
ಮುಂಬಯಿ: ಕರಾವಳಿಯ ಪುರಾಣ ಪ್ರಸಿದ್ಧ ಕ್ಷೇತ್ರ, ‘ಪ್ರಸಾದ ಗಣಪತಿ’ ಎಂದೇ ಖ್ಯಾತನಾದ ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ಪ್ರಸಾದಿತ ಯಕ್ಷಗಾನ ಮಂಡಳಿಯು ತನ್ನ 12ನೇ ವರ್ಷದ ಮುಂಬಯಿ ತಿರುಗಾಟವನ್ನು ಹಮ್ಮಿಕೊಂಡಿದೆ. ಯಕ್ಷಗಾನ ಸೇವಾ ಪ್ರಿಯನಾದ ಶ್ರೀ ಸಿದ್ದಿವಿನಾಯಕನ ಒಲುಮೆಯ ಈ ಮೇಳವು ಜುಲೈ 10 ರಿಂದ 25 ರವರೆಗೆ ಮಹಾನಗರದ ವಿವಿಧ ಭಾಗಗಳಲ್ಲಿ ಅದ್ದೂರಿ ಪ್ರದರ್ಶನಗಳನ್ನು ನೀಡಲಿದೆ.
ವಕ್ವಾಡಿ ರಂಜಿತ್ ಶೆಟ್ಟಿ ಅವರ ಯಜಮಾನಿಕೆಯಲ್ಲಿ ನಡೆಯಲಿರುವ ಈ ಮಳೆಗಾಲದ ತಿರುಗಾಟದ ಪ್ರದರ್ಶನಗಳ ಸಂಪೂರ್ಣ ವಿವರ ಇಲ್ಲಿದೆ:
ಪ್ರದರ್ಶನಗಳ ದಿನಚರಿ (ಜುಲೈ 2026)
ಜುಲೈ 10: ವರ್ತಕ ನಗರದ ಬಂಟರ ಸಂಘದ ನೇತೃತ್ವದಲ್ಲಿ, ಥಾಣೆಯ ಡಾ. ಕಾಶೀನಾಥ್ ಗಾಣೇಕರ್ ನಾಟ್ಯಾಲಯದಲ್ಲಿ — ‘ರಾಮಾಶ್ವಮೇಧ’
ಜುಲೈ 11: ಶ್ರೀ ಜಯರಾಮ ಶೆಟ್ಟಿ ಎಣ್ಣೆಹೊಳೆ ಮತ್ತು ಕುಟುಂಬಸ್ಥರ ಸೇವಾರ್ಥವಾಗಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದಲ್ಲಿ — ‘ಸಿರಿ ಸಿಂಗಾರಿ’
ಜುಲೈ 12: ಹಿರಿಯ ಸಮಾಜಸೇವಕ ಶ್ರೀ ವಿಠ್ಠಲ ಶೆಟ್ಟಿ ಅವರ ನೇತೃತ್ವದಲ್ಲಿ, ಡೊಂಬಿವಿಲಿ ಅಜ್ಜೇಪಾಡ ಶ್ರೀ ಅಯ್ಯಪ್ಪ ಮಂದಿರದಲ್ಲಿ — ‘ನೂತನ ಪ್ರಸಂಗ’
ಜುಲೈ 13: ಪನ್ವೇಲ್ ಕರ್ನಾಟಕ ಸಂಘದ ಆಶ್ರಯದಲ್ಲಿ — ವಿಶೇಷ ಪ್ರದರ್ಶನ
ಜುಲೈ 14: ನವಿಮುಂಬಯಿ ಹೋಟೆಲ್ ಮಾಲೀಕರು, ಶ್ರೀ ಮಾರಾಳಿ ಬಾಲಕೃಷ್ಣ ಶೆಟ್ಟಿ ಮತ್ತು ಅಭಿಮಾನಿಗಳ ಆಶ್ರಯದಲ್ಲಿ, ಘನ್ಸೋಲಿ ಶ್ರೀ ಮೂಕಾಂಬಿಕಾ ಸನ್ನಿಧಿಯಲ್ಲಿ — ವಿಶೇಷ ಪ್ರದರ್ಶನ
ಜುಲೈ 15: ರಾಜೇಶ್ ಶೆಟ್ಟಿ ಮತ್ತು ಸಂತೋಷ್ ಪೆರ್ಡೂರು ನೇತೃತ್ವದಲ್ಲಿ, ಚಿಂಚ್ವಾಡ್ ಖಂಡೋಬಾ ದೇವಸ್ಥಾನ (ಆಕುರ್ಡಿ) ಆವರಣದಲ್ಲಿ — ‘ಸಿರಿ ಸಿಂಗಾರಿ’
