July 22, 2026
Mumbai News Kannada
ಸುದ್ದಿ

ಶಿರ್ಡಿ ಶ್ರೀ ಸಾಯಿಬಾಬಾ ಸಾನಿಧ್ಯದಲ್ಲಿ ಕಲಾ ಸೌರಭದ ವೈವಿಧ್ಯಮಯ ಬಹುಭಾಷಾ ಸಂಗೀತ ನೃತ್ಯ ಕಲೋತ್ಸವ








ಶಿರ್ಡಿ: ಪುಣ್ಯಭೂಮಿ ಶಿರ್ಡಿ ಶ್ರೀ ಸಾಯಿಬಾಬಾ ಸಾನಿಧ್ಯದಲ್ಲಿ ಹೊರನಾಡ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ, ಮುಂಬಯಿ ನಗರಿಯ ಪ್ರತಿಷ್ಠಿತ ಕಲಾ ಸಂಸ್ಥೆ ‘ಕಲಾ ಸೌರಭ’ ತನ್ನ 33ನೇ ವಾರ್ಷಿಕ ಸಂಗೀತ ನೃತ್ಯ ಸಂಭ್ರಮದ ಸಾಂಸ್ಕೃತಿಕ ಕಲೋತ್ಸವ “ಸಂಸ್ಕಾರ-2026” ರ ಸರಣಿಯ ನಾಲ್ಕನೇ ಕಾರ್ಯಕ್ರಮವನ್ನು ಆಯೋಜಿಸಿತ್ತು. ಶಿರ್ಡಿ ಶ್ರೀ ಸಾಯಿಬಾಬಾ ಸಂಸ್ಥಾನಮ್‌ನ ಆಶ್ರಯದಲ್ಲಿ ರಾಮನವಮಿ ಜಾತ್ರಾ ನಿಮಿತ್ತ ಕನ್ನಡ, ತುಳು ಸೇರಿದಂತೆ ಬಹುಭಾಷಾ ವೈವಿಧ್ಯಮಯ ಸಂಗೀತ ನೃತ್ಯ ಸಂಯೋಜನೆಯ ಶ್ರೀ ಸಾಯಿ ರಾಮ ಸ್ತುತಿ “ಗೀತಾ ಗಾನಾಮೃತ” ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟಿತು.


​ಕಲಾ ಸೌರಭದ ನೂತನ ಪರಿಕಲ್ಪನೆಯ ಸಾಂಸ್ಕೃತಿಕ ವೈವಿಧ್ಯತೆಗಳ ಸರಣಿ ಕಾರ್ಯಕ್ರಮವು ಸಂಸ್ಥೆಯ ಸಂಯೋಜಕ, ಸಂಗೀತ ನಿರ್ದೇಶಕ ಪದ್ಮನಾಭ್ ಸಸಿಹಿತ್ಲುರವರ ನಿರ್ದೇಶನದಲ್ಲಿ ವರ್ಷದ ಪ್ರಾರಂಭದಲ್ಲಿ ಚಾಲನೆ ಪಡೆದಿತ್ತು. ಮುಂಬಯಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಆಮಂತ್ರಿತ ಕಲಾವಿದರಿಂದ ಬಹುಭಾಷೀಯ ಭಕ್ತಿ-ಭಾವ, ಜಾನಪದ ಗೀತಾ ಸಂಗೀತ ಹಾಗೂ ನೃತ್ಯ ಕಲಾ ಪ್ರಕಾರಗಳು ಯಶಸ್ವಿಯಾಗಿ ನಡೆದು ಬಂದಿವೆ. ಇದೀಗ ಶಿರ್ಡಿ ಸಾಯಿಬಾಬಾ ಸಂಸ್ಥಾನದ ಸಮಾಧಿ ಮಂದಿರದಲ್ಲಿ ಪ್ರತಿವರ್ಷ ಜರುಗುವ ಶ್ರೀ ರಾಮನವಮಿ ಮೂರು ದಿನಗಳ ಕಲೋತ್ಸವದ ಸಮಾರೋಪದ ದಿನದಂದು, ಸಾಯಿಬಾಬಾ ಸಮಾಧಿ ಶತಾಬ್ದಿ ಸಭಾಂಗಣದಲ್ಲಿ “ಗೀತಾ ಗಾನಾಮೃತ” ಜರುಗಿತು. ಇದು ಬಹುಭಾಷಾ ಶಾಸ್ತ್ರೀಯ, ಜಾನಪದ ಹಾಗೂ ಯಕ್ಷಗಾನ ನಾಟ್ಯಗಳ ಸಂಗಮವಾಗಿದ್ದು, ಲಕ್ಷಾಂತರ ಸಾಯಿ ಭಕ್ತರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.


