August 4, 2026
Mumbai News Kannada
ಸುದ್ದಿ

ಕೊಲ್ಲಾಪುರ: ಯುವತಿಯರ ಲೈಂಗಿಕ ಶೋಷಣೆ ಹಾಗೂ ಬ್ಲ್ಯಾಕ್‌ಮೇಲ್ ಆರೋಪದಡಿ ಫಾರ್ಮಸಿ ವಿದ್ಯಾರ್ಥಿ ಬಂಧನ






*ಕೊಲ್ಲಾಪುರ: ಮಹಾರಾಷ್ಟ್ರದ ಅಮರಾವತಿಯಲ್ಲಿ ಇತ್ತೀಚೆಗೆ ನಡೆದ ಅಪ್ರಾಪ್ತ ಬಾಲಕಿಯರ ಶೋಷಣೆ ಪ್ರಕರಣದ ಬೆನ್ನಲ್ಲೇ, ಕೊಲ್ಲಾಪುರದಲ್ಲಿಯೂ ಅಂತಹದ್ದೇ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಯುವತಿಯರ ಸ್ನೇಹ ಬೆಳೆಸಿ, ಅವರನ್ನು ಲೈಂಗಿಕವಾಗಿ ಶೋಷಿಸಿ ವಿಡಿಯೋ ಚಿತ್ರೀಕರಿಸುವ ಮೂಲಕ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ 22 ವರ್ಷದ ಫಾರ್ಮಸಿ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲ್ಲಾಪುರದ ಹತ್ಕಣಂಗಲೆ ತಾಲೂಕಿನ ನಿವಾಸಿ ಶಾಹಿದ್ ಸಮೀರ್ ಸನದಿ ಬಂಧಿತ ಆರೋಪಿ.
ಆರೋಪಿಯು 20 ವರ್ಷದ ಯುವತಿಯೊಬ್ಬಳನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು, ಕೊಲ್ಲಾಪುರ ಮತ್ತು ಶಿರೋಲಿಯ ವಿವಿಧ ಲಾಡ್ಜ್‌ಗಳಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ರಹಸ್ಯವಾಗಿ ವಿಡಿಯೋ ಚಿತ್ರೀಕರಿಸಿದ್ದ ಆರೋಪಿ, ಆ ವಿಡಿಯೋಗಳನ್ನು ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಲ್ಲದೆ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿ ಸಂತ್ರಸ್ತೆಗೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವಿಚಾರವು ಆರೋಪಿಯ ಆಪ್ತ ಸ್ನೇಹಿತನ ಮೂಲಕವೇ ಹೊರಬಿದ್ದಿದ್ದು, ಸಂತ್ರಸ್ತೆಯು ಏಪ್ರಿಲ್ 26 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣದ ತೀವ್ರತೆಯನ್ನು ಗಮನಿಸಿದ ಸ್ಥಳೀಯ ನ್ಯಾಯಾಲಯವು ಆರೋಪಿಯನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಆರೋಪಿ ಶಾಹಿದ್ ಇದೇ ರೀತಿ ಸುಮಾರು 10ಕ್ಕೂ ಹೆಚ್ಚು ಯುವತಿಯರನ್ನು ಬಲೆಗೆ ಬೀಳಿಸಿ ಶೋಷಣೆ ಮಾಡಿರುವ ಸಾಧ್ಯತೆ ಇದೆ ಎಂದು ಶಿವಪ್ರತಿಷ್ಠಾನ ಹಿಂದೂಸ್ತಾನ್ ಮತ್ತು ಬಜರಂಗದಳದಂತಹ ಸಂಘಟನೆಗಳು ಆರೋಪಿಸಿವೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಸಂಘಟನೆಗಳು ಪೊಲೀಸರಿಗೆ ಮನವಿ ಸಲ್ಲಿಸಿವೆ. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಣ್ಣಾಸಾಹೇಬ್ ಜಾಧವ್ ನೇತೃತ್ವದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಜಾಲದಲ್ಲಿ ಶಿರೋಲಿ, ಹುಪಾರಿ ಮತ್ತು ಹತ್ಕಣಂಗಲೆ ಭಾಗದ ಇತರ ಯುವತಿಯರು ಸಿಲುಕಿದ್ದಾರೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಯಾರಾದರೂ ಸಂತ್ರಸ್ತರು ಇದ್ದಲ್ಲಿ ಧೈರ್ಯವಾಗಿ ಮುಂದೆ ಬಂದು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದು, ಸಂತ್ರಸ್ತರ ಗುರುತನ್ನು ಗೌಪ್ಯವಾಗಿ ಇಡುವುದಾಗಿ ಭರವಸೆ ನೀಡಿದ್ದಾರೆ.



Related posts

ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ (ರಿ) ತೋಕೂರು ವತಿಯಿಂದ ಗಣರಾಜ್ಯೋತ್ಸವ ಆಚರಣೆ

Mumbai News Desk

ಭಾಯಂದರ್ (ಪೂ) ಕ್ರೌನ್ ಬಿಸಿನೆಸ್ ಹೋಟೆಲ್ ಉದ್ಘಾಟನೆ.

Mumbai News Desk

ಉಡುಪಿ : ಮಂದಾರ್ತಿ ಮೇಳದ ಕಲಾವಿದ ವೇಷ ಕಳಚುವ ಮುನ್ನವೇ ಹೃದಯಾಘಾತದಿಂದ ನಿಧನ

Mumbai News Desk

ಮಂಗಳೂರಿನಲ್ಲಿ ಬ್ಯಾಂಕ್ ದರೋಡೆ : 12 ಕೋಟಿ ರೂ.ಮೌಲ್ಯದ ಚಿನ್ನ, ನಗದು ಲೂಟಿ

Mumbai News Desk

ಮಹೇಶ್ ಶೆಟ್ಟಿ ತಿಮರೋಡಿಗೆ ಬಿಗ್ ರಿಲೀಫ್; ಗಡಿಪಾರು ಆದೇಶ ರದ್ದುಪಡಿಸಿದ ಹೈಕೋರ್ಟ್

Mumbai News Desk

ಕರ್ನಿರೆ ಸುವರ್ಣ ಪ್ರತಿಷ್ಠಾನದಿಂದ ಉದ್ಯಮಿ ಕರ್ನಿರೆ ವಿಶ್ವನಾಥ ಶೆಟ್ಟಿ   ಸಮ್ಮಾನ 

Mumbai News Desk