ಜುಲೈ 16: ಪ್ರಭಾಕರ ಶೆಟ್ಟಿ ನೇತೃತ್ವದಲ್ಲಿ, ಗೋರೇಗಾಂವ್ ಪಶ್ಚಿಮದ ಲ್ಯಾಂಡ್‌ಮಾರ್ಕ್ ಹೋಟೆಲ್‌ನಲ್ಲಿ — ವಿಶೇಷ ಪ್ರದರ್ಶನ
ಜುಲೈ 17: ವಸಾಯಿ ತಾಲೂಕು ತುಳು ಕನ್ನಡ ಸಂಘ ಹಾಗೂ ಹೋಟೆಲ್ ಉದ್ಯಮಿಗಳ ಆಶ್ರಯದಲ್ಲಿ, ಮಲಾಡ್‌ನ ಪಾಟ್ಲಾದೇವಿ ಮಂದಿರದಲ್ಲಿ — ‘ಪಂಜುರ್ಲಿ ಪ್ರತಾಪ’
ಜುಲೈ 18: ವಾಪಿ ಕನ್ನಡ ಸಂಘದ ನೇತೃತ್ವದಲ್ಲಿ — ‘ಭೀಷ್ಮ ಪ್ರತಿಜ್ಞೆ – ಜಾಂಬವತಿ ಕಲ್ಯಾಣ’
ಜುಲೈ 19: ಯಕ್ಷಾಭಿಮಾನಿಗಳ ನೇತೃತ್ವದಲ್ಲಿ, ಥಾಣೆಯ ನವೋದಯ ಕನ್ನಡ ಹೈಸ್ಕೂಲ್‌ನಲ್ಲಿ — ‘ರಾಜಾ ರುದ್ರಕೋಪ’
ಜುಲೈ 20: ಕುಂದಾಪುರ ಕನ್ನಡಿಗರ ವೇದಿಕೆಯ ನೇತೃತ್ವದಲ್ಲಿ, ಘನ್ಸೋಲಿ ಮೂಕಾಂಬಿಕಾ ಮಂದಿರದಲ್ಲಿ — ‘ನೂತನ ಪ್ರಸಂಗ’
ಜುಲೈ 21: ನವಿಮುಂಬಯಿ ಹೋಟೆಲ್ ಓನರ್ಸ್ ಅಸೋಸಿಯೇಷನ್ ಹಾಗೂ ಬಾರ್ಕೂರು ಜಯಪ್ರಕಾಶ್ ಶೆಟ್ಟಿ ಮತ್ತು ಯಕ್ಷಾಭಿಮಾನಿಗಳ ನೇತೃತ್ವದಲ್ಲಿ, ಘನ್ಸೋಲಿ ಮೂಕಾಂಬಿಕಾ ಮಂದಿರದಲ್ಲಿ — ‘ಸಿಂಧೂರ ಸಿರಿ ದೈವ’
ಜುಲೈ 22, 23, 24 ಮತ್ತು 25: ಶ್ರೀ ಸತೀಶ್ ಶೆಟ್ಟಿ, ಶ್ರೀ ಗಣೇಶ ಶೆಟ್ಟಿ ನಂದ್ರೊಳ್ಳಿ ಹಾಗೂ ಸ್ನೇಹಿತರ ಆಶ್ರಯದಲ್ಲಿ, ಕಲ್ಯಾಣ್‌ನ ಶಾಹಡ್‌ನಲ್ಲಿ — ‘ನೂತನ ಪ್ರಸಂಗ’
ಭಕ್ತರಲ್ಲಿ ವಿನಂತಿ: ಮಳೆಗಾಲದಲ್ಲಿ ತಿರುಗಾಟ ನಡೆಸುವ ಬಡಗುತಿಟ್ಟಿನ ಏಕೈಕ ಯಕ್ಷಗಾನ ಮೇಳವಾದ ಹಟ್ಟಿಯಂಗಡಿ ಮೇಳವು ಈ ವರ್ಷವೂ ಮುಂಬಯಿ ಯಾತ್ರೆಗೆ ಹೊರಟಿದೆ. ಕ್ಷೇತ್ರದಿಂದ ಮೇಳದ ಉತ್ಸವ ಮೂರ್ತಿಯೂ ಜೊತೆಗೆ ಬರಲಿದ್ದು, ಸೇವಾಕರ್ತರ ಇಷ್ಟಾರ್ಥಗಳನ್ನು ಈಡೇರಿಸುವ ಪ್ರಸಾದ ಗಣಪತಿಯನ್ನು ಸಕಲ ಪೂಜಾ ವಿಧಿವಿಧಾನಗಳೊಂದಿಗೆ ಬರಮಾಡಿಕೊಂಡು, ಕಲಾವಿದರ ಪ್ರದರ್ಶನವನ್ನು ಪ್ರೋತ್ಸಾಹಿಸಬೇಕಾಗಿ ವಿನಂತಿ. ಸೇವಾಕರ್ತರು ಅಪೇಕ್ಷಿಸಿದಲ್ಲಿ ಮೇಳದ ವತಿಯಿಂದಲೇ ಗಣಹೋಮವನ್ನು ನಡೆಸಿ ಕೊಡಲಾಗುವುದು.












