July 22, 2026
Mumbai News Kannada
ಮುಂಬಯಿ

ಯಕ್ಷಪ್ರಿಯ ಬಳಗ ಮೀರಾಭಾಯಂದರ್’ ಇದರ ‘ಯಕ್ಷ ನವಮಿ’ ಕಾರ್ಯಕ್ರಮ







ಯಕ್ಷಗಾನ ಕಲಿತ ಮಕ್ಕಳು ಸುಸಂಸ್ಕೃತ ಪ್ರಜೆಗಳು: ಗಿರೀಶ್ ಶೆಟ್ಟಿ ತೆಳ್ಳಾರ್

ಮೀರಾಭಾಯಂದರ್: “ಯಕ್ಷಗಾನವು ಕೇವಲ ಮನೋರಂಜನೆಯ ಮಾಧ್ಯಮವಲ್ಲ, ಅದು ಶಿಸ್ತು ಮತ್ತು ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಕಲೆ. ಯಕ್ಷಗಾನ ಕಲಿತ ಮಕ್ಕಳು ಸಮಾಜದಲ್ಲಿ ಸುಸಂಸ್ಕೃತ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ,” ಎಂದು ಬಂಟರ ಸಂಘ ಮುಂಬಯಿ ಇದರ ಜೊತೆ ಕಾರ್ಯದರ್ಶಿ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರ್ ಅಭಿಪ್ರಾಯಪಟ್ಟರು.

​ಇಲ್ಲಿನ ಇಂದ್ರಲೋಕ್ ನಾಕಾದ ಜಿ-9 ಸ್ಪೋರ್ಟ್ಸ್ ಟರ್ಫ್ ಆವರಣದಲ್ಲಿ ಫೆ. 14ರಂದು ಹಮ್ಮಿಕೊಳ್ಳಲಾಗಿದ್ದ ‘ಯಕ್ಷಪ್ರಿಯ ಬಳಗ ಮೀರಾಭಾಯಂದರ್’ ಇದರ ‘ಯಕ್ಷ ನವಮಿ’ ಕಾರ್ಯಕ್ರಮದ ಸಭಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

​ಯಕ್ಷಗುರು ನಾಗೇಶ್ ಪೊಳಲಿ ಅವರು ಯಾವುದೇ ಸ್ವಾರ್ಥವಿಲ್ಲದೆ ಮಕ್ಕಳಿಗೆ ಯಕ್ಷಗಾನ ಕಲಿಸುವ ಕಾಯಕ ಮಾಡುತ್ತಿದ್ದಾರೆ. ಅವರ ಈ ಸೇವಾ ಕಾರ್ಯಕ್ಕೆ ಸಮಾಜದ ಬೆಂಬಲ ಅಗತ್ಯ ಎಂದು ಗಿರೀಶ್ ಶೆಟ್ಟಿ ತಿಳಿಸಿದರು. ಮುಖ್ಯ ಅತಿಥಿಯಾಗಿದ್ದ ಸೈಂಟ್ ಆ್ಯಗ್ನೆಸ್ ಇಂಗ್ಲಿಷ್ ಹೈಸ್ಕೂಲ್ ಸಂಸ್ಥಾಪಕ ಡಾ. ಅರುಣೋದಯ ರೈ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲೇ ಯಕ್ಷಗಾನದ ಆಸಕ್ತಿ ಮೂಡಿಸುವುದರಿಂದ ಮಕ್ಕಳ ಬದುಕಿನಲ್ಲಿ ಧಾರ್ಮಿಕ ಪ್ರಜ್ಞೆ ಮೂಡುತ್ತದೆ ಎಂದರು.

​ಶ್ರೀದೇವಿ ಯಕ್ಷ ಕಲಾ ನಿಲಯದ ಅಧ್ಯಕ್ಷ ಶಶಿಧರ್ ಕೆ. ಶೆಟ್ಟಿ ಇನ್ನಂಜೆ ಮಾತನಾಡಿ, “ನಾಗೇಶ್ ಪೊಳಲಿ ಅವರು ಸೌಮ್ಯ ಸ್ವಭಾವದ ಕಲಾ ಗುರುಗಳು. ನಮ್ಮೆಲ್ಲರ ಒತ್ತಾಯಕ್ಕೆ ಮಣಿದು ಈ ಬಾರಿ ಅರ್ಥಪೂರ್ಣವಾಗಿ ವಾರ್ಷಿಕೋತ್ಸವ ಸಂಘಟಿಸಿದ್ದಾರೆ,” ಎಂದು ಹಾರೈಸಿದರು.

​ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ ಮಾತನಾಡಿ, ನಾಗೇಶ್ ಪೊಳಲಿ ಅವರು ತಮಗೂ ಗುರುಗಳಾಗಿದ್ದು, ಮುಂಬೈ ಹಾಗೂ ಗ್ರಾಮೀಣ ಭಾಗದ ಮಹಿಳೆಯರು ಮತ್ತು ಮಕ್ಕಳು ಸಮರ್ಥವಾಗಿ ಯಕ್ಷಗಾನ ರಂಗಪ್ರವೇಶ ಮಾಡಲು ಅವರ ತರಬೇತಿಯೇ ಕಾರಣ ಎಂದರು. ದಕ್ಷಿಣ ಭಾರತೀಯ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಯೋಗೇಶ್ ಎಸ್. ಗಾಣಿಗ ನಾವುಂದ ಅವರು ಮಾತನಾಡಿ, ಪ್ರತಿವರ್ಷ ಗಣೇಶೋತ್ಸವದ ಸಂದರ್ಭದಲ್ಲಿ ಬಳಗದ ಕಲಾವಿದರಿಗೆ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.

