ಮುಂಬಯಿ: ವರ್ಲಿ ಮಧುಸೂದನ್ ಮಿಲ್ ಕಾಂಪೌಂಡ್ನಲ್ಲಿರುವ ಅತಿ ಪುರಾತನ ಶ್ರೀ ಸಿದ್ಧೇಶ್ವರ ಕ್ಷೇತ್ರದಲ್ಲಿ, ಪಡುಬಿದ್ರಿ ಬೆಂಗ್ರೆ ಕೈವಲ್ಯ ರಮೇಶ್ ಗುರುಸ್ವಾಮಿಯವರು ಸ್ಥಾಪಿಸಿರುವ ‘ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಫೌಂಡೇಶನ್’ನ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗದ ಆಶ್ರಯದಲ್ಲಿ ‘ತುಳುನಾಡ ಸಂಸ್ಕೃತಿದ ಆಟಿದ ಕೂಟ’ ಕಾರ್ಯಕ್ರಮವು ಆಗಸ್ಟ್ 8ರ ಶನಿವಾರ ಸಂಜೆ 6 ಗಂಟೆಗೆ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.
ಫೌಂಡೇಶನ್ನ ಆಡಳಿತ ಧರ್ಮದರ್ಶಿ ಶಾಂಭವಿ ಆರ್. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ, ಸಂಸ್ಥೆಯ ಅಧ್ಯಕ್ಷ ಪದ್ಮನಾಭ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕವಿತಾ ಶೆಟ್ಟಿ ಅವರ ನೇತೃತ್ವದಲ್ಲಿ ಈ ಸಮಾರಂಭ ಆಯೋಜನೆಗೊಂಡಿದೆ.
ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ, ಯಕ್ಷಗಾನ ಕಲಾವಿದ ಹಾಗೂ ಸಂಘಟಕರಾದ ವಾಸುದೇವ ಶೆಟ್ಟಿ ಮಾರ್ನಾಡು ಅವರು “ಆಟಿ ತಿಂಗಳ ನೆನಪುಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಸಮಾರಂಭದ ಆರಂಭದಲ್ಲಿ ಭಜನೆ ಮತ್ತು ಮಹಾಮಂಗಳಾರತಿ ನಡೆಯಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಭೆಯ ಕೊನೆಯಲ್ಲಿ ಮಹಿಳಾ ವಿಭಾಗದ ಸದಸ್ಯೆಯರು ಮನೆಯಲ್ಲಿ ತಯಾರಿಸಿದ ಆಟಿ ತಿಂಗಳ ಸಾಂಪ್ರದಾಯಿಕ ತಿನಿಸುಗಳನ್ನು ಆಗಮಿಸಿದ ಸರ್ವ ಭಕ್ತಾದಿಗಳಿಗೆ ಉಣಬಡಿಸಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಫೌಂಡೇಶನ್ನ ಸರ್ವ ಬಂಧುಗಳು, ಹಿತೈಷಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಸ್ಥಾಪಕರು, ಆಡಳಿತ ಮಂಡಳಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗದ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ.




