September 7, 2026
Mumbai News Kannada
ಸುದ್ದಿ

ಅನಿತಾ ಪಿ.ತಾಕೊಡೆಯವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ





ಮುಂಬಯಿ: ಕನ್ನಡ ಸಾಹಿತ್ಯ ಪರಿಷತ್ತಿನ 2022ನೆಯ ಸಾಲಿನ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭವು ಮಾರ್ಚ್ ಮೂರರಂದು ಬೆಂಗಳೂರಿನ ಚಾಮರಾಜ ಪೇಟೆಯ ಶ್ರೀ ಕೃಷ್ಣರಾಜ ಪರಿಶತ್ತಿನ ಮಂದಿರದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಡೋಜ ಡಾ.ಮಹೇಶ್ ಜೋಶಿಯವರು ವಹಿಸಿದ್ದರು. ನಿವೃತ್ತ ಕುಲಪತಿಗಳಾದ ಡಾ.ಎಸ್.ಎಸ್.ರಾಮೇಗೌಡ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ವೈದ್ಯರು ಹಾಗೂ ಹಿರಿಯ ಲೇಖಕರಾದ ಡಾ.ಯೋಗಣ್ಣ ಎಸ್.ಪಿ. ಮತ್ತು ಚಲನಚಿತ್ರ ಸಾಹಿತಿಗಳಾದ ಕವಿರತ್ನ ಡಾ.ನಾಗೇಂದ್ರ ಪ್ರಸಾದ್ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಅನಿತಾ ಪಿ. ತಾಕೊಡೆಯವರು ತಮ್ಮ ‘ನಿವಾಳಿಸಿ ಬಿಟ್ಟ ಕೋಳಿ ಕಥಾ ಸಂಕಲನ’ ಶ್ರೀ ಕೆ. ವಾಸುದೇವಾಚಾರ್ಯ ದತ್ತಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಶ್ಷರಾದ ನಾಡೋಜ ಮಹೇಶ್ ಜೋಶಿ ಮತ್ತು ಕರ್ನಾಟಕದ ಲೋಕಾಯುಕ್ತರಾದ ಬಿ.ಎಸ್.ಪಾಟೀಲ ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಿದರು. ಈ ಸ್ಪರ್ಧೆಗೆ 2022ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೂ ಪ್ರಕಟವಾದ ಕೃತಿಗಳನ್ನು ಒಟ್ಟು 51 ದತ್ತಿ ಪ್ರಶಸ್ತಿಗಳಿಗೆ ಬರಹಗಾರರಿಂದ ಪುಸ್ತಕಗಳನ್ನು ಆಹ್ವಾನಿಸಿತ್ತು. ಇದಕ್ಕೆ ರಾಜ್ಯ ದೇಶ ಮತ್ತು ವಿದೇಶಗಳಿಂದಲೂ ನಾಲ್ಕು ಸಾವಿರ ಕೃತಿಗಳು ಬಂದಿದ್ದು ಅವುಗಳಲ್ಲಿ 25 ಜನ ಪರಿಣಿತರ ಸಮಿತಿಯು ವಿಜೇತರನ್ನು ಆಯ್ಕೆ ಮಾಡಿತ್ತು.

