ಉಲ್ಲಾಸನಗರ: ‘ಯಕ್ಷಕಾಶಿ’ ಎಂದೇ ಖ್ಯಾತಿ ಪಡೆದಿರುವ ಉಲ್ಲಾಸನಗರದಲ್ಲಿ ‘ಮುಂಬಯಿ ಕರಾವಳಿ ಕನ್ನಡಿಗರ ಒಕ್ಕೂಟ’ ಹಾಗೂ ಕುಂದ ಭಾಷಾ ಪ್ರೇಮಿಗಳ ಜಂಟಿ ಆಶ್ರಯದಲ್ಲಿ ಮುಂಬರುವ ಆಗಸ್ಟ್ 05, 2026 (ಬುಧವಾರ) ರಂದು ಸಂಜೆ 3.30ಕ್ಕೆ ‘ಬಡಗು ಯಕ್ಷ ಸಂಭ್ರಮ’ ಹಾಗೂ ಆಕರ್ಷಕ ಯಕ್ಷಗಾನ ಬಯಲಾಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಉಲ್ಲಾಸನಗರ-3ರ ಕಲ್ಯಾಣ್-ಅಂಬರ್ನಾಥ್ ರಸ್ತೆಯಲ್ಲಿರುವ ‘ರಾಯಲ್ ಮೆರಿಡಿಯನ್ ಹಾಲ್’ (ರಿಜೆನ್ಸಿ ಪ್ಲಾಜಾ, ಶಾಂತಿ ನಗರ) ನಲ್ಲಿ ನಡೆಯಲಿರುವ ಈ ಅದ್ದೂರಿ ಸಮಾರಂಭದಲ್ಲಿ ಶ್ರೀ ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಅಭ್ಯರ್ಥಿ/ಕಲಾವಿದರಿಂದ ಗತಕಾಲದ ವೈಭವದ ಬಹುಪ್ರಸಿದ್ಧ ಪ್ರಸಂಗ ‘ಅಮಾತ್ಯ – ನಂದಿನಿ’ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಬಡಗು ಯಕ್ಷರಂಗದ ‘ನಟ ಸಾರ್ವಭೌಮ’, ‘ರಂಗಸ್ಥಳದ ರಾಜ’, ‘ಯಕ್ಷಕಣ್ಣನ್’ ಎಂದೇ ಪ್ರಸಿದ್ಧರಾಗಿರುವ, ಯಕ್ಷರಂಗದಲ್ಲಿ 50 ಸಂವತ್ಸರಗಳನ್ನು ಪೂರೈಸಿರುವ ಐರ್ ಬೈಲು ಶ್ರೀ ಆನಂದ ಶೆಟ್ಟಿ ಅವರಿಗೆ ಈ ಶುಭ ಸಂದರ್ಭದಲ್ಲಿ ‘ಸ್ವರ್ಣ ಸಂಭ್ರಮದ ಅಭಿನಂದನಾ ಸನ್ಮಾನ’ ನೆರವೇರಲಿದೆ. ಕುಂದಾಪುರ ತಾಲೂಕಿನ ಸಿದ್ಧಾಪುರ ಸೀಮೆಯ ಇರಬೈಲು ಮೂಲದವರಾದ ಆನಂದ ಶೆಟ್ಟಿಯವರು ಮಾರಣಕಟ್ಟೆ ಮೇಳದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿ, ರಂಗಸ್ಥಳದಲ್ಲಿ ಸತ್ತ್ವಪೂರ್ಣ ಅಭಿನಯ ನೀಡಿದ ಮಹಾನ್ ಕಲಾವಿದರಾಗಿದ್ದಾರೆ.

ಸುಪ್ರಸಿದ್ಧ ಕಲಾ ಸಂಘಟಕರು, ಯಕ್ಷಕಲಾ ಪ್ರೇಮಿ ಹಾಗೂ ಕುಂದಾಪುರ ಕುಂದಗನ್ನಡ ಭಾಷಾಭಿಮಾನಿ ಶ್ರೀ ಅನಿಲ್ ಶೆಟ್ಟಿ, (ವಕ್ಕೇರಿ) ಅವರ ನೇತೃತ್ವ ಹಾಗೂ ಸಂಯೋಜನೆಯಲ್ಲಿ ಈ ಬೃಹತ್ ಕಾರ್ಯಕ್ರಮ ಮೂಡಿಬರಲಿದೆ.

ಕಾರ್ಯಕ್ರಮದ ವ್ಯವಸ್ಥಾಪಕರು (ಸಂಘಟಕರು):
ಶ್ರೀ ಅನಿಲ್ ಶೆಟ್ಟಿ (ವಕ್ಕೇರಿ), ಶ್ರೀ ಪ್ರಸನ್ನ ಶೆಟ್ಟಿ (ಬೆಳ್ಳಂಪಳ್ಳಿ), ಶ್ರೀ ಪ್ರಶಾಂತ್ ಶೆಟ್ಟಿ (ಬೆಳ್ಳಂಪಳ್ಳಿ), ಶ್ರೀ ಆರ್ಡಿ ಉದಯ ಶೆಟ್ಟಿ, ಶ್ರೀ ಸುಧೀರ ಶೆಟ್ಟಿ (ವಂದ್ಸೆ), ಶ್ರೀ ಸುರೇಂದ್ರ ಶೆಟ್ಟಿ (ಸರಿಗಮ), ಶ್ರೀ ದೀಕ್ಷಿತ್ ಶೆಟ್ಟಿ, ಶ್ರೀ ರಘು ಶೆಟ್ಟಿ (ಕಾನ್ವಿ) ಹಾಗೂ ಶ್ರೀ ಜಗದೀಶ್ ಶೆಟ್ಟಿ ಬೇಳಂಜೆ.
ಯಕ್ಷಗಾನ ಕಲೆಯನ್ನು ಮುಂಬಯಿ ಮಾಯಾನಗರದಲ್ಲಿ ಉಳಿಸಿ ಬೆಳೆಸಲು ಶ್ರಮಿಸುತ್ತಿರುವ ಕಲಾತಂಡಕ್ಕೆ ಬೆನ್ನೆಲುಬಾಗಿ ನಿಂತಿರುವ ಶ್ರೀಮತಿ ಪ್ರವೀಣಾ ಪ್ರಕಾಶ್ ಶೆಟ್ಟಿ ಮತ್ತು ಶ್ರೀ ಪ್ರಕಾಶ್ ಶೆಟ್ಟಿ, ಕಲ್ಯಾಣ್ ಅವರು ಕಾರ್ಯಕ್ರಮಕ್ಕೆ ಆಗಮಿಸುವ ಸಮಸ್ತ ಕಲಾಭಿಮಾನಿಗಳಿಗೆ ಫಲಾಹಾರ ಹಾಗೂ ಪ್ರೀತಿಯ ಭೋಜನದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಮುಂಬಯಿ ಕರಾವಳಿ ಕನ್ನಡಿಗರ ಒಕ್ಕೂಟವು ಎಲ್ಲಾ ಯಕ್ಷಕಲಾ ಪ್ರೇಮಿಗಳು, ಕುಂದ ಭಾಷಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ವೈಭವದ ‘ಅಮಾತ್ಯ-ನಂದಿನಿ’ ಯಕ್ಷಗಾನ ಬಯಲಾಟ ಮತ್ತು ಸನ್ಮಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಂಡಿದೆ.
ಮಾಹಿತಿ: ಸೀತಾರಾಮ್ ಶೆಟ್ಟಿ ಆರೂರು





