
ಚಿತ್ರ ವರದಿ- ಉಮೇಶ್ ಕೆ. ಅಂಚನ್
ಮುಂಬೈ (ಜು.30): ಇಲ್ಲಿನ ಬಿಲ್ಲವರ ಅಸೋಸಿಯೇಶನ್ನ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ಜುಲೈ 29ರ ಬುಧವಾರದಂದು ಗುರುಪೂರ್ಣಿಮೆ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಹಿರಿಯರಾದ ಕೆ.ಎಲ್. ಅಂಚನ್ ದಂಪತಿಗಳು ಅಲಂಕೃತ ಗುರು ದೇವರ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಸ್ಥಳೀಯ ಸದಸ್ಯರು ಹಾಗೂ ಆಮಂತ್ರಿತ ವಿವಿಧ ಸಂಘ-ಸಂಸ್ಥೆಗಳ ಸದಸ್ಯರಿಂದ ಭಜನಾ ಕಾರ್ಯಕ್ರಮ ವೈಭವದಿಂದ ನೆರವೇರಿಯಿತು. ಭಜನಾ ಸೇವೆಯಲ್ಲಿ ಜತೀಶ್ ಕುಂದರ್ ಮತ್ತು ಅಶೋಕ್ ಟಿ. ಪೂಜಾರಿ ಅವರು ಕ್ರಮವಾಗಿ ಹಾರ್ಮೋನಿಯಂ ಹಾಗೂ ತಬಲಾ ವಾದನದ ಮೂಲಕ ಸಹಕರಿಸಿದರು.

ಫೋರ್ಟ್ ವೆಸ್ಟರ್ನ್ ಇಂಡಿಯಾ ಶನಿಮಹಾತ್ಮಾ ಪೂಜಾ ಸಮಿತಿಯ ಪ್ರಧಾನ ಅರ್ಚಕರಾದ ಸತೀಶ್ ಕೋಟ್ಯಾನ್ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗುರು ಪೂಜೆ ಹಾಗೂ ಮಹಾಮಂಗಳಾರತಿ ಜರುಗಿತು. ಇದೇ ವೇಳೆ ಅವರು ಉಪಸ್ಥಿತರಿದ್ದ ಭಕ್ತಾದಿಗಳಿಗೆ ಗುರುಪೂರ್ಣಿಮೆಯ ಮಹತ್ವ ಮತ್ತು ವಿಶೇಷತೆಯನ್ನು ತಿಳಿಸಿಕೊಟ್ಟರು. ಪೂಜಾ ಕಾರ್ಯಕ್ರಮದಲ್ಲಿ ಸಮಿತಿಯ ಭುವಾಜಿ ರಾಕೇಶ್ ಅಮೀನ್ ಹಾಗೂ ಶ್ರೀನಿವಾಸ್ ಗುರುಸ್ವಾಮಿ ಅವರು ಸಹಕರಿಸಿದರು.

ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರಾದ ಶೇಖರ್ ರಾಮ ಪೂಜಾರಿ ಅವರು ಕಾರ್ಯಕ್ರಮಕ್ಕೆ ಉದಾರ ದೇಣಿಗೆ ನೀಡಿದ ದಾನಿಗಳನ್ನು, ಪರಿಸರದ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳನ್ನು ಹಾಗೂ ಗುರು ಪೂಜೆಯ ಸೇವೆ ನೀಡಿ ಸಹಕರಿಸಿದ ಗುರು ಭಕ್ತರನ್ನು ಪ್ರಸಾದ ನೀಡಿ ಗೌರವಿಸಿದರು.
ಸಭೆಯನ್ನು ಉದ್ದೇಶಿಸಿ ಕಾರ್ಯದರ್ಶಿ ಜ್ಯೋತಿ ರತ್ನಾಕರ್ ಪೂಜಾರಿ ಅವರು ಸರ್ವ ಗುರು ಭಕ್ತರನ್ನು ಆತ್ಮೀಯವಾಗಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊನೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಮತ್ತು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸಮಿತಿಯ ಪದಾಧಿಕಾರಿಗಳಾದ ಚಿತ್ರಾಪು ಕೆ. ಎಂ. ಕೋಟ್ಯಾನ್, ಸುಧಾಕರ್ ಜಿ. ಪೂಜಾರಿ, ಸತೀಶ್ ಪೂಜಾರಿ, ಸಂತೋಷ್ ಕರ್ಕೇರ, ಹರೀಶ್ ಸಾಲಿಯಾನ್ ಪಲಿಮಾರು, ದೀಪಕ್ ಕರ್ಕೇರ, ಸದಾಶಿವ ಪೂಜಾರಿ, ವಿಜಯ ಅಂಚನ್, ಕಿಶೋರ್ ಅಮೀನ್, ಜಯಶ್ರೀ ಸಂತೋಷ್ ಕರ್ಕೇರ, ನಾಗೇಶ್ ಪೂಜಾರಿ, ವಿಠಲ್ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಂಘಟನಾತ್ಮಕವಾಗಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಧಾರ್ಮಿಕ ಕಾರ್ಯಕ್ರಮಗಳ ಮುಕ್ತಾಯದ ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನೆರವೇರಿಯಿತು.





