September 6, 2026
Mumbai News Kannada
ಮುಂಬಯಿ

ಬಂಟರ ಸಂಘ, ಮುಂಬಯಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ: ಸ್ನೇಹ ಸಮ್ಮಿಲನ ಕಾರ್ಯಕ್ರಮ





“ನಮ್ಮ ಪ್ರೀತಿ-ಬಾಂಧವ್ಯ, ಪರಸ್ಪರ ಸಹಕಾರದಲ್ಲಿ ಯಶಸ್ಸು ಅಡಗಿದೆ” – ಸೂರಜ್ ಶೆಟ್ಟಿ

ಮುಂಬೈ:

ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಈ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಕಳೆದ ಮೂರು ವರ್ಷಗಳ ನಮ್ಮ ಶ್ರಮ ಮತ್ತು ಸಾಧನೆಗಳನ್ನು ಸ್ಮರಿಸುವ ಅರ್ಥಪೂರ್ಣ ವೇದಿಕೆಯಾಗಿದೆ. ನಮ್ಮ ಸಮಿತಿಯ ಎಲ್ಲಾ ಸದಸ್ಯರ ಸಮರ್ಪಣೆ ಮತ್ತು ತಂಡದ ಒಗ್ಗಟ್ಟಿನಿಂದಾಗಿ ಕ್ರೀಡೆ ಹಾಗೂ ಮತ್ತಿತರ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಯಿತು.

​ಪ್ರತಿಯೊಬ್ಬರ ಸಹಕಾರದಿಂದಲೇ ನಾವು ಈ ಮಟ್ಟದ ಯಶಸ್ಸನ್ನು ಕಂಡಿದ್ದೇವೆ. ನಮ್ಮ ಯುವ ವಿಭಾಗ ಮತ್ತು ಮಹಿಳಾ ವಿಭಾಗಗಳು ಸದಾ ಕ್ರಿಯಾಶೀಲವಾಗಿವೆ. ನಮ್ಮ ಸಂಸ್ಥೆಗೆ ದೊಡ್ಡ ದೊಡ್ಡ ಉದ್ಯಮಿಗಳ ಹಾಗೂ ಸಮಾಜಸೇವಕರ ಸಂಪೂರ್ಣ ಸಹಕಾರ ಸಿಗುತ್ತಿರುವುದರಿಂದ ಸಂಸ್ಥೆಯು ಎತ್ತರಕ್ಕೆ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಗುರಿಗಳನ್ನು ತಲುಪಲು ನಾವು ಇದೇ ರೀತಿಯ ಏಕತೆ, ನಿಷ್ಠೆ ಮತ್ತು ಶ್ರದ್ಧೆಯನ್ನು ಮುಂದುವರಿಸಬೇಕು ಎಂದು ಬಂಟರ ಸಂಘ ಮುಂಬಯಿ, ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸೂರಜ್ ಶೆಟ್ಟಿ ಅಭಿಪ್ರಾಯಪಟ್ಟರು.

​ಅವರು ಏಪ್ರಿಲ್ 3ರಂದು ಸಾಕಿವಿಹಾರ್ ರೋಡ್‌ನ ವಿಂಡ್ಸ್ ಬ್ಯಾಂಕ್ವೆಟ್ (Winds Banquet) ಸಭಾಂಗಣದಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮಿಲನದಲ್ಲಿ ಮಾತನಾಡುತ್ತಿದ್ದರು. “ಬಂಟರ ಸಂಘದಿಂದ ‘ಬೆಸ್ಟ್ ರೀಜನ್’ ಪ್ರಶಸ್ತಿ ಪುರಸ್ಕೃತರಾದ ಹಾಗೂ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಅತಿ ಹೆಚ್ಚು ಅಂಕ ಗಳಿಸಿದ ಸಂತಸದ ಕ್ಷಣಗಳನ್ನು ನಾವು ಸಂಭ್ರಮಿಸುತ್ತಿದ್ದೇವೆ. ಇದು ಪರಸ್ಪರ ಬಾಂಧವ್ಯವನ್ನು ಬಲಪಡಿಸಿ, ಹೊಸ ಉತ್ಸಾಹದೊಂದಿಗೆ ಮುಂದುವರಿಯಲು ಪ್ರೇರಣೆ ನೀಡುತ್ತದೆ,” ಎಂದು ನುಡಿದು ಈ ಸಾಧನೆಯ ಹಿಂದಿರುವ ಎಲ್ಲರ ಶ್ರಮವನ್ನು ಶ್ಲಾಘಿಸಿದರು.

​ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ, “ಪ್ರಾದೇಶಿಕ ಸಮಿತಿಯ ಎಲ್ಲಾ ಸದಸ್ಯರು ಸಂಘದ ಅಭಿವೃದ್ಧಿ ಕಾರ್ಯಗಳಲ್ಲಿ ಸದಾ ಸ್ಪಂದಿಸುತ್ತಿದ್ದಾರೆ. ಕ್ರಿಯಾಶೀಲ ಕಾರ್ಯಕ್ರಮಗಳ ಮೂಲಕ ಈ ಸಮಿತಿಯು ಬಲಿಷ್ಠಗೊಂಡಿದೆ,” ಎಂದರು.

​ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ ಮಾತನಾಡಿ, “ಈ ಸಮಿತಿಯ ಪ್ರಥಮ ಕಾರ್ಯಾಧ್ಯಕ್ಷನಾಗಿ ನಾನು ಅದ್ದೂರಿ ಚಾಲನೆ ನೀಡಿದ್ದೆ. ಆ ಅಬ್ಬರ ಮತ್ತು ಶಿಸ್ತನ್ನು ನಂತರ ಬಂದ ಎಲ್ಲ ಕಾರ್ಯಾಧ್ಯಕ್ಷರು ಮುಂದುವರಿಸಿಕೊಂಡು ಬಂದಿರುವುದರಿಂದ ಈ ಸಮಿತಿಗೆ ಸೋಲೆಂಬುದೇ ಇಲ್ಲ,” ಎಂದು ಶುಭ ಹಾರೈಸಿದರು.

​ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿ ಅವರು ಸಮಿತಿಯ ಕಾರ್ಯವೈಖರಿಯನ್ನು ಮನಸಾರೆ ಶ್ಲಾಘಿಸಿದರು. ಸಮಿತಿಯು ಸಮಾಜಮುಖಿ ಚಟುವಟಿಕೆಗಳ ಮೂಲಕ ಸಂಘಟನೆಯ ಬಲವರ್ಧನೆಗೆ ಶ್ರಮಿಸುತ್ತಿರುವುದು ಪ್ರಶಂಸನೀಯ ಎಂದರು.

​ಬಂಟರ ಸಂಘದ ಸಂಚಾಲಕರಾದ ರವೀಂದ್ರನಾಥ ಎಂ. ಭಂಡಾರಿ ಮಾತನಾಡಿ, “ಈ ಸಮಿತಿಯಲ್ಲಿ ಎಲ್ಲರೂ ಪ್ರತಿಭಾವಂತರು. ಮಹಿಳಾ ವಿಭಾಗದ ಸಕ್ರಿಯ ಪಾಲ್ಗೊಳ್ಳುವಿಕೆ, ಯುವಜನರ ಸೇವಾಭಾವನೆ ಹಾಗೂ ಸದಸ್ಯರ ಒಗ್ಗಟ್ಟಿನಿಂದ ಇದು ಮಾದರಿ ಸಮಿತಿಯಾಗಿ ಹೊರಹೊಮ್ಮಿದೆ,” ಎಂದರು.

​ಮಹಿಳಾ ವಿಭಾಗದ ಪರವಾಗಿ ಜೊತೆ ಕೋಶಾಧಿಕಾರಿ ವನಿತಾ ನೋಂಡ ಮಾತನಾಡಿ, ಈ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದು ತಮಗೆ ಅಪಾರ ಸಂತೋಷ ತಂದಿದೆ ಎಂದರು. ಸಮಾಜದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು, ಅವರಿಗೆ ಇನ್ನಷ್ಟು ಪ್ರೋತ್ಸಾಹ ಮತ್ತು ಅವಕಾಶಗಳು ಸಿಗಬೇಕು ಎಂದು ಅವರು ಒತ್ತಿ ಹೇಳಿದರು.

​ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ ಶೆಟ್ಟಿ ಮಾತನಾಡಿ, “ಯಾವುದೇ ಕಾರ್ಯಕ್ರಮವಿದ್ದರೂ ನಾವೆಲ್ಲರೂ ಒಂದಾಗಿ ಕೈಜೋಡಿಸುತ್ತೇವೆ. ಈ ಸಹಕಾರ ಮತ್ತು ಸ್ನೇಹವೇ ನಮ್ಮ ಯಶಸ್ಸಿನ ಮೂಲ,” ಎಂದು ಹೆಮ್ಮೆಯಿಂದ ತಿಳಿಸಿದರು.

​ಯುವ ವಿಭಾಗದ ಕಾರ್ಯಾಧ್ಯಕ್ಷ ಅದ್ವಿತ್ ಪೂಂಜಾ ಮಾತನಾಡಿ, “ಯುವ ವಿಭಾಗಕ್ಕೆ ಅಂಧೇರಿ-ಬಾಂದ್ರಾ ಸಮಿತಿಯು ಸದಾ ಬೆಂಬಲ ನೀಡುತ್ತಾ ಬಂದಿದೆ. ಸಂಘದ ಕಾರ್ಯಗಳನ್ನು ನಾವು ಪ್ರೀತಿಯಿಂದ ನಿರ್ವಹಿಸುತ್ತೇವೆ,” ಎಂದರು.

​ವೇದಿಕೆಯಲ್ಲಿ ಸಂಚಾಲಕ ರವೀಂದ್ರ ಶೆಟ್ಟಿ, ಉಪ ಕಾರ್ಯಾಧ್ಯಕ್ಷರಾದ ಯಶವಂತ ಶೆಟ್ಟಿ, ರಮೇಶ್ ರೈ, ಕಾರ್ಯದರ್ಶಿ ತಾರಾನಾಥ ಶೆಟ್ಟಿ, ಕೋಶಾಧಿಕಾರಿ ಮೋಹನದಾಸ ಶೆಟ್ಟಿ, ಜೊತೆ ಕಾರ್ಯದರ್ಶಿ ಅಮರನಾಥ ಶೆಟ್ಟಿ, ನ್ಯಾಯವಾದಿ ಆರ್. ಜಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಬಂಟರ ಸಂಘದ ಕ್ರೀಡೋತ್ಸವದಲ್ಲಿ ವಿಜೇತರಾದ ಕ್ರೀಡಾಪಟುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ವಿಶೇಷ ಸಾಧನೆಗಾಗಿ ಕಿಕ್ ಬಾಕ್ಸಿಂಗ್ ಚಿನ್ನದ ಪದಕ ವಿಜೇತೆ ಕೃತಿಕಾ ಶೆಟ್ಟಿ, ‘ಆಕಾಂಕ್ಷ’ದ ಮಿಸ್ಟರ್ ಬಂಟ್ಸ್ ಸ್ಪರ್ಧೆಯ ಪ್ರಥಮ ರನ್ನರ್ ಅಪ್ ಮಿಹಿರ್ ಶೆಟ್ಟಿ ಹಾಗೂ ಪ್ರಾಮಾಣಿಕತೆ ಮೆರೆದ ವಿದ್ಯಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ ಅವರನ್ನು ‘ಬೆಸ್ಟ್ ಡೋನರ್’ ಎಂದು ಘೋಷಿಸಲಾಯಿತು.

​ಮಾಜಿ ಕಾರ್ಯಾಧ್ಯಕ್ಷರಾದ ಅಪ್ಪಣ್ಣ ಶೆಟ್ಟಿ, ಅಡ್ವೋಕೇಟ್ ಪ್ರಭಾಕರ ಶೆಟ್ಟಿ, ಶಂಕರ್ ಶೆಟ್ಟಿ (ರೋನಕ್), ಕೃಷ್ಣ ಶೆಟ್ಟಿ, ಲಕ್ಷ್ಮಣ್ ಶೆಟ್ಟಿ, ಅಶೋಕ್ ಶೆಟ್ಟಿ, ಪೂವಾಯಿ ಕನ್ನಡ ಸಂಘದ ಅಧ್ಯಕ್ಷ ಸಂದೇಶ ಶೆಟ್ಟಿ, ಪ್ರಸಾದ್ ಶೆಟ್ಟಿ, ಕಾರ್ನಾಡ್ ಭಾಸ್ಕರ್ ಶೆಟ್ಟಿ ಮತ್ತಿತರ ಗಣ್ಯರನ್ನು ಗೌರವಿಸಲಾಯಿತು. ಸಭಾಂಗಣವನ್ನು ಉಚಿತವಾಗಿ ನೀಡಿದ ಲೋಹಿತ್ ಶೆಟ್ಟಿ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಲಾಯಿತು.

