August 4, 2026
Mumbai News Kannada
ಮುಂಬಯಿ

ಕಲ್ಯಾಣ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ಸಂಭ್ರಮದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ





“ಮಹಿಳಾ ದಿನಾಚರಣೆಯು ಮಹಿಳೆಯರ ಸಾಧನೆಗಳನ್ನು ಚರ್ಚಿಸುವ ದಿನವಾಗಲಿ” – ಶಾಲಿನಿ ಶೆಟ್ಟಿ

ಕಲ್ಯಾಣ: ಮುಂಬರುವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಚರ್ಚೆಯಾಗದೆ, ಅವರ ಸಾಧನೆಗಳ ಕುರಿತು ಚರ್ಚಿಸುವ ದಿನವಾಗಲಿ ಎಂದು ‘ಛಾಯಾ ಕಿರಣ’ ಕನ್ನಡ ಮಾಸಪತ್ರಿಕೆಯ ಸಹ ಸಂಪಾದಕಿ ಶ್ರೀಮತಿ ಶಾಲಿನಿ ಶೆಟ್ಟಿ ಹೇಳಿದ್ದಾರೆ. ಅವರು ಮಾರ್ಚ್ 8ರಂದು ಸಂಜೆ ಕಲ್ಯಾಣ ಪಶ್ಚಿಮದ ಮುರಬಾಡ ರಸ್ತೆಯ ಬ್ರಾಹ್ಮಣ ಸೊಸಾಯಿಟಿ ಸಭಾಗೃಹದಲ್ಲಿ ಕಲ್ಯಾಣ ಕರ್ನಾಟಕ ಸಂಘದ ಮಹಿಳಾ ವಿಭಾಗ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.

​”ಮಹಿಳಾ ದಿನಾಚರಣೆಯು ಕೇವಲ ಒಂದು ದಿನದ ಆಚರಣೆಯಲ್ಲ, ಬದಲಾಗಿ ಮಹಿಳೆಯರ ಗೌರವ, ಸಮಾನತೆ ಹಾಗೂ ಸಮಾಜದ ಒಗ್ಗಟ್ಟಿಗಾಗಿ ಕೆಲಸ ಮಾಡುವ ಸಂಕಲ್ಪದ ದಿನವಾಗಿದೆ” ಎಂದು ಶಾಲಿನಿ ಶೆಟ್ಟಿಯವರು ಹೇಳಿದರು. “ಮಹಿಳೆ ಎಂದರೆ ಶಕ್ತಿ, ಧೈರ್ಯ ಹಾಗೂ ಪ್ರೀತಿಯ ಸಂಕೇತ. ದೇಶದ ಅತ್ಯುನ್ನತ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸುವುದರ ಜೊತೆಗೆ ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಅನನ್ಯವಾಗಿದೆ. ‘ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು’ ಎಂಬಂತೆ, ನಾಳಿನ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕಾಗಿ ಪ್ರತಿಯೊಬ್ಬ ತಾಯಿಯು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು” ಎಂದು ಅವರು ಕರೆ ನೀಡಿದರು. ಕಲ್ಯಾಣ ಕರ್ನಾಟಕ ಸಂಘದ ಮಹಿಳಾ ವಿಭಾಗದ ಈ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು ಕಂಡು ಸಂತಸ ವ್ಯಕ್ತಪಡಿಸಿದ ಅವರು, ಸಂಘವು ಬಾನತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು.

​ಮುಖ್ಯ ಅತಿಥಿ ಖ್ಯಾತ ವಾಸ್ತುತಜ್ಞೆ ಶ್ರೀಮತಿ ಶೈಲಜಾ ವೈದ್ಯ ಮಾತನಾಡಿ, “ಇಂದು ವಿಶ್ವದ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಸಾಧನೆ ಅಪಾರವಾಗಿದೆ. ಬದುಕಿನ ಪ್ರತಿಯೊಂದು ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸುವ ಮಹಿಳೆ ತನ್ನ ಪರಿವಾರದ ಏಳಿಗೆಗಾಗಿ ಸದಾ ಶ್ರಮಿಸುತ್ತಾಳೆ. ಕನ್ನಡದ ಕೈಂಕರ್ಯದ ಜೊತೆಗೆ ಮಹಿಳೆಯರ ಸುಪ್ತ ಪ್ರತಿಭೆಗಳಿಗೆ ಇಂಬು ನೀಡುವ ಸಂಘದ ಕಾರ್ಯ ಅಭಿನಂದನೀಯ ಹಾಗೂ ಅನುಕರಣನೀಯವಾಗಿದೆ” ಎಂದರು.

​ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಉಪಾಧ್ಯಕ್ಷೆ ಶ್ರೀಮತಿ ಜಯಂತಿ ಹೆಗ್ಡೆ, “ಹೆಣ್ಣು ಎನ್ನುವುದು ಕೇವಲ ಒಂದು ಶಬ್ದವಲ್ಲ, ಅದೊಂದು ಸ್ಫೂರ್ತಿಯ ಸೆಲೆ. ಜಗನ್ಮಾತೆಯ ಸ್ವರೂಪದ ಮಹಿಳೆಯನ್ನು ಗೌರವಿಸುವ ಕಾರ್ಯ ನಿರಂತರವಾಗಿ ನಡೆಯಬೇಕು” ಎಂದು ಹೇಳುತ್ತಾ, ಸಂಘದ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವ ಹಿರಿಯರನ್ನು ಹಾಗೂ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು.

