July 31, 2026
Mumbai News Kannada
ಮುಂಬಯಿ

ವಿದ್ಯಾ ವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಹಾಗೂ ಸಮ್ಮಾನ ಕಾರ್ಯಕ್ರಮ







ಯಕ್ಷಗಾನ ನಿಜವಾಗಿಯೂ ವಿಶ್ವಗಾನವಾಗಿ ಬೆಳೆದಿದೆ: ರಘುನಾಥ್ ಶೆಟ್ಟಿ


​ಮುಂಬಯಿ (ಎ. 28): “ಯಕ್ಷಗಾನ ಕಲೆ ಪಾರ್ತಿಸುಬ್ಬನ ಕಾಲದಿಂದ ಮೊದಲ್ಗೊಂಡು ಶೇಣಿ, ಸಾಮಗ, ಪೊಲ್ಯ, ನಾವಡ, ಸಿದ್ಧಕಟ್ಟೆಯಂತಹ ದಿಗ್ಗಜ ಕಲಾವಿದರಿಂದ ಶ್ರೀಮಂತಗೊಂಡಿರುವ ಅದ್ಭುತ ಕಲೆಯಾಗಿದೆ. ಇಂದು ಯುವ ಪೀಳಿಗೆ ಈ ಕಲೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಷಯ. ಪ್ರಸ್ತುತ ಸ್ಪರ್ಧಾತ್ಮಕ ಕಾಲದಲ್ಲೂ ಭಾಗವತ ಸತೀಶ್ ಪಟ್ಟರಂತಹ ಉದಾರ ಮನಸ್ಸಿನ ಕಲಾವಿದರು ಜೀವನದ ಭದ್ರತೆಯೊಂದಿಗೆ ಈ ಕಲೆಯನ್ನು ಆರಾಧಿಸುತ್ತಿದ್ದಾರೆ. ಇಂದು ಯಕ್ಷಗಾನ ನಿಜವಾಗಿಯೂ ‘ವಿಶ್ವಗಾನ’ವಾಗಿ ಬೆಳೆದು ನಿಂತಿದೆ,” ಎಂದು ಅಪ್ಪಾಜಿ ಬೀಡು ವರ್ಲಿ ಇದರ ಟ್ರಸ್ಟಿ ಹಾಗೂ ಸಂಘಟಕ ರಘುನಾಥ್ ಎನ್. ಶೆಟ್ಟಿ ಚಾರ್ಕೋಪ್ ಅಭಿಪ್ರಾಯಪಟ್ಟರು.
​ವಿದ್ಯಾ ವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ರಾಮಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದೊಂದಿಗೆ ನಡೆದ ‘ಶ್ರೀ ರಾಮ ಕಥಾ ಹೃದಯಂ’ ಸರಣಿ ತಾಳಮದ್ದಳೆಯ ಆರನೇ ಪ್ರಸ್ತುತಿ ಮತ್ತು ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಾಗ ಮಾತ್ರ ಕಲೆಗೆ ಅರ್ಥಪೂರ್ಣ ಭವಿಷ್ಯ ದೊರೆಯುತ್ತದೆ ಎಂದು ಅವರು ತಿಳಿಸಿದರು.


​ದೇವಸ್ಥಾನದ ಪ್ರಧಾನ ಅರ್ಚಕ ಶ್ರೀವತ್ಸ ಹರಿದಾಸ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಭಾಗವತ ರಾಘವೇಂದ್ರ ಭಟ್ ಮಾಳ ದಂಪತಿಯನ್ನು ಸಮ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಜ್ಯೋತಿಷಿ ರಾಧಾಕೃಷ್ಣ ಭಟ್ ಮೀರಾರೋಡ್, ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಅತ್ಯಗತ್ಯ ಎಂದು ಶ್ಲಾಘಿಸಿದರು.


​ಹಿರಿಯ ಮದ್ದಳೆ ವಾದಕ ಅನಂತ ಪದ್ಮನಾಭ ಪಾಠಕ್ ಮಾತನಾಡಿ, “ಕಲೆಗೆ ಭಾಷೆಯ ಹಂಗಿಲ್ಲ. ಕನ್ನಡ ಓದಲು-ಬರೆಯಲು ಬಾರದಿದ್ದರೂ ರಾಘವೇಂದ್ರ ಭಟ್ ಮಾಳ ಅವರು ಯಕ್ಷಗಾನದ ಪದ್ಯಗಳನ್ನು ಹಿಂದಿ ಭಾಷೆಯಲ್ಲಿ ಬರೆದುಕೊಂಡು ರಂಗದ ಮೇಲೆ ಅಚ್ಚುಕಟ್ಟಾಗಿ ಹಾಡುತ್ತಾರೆ. ಇಂದು ಕನ್ನಡ ಬಾರದ ಮಕ್ಕಳು ಕೂಡ ಯಕ್ಷಗಾನ ಕಲಿಯುತ್ತಿರುವುದು ಸಂತಸದ ಸಂಗತಿ,” ಎಂದರು.


​ಸಮ್ಮಾನ ಸ್ವೀಕರಿಸಿದ ರಾಘವೇಂದ್ರ ಭಟ್ ಮಾಳ ಅವರು ಮಾತನಾಡಿ, ತಮ್ಮ ಗುರುಗಳಾದ ಎ.ಪಿ. ಪಾಠಕ್ ಹಾಗೂ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿಯವರ ಹಸ್ತದಿಂದ ಗೌರವ ಸ್ವೀಕರಿಸುತ್ತಿರುವುದು ತಮ್ಮ ಪುಣ್ಯ ಎಂದು ಭಾವುಕರಾದರು.