​ಸರಿಸುಮಾರು 50ಕ್ಕೂ ಹೆಚ್ಚು ಸಂಗೀತ ನಾಟ್ಯ ಕಲಾವಿದರು ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ಸಾಯಿ ಪ್ಯಾಲೇಸ್ ಗ್ರೂಪ್ ಹೋಟೆಲ್ ಆಡಳಿತ ನಿರ್ದೇಶಕ ಶ್ರೀ ಉದಯ್ ಶೆಟ್ಟಿ, ಮನ್ಮಾಡ್ ಕ್ಷೇತ್ರದ ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಶ್ರೀ ಬಾಜಿರಾವ್ ಮಹಾಜನ್, ಮಹಾರಾಷ್ಟ್ರ ಸರ್ಕಾರದ ಪ್ರಿನ್ಸಿಪಾಲ್ ರಿಜಿಸ್ಟ್ರಾರ್ ಸುರೇಶ್ ಜೋಶಿ, ಮುಂಬೈನ ಖ್ಯಾತ ಹೋಟೆಲ್ ಉದ್ಯಮಿ ವಿಶ್ವನಾಥ ಶೆಟ್ಟಿ, ಸಾಯಿ ಪ್ಯಾಲೇಸ್ ಶಿರ್ಡಿ ವಿಭಾಗದ ವ್ಯವಸ್ಥಾಪನಾ ಅಧಿಕಾರಿ ಶಶಿಧರ ಶೆಟ್ಟಿ, ಲಯನ್ ಮುರಳೀಧರ ಹೆಗ್ಡೆ, ವಿದೂಷಿ ಅಮಿತಾ ಜತ್ತಿನ್, ಸಂಗೀತ ಸಂಯೋಜಕಿ ಶ್ರದ್ಧಾ ದೇಸಾಯಿ, ಕಲಾ ಸೌರಭದ ರಂಗನಿರ್ವಾಹಕ ಜಗದೀಶ್ ಪೂಜಾರಿ, ಹಿರಿಯ ಗಾಯಕ ಪ್ರಮೋದ್ ಕುಮಾರ್ ಹಾಗೂ ಶಿರ್ಡಿ ಸಂಸ್ಥಾನದ ಸಾಂಸ್ಕೃತಿಕ ಅಧಿಕಾರಿಗಳು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಯುವ ಗಾಯಕಿ ಕು. ಸನ್ನಿಧಿ ಶೆಟ್ಟಿ ಗಣಪತಿ ಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು.


