September 6, 2026
Mumbai News Kannada
ಮುಂಬಯಿ

‘ಧೀಮಂತ ಧರ್ಮಪಾಲ’ ಗೌರವ ಗ್ರಂಥ ಲೋಕಾರ್ಪಣೆ ಯಶಸ್ವಿ: ಸ್ನೇಹಕೂಟ






ಪ್ರತಿಯೊಬ್ಬರೂ ಯಶಸ್ವಿಯಾಗಬೇಕಾದರೆ ಕುಟುಂಬದವರ ಹಾಗೂ ಸಮಾಜದ ಬಂಧುಗಳ ಬೆಂಬಲ ಅಗತ್ಯ: ಧರ್ಮಪಾಲ ದೇವಾಡಿಗ


ವರದಿ: ದಿನೇಶ್ ಕುಲಾಲ್


ಮುಂಬಯಿ: ರಾಜಕೀಯವಾಗಲಿ ಅಥವಾ ಧಾರ್ಮಿಕ ಮುಖಂಡರಾಗಲಿ ಎತ್ತರಕ್ಕೆ ಬೆಳೆದಿರುವುದನ್ನು ಕಂಡಾಗ ಸಂತೋಷವಾಗುತ್ತದೆ. ಆದರೆ ಅವರು ಬೆಳೆದು ಬಂದ ಹಾದಿ, ಪಟ್ಟ ಪರಿಶ್ರಮ ಮತ್ತು ಕಷ್ಟದ ದಿನಗಳನ್ನು ಗಮನಿಸಿದಾಗ ಮಾತ್ರ ಆ ವ್ಯಕ್ತಿತ್ವದ ನೈಜ ಪರಿಚಯ ನಮಗಾಗುತ್ತದೆ. ಸಮಾಜದಲ್ಲಿ ವ್ಯಕ್ತಿಯೊಬ್ಬನ ವ್ಯಕ್ತಿತ್ವ ರೂಪಗೊಳ್ಳಲು ಸಮಾಜದ ಸಹಕಾರ ಅಗತ್ಯ, ಹಾಗೆಯೇ ಆ ವ್ಯಕ್ತಿಯೂ ಸಮಾಜಕ್ಕೆ ತನ್ನ ಕೊಡುಗೆಯನ್ನು ನೀಡುವ ಬಗ್ಗೆ ಚಿಂತಿಸಬೇಕು. ಆಗ ಮಾತ್ರ ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಪ್ರತಿಯೊಬ್ಬರೂ ಯಶಸ್ವಿಯಾಗಬೇಕಾದರೆ ಕುಟುಂಬದವರ ಮತ್ತು ಸಮಾಜದ ಬಂಧುಗಳ ಬೆಂಬಲವಿರಬೇಕು ಎಂದು ದೇವಾಡಿಗ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಹಾಗೂ ದೇವಾಡಿಗ ಮಹಾಮಂಡಲದ ಅಧ್ಯಕ್ಷರಾದ ಧೀಮಂತ ಧರ್ಮಪಾಲ ದೇವಾಡಿಗರು ನುಡಿದರು.


​ಇತ್ತೀಚೆಗೆ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ದೇವಾಡಿಗ ಸಂಘ ಮುಂಬಯಿ ಇವರ ಜಂಟಿ ಆಯೋಜನೆಯಲ್ಲಿ ಲೇಖಕಿ ಸುರೇಖಾ ಹೇಮನಾಥ ದೇವಾಡಿಗ ಅವರು ಬರೆದ ‘ಧೀಮಂತ ಧರ್ಮಪಾಲ’ ಗೌರವ ಗ್ರಂಥ ಲೋಕಾರ್ಪಣಾ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಈ ಸಂತೋಷಕ್ಕಾಗಿ ಧರ್ಮಪಾಲ ದೇವಾಡಿಗರು ಏಪ್ರಿಲ್ 12ರಂದು ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್ ಸಂಕೀರ್ಣದಲ್ಲಿ ಆಯೋಜಿಸಿದ್ದ ಸ್ನೇಹಕೂಟ ಕಾರ್ಯಕ್ರಮದಲ್ಲಿ ದೇವಾಡಿಗ ಸಮಾಜದ ಬಂಧುಗಳನ್ನು ಮತ್ತು ಹಿತೈಷಿಗಳನ್ನು ಉದ್ದೇಶಿಸಿ ಮಾತನಾಡಿದರು.