ಪ್ರಸಿದ್ಧ ಕಲಾವಿದರ ಬಳಗ
ಹಿಮ್ಮೇಳ: ಭಾಗವತರಾಗಿ ಆನಂದ ಅಂಕೋಲ, ಜಿ.ಕೆ. ಹೆಗಡೆ ಹೊಲ್ನಗದ್ದೆ; ಮದ್ದಲೆಯಲ್ಲಿ ಚಂದ್ರಶೇಖರ ಭಟ್ ಶಿರಸಿ; ಚಂಡೆಯಲ್ಲಿ ಶಿವಾನಂದ ಗುಲ್ವಾಡಿ.
ಮುಮ್ಮೇಳ (ಹಾಸ್ಯ): ಹಳ್ಳಾಡಿ ಜಯರಾಮ ಶೆಟ್ಟಿ, ಹಳ್ಳಾಡಿ ರತೀಶ್ ಶೆಟ್ಟಿ, ಶೇಖರ ಪೂಜಾರಿ ನಾಯ್ಕನಕಟ್ಟೆ.
ಸ್ತ್ರೀ ವೇಷ: ಮಾರುತಿ ಚಿಕ್ಕನಕೋಡು, ಶ್ರೀಕಾಂತ್ ರಟ್ಟಾಡಿ, ಅರುಣ್ ನಾಯಕ್.
ಪುರುಷ ಪಾತ್ರಗಳು: ನರಸಿಂಹ ಗಾಂವಕರ್, ಆಲೂರು ನಾಗರಾಜ ದೇವಾಡಿಗ, ಹರೀಶ್ ಮೊಗವೀರ ಜಪ್ತಿ, ದರ್ಶನ್ ನಾಯ್ಕ್ ಬಾಸುಳ್ಳ, ವೀರೇಂದ್ರ ಅಂಕೋಲ, ಸುಜನ್ ಕರ್ಜೆ.
ನೂತನ ಆಖ್ಯಾನಗಳು: ಬೇಳೂರು ವಿಷ್ಣುಮೂರ್ತಿ ನಾಯಕ್ ವಿರಚಿತ ಪ್ರಸಂಗಗಳು, ಆನಂದ ಸಾಲಿಗ್ರಾಮ ವಿರಚಿತ ‘ಸಿರಿ ಸಿಂಗಾರಿ’, ಜಿ.ಕೆ. ಹೆಗಡೆ ವಿರಚಿತ ‘ಬ್ರಹ್ಮ ಕಲಶ’ ಹಾಗೂ ‘ಸತ್ಯಮೇವ ಜಯತೇ’ ಪ್ರದರ್ಶನಗೊಳ್ಳಲಿವೆ.
