:
ಯುವ ಪ್ರತಿಭಾವಂತರಿಗೆ ಯಕ್ಷಗಾನದಲ್ಲಿ ಆಸಕ್ತಿ ಮೂಡಿಸುವ ಸೇವೆ ಅಭಿನಂದನೀಯ: ಸಿ. ಎ. ಸುರೇಂದ್ರ ಕೆ. ಶೆಟ್ಟಿ
ಚಿತ್ರ-ವರದಿ: ದಿನೇಶ್ ಕುಲಾಲ್
ಭಾಯಂದರ್: ಯುವ ಯಕ್ಷಗಾನ ಕಲಾವಿದ ಹಾಗೂ ಸಂಘಟಕ, ಯಕ್ಷಗುರು ನಾಗೇಶ್ ಕುಮಾರ್ ಪೊಳಲಿ ಇವರ ಮಾರ್ಗದರ್ಶನದಲ್ಲಿ ಸ್ಥಾಪನೆಗೊಂಡಿರುವ ‘ಯಕ್ಷಪ್ರಿಯ ಬಳಗ ಮೀರಾ-ಭಾಯಂದರ್’ ಇದರ ಕಲಾವಿದರಿಂದ ಆ. 2ರ ರವಿವಾರದಂದು ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನವು ಯಶಸ್ವಿಯಾಗಿ ನಡೆಯಿತು. ಕಲಾಪೋಷಕ ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದ ಸಿ. ಎ. ಸುರೇಂದ್ರ ಶೆಟ್ಟಿ ಅವರ ಪೂಜ್ಯ ತಂದೆಯವರಾದ ಕೀರ್ತಿಶೇಷ ಕುಟ್ಟಿ ಲೋಕಯ್ಯ ಶೆಟ್ಟಿ ವೇದಿಕೆಯಲ್ಲಿ, ಯಕ್ಷಗುರು ನಾಗೇಶ್ ಕುಮಾರ್ ಪೊಳಲಿ ಅವರ ನಿರ್ದೇಶನದಲ್ಲಿ ಯಕ್ಷಪ್ರಿಯ ಬಳಗದ ವಿದ್ಯಾರ್ಥಿಗಳು ಮತ್ತು ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಭಾಯಂದರ್ ಪೂರ್ವದ ಇಂದ್ರಲೋಕ್ ನಾಕಾ, ವಿಮಲ್ ಡೈರಿ ಲೈನ್, ಕಲಾವತಿ ಮಂದಿರದ ಸಮೀಪವಿರುವ ಜಿ-9 ಸ್ಪೋರ್ಟ್ಸ್ ಟರ್ಫ್ ಆ್ಯಂಡ್ ಲಾನ್ (ಪ್ಲಾಟ್ ನಂ. 212)ನಲ್ಲಿ ಈ ಪ್ರದರ್ಶನ ಜರುಗಿತು.
ಈ ಸಂದರ್ಭದಲ್ಲಿ ಸಿ. ಎ. ಸುರೇಂದ್ರ ಕೆ. ಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಸಿ. ಎ. ಸುರೇಂದ್ರ ಶೆಟ್ಟಿ, “ನನಗೆ ಬಾಲ್ಯದಿಂದಲೇ ಯಕ್ಷಗಾನದ ಕಡೆಗೆ ಅಭಿರುಚಿ ಇತ್ತು. ಶಾಲಾ-ಕಾಲೇಜುಗಳಲ್ಲಿ ಬಣ್ಣ ಹಚ್ಚಿ ಯಕ್ಷಗಾನ ಪ್ರದರ್ಶನ ಮಾಡಿದ್ದೇನೆ. ಮುಂಬೈನಲ್ಲಿ ನಾಗೇಶ್ ಕುಮಾರ್ ಪೊಳಲಿ ಅವರು ನನಗೆ ಬಹಳಷ್ಟು ಸ್ಪೂರ್ತಿ ನೀಡಿದವರು. ನನಗೆ ಹಾಗೂ ಮೀರಾ-ಭಾಯಂದರ್, ಮಲಾಡ್, ನಾಲಾಸೋಪಾರ ಪರಿಸರದ ಯುವ ಪ್ರತಿಭಾವಂತರಿಗೆ ಯಕ್ಷಗಾನದ ಅಭಿರುಚಿಯನ್ನು ಬೆಳೆಸಿ, ಅವರನ್ನು ರಂಗದಲ್ಲಿ ಪ್ರದರ್ಶಿಸುವಂತೆ ಪ್ರೇರೇಪಿಸಿದ್ದಾರೆ,” ಎಂದರು.