​ಅಧ್ಯಕ್ಷತೆ ವಹಿಸಿದ್ದ ಶ್ರೀವತ್ಸ ಹರಿದಾಸ್ ಭಟ್ ಅವರು ಮಾತನಾಡಿ, “ರಾಮಾಯಣ, ಮಹಾಭಾರತದಂತಹ ಮಹಾನ್ ಕಾವ್ಯಗಳು ನಮಗೆ ಉತ್ತಮ ಸಂಸ್ಕಾರ ನೀಡುತ್ತವೆ. ಇತರರಿಗೆ ಉಪಕಾರ ಮಾಡಬೇಕೆ ಹೊರತು ಉಪದ್ರವ ಮಾಡಬಾರದು ಎಂಬ ಸಂದೇಶವನ್ನು ತಾಳಮದ್ದಳೆ ನೀಡುತ್ತದೆ. ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ನಾವು ಸಾಮರಸ್ಯದ ಜೀವನವನ್ನು ನಡೆಸಬೇಕು,” ಎಂದು ಹಿತವಚನ ನೀಡಿದರು.



​ಕಾರ್ಯಕ್ರಮದ ಅಂಗವಾಗಿ ಕಲಾವಿದರಿಂದ ‘ಶೂರ್ಪನಖಾ ನಾಸಿಕಚ್ಛೇದನ’ ಹಾಗೂ ‘ಖರ ದೂಷಣ ವಧೆ’ ತಾಳಮದ್ದಳೆ ನಡೆಯಿತು.
​ಭಾಗವತರು: ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಜಯಲಕ್ಷ್ಮೀ ದೇವಾಡಿಗ, ರಾಘವೇಂದ್ರ ಭಟ್.
​ಚೆಂಡೆ-ಮದ್ದಳೆ: ಅನಂತ ಪದ್ಮನಾಭ ಪಾಠಕ್, ಆನಂದ ಶೆಟ್ಟಿ ಇನ್ನಾ.
​ಅರ್ಥಧಾರಿಗಳು: ವಾಸುದೇವ ಮಾರ್ನಾಡ್, ಸುರೇಶ್ ನಂದೊಳ್ಳಿ, ನಾರಾಯಣ ಶೆಟ್ಟಿ ಕುಂಬ್ಳೆ, ರಾಘವೇಂದ್ರ ಬಗ್ವಾಡಿ, ಪ್ರವೀಣ್ ಶೆಟ್ಟಿ ಕಟೀಲು, ಹರೀಶ್ ನಾರಾಯಣ ಸಾಲಿಯಾನ್, ಹರೀಶ್ ಶೆಟ್ಟಿಗಾರ್, ಅಮೃತಾ ಶೆಟ್ಟಿ, ದೇವಿಕಾ ಶೆಟ್ಟಿ ಮತ್ತು ಲಕ್ಷ್ಮೀ ಹೆರೂರ್.


​ವಾಸುದೇವ ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಸುರೇಶ್ ನಂದೊಳ್ಳಿ ಮತ್ತು ಅಮೃತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಪ್ರಾರಂಭದಲ್ಲಿ ಶ್ರೀ ಮಹಮ್ಮಾಯಿ ಭಜನ ಮಂಡಳಿ ವಿಕ್ರೋಲಿ ಇವರಿಂದ ರಾಮ ಸಂಕೀರ್ತನೆ ಜರುಗಿತು. ಕಾರ್ಯಕ್ರಮದಲ್ಲಿ ಮಂದಿರದ ಆಡಳಿತ ಮೊಕ್ತೇಸರ ಹರಿದಾಸ ಗೋಪಾಲ ಶೆಟ್ಟಿ ಉಪಸ್ಥಿತರಿದ್ದರು.



Related posts

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ   ದೇವಿಕಾ ಸುರೇಶ್ ಪೂಜಾರಿ ಗೆ ಶೇ 92% ಅಂಕ.

Mumbai News Desk

ವಸಾಯಿ ಕರ್ನಾಟಕ ಸಂಘ : ಮಹಿಳಾ ವಿಭಾಗದ ವತಿಯಿಂದ ಆಷಾಢದ ನೆನಪುಗಳು ,

Mumbai News Desk

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯು ಫೋರ್ಟ್‌ನ ಮನೋಹರ್ ದಾಸ್ ಸ್ಟ್ರೀಟ್‌ನಲ್ಲಿರುವ ಬಿ.ಎಂ.ಸಿ ಶಾಲೆಗೆ ಸ್ಥಳಾಂತರ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ಮೋಕ್ಷ ರವಿ ಶೆಟ್ಟಿಗೆ ಶೇ 91.80 ಅಂಕ

Mumbai News Desk

ಬಂಟರ ಸಂಘ ಮುಂಬೈ ಅಂಧೇರಿ- ಬಾಂದ್ರಾ ಪ್ರಾದೇಶಿಕ ಸಮಿತಿ ಆಟಿಡೊಂಜಿ ಪೊರ್ಲು- ತಿರ್ಲ್, ಸಂಜೀವನಿ ಉದ್ಘಾಟನೆ.

Mumbai News Desk

ಶ್ರೀಮದ್ಭಾರತ ಮಂಡಳಿಯ ವಾರ್ಷಿಕ ಮಂಗಳೋತ್ಸವ : ಜಗನಾಥ ಆರ್ ಕಾಂಚನ್ ಗೆ ಅತ್ಯುತ್ತಮ ಕಾರ್ಯಕರ್ತ ಪುರಸ್ಕಾರ.

Mumbai News Desk