ಯಜಮಾನರು: ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ
ವ್ಯವಸ್ಥಾಪಕರು (ಮ್ಯಾನೇಜರ್ಸ್): ಗೌತಮ್, ರೋಹನ್
ಮುಂಬಯಿ ಪ್ರವಾಸದ ಸಹಕಾರ: ಸಿವಿಲ್ ರಮೇಶ್ ಶೆಟ್ಟಿ, ಸುರೇಶ್ ಬರ್ಕಲ್ ಮಕ್ಕಿ
ಸಂಪರ್ಕ ಸಂಖ್ಯೆ: 9900800593 / 9141930593
ಶ್ರೀ ಕ್ಷೇತ್ರದ ಹಿರಿಮೆ ಮತ್ತು ಇತಿಹಾಸ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಹಟ್ಟಿಯಂಗಡಿಯು ಐತಿಹಾಸಿಕ ಮತ್ತು ಧಾರ್ಮಿಕ ಕೇಂದ್ರವಾಗಿದೆ. ಕುಂದಾಪುರದಿಂದ 8 ಕಿ.ಮೀ. ಹಾಗೂ ಉಡುಪಿಯಿಂದ 45 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರವು ಶ್ರೀ ಸಿದ್ದಿವಿನಾಯಕ ದೇವಸ್ಥಾನಕ್ಕೆ ಪ್ರಸಿದ್ಧಿಯಾಗಿದೆ. ಇಲ್ಲಿರುವ 8ನೇ ಶತಮಾನದ ಗಣಪತಿ ವಿಗ್ರಹವು 2.5 ಅಡಿ ಎತ್ತರವಿದ್ದು, ಅತ್ಯಂತ ಆಕರ್ಷಕವಾಗಿದೆ. ಇಲ್ಲಿ ಪ್ರಾರ್ಥಿಸುವಾಗ ‘ಪಿಂಗಾರ’ (ಅಡಿಕೆ ಹೂವು) ಬಲಕ್ಕೆ ಬೀಳುವ ಮೂಲಕ ಭಕ್ತರ ಕೋರಿಕೆಗಳಿಗೆ ದೇವ ಅಸ್ತು ಎನ್ನುತ್ತಾನೆ ಎಂಬ ಅಚಲ ನಂಬಿಕೆಯಿದೆ. ಹಿಂದೆ ‘ಪಟ್ಟಿನಗರ’ ಎಂದು ಕರೆಯಲ್ಪಡುತ್ತಿದ್ದ ಈ ಪ್ರದೇಶವು ತುಳುನಾಡನ್ನು ಆಳಿದ ಆಳುಪ ಅರಸರ ರಾಜಧಾನಿಯಾಗಿತ್ತು. ಇಲ್ಲಿ ವಿನಾಯಕನ ಜೊತೆಗೆ ಗೋಪಾಲಕೃಷ್ಣ, ಲೋಕನಾಥೇಶ್ವರ, ಶಂಕರನಾರಾಯಣ ದೇವಸ್ಥಾನಗಳು ಹಾಗೂ ಜೈನ ಮಂದಿರಗಳೂ ಇವೆ.
ಯಕ್ಷಗಾನ ರಂಗದ ಹೆಸರಾಂತ ಕವಿ ಹಟ್ಟಿಯಂಗಡಿ ರಾಮಭಟ್ಟರು ಇದೇ ಕ್ಷೇತ್ರದವರು. ಇವರು ರಚಿಸಿದ “ಅತಿಕಾಯ ಕಾಳಗ”, “ಧ್ರುವಚರಿತ್ರೆ” ಮತ್ತು “ಸುಭದ್ರಾ ಕಲ್ಯಾಣ” ಪ್ರಸಂಗಗಳು ಇಂದಿಗೂ ಅತ್ಯಂತ ಜನಪ್ರಿಯವಾಗಿವೆ. ಇವರ ಸರಳ ಮತ್ತು ರಸವತ್ತಾದ ಸಾಹಿತ್ಯ ಶೈಲಿಯು ಭಾಗವತಿಕೆಗೆ ಹಾಗೂ ಪ್ರದರ್ಶನಕ್ಕೆ ಅತ್ಯಂತ ಸೂಕ್ತವಾಗಿದೆ. (ಗಮನಿಸಿ: ಹೊಸಗನ್ನಡದ ಆದ್ಯಕವಿ ಹಟ್ಟಿಯಂಗಡಿ ನಾರಾಯಣ ರಾಯರಿಗೂ, ಇವರಿಗೂ ಯಾವುದೇ ಸಂಬಂಧವಿರುವುದಿಲ್ಲ).