​ಕಾರ್ಯಕ್ರಮದ ಯಶಸ್ಸಿಗಾಗಿ ಮಹಿಳಾ ವಿಭಾಗದ ಸಂಚಾಲಕಿ ವಜ್ರಾಕ್ಷಿ ಪೂಂಜಾ, ಸಾಂಸ್ಕೃತಿಕ ಸಮಿತಿಯ ಅನುಸೂಯ ಶೆಟ್ಟಿ, ಕಾರ್ಯದರ್ಶಿ ವೃಕ್ಷಾ ಭಂಡಾರಿ, ಕೋಶಾಧಿಕಾರಿ ಪ್ರಮಿಳಾ ಆರ್. ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪಲತಾ ಎಸ್. ಶೆಟ್ಟಿ, ಕೋಶಾಧಿಕಾರಿ ಮಮತಾ ಶೆಟ್ಟಿ, ಕ್ರೀಡಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ದೇವಿಕಾ ಶೆಟ್ಟಿ ಹಾಗೂ ವಿವಿಧ ಉಪಸಮಿತಿಗಳ ಪದಾಧಿಕಾರಿಗಳು ಶ್ರಮಿಸಿದರು.

​ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಾಯಕ ವಿಜಯ್ ಶೆಟ್ಟಿ ಮೂಡುಬೆಳ್ಳೆ ಅವರಿಂದ ‘ಗೀತಗುಂಜನ’ ಹಾಗೂ ಸದಸ್ಯರ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯಿತು. ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ನಂತರ ಪ್ರೀತಿ ಭೋಜನದ ವ್ಯವಸ್ಥೆ ಇತ್ತು.



Related posts

ಮೀರಾರೋಡಿನಲ್ಲಿ ಗೆಜ್ಜೆ ಗಿರಿ ಮೇಳದವರಿಂದ……ಎಡ್ಮೂರ ಮುಗೇರ ಸತ್ಯೊಲು…ಯಕ್ಷಗಾನ ಪ್ರದರ್ಶನ.

Mumbai News Desk

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

Mumbai News Desk

ಮುಂಬಯಿ ನ್ಯೂಸ್ ವೀಕ್ಷಕರ /ಓದುಗರ ಮನೆ, ಮನೆ ಗಣಪತಿ

Mumbai News Desk

ಬಿಲ್ಲವರ ಅಸೋಸಿಯೇಶನ್ ಮೀರಾ ರೋಡ್ ಸ್ಥಳೀಯ ಕಚೇರಿಯಿಂದ ಅದ್ಧೂರಿ ಸ್ನೇಹ ಸಮ್ಮಿಲನ;

Mumbai News Desk

ತುಳು ಸಂಘ ಬೊರಿವಲಿ, 14ನೇ ವಾರ್ಷಿಕ ಮಹಾಸಭೆ, ನೂತನ ಅಧ್ಯಕ್ಷರಾಗಿ ಹರೀಶ್ ಮೈಂದನ್

Mumbai News Desk

ನಾಲಾಸೋಪಾರ ದ ಉದ್ಯಮಿ, ಸಮಾಜ ಸೇವಕ. ಸಂಘಟಕ,  ಶಶಿಧರ. ಕೆ ಶೆಟ್ಟಿ ಇನ್ನಂಜೆಯವರಿಗೆ ಪೋಲಿಸ್ ಇಲಾಖೆಯ ಅತ್ಯುತ್ತಮ  ಸೇವಕರ್ತ ಪ್ರಶಸ್ತಿ ಪ್ರದಾನ .

Mumbai News Desk