯ ದಯಾನಂದ ಕತ್ತಲ್ಸಾರ್ ಅವರು ಗುರುಪೂರ್ಣಿಮೆ ಕುರಿತು ಅರ್ಥಪೂರ್ಣ ವಿಚಾರಗಳನ್ನು ಹಂಚಿಕೊಂಡರು. ಇದೇ ವೇಳೆ ಅತ್ಯಂತ ಬಡ ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಈ ಶುಭ ಸಂದರ್ಭದಲ್ಲಿ ಸಾಯಿ ಪರಿವಾರ್ ಟ್ರಸ್ಟ್ನ ಗೌರವಾನ್ವಿತ ಸದಸ್ಯರಾದ ಶ್ರೀ ಸುರೇಶ್ ಭಟ್ನಗರ್ ಅವರು ಶ್ರೀ ಸಾಯಿ ಪರಿವಾರ್ ಸಂಸ್ಥೆಯ ನೂತನ ವೆಬ್ಸೈಟ್ ಅನ್ನು ಲೋಕಾರ್ಪಣೆಗೊಳಿಸಿದರು. ಈ ವಿಶೇಷ ಸಭೆಯಲ್ಲಿ ಟ್ರಸ್ಟ್ನ ವಿಶ್ವಸ್ತರು ಹಾಗೂ ಗೌರವ ಸದಸ್ಯರು ಉಪಸ್ಥಿತರಿದ್ದರು. ಸಮಾರಂಭದ ಸಂಪೂರ್ಣ ವ್ಯವಸ್ಥೆ ಮತ್ತು ಸುಂದರ ನಿರೂಪಣೆಯನ್ನು ಪ್ರವೀಣ್ ಎಸ್. ಕುಂಪಲ ಅವರು ಯಶಸ್ವಿಯಾಗಿ ನೆರವೇರಿಸಿಕೊಟ್ಟರು.





