September 6, 2026
Mumbai News Kannada
ಮುಂಬಯಿ

ಮೈಸೂರು ಅಸೋಸಿಯೇಷನ್ ಮುಂಬೈ: ಶತಮಾನೋತ್ಸವದ ಸಮಾರೋಪ – ಕನ್ನಡ ಸಂಸ್ಕೃತಿಯೊಂದಿಗೆ ಮಹಾರಾಷ್ಟ್ರದ ಒಡನಾಟ






​ಮುಂಬಯಿ: ಕನ್ನಡ ಭಾಷೆ, ಸಂಸ್ಕೃತಿ, ಕಲೆ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸಿ ಬೆಳೆಸುವ ಮೂಲಕ ಮೈಸೂರು ಅಸೋಸಿಯೇಷನ್ ಕಳೆದ ಒಂದು ಶತಮಾನದಿಂದ ನಿರಂತರ ಸೇವೆ ಸಲ್ಲಿಸುತ್ತಿದೆ. ಈ ಮೂಲಕ ಮಹಾರಾಷ್ಟ್ರದ ಒಡನಾಟದೊಂದಿಗೆ ಸಮನ್ವಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬಂದಿದೆ ಎಂದು ಅಸೋಸಿಯೇಷನ್‌ನ ಅಧ್ಯಕ್ಷರಾದ ಕಮಲಾ ಕೆ. ನುಡಿದರು.


​ಮೈಸೂರು ಅಸೋಸಿಯೇಷನ್‌ನ ಶತಮಾನೋತ್ಸವದ ಸಮಾರೋಪ ಸಮಾರಂಭವು ಏಪ್ರಿಲ್ 19ರಂದು ಮಾಟುಂಗ ಪೂರ್ವದ ಅಸೋಸಿಯೇಷನ್ ಸಭಾಗೃಹದಲ್ಲಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, “ದಶಕಗಳಿಂದಲೂ ಕಲಾವಿದರನ್ನು ಪ್ರೋತ್ಸಾಹಿಸಿ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವಲ್ಲಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸಿದೆ. ಮುಂಬೈನಲ್ಲಿ ಕನ್ನಡತನದ ಕಂಪನ್ನು ಪಸರಿಸುತ್ತಾ, ಸರ್ವ ಸಮಾಜದ ಪ್ರಗತಿಗೆ ಅಸೋಸಿಯೇಷನ್ ಶ್ರಮಿಸುತ್ತಿದೆ,” ಎಂದು ತಿಳಿಸಿದರು.


​’ಭಾರತೀಯ ಜ್ಞಾನ ಪರಂಪರೆ’ ಕೃತಿ ಬಿಡುಗಡೆ
​ಮುಂಬೈ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ರವೀಂದ್ರ ಕುಲಕರ್ಣಿ ಅವರು “ಭಾರತೀಯ ಜ್ಞಾನ ಪರಂಪರೆ” ಕೃತಿಯ ಕನ್ನಡ ಆವೃತ್ತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. “ಮೈಸೂರು ಅಸೋಸಿಯೇಷನ್ ಕನ್ನಡಿಗರ ಪಾಲಿಗೆ ಎರಡನೇ ಮನೆಯಂತಿದೆ. ಇಲ್ಲಿ ಕನ್ನಡ ಸಂಸ್ಕೃತಿ, ಕಲೆ ಮತ್ತು ಭಾಷೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಮುಂಬೈ ವಿಶ್ವವಿದ್ಯಾಲಯವು ದೇಶದ ವಿವಿಧ ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಕೇಂದ್ರವಾಗಿದ್ದು, ಇಲ್ಲಿ ವಿವಿಧ ಭಾಷೆಗಳಲ್ಲಿ ಶಿಕ್ಷಣ ಪಡೆಯುವ ಮುಕ್ತ ಅವಕಾಶವಿದೆ. ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಅಸೋಸಿಯೇಷನ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ,” ಎಂದರು.


​ಮುಂಬೈ ಐಐಟಿಯ ಉಪನಿರ್ದೇಶಕ ಪ್ರೊ. ರವೀಂದ್ರ ಗುಡಿ ಮಾತನಾಡಿ, “ವಿಶ್ವವಿದ್ಯಾನಿಲಯ ಹೊರತಂದಿರುವ ‘ಭಾರತೀಯ ಜ್ಞಾನ ಪರಂಪರೆ’ ಕೃತಿಯು ಇಂದಿನ ಕಾಲಘಟ್ಟಕ್ಕೆ ಅತ್ಯಂತ ಅವಶ್ಯಕವಾಗಿದೆ. ಕರ್ನಾಟಕದ ಹೆಮ್ಮೆಯ ಬೇಲೂರು-ಹಳೇಬೀಡುಗಳಂತಹ ಅದ್ಭುತ ಶಿಲ್ಪಕಲೆಗಳನ್ನು ವಿನ್ಯಾಸಗೊಳಿಸಿದ ಅಂದಿನ ಶಿಲ್ಪಿಗಳು, ಇಂದಿನ ಐಐಟಿ ಪದವೀಧರರಷ್ಟೇ ಸಮರ್ಥರಾಗಿದ್ದರು,” ಎಂದು ಪುರಾತನ ತಾಂತ್ರಿಕ ಕೌಶಲ್ಯದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.