​ವೇದಿಕೆಯಲ್ಲಿ ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಶಿವ ಶೆಟ್ಟಿ ಹಾಗೂ ಬಂಟ್ಸ್ ಫೋರಂ ಮೀರಾ ಭಾಯಂದರ್ ಅಧ್ಯಕ್ಷ ಉದಯ ಶೆಟ್ಟಿ ಮಲಾರ್ ಬೀಡು ಉಪಸ್ಥಿತರಿದ್ದರು.

​ಇದೇ ಸಂದರ್ಭದಲ್ಲಿ ಶ್ರೀದೇವಿ ಯಕ್ಷ ಕಲಾ ನಿಲಯದ ಸಲಹೆಗಾರರಾದ ಶಶಿಕಲಾ ಶಶಿಧರ ಶೆಟ್ಟಿ ಮತ್ತು ಹೋಟೆಲ್ ಅಪೂರ್ವದ ಮಹೇಶ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಶಶಿಕಲಾ ಶೆಟ್ಟಿ ಮಾತನಾಡಿ, ಇಂಗ್ಲಿಷ್ ಮಾಧ್ಯಮದ ಮಕ್ಕಳು ಕನ್ನಡದಲ್ಲಿ ನಿರರ್ಗಳವಾಗಿ ಸಂಭಾಷಣೆ ನಡೆಸಲು ಪೊಳಲಿ ಅವರ ತರಬೇತಿ ಪೂರಕವಾಗಿದೆ ಎಂದರು.

​ತಂಡದ ರೂವಾರಿ ನಾಗೇಶ್ ಕುಮಾರ್ ಪೊಳಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಕರ ಸಹಕಾರದಿಂದಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಒತ್ತಡದ ನಡುವೆಯೂ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ ಎಂದರು.

  • ಪೂಜೆ: ಬೆಳಿಗ್ಗೆ ಸಾಣೂರು ಸಾಂತಿಂಜ ಜನಾರ್ದನ್ ಭಟ್ ಅವರಿಂದ ಸತ್ಯನಾರಾಯಣ ಮಹಾಪೂಜೆ ನಡೆಯಿತು.
  • ಪ್ರದರ್ಶನ: ವಿದ್ಯಾರ್ಥಿಗಳಿಂದ ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮ’ ಯಕ್ಷಗಾನ ಬಯಲಾಟ ಮತ್ತು ಕುಣಿತ ಭಜನೆ ಜರುಗಿತು.
  • ನಿರ್ವಹಣೆ: ನಾಟಕ ನಿರ್ದೇಶಕ ಜಿ.ಕೆ. ಕೆಂಚಕೆರೆ ಮತ್ತು ಯಕ್ಷಗಾನ ಕಲಾವಿದೆ ಅಮೃತಾ ಪಿ. ಸಾಲಿಯನ್ ಕಾರ್ಯಕ್ರಮ ನಿರೂಪಿಸಿದರು. ವಿಜಯ ಶೆಟ್ಟಿ ಮೂಡುಬೆಳ್ಳೆ ಪ್ರಾರ್ಥಿಸಿದರು.
  • ಸಹಕಾರ: ರಾಜೇಶ್ ಶೆಟ್ಟಿ ಕಾಪು, ಸಾಯಿನಾಥ್ ಎ. ಶೆಟ್ಟಿ, ಭಾಸ್ಕರ್ ಎಂ. ಮೂಲ್ಯ, ಪ್ರಜ್ವಲ್ ಶೆಟ್ಟಿ, ಹರೀಶ್ ರೈ ಕುಂಬ್ಳೆ, ಜಗದೀಶ್ ಶೆಟ್ಟಿ ಪಂಜಿನಡ ಹಾಗೂ ಶೈಲೇಶ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು.


Related posts

ಸಾಯಿಬಾಬಾ ಪೂಜಾ ಸಮಿತಿ, ಕಾಲಘೋಡ (ರಿ.): ಹೊಲಿಗೆ ತರಬೇತಿ ಪ್ರಮಾಣಪತ್ರ ವಿತರಣೆ ಹಾಗೂ 31ನೇ ವಾರ್ಷಿಕ ಮಹಾಸಭೆ

Mumbai News Desk

ಫೋರ್ಟ್‌ನಲ್ಲಿ ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ 81ನೇ ವಾರ್ಷಿಕ ಮಹಾಪೂಜೆ ಸಂಪನ್ನ

Mumbai News Desk

ಗಣಪನ ಭಕ್ತಿ ಸಿಂಚನದಲ್ಲಿ ತೇಲಿದ ಕಾಂದಿವಲಿ ಕನ್ನಡ ಸಂಘ

Mumbai News Desk

ಕಾಲಘೋಡಾ ಸಾಯಿಬಾಬಾ ಪೂಜಾ ಸಮಿತಿಯ 54ನೇ ವಾರ್ಷಿಕ ಮಹಾಪೂಜೆ.

Mumbai News Desk

ಮುಂಬೈ ಗಿರ್ ಗಾಂವ್ ನಲ್ಲಿ  “ಗುಡಿಪಾಡ್ವಾ”  ಹಿಂದೂ ನವ ವರ್ಷಾಚರಣೆಯ ಸಂಭ್ರಮ.

Mumbai News Desk

ಬಿಲ್ಲವರ ಅಸೋಸಿಯೇಷನ್, ಮುಂಬೈ, ಇದರ ದೊಂಬಿವೀಲಿ ಸ್ಥಳೀಯ ಕಚೇರಿಯ 2024-2027 ರ ನೂತನ ಕಾರ್ಯಾಧ್ಕ್ಷರಾಗಿ ಶ್ರೀ ಶ್ರೀಧರ್ ಬಿ. ಅಮೀನ್ ಅಯ್ಕೆ

Mumbai News Desk