
ಡೊಂಬಿವಲಿ: ಶಿವಸೇನಾ ದಕ್ಷಿಣ ಭಾರತೀಯ ವಿಭಾಗ ಮತ್ತು ಶ್ರೀ ಮೂಕಾಂಬಿಕಾ ಸೋಷಿಯಲ್ ವೆಲ್ಫೇರ್ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕರ್ತರ ಸಮ್ಮೇಳನ ಹಾಗೂ ‘ಆಟಿಡೊಂಜಿ ದಿನ’ ಸಾಂಸ್ಕೃತಿಕ ಕಾರ್ಯಕ್ರಮ ಆಗಸ್ಟ್ 9 ರ ಆದಿತ್ಯವಾರ ದತ್ತನಗರದ ಲೇವಾ ಭವನದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.

ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸ್ವಾತಿ ಕಡ್ಕೆ ಅವರು ಎಲ್ಲ ಗಣ್ಯರು, ಆಹ್ವಾನಿತರು ಮತ್ತು ಆಗಮಿಸಿದ ಅತಿಥಿಗಳಿಗೆ ಹೃತ್ಪೂರ್ವಕ ಸ್ವಾಗತ ಕೋರಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಅನುಪಮಾ ಶೆಟ್ಟಿ ಅವರು ವೇದಿಕೆಯ ಗಣ್ಯರು, ಅತಿಥಿಗಳು ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಕಲ್ಯಾಣ್ ಗ್ರಾಮಾಂತರ ಕ್ಷೇತ್ರದ ಶಾಸಕ ರಾಜೇಶ್ ಜಿ. ಮೋರೆ, ಮುಂಬಯಿ ಬಂಟ್ಸ್ ಸಂಘದ ಸಮಾಜ ಕಲ್ಯಾಣ ವಿಭಾಗದ ಅಧ್ಯಕ್ಷ ಡಾ. ದಿವಾಕರ್ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷ ಸುಬ್ಬಯ್ಯ ಶೆಟ್ಟಿ, ಉದಯ ಕೆ. ಶೆಟ್ಟಿ, ಆರ್. ಡಿ. ವಿಶ್ವನಾಥ್ ಶೆಟ್ಟಿ ಮೂಡುಶೆಡ್ಡೆ ಸೇರಿದಂತೆ ಕಲ್ಯಾಣ್ ಜಿಲ್ಲೆಯ ಅನೇಕ ಗಣ್ಯರು, ಸಾಮಾಜಿಕ ಮುಖಂಡರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಡಾ. ಶ್ರೀಕಾಂತ್ ಏಕನಾಥ್ ಶಿಂಧೆ ಅವರು ವೈಯಕ್ತಿಕವಾಗಿ ಹಾಜರಾಗಲು ಸಾಧ್ಯವಾಗದಿದ್ದರೂ, ವೀಡಿಯೋ ಸಂದೇಶದ ಮೂಲಕ ಆಯೋಜಕರಿಗೆ ಮತ್ತು ನೆರೆದಿದ್ದ ಜನಸ್ತೋಮಕ್ಕೆ ಹೃತ್ಪೂರ್ವಕ ಶುಭಾಶಯ ತಿಳಿಸಿ, ಕಾರ್ಯಕ್ರಮದ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು.

ತುಳುನಾಡಿನ ಸಂಪ್ರದಾಯವನ್ನು ಮೆಲುಕು ಹಾಕುವಂತೆ ಆಟಿ ತಿಂಗಳ ವಿಶೇಷ ‘ಆಟಿ ಆಡ್ಯೆ/ಕೂಟ’ ರಸದೌತಣವನ್ನು ಆಯೋಜಿಸಲಾಗಿತ್ತು. ಇದರ ಭಾಗವಾಗಿ ಸುಮಾರು 35 ರಿಂದ 50ಕ್ಕೂ ಹೆಚ್ಚು ಸಾಂಪ್ರದಾಯಿಕ ಹಾಗೂ ಶ್ರೇಷ್ಠ ಆಟಿ ತಿಂಗಳ ಖಾದ್ಯಗಳನ್ನು ಸಿದ್ಧಪಡಿಸಿ ಅತಿಥಿಗಳಿಗೆ ಉಣಬಡಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ಹಾಗೂ ಪುರುಷರ ತಂಡಗಳು ನೀಡಿದ ಮನಮೋಹಕ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನ ಗೆದ್ದವು.

ಸಂಸ್ಥೆಯ ಅಧ್ಯಕ್ಷ ಸುಭಾಷ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಅನುಪಮಾ ಶೆಟ್ಟಿ ಅವರ ನೇತೃತ್ವದಲ್ಲಿ, ಹೇಮಾನಂದ್ ದೇವಾಡಿಗ, ಹರೀಶ್ ಕೋಟ್ಯಾನ್, ಪ್ರೇಮ ಸುವರ್ಣ, ವಿಶಾಲ್ ದೇವಾಡಿಗ, ಸವಿತಾ ಕೋಟ್ಯಾನ್, ಸಂಧ್ಯಾ ಎಕ್ಕಾರ್ ಹಾಗೂ ಮಹಿಳಾ ಬಚತ್ ಗಟ್ ಸದಸ್ಯರ ಸಹಕಾರದೊಂದಿಗೆ ಸಂಪೂರ್ಣ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮತ್ತು ಶಿಸ್ತಿನಿಂದ ನೆರವೇರಿತು.