​ಮಾತನ್ನು ಮುಂದುವರಿಸಿದ ಅವರು, “ನಾನು ಬದುಕಿನಲ್ಲಿ ಯಾವುದೇ ಆಸೆಯನ್ನು ಇಟ್ಟುಕೊಂಡಿಲ್ಲ, ಆದರೆ ಗುರಿಯನ್ನು ಮಾತ್ರ ಇರಿಸಿಕೊಂಡಿದ್ದೆ. ಅದೆಲ್ಲವನ್ನೂ ದೇವರು ನನಗೆ ನೀಡಿದ್ದಾರೆ. ನನ್ನ ಪತ್ನಿಯ ತ್ಯಾಗದಿಂದಾಗಿ ನಾನು ಸಮಾಜದಲ್ಲಿ ಮತ್ತು ವ್ಯವಹಾರದಲ್ಲಿ ಬೆಳೆಯಲು ಸಾಧ್ಯವಾಗಿದೆ. ಸಮಾಜಕ್ಕೆ ಯಾವುದೇ ರೀತಿಯ ದೇಣಿಗೆಯನ್ನು ನಾನು ನೀಡಿದಾಗ, ಪತ್ನಿ ತುಂಬು ಮನಸ್ಸಿನಿಂದ ‘ಇನ್ನಷ್ಟು ನೀಡಬೇಕಿತ್ತು’ ಎನ್ನುವ ವಿಶಾಲ ಹೃದಯವಂತಿಕೆ ತೋರುತ್ತಿದ್ದರು. ಆದ್ದರಿಂದ ದಾನ ಮಾಡುವುದಕ್ಕೂ ಸಂತೋಷವಾಗುತ್ತಿತ್ತು. ನನ್ನ ಮಕ್ಕಳು, ಸೊಸೆ, ಅಳಿಯ, ಮೊಮ್ಮಕ್ಕಳು ಹಾಗೂ ದೇವಾಡಿಗ ಸಂಘದ ಎಲ್ಲಾ ಬಂಧುಗಳು ನನ್ನ ಪ್ರತಿಯೊಂದು ಕೆಲಸಕ್ಕೂ ಬೆಂಬಲ ನೀಡುತ್ತಾ ನನ್ನನ್ನು ಬೆಳೆಸಿದ್ದಾರೆ. ಈ ಗೌರವ ಗ್ರಂಥ ಬರೆಯುವುದಕ್ಕೆ ಸುರೇಖಾ ದೇವಾಡಿಗ ಅವರ ಶ್ರಮ ಅಪಾರವಾಗಿದೆ. ಎಲ್ಲರ ಆಶೀರ್ವಾದ, ಮಾರ್ಗದರ್ಶನದಿಂದ ದೇವಾಡಿಗ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯುವ ಕನಸು ನನ್ನದಾಗಿದೆ,” ಎಂದು ತಿಳಿಸಿದರು.