​ಇದೇ ಸಂದರ್ಭದಲ್ಲಿ ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿಯ ಕಾರ್ಯಾಧ್ಯಕ್ಷೆ ಶ್ರೀಮತಿ ವಿದ್ಯಾವತಿ ಆಲಗೂರ ಅವರನ್ನು ಸಂಘದ ವತಿಯಿಂದ ಶಾಲು, ಶ್ರೀಫಲ ಹಾಗೂ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ಮಹಿಳಾ ದಿನಾಚರಣೆಯು ಮಹಿಳೆಯರ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸಾಧನೆಗಳನ್ನು ಸಂಭ್ರಮಿಸುವ ದಿನವಷ್ಟೇ ಅಲ್ಲದೆ, ಲಿಂಗ ಸಮಾನತೆ, ಮಹಿಳಾ ಹಕ್ಕು ಹಾಗೂ ಸಬಲೀಕರಣದ ಕುರಿತು ಜಾಗೃತಿ ಮೂಡಿಸುವ ದಿನವೂ ಆಗಿದೆ” ಎಂದು ತಿಳಿಸಿದರು.

​ಶ್ರೀಮತಿ ಆಶಾ ನಾಯ್ಕ್ ಅವರ ಪ್ರಾರ್ಥನೆಯೊಂದಿಗೆ ಗಣ್ಯರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ಮಾಜಿ ಅಧ್ಯಕ್ಷೆ ಶ್ರೀಮತಿ ದರ್ಶನಾ ಸೋನ್ಕರ್ ಸಂಸ್ಥೆಯ ಸಿದ್ಧಿ ಹಾಗೂ ಸಾಧನೆಯನ್ನು ವಿವರಿಸಿ ವಂದಿಸಿದರು. ಶ್ರೀಮತಿ ಪ್ರಸನ್ನಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿ ಗಣ್ಯರನ್ನು ಪರಿಚಯಿಸಿದರು. ಶ್ರೀಮತಿ ವಿಭಾ ದೇಶಮುಖ ವಂದನಾರ್ಪಣೆ ಮಾಡಿದರು. ವೇದಿಕೆಯ ಮೇಲೆ ಶ್ರೀಮತಿ ವೀಣಾ ಕಾಮತ್ ಉಪಸ್ಥಿತರಿದ್ದರು.

​ಕಾರ್ಯಕ್ರಮದ ಅಂಗವಾಗಿ ಸಂಘದ ಸದಸ್ಯೆಯರ ಹಾಗೂ ಮಕ್ಕಳ ವೈವಿಧ್ಯಮಯ ನೃತ್ಯ ಕಾರ್ಯಕ್ರಮ ಮತ್ತು ಶ್ರೀಮತಿ ವಸಂತ ಚಂದ್ರಶೇಖರ ಹಾಗೂ ತಂಡದ “ಜಿಪುಣ ನನ್ನ ಗಂಡ” ಕಿರು ನಾಟಕವು ಎಲ್ಲರ ಗಮನ ಸೆಳೆಯಿತು.



Related posts

ಕುಲಾಲ ಸಂಘ ಮುಂಬಯಿಯ ಮುಖವಾಣಿ “ಅಮೂಲ್ಯ” ದ ಅದ್ದೂರಿಯ ಬೆಳ್ಳಿ ಹಬ್ಬ ಸಮಾರಂಭ

Mumbai News Desk

ವಸಾಯಿ ಕರ್ನಾಟಕ ಸಂಘ: ಅಧ್ಯಕ್ಷರಾಗಿ ಕರ್ನೂರು ಶಂಕರ್ ಆಳ್ವ, ಗೌರವಾಧ್ಯಕ್ಷರಾಗಿ ವಿಶ್ವನಾಥ್ ಪಿ. ಶೆಟ್ಟಿ ಆಯ್ಕೆ

Mumbai News Desk

ವಸಾಯಿ ಕರ್ನಾಟಕ ಸಂಘದ ಗಣರಾಜ್ಯೋತ್ಸವ ಆಚರಣೆ, ಸಂಘದ ಚಟುವಟಿಕೆಯಲ್ಲಿ ಸದಸ್ಯರು ಸಕ್ರಿಯರಾಗಿ : ದೇವೇಂದ್ರ ಬಿ. ಬುನ್ನನ್

Mumbai News Desk

ಸಯನ್ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ: ಆಗಸ್ಟ್ 15, 2026ಕ್ಕೆ ಗಡುವು ವಿಸ್ತರಣೆ; ವೆಚ್ಚದಲ್ಲೂ ಏರಿಕೆ

Mumbai News Desk

ಸಾಂತಾಕ್ರೂಜ್ ಶ್ರೀ ಪೇಜಾವರ ಮಠದಲ್ಲಿ ಶೀರೂರು ಪರ್ಯಾಯೋತ್ಸವ – 2026 ಪೂರ್ವಭಾವಿ ಸಭೆ

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬಯಿ : ಮೀರಾರೋಡ್ ಸಮಿತಿವತಿಯಿಂದ ಧಾರ್ಮಿಕ ಯಾತ್ರೆ

Mumbai News Desk