32 C
Mumbai
April 24, 2026
Mumbai News Kannada
ಸುದ್ದಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಅಗತ್ಯ – ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮನವಿ





ಮುಂಬಯಿ, ಆ. 31 :
ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳ ಜನಜೀವನ ಸುಧಾರಣೆ, ಕೈಗಾರಿಕಾ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶದಿಂದ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.), ತನ್ನ ಬೆಳ್ಳಿಹಬ್ಬದ ವರ್ಷದಲ್ಲಿಯೂ ಜನಪರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ. ಸಮಿತಿಯ ಮುಂಬಯಿ ಕೇಂದ್ರ ಸಮಿತಿ ಹಾಗೂ ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಶ್ರಮಶೀಲ ಕಾರ್ಯದ ಮೂಲಕ ಹಲವು ಸಮಾಜಮುಖಿ ಚಟುವಟಿಕೆಗಳನ್ನು ಕೈಗೊಂಡಿರುವುದು ಗಮನಾರ್ಹ.

ಈ ಹಿನ್ನೆಲೆಯಲ್ಲಿ, ಸಮಿತಿಯ ಈಗಿನ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಎಂ. ಶೆಟ್ಟಿ ಅವರು ಇತ್ತೀಚೆಗೆ KSRTC ಮಂಗಳೂರು ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ಶ್ರೀ ರಾಜೇಶ್ ಶೆಟ್ಟಿ ಅವರನ್ನು ಭೇಟಿಯಾಗಿ, ಮಂಗಳೂರು ವಿಮಾನ ನಿಲ್ದಾಣದ ಪ್ರಯಾಣಿಕರ ಸೌಲಭ್ಯಕ್ಕಾಗಿ ಎರಡು ಹೊಸ KSRTC ಬಸ್ ಮಾರ್ಗಗಳನ್ನು ಪ್ರಾರಂಭಿಸುವಂತೆ ಮನವಿ ಸಲ್ಲಿಸಿದರು.

ಅವರು ಸಲ್ಲಿಸಿದ ಮನವಿಯಲ್ಲಿ:

ಪ್ರಥಮ ಮಾರ್ಗ: ಸ್ಟೇಟ್‌ಬ್ಯಾಂಕ್ ಮಂಗಳೂರು – ಮಂಗಳೂರು ವಿಮಾನ ನಿಲ್ದಾಣ – ಸ್ಟೇಟ್‌ಬ್ಯಾಂಕ್ ಮಂಗಳೂರು.

ದ್ವಿತೀಯ ಮಾರ್ಗ: ಮಣಿಪಾಲ (ಉಡುಪಿ ಮೂಲಕ) – ಮಂಗಳೂರು ವಿಮಾನ ನಿಲ್ದಾಣ – ಮಣಿಪಾಲ (ಉಡುಪಿ ಮೂಲಕ).

ಇಂದಿನ ಪರಿಸ್ಥಿತಿಯಲ್ಲಿ ಮಂಗಳೂರು ವಿಮಾನ ನಿಲ್ದಾಣವು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಪ್ರತಿದಿನ ಸಾವಿರಾರು ಮಂದಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರು ಇದನ್ನು ಉಪಯೋಗಿಸುತ್ತಿದ್ದಾರೆ. ದೇಶದ ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಸರ್ಕಾರೀ ಬಸ್ ಸಂಪರ್ಕವಿದ್ದರೂ, ಮಂಗಳೂರಿನಲ್ಲಿ ಈ ವ್ಯವಸ್ಥೆ ಇಲ್ಲದಿರುವುದು ದೊಡ್ಡ ತೊಂದರೆಯಾಗಿದ್ದು, ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೈವೇಟ್ ಟ್ಯಾಕ್ಸಿಗಳು ಅತಿಯಾದ ಶುಲ್ಕವನ್ನು ವಿಧಿಸುತ್ತಿವೆ. ಅಲ್ಲದೆ ಟ್ಯಾಕ್ಸಿ ಯೂನಿಯನ್, ಒಲಾ–ಉಬರ್ ಸೇವೆಗಳು ಹಾಗೂ ಆಟೋ ರಿಕ್ಷಾಗಳ ಪ್ರವೇಶವನ್ನು ತಡೆಯುತ್ತಿರುವುದು ಕಾನೂನುಬಾಹಿರವಾದರೂ, ಪ್ರಯಾಣಿಕರು ಪರ್ಯಾಯವಿಲ್ಲದೇ ಹೆಚ್ಚಿನ ಮೊತ್ತವನ್ನು ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಮನವಿಗೆ ಪ್ರತಿಕ್ರಿಯೆ ನೀಡಿದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀ ರಾಜೇಶ್ ಶೆಟ್ಟಿ, ಮಂಗಳೂರು ವಿಭಾಗಕ್ಕೆ ಮುಂದಿನ 2–3 ತಿಂಗಳೊಳಗೆ ಹೊಸ ಬಸ್ಸುಗಳನ್ನು ಸೇರಿಸಲಿದ್ದು, ಅದರ ಬಳಿಕ ಈ ಎರಡು ಮಾರ್ಗಗಳನ್ನು ಪ್ರಾರಂಭಿಸುವ ಬಗ್ಗೆ ಕೇಂದ್ರ ಕಚೇರಿಗೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು. ಆದರೆ, ಈ ಮಾರ್ಗಗಳು ಲಾಭದಾಯಕವಾಗಿ ನಿರ್ವಹಣೆಯಾಗಲು ಕನಿಷ್ಠ ಪ್ರಯಾಣಿಕರ ನಿಯಮಿತ ಬಳಕೆ ಅಗತ್ಯವಿದೆ ಎಂದು ಅವರು ಒತ್ತಿಹೇಳಿದರು.