​ಕೃತಿಯ ಸಂಪಾದಕ ಡಾ. ಎಂ. ಆರ್. ರಾಜವಾಡೆ ಮಾತನಾಡಿ, ಈ ಗ್ರಂಥವು ಕನ್ನಡ ಸಾಹಿತ್ಯ ಲೋಕಕ್ಕೆ ದಾರಿದೀಪವಾಗಲಿದೆ ಎಂದರು. ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜಿ. ಎನ್. ಉಪಾಧ್ಯ ಅವರು ಕೃತಿಯ ಬಗ್ಗೆ ವಿಶ್ಲೇಷಿಸುತ್ತಾ, “ಅಕ್ಷಯ ತೃತೀಯದಂದು ಲೋಕವು ಲಕ್ಷ್ಮಿಯನ್ನು ಪೂಜಿಸಿದರೆ, ಅಸೋಸಿಯೇಷನ್ ಜ್ಞಾನದೀಪವಾದ ಈ ಕೃತಿಯನ್ನು ಬಿಡುಗಡೆ ಮಾಡುವ ಮೂಲಕ ಸಾಕ್ಷಾತ್ ಸರಸ್ವತಿಯ ಪೂಜೆಯನ್ನು ಮಾಡಿದೆ. ಸಂಸ್ಥೆಯ ಈ ಐತಿಹಾಸಿಕ ಘಟ್ಟದಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗಿರುವುದು ಅಭಿಮಾನದ ಸಂಗತಿ,” ಎಂದು ಹರ್ಷ ವ್ಯಕ್ತಪಡಿಸಿದರು.


​ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿ ಡಾ. ಗಣಪತಿ ಶಂಕರಲಿಂಗ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಇದೇ ಸಂದರ್ಭದಲ್ಲಿ ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಶೆಟ್ಟಿ ಮತ್ತು ಡಾ. ಉಮಾ ರಾಮರಾವ್ ಉಪಸ್ಥಿತರಿದ್ದರು. ಶತಮಾನೋತ್ಸವದ ‘ಸ್ಮರಣ ಸಂಚಿಕೆ’ಯನ್ನು ಇದೇ ವೇಳೆ ಬಿಡುಗಡೆಗೊಳಿಸಲಾಯಿತು.
​ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಬೆಂಗಳೂರಿನ ಸದಸ್ಯರಿಂದ ವೈವಿಧ್ಯಮಯ ಪ್ರದರ್ಶನಗಳು ನಡೆದವು. ರಾಘವೇಂದ್ರ ಆಚಾರ್ಯ ಅವರ ‘ಹಾಸ್ಯ ಸಂಜೆ’ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರೆ, ಕುಮಾರಿ ಸಾಧ್ವಿನಿ ಕೊಪ್ಪ ಮತ್ತು ತಂಡದವರಿಂದ ನಡೆದ ‘ಸುಗಮ ಸಂಗೀತ’ ಗಾಯನವು ಮನಸೆಳೆಯಿತು.
​ನಲಿನಾ ಪ್ರಸಾದ್, ಕಲಾ ಭಾಗವತ್, ರೇಷ್ಮಾ ಶಂಕರಲಿಂಗ ಮತ್ತು ಅಹಲ್ಯಾ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಷನ್‌ನ ಸಹ ಕಾರ್ಯದರ್ಶಿ ನಾರಾಯಣ ನವಿಲೇಕರ್ ವಂದನಾರ್ಪಣೆ ಮಾಡಿದರು.


​ಚಿತ್ರ ವರದಿ: ದಿನೇಶ್ ಕುಲಾಲ್



Related posts

ಶ್ರೀ ನಾರಾಯಣ ಗುರು ಭಜನಾ ಮಂಡಳಿ ಹಾಗೂ ಮಲಾಡ್ ಬಿಲ್ಲವಾಸ್ ಮಹಿಳಾ ವಿಭಾಗದಿಂದ ಅರಸಿನ–ಕುಂಕುಮ ಕಾರ್ಯಕ್ರಮ,

Mumbai News Desk

ತುಳುಕೂಟ ಫೌಂಡೇಶನ್ ನಾಲಾಸೋಪಾರ ಮತ್ತು ಶ್ರೀದೇವಿ ಯಕ್ಷಕಲಾ ನಿಲಯದ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ

Mumbai News Desk

ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯಿಂದ  “ಶ್ರೀ ಶನೀಶ್ವರ ಮಹಾತ್ಮ” ತಾಳಮದ್ದಳೆ.

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಕುಮಾರಿ ಸನ್ನಿಧಿ ಸುಧಾಕರ್ ಪೂಜಾರಿಗೆ ಶೇ 96.60 ಅಂಕ.

Mumbai News Desk

ಡೊಂಬಿವಲಿಯಲ್ಲಿ ಶ್ರೀ ಲಕ್ಷ್ಮೀ ಭಜನಾ ಮಂಡಳಿಯ 20ನೇ ವಾರ್ಷಿಕ ಮಂಗಳೋತ್ಸವ

Mumbai News Desk

ಕರ್ನಾಟಕ ವಿಶ್ವಕರ್ಮ ಎಸೋಸಿಯೇಶನ್ ಮುಂಬಯಿ, ಭಕ್ತಿ, ಸಡಗರದಿಂದ ಜರಗಿದ ವಿಶ್ವಕರ್ಮ ಮಹೋತ್ಸವ.

Mumbai News Desk