​ಮುಖ್ಯ ಅತಿಥಿ ಉದಯ್ ಶೆಟ್ಟಿ ಮಾತನಾಡಿ, “ಕಲಾ ಸೌರಭ ತನ್ನ 33 ವರ್ಷಗಳ ಸಾಧನೆಯಲ್ಲಿ ಅನೇಕ ಕಲಾವಿದರನ್ನು ಬೆಳೆಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಶಿರ್ಡಿ ನಗರಿಯಲ್ಲಿ ಮರಾಠಿಗರೊಂದಿಗೆ ಸೇರಿ ಕನ್ನಡ-ತುಳು ಸಂಸ್ಕೃತಿಯ ಸಾರವನ್ನು ಬಿತ್ತರಿಸುತ್ತಿರುವುದು ಸಂತಸ ತಂದಿದೆ. ಮರಾಠಿಗರಿಗೆ ಕನ್ನಡ ಹಾಡು ಕಲಿಸಿ ಪ್ರಸ್ತುತಪಡಿಸುವುದು ಶ್ಲಾಘನೀಯ,” ಎಂದರು. ಇದೇ ಸಂದರ್ಭದಲ್ಲಿ ಕನ್ನಡ ಭಜನೆ ಹಾಡಿದ ಅಂಧ ಗಾಯಕನಿಗೆ ನಗದು ಬಹುಮಾನ ನೀಡಿ ಗೌರವಿಸಿದರು. ಕಾರ್ಯಕ್ರಮದ ಯಶಸ್ಸಿಗೆ ಕಾರಣವಾದ ಮುಂಬೈನ ಅಮಿತಾ ಕಲಾ ಮಂದಿರ, ಬೆಂಗಳೂರಿನ ಪುಷ್ಪಾಂಜಲಿ ನಾಟ್ಯ ಅಕಾಡೆಮಿ ಹಾಗೂ ನೃತ್ಯಾಂಕಿತ ಡಾನ್ಸ್ ಅಕಾಡೆಮಿ ತಂಡಗಳಿಗೆ ಶುಭ ಹಾರೈಸಿದರು.


​ಶಿರ್ಡಿ ಸಂಸ್ಥಾನದ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಅರ್ಜುನ್ ಫಟಂಗರೆ ಮಾತನಾಡಿ, “ಈ ಕಾರ್ಯಕ್ರಮವನ್ನು ಸಾವಿರಾರು ಭಕ್ತರು ನೇರವಾಗಿ ವೀಕ್ಷಿಸಿದರೆ, ಲಕ್ಷಾಂತರ ಭಕ್ತರು ಯೂಟ್ಯೂಬ್ ಹಾಗೂ ಸಾಯಿ ಚಾನೆಲ್ ಮೂಲಕ ವೀಕ್ಷಿಸಿದ್ದಾರೆ. ಈ ಅದ್ಭುತ ಪ್ರದರ್ಶನವನ್ನು ಸಂಸ್ಥಾನದ ಆಡಳಿತ ಮಂಡಳಿಯು ಮೆಚ್ಚಿಕೊಂಡಿದೆ,” ಎಂದು ಕಲಾವಿದರನ್ನು ಅಭಿನಂದಿಸಿದರು.


​ಪದ್ಮನಾಭ ಸಸಿಹಿತ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥಾನದ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಕಿ ಡಾ. ಸೋನಾಲಿ ಹರ್ದಸ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಅಪರಾಹ್ನ 1 ರಿಂದ ಸಂಜೆ 5 ರವರೆಗೆ ನಡೆದ ಈ ಸಾಂಸ್ಕೃತಿಕ ಸುಧೆಯಲ್ಲಿ ಕೆಳಗಿನ ತಂಡಗಳು ಕಲಾ ಪ್ರದರ್ಶನ ನೀಡಿದವು:



  • ಅಮಿತಾ ಕಲಾ ಮಂದಿರ (ಮುಂಬೈ): ವಿದೂಷಿ ಅಮಿತಾ ಜತ್ತಿನ್ ನೇತೃತ್ವದಲ್ಲಿ ಲಘು-ಶಾಸ್ತ್ರೀಯ ಹಾಗೂ ಜಾನಪದ ನೃತ್ಯ.

  • ಪುಷ್ಪಾಂಜಲಿ ನಾಟ್ಯ ಅಕಾಡೆಮಿ (ಬೆಂಗಳೂರು): ಡಾ. ಅನುಪಮಾ ಭೂಷಣ್ ಮತ್ತು ವಿದ್ವಾನ್ ಕೋಲಾರ ರಮೇಶ್ ಮಾರ್ಗದರ್ಶನದಲ್ಲಿ ಭರತನಾಟ್ಯ ಹಾಗೂ ಭಕ್ತಿ ಸ್ತುತಿ.

  • ನೃತ್ಯಾಂಕಿತ ಡಾನ್ಸ್ ಅಕಾಡೆಮಿ (ಮುಂಬೈ): ಕು. ಅಂಕಿತಾ ನಾಯಕ್ ಮತ್ತು ತಂಡದಿಂದ ‘ರಾಮಾಂಜನೇಯಂ’ ಯಕ್ಷ ರೂಪಕ.