ಬಡಗುತಿಟ್ಟಿನ ಅನನ್ಯ ಸೃಷ್ಟಿ: ಹಟ್ಟಿಯಂಗಡಿ ಮೇಳ
ಧರ್ಮದರ್ಶಿ ದಿ. ರಾಮಚಂದ್ರ ಭಟ್ಟರ ಆಶೀರ್ವಾದದೊಂದಿಗೆ ಸ್ಥಾಪನೆಯಾದ ಈ ಮೇಳವು, ಪ್ರಸ್ತುತ ಧರ್ಮದರ್ಶಿಗಳಾದ ಶ್ರೀ ಬಾಲಚಂದ್ರ ಭಟ್ಟರ ಮಾರ್ಗದರ್ಶನದಲ್ಲಿ 12ನೇ ವರ್ಷದ ಯಶಸ್ವಿ ತಿರುಗಾಟ ನಡೆಸುತ್ತಿದೆ. ಬೆಂಗಳೂರು, ಉತ್ತರ ಕನ್ನಡ, ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ಹೈದರಾಬಾದ್, ನವದೆಹಲಿ ಮುಂತಾದೆಡೆ ಯಶಸ್ವಿ ಪ್ರದರ್ಶನ ನೀಡಿರುವ ಈ ಮೇಳವು, ಮಳೆಗಾಲದಲ್ಲೂ ಕಲಾವಿದರಿಗೆ ನಿರಂತರ ಉದ್ಯೋಗ ಒದಗಿಸುವ ಉದಾತ್ತ ಉದ್ದೇಶವನ್ನು ಹೊಂದಿದೆ. ಪ್ರಸ್ತುತ ಮುಂಬಯಿ ಮಹಾನಗರದಲ್ಲಿ ಬಯಲಾಟ ಪ್ರದರ್ಶಿಸುವ ಏಕೈಕ ಮೇಳ ಇದಾಗಿದ್ದು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪ್ರೋತ್ಸಾಹಿಸಬೇಕಾಗಿ ವಿನಂತಿಸಲಾಗಿದೆ.
ಯಜಮಾನರ ಪರಿಚಯ: ವೃತ್ತಿಯಲ್ಲಿ ಉಪನ್ಯಾಸಕರಾದ ರಂಜಿತ್ ಶೆಟ್ಟಿ
ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದ ಸಣಗಲ್ಲು ಮನೆಯ ರಂಜಿತ್ ಶೆಟ್ಟಿ ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಪದವಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ, ಕಳೆದ 15 ವರ್ಷಗಳಿಂದ ವಿವಿಧ ಸರ್ಕಾರಿ ಕಾಲೇಜುಗಳಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಯಕ್ಷಗಾನದ ಮೇಲಿನ ಅತೀವ ಆಸಕ್ತಿಯಿಂದಾಗಿ ಪ್ರಸ್ತುತ ಹಟ್ಟಿಯಂಗಡಿ ಹಾಗೂ ಮೆಕ್ಕೆಕಟ್ಟು ಎಂಬ ಎರಡು ಪ್ರಮುಖ ಮೇಳಗಳ ಯಜಮಾನಿಕೆಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ. 2013ರಲ್ಲಿ ‘ಜಿಲ್ಲಾ ಯುವ ಪ್ರಶಸ್ತಿ’ ಮುಡಿಗೇರಿಸಿಕೊಂಡ ಇವರು, ‘ದ್ಯುತಿಪರ್ವ ಯಕ್ಷ ಟ್ರಸ್ಟ್’ ಮೂಲಕ ಕಲಾವಿದರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದಾರೆ. ಇವರ ಈ ಸಾಧನೆಗೆ ಪತ್ನಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯಾದ ಶ್ರೀಮತಿ ಪಲ್ಲವಿ ಶೆಟ್ಟಿ ಅವರು ಪೂರ್ಣ ಸಾತ್ ನೀಡುತ್ತಿದ್ದಾರೆ. ಹಿರಿಯ ಮತ್ತು ಯುವ ಕಲಾವಿದರ ಬಲಿಷ್ಠ ತಂಡದೊಂದಿಗೆ ಮೇಳವು ಈ ಬಾರಿ ಮುಂಬಯಿ ಕಲಾಪ್ರೇಮಿಗಳನ್ನು ರಂಜಿಸಲು ಸಜ್ಜಾಗಿದೆ.