ಅನಿತಾ ಪೂಜಾರಿಯವರು ಕವಿಯಾಗಿ, ಲೇಖಕರಾಗಿ, ಕಥೆಗಾರರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾಗಿದ್ದಾರೆ. ಇವರು ಕೆ.ಎಸ್.ಒ.ಯು. ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. ಪದವಿ ಪಡೆದಿದ್ದಾರೆ. ಮುಂಬೈ ವಿಶ್ವವಿದ್ಯಾಲಯದಲ್ಲಿ ಎಂ.ಎ. ಪದವಿಯನ್ನು ಪ್ರಥಮ ರ್ಯಾಂಕ್‍ನೊಂದಿಗೆ ಪಡೆಯುವುದರ ಮೂಲಕ ಎಂ.ಬಿ.ಕುಕ್ಯಾನ್ ಬಂಗಾರದ ಪದಕದ ಅರ್ಹತೆಯನ್ನು ಸಾಧಿಸಿದ್ದಾರೆ. ಇದೀಗ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಡಾ.ಜಿ. ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ “ಮುಂಬಯಿ ಬಿಲ್ಲವರು ಸಾಂಸ್ಕೃತಿಕ ಅಧ್ಯಯನ” ಈ ವಿಷಯದ ಕುರಿತು ಪಿಎಚ್.ಡಿ ಅಧ್ಯಯನದಲ್ಲಿ ನಿರತರಾಗಿದ್ದಾರೆ. ಈಗಾಗಲೇ ಅನಿತಾ ಅವರ ಒಟ್ಟು ಎಂಟು ಕೃತಿಗಳು ಲೋಕಾರ್ಪಣೆಗೊಂಡಿವೆ. ಅವರ ಕೃತಿಗಳಿಗೆ ಕತೆ ಕವನ ಲೇಖನಗಳಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳೂ ಲಭಿಸಿವೆ. ಮುಂಬಯಿ ಮತ್ತು ಮಂಗಳೂರು ಆಕಾಶವಾಣಿಯಲ್ಲಿ ಇವರ ಕತೆ, ಭಾವಗೀತೆ ಮತ್ತು ಕವನಗಳು ಪ್ರಸಾರಗೊಂಡಿವೆ. ಇವರು 2019ರಲ್ಲಿ ಮೈಸೂರು ಅರಮನೆಯಲ್ಲಿ ನಡೆದ ವಿಶ್ವವಿಖ್ಯಾತ ದಸರಾ ಕವಿಗೋಷ್ಠಿಯಲ್ಲೂ ಭಾಗವಹಿಸಿ ಗೌರವ ಪುರಸ್ಕಾರವನ್ನು ಪಡೆದಿದ್ದಾರೆ. ಪ್ರಸ್ತುತ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ(ರಿ)ಇದರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.



Related posts

ಗಮ್ಮತ್ ಕಲಾವಿದೆರ್ ಅವರ ‘ಪೋನಗ ಕೊನೊಪರ’ ನಾಟಕದ ಮುಹೂರ್ತ

Mumbai News Desk

2023-24ರ ಎಚ್ ಎಸ್ ಸಿ ಪರೀಕ್ಷೆಯಲ್ಲಿ ವಸಯಿಯ ಮೋಹಿತ್ ಆನಂದ ಪೂಜಾರಿಗೆ ಶೇ 86.50%

Mumbai News Desk

ಟ್ರಂಪ್ ಸುಂಕ ನೀತಿಯಿಂದ ತಲ್ಲಣ : ಭಾರತ ಸೇರಿದಂತೆ ವಿಶ್ವದಾದ್ಯಂತ ಶೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ

Mumbai News Desk

ಮೂಲ್ಕಿ ಲಯನ್ಸ್ ಕ್ಲಬ್ ನ ನೂತನ ಅಧ್ಯಕ್ಷರಾಗಿ ಹರ್ಷರಾಜ್ ಶೆಟ್ಟಿ ಜಿ ಎಂ ಆಯ್ಕೆ

Mumbai News Desk

ಬಾಲಿವುಡ್ ನ ಹಿರಿಯ ದಿಗ್ಗಜ ನಟ ಧರ್ಮೇಂದ್ರ ಇನ್ನಿಲ್ಲ, ‘ಹೀಮ್ಯಾನ್’ ಕಳೆದುಕೊಂಡ ಭಾರತೀಯ ಚಿತ್ರರಂಗ

Mumbai News Desk

ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಹುಟ್ಟೂರ ಸಮ್ಮಾನ – ತಾಳಮದ್ದಳೆ 

Mumbai News Desk