ಮುಂದುವರಿದು ಮಾತನಾಡಿದ ಅವರು, “ನನ್ನ ತಂದೆ ಕುಟ್ಟಿ ಶೆಟ್ಟಿ ಅವರು ಯಕ್ಷಗಾನದ ದೊಡ್ಡ ಅಭಿಮಾನಿಯಾಗಿದ್ದರು. ಅವರು ನನಗೆ ಸದಾ ಮಾರ್ಗದರ್ಶನ ಮಾಡುತ್ತಾ, ನಮ್ಮ ನಾಡಿನ ಸಂಸ್ಕೃತಿ ಮತ್ತು ವಿದ್ಯಾಭ್ಯಾಸವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದು ತಿಳಿಸುತ್ತಿದ್ದರು. ಅವರ ಆದರ್ಶದಲ್ಲಿ ನಾನು ಉನ್ನತ ವ್ಯಾಸಂಗ ಮಾಡಿದ್ದೇನೆ ಹಾಗೂ ನಾಡಿನ ಶ್ರೀಮಂತ ಕಲೆಯಾದ ಯಕ್ಷಗಾನವನ್ನು ಬದುಕಿನಲ್ಲಿ ಉಳಿಸಿಕೊಂಡಿದ್ದೇನೆ. ಇದುವರೆಗೆ ರಾಕ್ಷಸ ಪಾತ್ರಗಳನ್ನು ಮಾಡುತ್ತಿದ್ದ ನನಗೆ ಈ ಬಾರಿ ಸೌಮ್ಯ ರೀತಿಯ ವಿಷ್ಣುವಿನ ಪಾತ್ರವನ್ನು ನೀಡಿದ್ದಾರೆ. ಈ ಪಾತ್ರಕ್ಕೆ ಜೀವ ತುಂಬುವ ರೀತಿಯಲ್ಲಿ ಅಭಿನಯಿಸಿದ್ದೇನೆ ಎಂಬ ಸಂತೋಷವಿದೆ,” ಎಂದು ನುಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮಲಾಡ್ ಪೂರ್ವದ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಜಗನ್ನಾಥ ಶೆಟ್ಟಿ ಪಣಿಯೂರು ಮಾತನಾಡಿ, “ನಮ್ಮ ಪೂಜಾ ಸಮಿತಿಯ ಮಕ್ಕಳು ಯಕ್ಷಗಾನ ಕಲಿತಿದ್ದಾರೆ ಎಂದರೆ ಅದಕ್ಕೆ ನಾಗೇಶ್ ಗುರುಗಳೇ ಕಾರಣ. ಈ ದಿನ ಯಕ್ಷಗಾನದಲ್ಲಿ ನಮ್ಮ ಸಮಿತಿಯ ಬಹಳಷ್ಟು ಸದಸ್ಯರು ಪಾತ್ರವಹಿಸಿ, ಉತ್ತಮವಾಗಿ ಅಭಿನಯಿಸಿದ್ದಾರೆ. ಗುರುಗಳಾದ ನಾಗೇಶ್ ಕುಮಾರ್ ಪೊಳಲಿ ಅವರು ಇಂತಹ ಇನ್ನಷ್ಟು ಕಲಾವಿದರನ್ನು ಸೃಷ್ಟಿಸಲಿ,” ಎಂದು ಶುಭ ಹಾರೈಸಿದರು.
ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಸನತ್ ಪೂಜಾರಿ ಕೆಲ್ಲಪುತ್ತಿಗೆ ಮಾತನಾಡಿ, “ಯಕ್ಷಗಾನವು ನಮ್ಮ ಸನಾತನ ಹಿಂದೂ ಧರ್ಮವನ್ನು ಯುವ ಸಮುದಾಯಕ್ಕೆ ತಿಳಿಸುವ ದೊಡ್ಡ ಸಾಧನವಾಗಿದೆ,” ಎಂದರು.
ಬಂಟರ ಸಂಘದ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರು ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು ಮಾತನಾಡಿ, “ನಾಗೇಶ್ ಪೊಳಲಿ ಅವರು ಮುಂಬೈನಲ್ಲಿ ಇನ್ನಷ್ಟು ಚಂಡೆ, ಮದ್ದಳೆ ಹಾಗೂ ಭಾಗವತಿಕೆಯನ್ನು ಬೆಳೆಸಬೇಕು ಮತ್ತು ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಮುಂಬೈನಲ್ಲಿ ಬಹಳಷ್ಟು ಕಲಾವಿದರಿದ್ದಾರೆ, ಅವರಿಗೆ ಅವಕಾಶಗಳು ಹೆಚ್ಚೆಚ್ಚು లಭಿಸಿದಾಗ ಉತ್ತಮ ಕಲಾವಿದರು ಬೆಳೆಯುತ್ತಾರೆ. ಇಂದಿನ ಯಕ್ಷಗಾನದಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದರು ಬಹಳ ಸಮರ್ಥ ರೀತಿಯಲ್ಲಿ ರಂಗವನ್ನು ಮುನ್ನಡೆಸಿದ್ದಾರೆ,” ಎಂದು ಶ್ಲಾಘಿಸಿದರು.
ಬಂಟರ ಸಂಘದ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಶಿವ ಶೆಟ್ಟಿ ಮಾತನಾಡಿ, “ಈ ಪರಿಸರದ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಡುತ್ತಿರುವ ನಾಗೇಶ್ ಪೊಳಲಿ ಅವರ ಯಕ್ಷಸೇವೆಗೆ ಎಲ್ಲರೂ ಸಹಕಾರ ನೀಡಬೇಕು,” ಎಂದರು.
ವೇದಿಕೆಯಲ್ಲಿ ವೀರ ಕೇಸರಿ ಸಂಸ್ಥೆಯ ಅಧ್ಯಕ್ಷ ಹರೀಶ್ ರೈ ಕುಂಬಳೆ, ಸಂಘಟಕರಾದ ರಾಜೇಶ್ ಶೆಟ್ಟಿ ಕಾಪು, ಜಗದೀಶ್ ಶೆಟ್ಟಿ ಪಂಜಿನಡ್ಕ, ಶಶಿಧರ್ ಎಸ್. ಶೆಟ್ಟಿ ನಂದಳಿಕೆ ಹಾಗೂ ಭಾಗವತರಾದ ಸಾಯಿನಾಥ್ ಎ. ಶೆಟ್ಟಿ ಮುಂಡ್ಕೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಂಘಟಕ, ನಟ ಜಿ. ಕೆ. ಕೆಂಜನಕೆರೆ ನಿರೂಪಿಸಿದರು.

ಕಲಾವಿದರ ವಿವರ:
- ಹಿಮ್ಮೇಳ: ಭಾಗವತಿಕೆ- ಸಾಯಿನಾಥ್ ಶೆಟ್ಟಿ ಮುಂಡ್ಕೂರು; ಚಂಡೆ-ಮದ್ದಳೆ- ಪ್ರಶಾಂತ್ ಶೆಟ್ಟಿ ವಗೆನಾಡು, ಸೂರಜ್ ಆಚಾರ್ಯ ಮುಲ್ಕಿ, ಪ್ರೀತೇಶ್ ಬಿ. ಮೂಲ್ಯ.
- ಮುಮ್ಮೇಳ: ಸುರೇಶ್ ಪೂಜಾರಿ ಕಿನ್ಯ, ನಾಗೇಶ್ ಶೆಟ್ಟಿ ತಾಳಿಪಾಡಿ, ಸನತ್ ಪೂಜಾರಿ ಕೆಲ್ಲಪುತ್ತಿಗೆ, ಗಗನ್ ಡಿ. ಮೆಂಡನ್, ವಸಂತಿ ಶಿವ ಶೆಟ್ಟಿ, ಸುಂದರಿ ಆರ್. ಕೋಟ್ಯಾನ್, ಶುಭಲತಾ ವಿ. ಶೆಟ್ಟಿ, ಆಶಾ ಪಿ. ಶೆಟ್ಟಿ, ವಿಶಾಲಾಕ್ಷಿ ಅರುಣ್ ಮುಲ್ಕಿ, ವೀಣಾಕ್ಷಿ ಎಸ್. ಶೆಟ್ಟಿ, ಗೀತಾ ಜಿ. ನಾಯ್ಕ್, ಲೀಲಾವತಿ ಶೆಟ್ಟಿ, ನಳಿನಿ ಪಿ. ಕರ್ಕೇರ, ವಿದ್ಯಾ ಡಿ. ಆಚಾರ್ಯ, ಸೀತಾ ಶೆಟ್ಟಿ, ಅಶ್ವಿನಿ ಕೋಟೇಕಾರ್, ಕೀರ್ತಿ ಶ್ರೀ ಬಿ. ಮೂಲ್ಯ, ಕೃಷ್ಣ ಪೂಜಾರಿ, ಮಿತಲಿ ಎಂ. ಪೂಜಾರಿ, ಆಶಾ ಸಿ. ಮೂಲ್ಯ, ತನ್ನಿ ವಿ. ಶೆಟ್ಟಿ, ಶ್ರೀಜಾ ಶೆಟ್ಟಿ, ಪ್ರೇರಣಾ ಎಸ್. ನಾಯ್ಕ್, ತ್ರಿಷಾ ಯು. ಶೆಟ್ಟಿ ಅಭಿನಯಿಸಿದರು.




