
ಡೊಂಬಿವಲಿ: ಇಲ್ಲಿನ ಶ್ರೀ ಮಹಾವಿಷ್ಣು ಮಂದಿರದ ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ–4ರ ಅಂಗವಾಗಿ, ಮಹಿಳಾ ವಿಭಾಗದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಯೋಜಿಸಲಾಗಿದ್ದ “ಮುದ್ದು ರಾಧಾ–ಕೃಷ್ಣ ವೇಷಭೂಷಣ ಸ್ಪರ್ಧೆ”ಯು ಭಾನುವಾರ ಮಂದಿರದ ಆವರಣದಲ್ಲಿ ಅತ್ಯಂತ ಸಡಗರ–ಸಂಭ್ರಮದಿಂದ ಜರುಗಿತು.
ಪುಟ್ಟ ಮಕ್ಕಳ ಮುದ್ದಾದ ನಗು, ಮೋಹಕ ವೇಷಭೂಷಣ, ಕಂಗಳಲ್ಲಿ ಹೊಮ್ಮಿದ ತುಂಟತನ ಹಾಗೂ ರಾಧೆಯ ಮನಮೋಹಕ ಭಾವಭಂಗಿಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು. ವಿವಿಧ ಬಗೆಯ ಸುಂದರ ವೇಷಭೂಷಣಗಳಲ್ಲಿ ಕಂಗೊಳಿಸಿದ ಮಕ್ಕಳು ತಮ್ಮ ಅಭಿನಯ, ಭಾವಾಭಿವ್ಯಕ್ತಿ ಹಾಗೂ ಆತ್ಮವಿಶ್ವಾಸದ ಮೂಲಕ ನೆರೆದಿದ್ದವರ ಮನಸೂರೆಗೊಂಡರು.
ಕಾರ್ಯಕ್ರಮದ ಆರಂಭದಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದ ಶ್ರೀಮತಿ ಸುನಂದಾ ಸುನಿಲ್ ಮೂಲಗುಂಡ್ ಹಾಗೂ ಶ್ರೀ ಬನಪ್ಪ ದೇವಪ್ಪ ಬೆಡಗಿ ಅವರನ್ನು ದೇವರ ಸಾನ್ನಿಧ್ಯದಲ್ಲಿ ಪ್ರಾರ್ಥನೆಯೊಂದಿಗೆ ಸ್ವಾಗತಿಸಿ, ಪ್ರಸಾದ ನೀಡಿ ಸ್ಪರ್ಧೆಗೆ ಚಾಲನೆ ನೀಡಲಾಯಿತು. ಒಟ್ಟು 45 ಮಕ್ಕಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ವಿಜೇತರಿಗೆ ಬಹುಮಾನ ವಿತರಣೆಯು ಸೆಪ್ಟೆಂಬರ್ 27ರಂದು ಡೊಂಬಿವಲಿ ಪೂರ್ವದ ಶಿವಂ ಸಭಾಗೃಹದಲ್ಲಿ ನಡೆಯಲಿರುವ “ಸ್ವರ್ಣ ಸಂಭ್ರಮ – ದಾಸರ ಭಜನಾ ಸ್ಪರ್ಧೆ – 2026” ಸಮಾರಂಭದಲ್ಲಿ ನೆರವೇರಲಿದೆ.
ತೀರ್ಪುಗಾರರನ್ನು ಪುಷ್ಪಗುಚ್ಛ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ತೀರ್ಪುಗಾರರ ಪರಿಚಯವನ್ನು ಮಹಿಳಾ ವಿಭಾಗದ ಸದಸ್ಯೆಯರಾದ ಶ್ರೀಮತಿ ಸ್ವಪ್ನಾ ಕೃಷ್ಣ ಮಾರಕಲ್ ಹಾಗೂ ಶ್ರೀಮತಿ ಪೂರ್ಣಿಮಾ ಸಂಜೀವ ಕರ್ಕೇರ ಮಾಡಿಕೊಟ್ಟರು.
ಮಂದಿರದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರಾದ ಶ್ರೀಮತಿ ಸವಿತಾ ಸಾಲಿಯಾನ್ ಮಾತನಾಡಿ, ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಸಮಸ್ತ ಮಹಿಳಾ ಸದಸ್ಯೆಯರಿಗೆ, ಪುಟಾಣಿಗಳಿಗೆ ಹಾಗೂ ಪೋಷಕರಿಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ಕಾರ್ಯಕ್ರಮಗಳಿಗೂ ಇದೇ ರೀತಿಯ ಸಹಕಾರ ನೀಡುವಂತೆ ಕೋರಿದರು.
ಉಪಾಧ್ಯಕ್ಷರಾದ ಶ್ರೀ ಅರವಿಂದ್ ಪದ್ಮಶಾಲಿ ಮಾತನಾಡಿ, “ಈ ಸ್ಪರ್ಧೆಯು ಕೇವಲ ವೇಷಭೂಷಣ ಪ್ರದರ್ಶನಕ್ಕೆ ಸೀಮಿತವಾಗದೆ, ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪೌರಾಣಿಕ ಪರಂಪರೆ ಹಾಗೂ ಹಬ್ಬಗಳ ಮಹತ್ವದ ಕುರಿತು ಅರಿವು ಮೂಡಿಸುವುದರ ಜೊತೆಗೆ ಅವರ ಸೃಜನಶೀಲತೆ, ಕಲಾತ್ಮಕ ಅಭಿವ್ಯಕ್ತಿ ಮತ್ತು ಆತ್ಮವಿಶ್ವಾಸವನ್ನು ಬೆಳೆಸುವ ಸುಂದರ ವೇದಿಕೆಯಾಗಿದೆ” ಎಂದರು.
ವೇದಿಕೆಯಲ್ಲಿ ಮಂದಿರದ ಗೌರವಾಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್, ಕೋಶಾಧಿಕಾರಿ ಶ್ರೀ ಪ್ರವೀಣ್ ಶೆಟ್ಟಿ, ಪ್ರಮುಖರಾದ ಶ್ರೀ ರತ್ನಾಕರ್ ಬಂಗೇರ, ಶ್ರೀ ಚಂದ್ರಶೇಖರ್ ಸಾಲಿಯಾನ್, ಶ್ರೀ ಸಂಜೀವ ಕರ್ಕೇರ ಹಾಗೂ ಶ್ರೀ ಮೋಹನ್ದಾಸ್ ಕೋಟ್ಯಾನ್ ಉಪಸ್ಥಿತರಿದ್ದರು.
ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿಗಳು ಮಂದಿರದ ವಿವಿಧ ಕಾರ್ಯಚಟುವಟಿಕೆಗಳು ಹಾಗೂ ಸುವರ್ಣ ಸಂಭ್ರಮದ ಮುಂಬರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ, ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆ ಮಾಡಿದರು. ಮಹಿಳಾ ವಿಭಾಗದ ಸದಸ್ಯೆಯರು, ಸ್ವಯಂಸೇವಕರು ಹಾಗೂ ಪೋಷಕರ ಸಹಕಾರದೊಂದಿಗೆ ಸ್ಪರ್ಧೆಯು ಅತ್ಯಂತ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.