ಈ ಹಿನ್ನೆಲೆಯಲ್ಲಿ, ಸಮಿತಿಯು ಮಂಗಳೂರು, ಉಡುಪಿ, ಬೆಂಗಳೂರು ಮತ್ತು ಮುಂಬಯಿ ಸೇರಿದಂತೆ ವಿವಿಧ ನಗರಗಳಲ್ಲಿ ಸಂಘ ಸಂಸ್ಥೆಗಳು ಹಾಗೂ ಮಾಧ್ಯಮಗಳ ಮೂಲಕ ವ್ಯಾಪಕ ಜಾಗೃತಿ ಮೂಡಿಸಿ, ಹೆಚ್ಚಿನ ಪ್ರಯಾಣಿಕರು ಈ ಬಸ್ ಸೇವೆಯನ್ನು ಉಪಯೋಗಿಸುವಂತೆ ಸಲಹೆ ನೀಡಲು ನಿರ್ಧರಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆಯ ಮೂಲಕ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅಧ್ಯಕ್ಷ ನಿತ್ಯಾನಂದ ಕೋಟಿಯನ್, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಸಾಲಿಯನ್, ರಾಜ್ಯ ಸಂಯೋಜಕ ಕೆ. ಪಿ. ಜಗದೀಶ್ ಅಧಿಕಾರಿ, ಜಿಲ್ಲಾ ಕಾರ್ಯದರ್ಶಿಗಳು ಜಿ. ಟಿ. ಆಚಾರ್ಯ ಮತ್ತು ಸುರೇಂದ್ರ ಮೆಂಡನ್, ಜಿಲ್ಲಾ ಉಪಾಧ್ಯಕ್ಷರು ಅರುಣ್ ಪ್ರಕಾಶ್ ಶೆಟ್ಟಿ, ನಾಗೇಶ್ ಶೆಟ್ಟಿ ಮಾಣಿಗುತ್ತು ಹಾಗೂ ಸುಂದರ ಆಚಾರ್ಯ ಬೆಳುವಾಯಿ ಅವರು, ಎಲ್ಲಾ ವಿಮಾನ ಪ್ರಯಾಣಿಕರು ಈ ಬಸ್ ಸೇವೆಯನ್ನು ಬಳಸಿಕೊಳ್ಳುವಂತೆ ಹಾಗೂ ಕೆಎಸ್‌ಆರ್‌ಟಿಸಿ ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.



Related posts

ಶ್ರೀ ಭಗವತೀ ಕ್ಷೇತ್ರ ಉಪ್ಪಳ, ಮುಂಬಯಿ ಸಮಿತಿ ರಚನೆ

Mumbai News Desk

ಕಾಂತಾವರ : ಶೋಧನ್ ಜೈನ್ ಕೊಡಗುತ್ತು ನಿರ್ಮಿಸಿದ ಕಾಂತೇಶ್ವರ ದೇವರ ಭಕ್ತಿ ಗೀತೆಯ ಆಲ್ಬಂ ಸಾಂಗ್ ಲೋಕಾರ್ಪಣೆ

Mumbai News Desk

ದಿವಿಜ ಚಂದ್ರಶೇಖರ್ ನಿಧನ

Mumbai News Desk

ಮುಂಬೈ : ಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ನಿವಾಸದ ಹೊರಗೆ ಗುಂಡಿನ ದಾಳಿ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ (ರಿ) ಮಂಗಳೂರು ಹಾಗೂ ಮುತ್ತೂಟ್ ಫೈನಾನ್ಸ್ ಲಿಮಿಟೆಡ್ ಇದರ ಜಂಟಿ ಆಶ್ರಯದಲ್ಲಿ ಸ್ಥನ್ಯಪಾನ ಶಿಬಿರಕ್ಕೆ ಚಾಲನೆ.

Mumbai News Desk

ಭಾರತ್ ಬ್ಯಾಂಕ್‌ಗೆ NAFCUB ಮತ್ತು ಬ್ಯಾಂಕಿಂಗ್ ಫ್ರಾಂಟಿಯರ್ಸ್ ವತಿಯಿಂದ ಶ್ರೇಷ್ಠ ಸೈಬರ್‌ ಸೆಕ್ಯೂರಿಟಿ ಪ್ರಶಸ್ತಿ ಹಾಗೂ ಶ್ರೇಷ್ಠ ಅಪಾಯ ನಿರ್ವಹಣಾ ಪ್ರಶಸ್ತಿ

Mumbai News Desk