
ಅರಿಶಿನ ಕುಂಕುಮ ಪೂಜ್ಯ ಭಾವನೆಯ ಪ್ರೇರಕ ಶಕ್ತಿಯಾಗಿದೆ – ಸರಿತಾ ಎಸ್. ನಾಯಕ್
ಚಿತ್ರ ವರದಿ: ದಿನೇಶ್ ಕುಲಾಲ್
ಮುಂಬಯಿ: ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ವತಿಯಿಂದ ಅರಿಶಿನ ಕುಂಕುಮ ಕಾರ್ಯಕ್ರಮವು ಮಾ. 22ರಂದು ಪೊಯಿಸರ್ ಜಿಮ್ಖಾನಾ, ಮಹಾವೀರ ನಗರ, ಕಾಂದಿವಲಿ ಪಶ್ಚಿಮ ಇಲ್ಲಿ ನಡೆಯಿತು.
ಸಂಘದ ಅಧ್ಯಕ್ಷರಾದ ಪೊಲ್ಯ ಜಯಪಾಲ್ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ನಮ್ಮ ಸಂಘದ ಮಹಿಳಾ ವಿಭಾಗವು ಅತ್ಯಂತ ಸಕ್ರಿಯವಾಗಿದ್ದು, ಸಂಘದ ಎಲ್ಲಾ ಕಾರ್ಯಗಳಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ,” ಎಂದರು. ಇದೇ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ವಾರಿಜಾ ಕರ್ಕೇರ ದಂಪತಿಯನ್ನು ಸನ್ಮಾನಿಸಲಾಯಿತು. ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿಯವರು ಸ್ವಾಗತಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಗೊರೆಗಾಂವ್ ಕರ್ನಾಟಕ ಸಂಘದ ಉಪಾಧ್ಯಕ್ಷೆ ಸರಿತಾ ಎಸ್. ನಾಯಕ್ ಮಾತನಾಡಿ, “ಅರಿಶಿನ ಕುಂಕುಮವು ಸೌಭಾಗ್ಯದ ಸಂಕೇತವಾಗಿದೆ. ಅನೇಕ ಕಡೆ ಇಂತಹ ಸಮಾರಂಭಗಳಿಗೆ ಹೋಗಿದ್ದರೂ, ಇಲ್ಲಿ ಅತಿಥಿಯಾಗಿ ಪ್ರಥಮ ಬಾರಿ ಬಂದಿರುವೆನು. ಅರಿಶಿನ ಕುಂಕುಮ ಎಂದು ಹೇಳುವಾಗ ತನ್ನಿಂತಾನೇ ಒಂದು ರೀತಿಯ ಪೂಜ್ಯ ಭಾವನೆ ಮೂಡುತ್ತದೆ. ಹಿಂದೂ ಸಮಾಜದಲ್ಲಿ ಅರಿಶಿನ ಕುಂಕುಮಕ್ಕೆ ಬಹಳ ಪ್ರಾಮುಖ್ಯತೆ ಇದೆ. ಇದು ಶುಭ ಸಂಕೇತವಾಗಿದ್ದು ಸೌಭಾಗ್ಯವನ್ನು ಸೂಚಿಸುತ್ತದೆ. ಇಂತಹ ಕಾರ್ಯಕ್ರಮಗಳು ಗೌರವ, ಸಕಾರಾತ್ಮಕತೆ ಹಾಗೂ ಏಕತೆಯ ಭಾವನೆಗೆ ಪೂರಕವಾಗಿವೆ. ಮಕ್ಕಳಿಗೂ ಇದರ ಅರಿವಿನ ಅಗತ್ಯವಿದೆ,” ಎಂದು ಹೇಳುತ್ತಾ ಎಲ್ಲರಿಗೂ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ವಾರಿಜಾ ಕರ್ಕೇರ, ಗೌರವ ಪ್ರಧಾನ ಕಾರ್ಯದರ್ಶಿ ಸಬಿತಾ ಜಿ. ಪೂಜಾರಿ, ಗೌರವ ಕೋಶಾಧಿಕಾರಿ ಜಗನ್ನಾಥ ಡಿ. ಕುಕ್ಯಾನ್, ಮಹಿಳಾ ವಿಭಾಗದ ಶರ್ಮಿಳಾ ಶೆಟ್ಟಿ, ಕಾರ್ಯದರ್ಶಿ ಜಯಲಕ್ಷ್ಮಿ ಶೆಟ್ಟಿ ಹಾಗೂ ಕೋಶಾಧಿಕಾರಿ ಆಶಾ ಮೊಗವೀರ ಉಪಸ್ಥಿತರಿದ್ದರು.
ಶುಭ ಸುಧಾಕರ್ ಸುವರ್ಣ ಕಾರ್ಯಕ್ರಮವನ್ನು ನಿರೂಪಿಸಿದರು. ಅತಿಥಿಗಳನ್ನು ಯಶೋಧ ಶೆಟ್ಟಿ ಪರಿಚಯಿಸಿದರು. ಭಾರತಿ ರಘುನಾಥ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಯಮುನಾ ಸಾಲ್ಯಾನ್, ವಿಂಧ್ಯ ಶೆಟ್ಟಿ ಹಾಗೂ ಸರಸ್ವತಿ ಕರ್ಕೇರ ಪ್ರಾರ್ಥನೆ ಮಾಡಿದರು.
ಸಭಾ ಕಾರ್ಯಕ್ರಮದ ನಂತರ ಸಂಗೀತ ಕಲಾವಿದ ವಿಜಯ್ ಶೆಟ್ಟಿ ಮೂಡುಬೆಳ್ಳೆ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ಪ್ರೇಮನಾಥ್ ಪಿ. ಕೋಟ್ಯಾನ್, ಮಾಜಿ ಅಧ್ಯಕ್ಷ ಶ್ಯಾಮ್ ಶೆಟ್ಟಿ, ಚಾರ್ಕೋಪ್ ಕನ್ನಡಿಗರ ಬಳಗದ ಅಧ್ಯಕ್ಷ ರವೀಂದ್ರ ಶೆಟ್ಟಿ ಹಾಗೂ ವಿವಿಧ ತುಳು-ಕನ್ನಡಿಗರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಅರಿಶಿನ ಕುಂಕುಮ ವಿನಿಮಯ ಮಾಡಿಕೊಂಡರು.