  • ಗಾಯನ ವಿಭಾಗ: ಡಾ. ಕೋಮಲ್, ಕು. ಸನ್ನಿಧಿ ಶೆಟ್ಟಿ, ಪ್ರದೀಪ್ ಸಿಂಗ್, ವಿಶ್ವನಾಥ ಶೆಟ್ಟಿ, ಪ್ರಮೋದ್ ಕಾಂಬ್ಳಿ, ಶ್ರದ್ಧಾ ದೇಸಾಯಿ ಅವರು ಬಹುಭಾಷಾ ಸಾಯಿ ಸ್ತುತಿಯನ್ನು ಪ್ರಸ್ತುತಪಡಿಸಿದರು.


​ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಕಲಾವಿದರನ್ನು ಹಾಗೂ ತಾಂತ್ರಿಕ ಬಳಗವನ್ನು ಶಿರ್ಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸಾಯಿ ಶಾಲು ಹಾಗೂ ಪ್ರಸಾದ ನೀಡಿ ಗೌರವಿಸಲಾಯಿತು. ಕಲಾವಿದರ ಆತಿಥ್ಯ ವಹಿಸಿದ್ದ ಸಾಯಿ ಪ್ಯಾಲೇಸ್ ಹೋಟೆಲ್‌ನ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಲಾಯಿತು.


​ಕಾರ್ಯಕ್ರಮದ ನಿರ್ವಹಣೆಯನ್ನು ಶ್ರದ್ಧಾ ದೇಸಾಯಿ ಮತ್ತು ಪದ್ಮನಾಭ ಸಸಿಹಿತ್ಲು ನೆರವೇರಿಸಿದರು. ಗಾಯಕ ಪ್ರಮೋದ್ ವಂದನಾರ್ಪಣೆ ಮಾಡುವುದರೊಂದಿಗೆ ಸಾಂಸ್ಕೃತಿಕ ಕಲೋತ್ಸವಕ್ಕೆ ಮಂಗಳ ಹಾಡಲಾಯಿತು.




Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪೋಷಕ   ಸದಸ್ಯರಾಗಿ ಗಣೇಶ್ ಶೆಟ್ಟಿ ತನಿಷ್ಕ, ಮತ್ತು ಹರೀಶ್ ಶೆಟ್ಟಿ ಪಡುಕುದ್ರು ಇವರು ಸೇರ್ಪಡೆ

Mumbai News Desk

ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (ಎಸ್‌ಪಿ) ಮುಂಬಯಿ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಮಹಾದೇವ ಪೂಜಾರಿ ಆಯ್ಕೆ

Mumbai News Desk

ಜೆಸಿಐ ಕಾಪು ಘಟಕಕ್ಕೆ 2026ನೇ ಸಾಲಿನ ನೂತನ ಅಧ್ಯಕ್ಷ : ಜೆಸಿ ವಿಕ್ಕಿ ಪೂಜಾರಿ ಮಡುಂಬು

Mumbai News Desk

ವೃತ್ತಿಯಲ್ಲಿ ಇಂಜಿನಿಯರಿಂಗ್ ಪ್ರೊಫೆಸರ್, ಪ್ರವೃತ್ತಿಯಲ್ಲಿ ದೈವ ನರ್ತಕ: ಡಾ. ರವೀಶ್ ಪಡುಮಲೆ ಅವರಿಗೆ ಮಂಗಳೂರು ವಿವಿ ಗೌರವ

Mumbai News Desk

‘ಸಾರಾಭಾಯಿ ವರ್ಸಸ್ ಸಾರಾಭಾಯಿ’, ‘ಜಾನೆ ಭಿ ದೋ ಯಾರೋ’ ಖ್ಯಾತಿಯ ಜನಪ್ರಿಯ ನಟ ಸತೀಶ್ ಶಾ ನಿಧನ

Mumbai News Desk

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು, ಯತಿವರ್ಯರಾದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರ ಮುಂಬಯಿ ಭೇಟಿ.

Mumbai News Desk