​ದೇವಾಡಿಗ ಸಂಘದ ಅಧ್ಯಕ್ಷರಾದ ರವಿ ಎಸ್. ದೇವಾಡಿಗ ಮಾತನಾಡಿ, “ದೇಶ-ವಿದೇಶಗಳಲ್ಲಿ ಮುಂಬೈ ದೇವಾಡಿಗ ಸಂಘಕ್ಕೆ ವಿಶೇಷ ಗೌರವವಿದೆ. ಅದಕ್ಕೆ ಧರ್ಮಪಾಲ ದೇವಾಡಿಗರ ಕೊಡುಗೆ ಅಪಾರ. ನಾನು ಹೋದಲ್ಲೆಲ್ಲಾ ಜನರು ಅವರನ್ನೇ ನೆನಪಿಸಿಕೊಳ್ಳುತ್ತಾರೆ. ಅವರು ನನ್ನ ಸಾಮಾಜಿಕ ಸೇವೆಗೆ ಗುರುಗಳಾಗಿದ್ದಾರೆ,” ಎಂದರು.


​ಧರ್ಮಪಾಲ ದೇವಾಡಿಗರ ಪತ್ನಿ ಸುಜಾತಾ ಧರ್ಮಪಾಲ್ ದೇವಾಡಿಗ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಾ, “ದೇವಾಡಿಗ ಸಮಾಜವನ್ನು ಬಲಿಷ್ಠಗೊಳಿಸುವ ಕಾಯಕದಲ್ಲಿ ಸಮಾಜ ಬಾಂಧವರೆಲ್ಲರೂ ಒಗ್ಗಟ್ಟಿನಿಂದ ಕಾರ್ಯಪ್ರವೃತ್ತರಾಗಬೇಕು. ಧರ್ಮಪಾಲರು ಕಳೆದ ಐವತ್ತು ವರ್ಷಗಳಿಂದ ನಿರಂತರ ಸೇವೆ ಮಾಡುತ್ತಿದ್ದಾರೆ. ಅವರ ಸೇವಾ ಕಾರ್ಯಕ್ಕೆ ನಾನು ಮತ್ತು ಮಕ್ಕಳು ಸದಾ ಬೆಂಬಲವಾಗಿ ನಿಲ್ಲುತ್ತೇವೆ,” ಎಂದರು.


​ಸಂಘದ ಮಾಜಿ ಅಧ್ಯಕ್ಷರಾದ ಹಿರಿಯಡ್ಕ ಮೋಹನದಾಸ್ ಎಲ್ಲರನ್ನೂ ಸ್ವಾಗತಿಸಿ, ಧರ್ಮಪಾಲರ ನಾಯಕತ್ವದಲ್ಲಿ ನಡೆದ ಶೈಕ್ಷಣಿಕ ನೆರವು ಯೋಜನೆಗಳು ಹಾಗೂ ದೇವಸ್ಥಾನ, ಭವನಗಳ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿದರು. ಅವರಿಗೆ ಉನ್ನತ ಪ್ರಶಸ್ತಿಗಳು ಲಭಿಸುವಂತಾಗಲಿ ಎಂದು ಹಾರೈಸಿದರು.


​ಮಾಜಿ ಅಧ್ಯಕ್ಷರಾದ ಪ್ರವೀಣ್ ನಾರಾಯಣ್, ವಾಸು ದೇವಾಡಿಗ ಹಾಗೂ ‘ದೇವಾಡಿಗ ಜ್ಯೋತಿ’ ಪತ್ರಿಕೆಯ ಸಂಪಾದಕ ನ್ಯಾಯವಾದಿ ಪ್ರಭಾಕರ್ ದೇವಾಡಿಗ ಅವರು ಧರ್ಮಪಾಲರ ಸೇವಾ ಕಾರ್ಯಗಳನ್ನು ಸ್ಮರಿಸಿದರು. ಧರ್ಮಪಾಲರ ಪುತ್ರಿ ಡಾ. ಪೂನಂ ದೇವಾಡಿಗ, ಅಳಿಯ ಡಾ. ರಾಹುಲ್ ಶೇರಿಗಾರ್, ಪುತ್ರ ಪವನ್ ಡಿ. ದೇವಾಡಿಗ ಹಾಗೂ ಸೊಸೆ ನಿಮಿ ಪವನ್ ದೇವಾಡಿಗ ಅವರು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಮಾತನಾಡಿದರು.


ಈ ಸಂದರ್ಭದಲ್ಲಿ ರವಿ ಎಸ್. ದೇವಾಡಿಗ ದಂಪತಿ, ಹಿರಿಯಡ್ಕ ಮೋಹನದಾಸ್ ದಂಪತಿ ಮತ್ತು ಲೇಖಕಿ ಸುರೇಖಾ ಹೇಮನಾಥ ದೇವಾಡಿಗ ದಂಪತಿಯನ್ನು ಧರ್ಮಪಾಲ ದೇವಾಡಿಗರು ಗೌರವಿಸಿದರು. ಹಾಗೆಯೇ ದೇವಾಡಿಗ ಸಂಘದ ವತಿಯಿಂದ ಧರ್ಮಪಾಲ ದಂಪತಿಗಳನ್ನು ಸನ್ಮಾನಿಸಲಾಯಿತು. ಪ್ರಸಿದ್ಧ ಛಾಯಾಗ್ರಾಹಕ ಪ್ರಭಾಕರ್ ದೇವಾಡಿಗ ಅವರು ಲೋಕಾರ್ಪಣಾ ಸಮಾರಂಭದ ಸ್ಮರಣೀಯ ಫೋಟೋವೊಂದನ್ನು ಉಡುಗೊರೆಯಾಗಿ ನೀಡಿದರು.


​ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ವಿಶ್ವನಾಥ್ ದೇವಾಡಿಗ, ಕೋಶಾಧಿಕಾರಿ ಸುರೇಶ್ ದೇವಾಡಿಗ, ಜೊತೆ ಕಾರ್ಯದರ್ಶಿಗಳಾದ ನಿತೀಶ್ ದೇವಾಡಿಗ, ಸಚಿತಾ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ವಿಶಾಲ್ ದೇವಾಡಿಗ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅನುಷಾ ಗಣೇಶ್ ಮೂಲ್ಯ ಗೆ ಶೇ 89.40 ಅಂಕ.

Mumbai News Desk

ಭಾರತ್ ಬ್ಯಾಂಕ್ ಗೊರೆಗಾಂವ್ ಪೂರ್ವ ಶಾಖೆಯ ಅಧಿಕಾರಿ ರಮೇಶ್ ಸಿ ಕೋಟ್ಯಾನ್ ಸೇವಾ ನಿವೃತ್ತಿ

Mumbai News Desk

ಭಾಯಂದರ್ ಶ್ರೀ ಮೂಕಾಂಬಿಕಾ ಶಾಂತದುರ್ಗಾ ಸೇವಾ ಸಮಿತಿಯ ಆಶ್ರಯದಲ್ಲಿ “ಮಹಾಶಕ್ತಿ ವೀರಭದ್ರ” ಯಕ್ಷಗಾನ ಬಯಲಾಟ,

Mumbai News Desk

 ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ  ಬಾಳ-ಕಾಟಿಪಳ್ಳ, ಮುಂಬೈ ಪ್ರವಾಸದ ಉದ್ಘಾಟನೆ, ಸನ್ಮಾನ

Mumbai News Desk

ಭಾರತ್ ಬ್ಯಾಂಕ್, ವಿಲೇಪಾರ್ಲೆ (ಪಶ್ಚಿಮ) ಶಾಖೆಯಿಂದ ದಶಮಾನೋತ್ಸವ ಆಚರಣೆ.

Mumbai News Desk

ಡೊಂಬಿವಲಿ ಕರ್ನಾಟಕ ಸಂಘದಿಂದ 58ನೇ ವರ್ಷದ ‘ನಾಡ ಹಬ್ಬ’ ಅದ್ದೂರಿ ಆಚರಣೆ: ಹೊರನಾಡಿನಲ್ಲಿ ಕನ್ನಡ ಕಲೆ-ಸಂಸ್ಕೃತಿ ವೈಭವ!

Mumbai News Desk