
ಸಮಾಜದ ಬಲವರ್ಧನೆಗೆ ಯುವ ಜನಾಂಗಕ್ಕೆ ಸಂಸ್ಕೃತಿಯ ಅರಿವು ಅಗತ್ಯ: ಹರೀಶ್ ಜಿ. ಅಮೀನ್
ಚಿತ್ರ,ವರದಿ: ಉಮೇಶ್ ಕೆ. ಅಂಚನ್.
ಮುಂಬಯಿ, ಜು.21- ಸಮಾಜದ ಸದಸ್ಯರನ್ನು ಒಂದೆಡೆ ಒಗ್ಗೂಡಿಸಿ, ಸಮಾಜವನ್ನು ಮತ್ತಷ್ಟು ಬಲಪಡಿಸುವ ಉದಾತ್ತ ಉದ್ದೇಶದಿಂದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸ್ಥಳೀಯ ಕಚೇರಿಗಳು ನಿರಂತರವಾಗಿ ವಿವಿಧ ರಂಗಗಳಲ್ಲಿ ಸಕ್ರಿಯವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ನಮ್ಮ ಹಳೆಯ ಸಂಪ್ರದಾಯ ಹಾಗೂ ವೈಭವೋಪೇತ ಆಚಾರ-ವಿಚಾರಗಳನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸಿ, ಅರಿವು ಮೂಡಿಸಲು ‘ಆಟಿ ತಿಂಗಳ’ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಂತ ಸಹಕಾರಿಯಾಗಿವೆ ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಹೇಳಿದರು.
ಅವರು ಜು.19 ರಂದು ಮುಲುಂಡ್ ಪೂರ್ವದ ಸಿಟಿ ಆಫ್ ಜೋಯ್ ವಸತಿ ಸಂಕೀರ್ಣದಲ್ಲಿರುವ ಯುಫೋರಿಯಾ ಕ್ಲಬ್ ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮುಲುಂಡು ಸ್ಥಳೀಯ ಕಚೇರಿಯ ವತಿಯಿಂದ ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಲಾಗಿದ್ದ ‘ಆಟಿಡೊಂಜಿ ದಿನ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಯಶಸ್ವಿ ಸಂಘಟನೆಗಾಗಿ ಸ್ಥಳೀಯ ಕಚೇರಿಯ ಪದಾಧಿಕಾರಿಗಳನ್ನು ಹಾಗೂ ಸದಸ್ಯರನ್ನು ಅಭಿನಂದಿಸಿ ಅವರು ಮಾತನಾಡುತ್ತಿದ್ದರು.
ಅಸೋಸಿಯೇಷನ್ ಸಮಾಜಮುಖಿ ಚಿಂತನೆಯೊಂದಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಯುವಕರ ಪ್ರೋತ್ಸಾಹಕ್ಕಾಗಿ ಕ್ರೀಡಾಕೂಟ ಮತ್ತು ಕಲಾ ಸೇವೆಗಳ ನಿರಂತರ ಆಯೋಜನೆ, ವಿಹಾರ ಕೂಟಗಳು ಹಾಗೂ ಧಾರ್ಮಿಕ ಪ್ರವಾಸಗಳ ಆಯೋಜನೆ, ಅಲ್ಲದೆ ಬಡ ಹಾಗೂ ಅಗತ್ಯವಿರುವ ಮಕ್ಕಳಿಗೆ ಉಚಿತ ಪ್ರೌಢ ಶಿಕ್ಷಣದ ಸೌಲಭ್ಯ ಒದಗಿಸುವ
ಸೇವೆಯನ್ನು ಮಾಡುತ್ತಿದೆ.ಅಸೋಸಿಯೇಷನ್ ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ, ಇದೀಗ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲು ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿ ಕಾರ್ಯಗತಗೊಳಿಸುವ ಪ್ರಯತ್ನದಲ್ಲಿದೆ.
ಈ ಬೃಹತ್ ಶೈಕ್ಷಣಿಕ ಯೋಜನೆಯು ನಮ್ಮ ಸಮಾಜದ ಭವಿಷ್ಯದ ಪೀಳಿಗೆಗೆ ದಾರಿದೀಪವಾಗಲಿದೆ. ಈ ಮಹತ್ಕಾರ್ಯದಲ್ಲಿ ಸಮಾಜದ ಎಲ್ಲಾ ಬಾಂಧವರೂ ಆರ್ಥಿಕ, ಮಾನಸಿಕ ಹಾಗೂ ಸಾಂಘಿಕವಾಗಿ ಕೈಜೋಡಿಸಿ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಹರೀಶ್ ಜಿ.ಅಮೀನ್ ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿ ಸಿಎ ಗಂಗಾಧರ್ ಪೂಜಾರಿ ಮಾತನಾಡಿ ಇಂದಿನ ಎಐ ಯುಗದಲ್ಲಿ ಮಕ್ಕಳು ಕೇವಲ ಪದವೀದರರಾದರೆ ಸಾಲದು.ಅವರ ಉತ್ತಮ ಭವಿಷ್ಯಕ್ಕಾಗಿ ಉನ್ನತ ಶಿಕ್ಷಣ ಅಗತ್ಯ. ಪಾಲಕರು ಮಕ್ಕಳಿಗೆ ನಮ್ಮ ಮೂಲ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡಬೇಕು. ನಮ್ಮ ಸಂಪಾದನೆಯ ಅಲ್ಪಾಂಶವನ್ನು ಸಮಾಜ ಸೇವೆಗೆ ವಿನಿಯೋಗಿಸಬೇಕು ಎಂದು ಹೇಳಿ ಹರೀಶ್ ಅಮೀನ್ ರವರ ಉನ್ನತ ಶೈಕ್ಷಣಿಕ ಯೋಜನೆಗೆ ದೊಡ್ಡ ಮಟ್ಟದಲ್ಲಿ ಸಹಕರಿಸುವ ಭರವಸೆ ನೀಡಿದರು
ಬಿಲ್ಲವರ ಅಸೋಸಿಯೇಶನ್ ಇದರ ಉಪಾಧ್ಯಕ್ಷರುಗಳಾದ ಕೆ.ಸುರೇಶ್ ಕುಮಾರ್ , ಮೋಹನ್ ಸಿ.ಕೋಟ್ಯಾನ್,ಗೌರವ ಕಾರ್ಯದರ್ಶಿ ಹರೀಶ್ ಜಿ.ಸಾಲ್ಯಾನ್ ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಳಾ ಕೋಟ್ಯಾನ್, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ, ಕಾರ್ಯದರ್ಶಿ ಯೋಗೀಶ್ ಪೂಜಾರಿ, ಕಾರ್ಯಕಾರಿ ಸಮಿತಿಯ ಶಂಕರ್ ಎಸ್.ಪೂಜಾರಿ, ಮಾಜಿ ಉಪಾಧ್ಯಕ್ಷ ರಾಜಾ ವಿ.ಸಾಲ್ಯಾನ್ ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದರು.

ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಶಂಕರ್ ಎಸ್.ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಥಳೀಯ ಕಚೇರಿಯಲ್ಲಿ ಪ್ರತೀ ಗುರುವಾರ ನಡೆಯುವ ಗುರು ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಹಾಗೂ ಅಸೋಸಿಯೇಶನಿನ ಸದಸ್ಯತ್ವವನ್ನು ಪಡೆದುಕೊಳ್ಳಬೇಕೆಂದು ಸಮಾಜ ಬಾಂಧವರಲ್ಲಿ ವಿನಂತಿಸಿದರು. ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಚರಿಸುವುದು ನಮ್ಮೆಲ್ಲರ ಕರ್ತವ್ಯ ಎಂದ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸದಸ್ಯರ ಮಕ್ಕಳಿಂದ ಹಾಗೂ ಮಹಿಳಾ ಸದಸ್ಯೆಯರಿಂದ ನೃತ್ಯ ವೈವಿಧ್ಯ, ಆಟಿಕಡಂಜ ನಲಿಕೆ, ಹಾಸ್ಯ ಹಾಗೂ ಹರೀಶ್ ಕರ್ಕೇರಾ ಬಳಗದವರಿಂದ ಸಂಗೀತ ರಸಮಂಜರಿ ನಡೆಯಿತು. ಆಟಿ ತಿಂಗಳ ಬಗ್ಗೆ ಗೀತಾ ಎಸ್.ಪಾಲನ್ ಮಾತನಾಡಿದರು.ಮಹಿಳಾ ಸದಸ್ಯೆಯರಿಂದ ಆಟಿ ತಿಂಗಳ ವೈವಿಧ್ಯಮಯ ತಿಂಡಿತಿನಿಸುಗಳೊಂದಿಗೆ ಊಟೋಪಚಾರ ನಡೆಯಿತು. ಪ್ರಿಯಾ ಕ್ಯಾಟರರ್ಸಿನ ವಿಜಯ ಕೋಟ್ಯಾನ್ ಸಹಕರಿಸಿದ್ದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ವಿವಿಧ ಸ್ಥಳೀಯ ಕಚೇರಿಗಳ ಪದಾಧಿಕಾರಿಗಳು, ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳು, ಉದ್ಯಮಿಗಳು ಉಪಸ್ಥಿತರಿದ್ದರು.



ಆರಂಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಲಂಕೃತ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸ್ಥಳೀಯ ಕಚೇರಿಯ ಕಾರ್ಯದರ್ಶಿ ಹರೀಶ್ ಡಿ.ಕರ್ಕೇರ ಸ್ವಾಗತಿಸಿದರು.ಶಿಪ್ರಾ ಟಿ.ಪೂಜಾರಿ ವಂದಿಸಿದರು. ಕಾರ್ಯಕ್ರಮವನ್ನು ಕವಿತಾ ರವಿ ಕೋಟ್ಯಾನ್ ನಿರೂಪಿಸಿದರು.ವಿನಯ್ ಪೂಜಾರಿ , ಶ್ವೇತಾ ಆರ್. ಅಮೀನ್ ಸಹಕರಿಸಿದರು.
ಸ್ಥಳೀಯ ಕಚೇರಿಯ ಗೌರವಾಧ್ಯಕ್ಷ ಕೆ.ಪಿ.ಸಂಜೀವ, ಉಪ ಕಾರ್ಯಾಧ್ಯಕ್ಷರುಗಳಾದ ರವಿ ಜೆ.ಕೋಟ್ಯಾನ್, ವಿನಯ್ ವಿ.ಪೂಜಾರಿ, ಕೋಶಾಧಿಕಾರಿ ಶಂಕರ್ ಜೆ.ಪೂಜಾರಿ, ಮಹಿಳಾ ವಿಭಾಗದ ಗೀತಾ ಬಿ.ಪೂಜಾರಿ,ಜಯಂತ್ ಪೂಜಾರಿ(ರಿಲಯನ್ಸ್ ),ಲೋಕನಾಥ್ ಪೂಜಾರಿ, ನರೇಶ್ ಅಮೀನ್, ರವೀಂದ್ರ ಅಮೀನ್, ಶಶಿಕಾಂತ ಸುವರ್ಣ, ತುಷಾರ್ ಪೂಜಾರಿ, ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.





