September 14, 2026
Mumbai News Kannada
ಮುಂಬಯಿ

ಸಾಫಲ್ಯ ಸೇವಾ ಸಂಘದ ಮಹಿಳಾ ವಿಭಾಗದಿಂದ ‘ಆಟಿಡ್ ಒಂಜಿ ದಿನ’ ಹಾಗೂ ಉಚಿತ ಸರಕಾರಿ ಯೋಜನೆಗಳ ನೋಂದಣಿ ಕಾರ್ಯಕ್ರಮ






​ಮುಂಬೈ: ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಾಫಲ್ಯ ಸೇವಾ ಸಂಘವು ಈ ಮಹಾನಗರದಲ್ಲಿ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಅನಾಥಾಶ್ರಮ, ಪ್ರಾಣಿ ಸಂಕುಲ, ಶಿಕ್ಷಣ ಹಾಗೂ ಮಹಿಳಾ ಸಬಲೀಕರಣ ಇತ್ಯಾದಿ ಕ್ಷೇತ್ರಗಳಿಗೆ ಸಂಘದ ಕೊಡುಗೆ ಅನನ್ಯ. ಸಾಫಲ್ಯ, ಗಾಣಿಗ, ಶೇರಿಗಾರ—ಇವರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, ದೇಶದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಗಾಣಿಗ ಸಮುದಾಯಕ್ಕೆ ಸೇರಿದವರು ಎನ್ನುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದು ಸಂಘದ ಅಧ್ಯಕ್ಷ ಶ್ರೀ ಶ್ರೀನಿವಾಸ ಸಪಲ್ಯ ಹೇಳಿದರು.
​ಸಂಘದ ಮಹಿಳಾ ವಿಭಾಗದ ಸಾರಥ್ಯದಲ್ಲಿ ದಿನಾಂಕ 26-07-2026ರಂದು ಸಂಜೆ ಕುರ್ಲಾ (ಪೂರ್ವ)ದ ಬಂಟರ ಸಂಘದ ಅನೆಕ್ಸ್ ಹಾಲ್‌ನಲ್ಲಿ ಜರಗಿದ ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. “ಇಂದು ಏರ್ಪಡಿಸಲಾದ ಅಡುಗೆ ಸ್ಪರ್ಧೆಯಲ್ಲಿ 26 ಮಹಿಳೆಯರು ಭಾಗವಹಿಸಿದ್ದಾರೆ. ಅವರು ಸಿದ್ಧಪಡಿಸಿ ತಂದ ತುಳುನಾಡಿನ ಆಹಾರ ಪದಾರ್ಥಗಳಲ್ಲಿ ಅವರ ಶ್ರಮ, ಪ್ರೀತಿ ಹಾಗೂ ವಾತ್ಸಲ್ಯ ಅಡಕವಾಗಿದೆ. ನಮ್ಮ ಸಂಘವು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು, ಹೊಸ ಮುಖಗಳು ಸಂಘದ ಕಾರ್ಯಕಲಾಪಗಳಲ್ಲಿ ತೊಡಗಿಸಿಕೊಳ್ಳಬೇಕು. ಯುವ ವಿಭಾಗ ಹಾಗೂ ಮಹಿಳಾ ವಿಭಾಗಗಳು ಕಾರ್ಯಕಾರಿ ಸಮಿತಿಯೊಂದಿಗೆ ಕೈಜೋಡಿಸಿ ಸಂಘದ ಸೇವೆಗೆ ಮುಂದೆ ಬರಬೇಕು” ಎಂದು ಅವರು ಕರೆ ನೀಡಿದರು.


​ಗೌರವ ಅತಿಥಿಯಾಗಿ ಆಗಮಿಸಿದ್ದ ಶ್ರೀಮತಿ ಅಮೃತಾ ಶೆಟ್ಟಿ ಅವರು ಮಾತನಾಡಿ, ತುಳುವರ ಆಟಿ ತಿಂಗಳ ವಿಶೇಷತೆಗಳನ್ನು ವಿವರಿಸಿದರು. ಹಾಲೆ ಮರದ ತೊಗಟೆಯ (ಪಾಲೆದ ಕೆತ್ತೆ) ಕಷಾಯವನ್ನು ಆಟಿ ಅಮಾವಾಸ್ಯೆಯಂದೇ ಯಾಕೆ ಕುಡಿಯಬೇಕು ಹಾಗೂ ‘ಆಟಿ ಕಳೆವುದರ’ ಹಿಂದಿರುವ ಉದ್ದೇಶ ಮತ್ತು ಮಹತ್ವವನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು. “ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಅಶಿಕ್ಷಿತರಾಗಿದ್ದರೂ ಹಾಲೆ ಮರದ ತೊಗಟೆಯ ಕಷಾಯ ಕುಡಿದು ದೇಹಶುದ್ಧಿ ಮಾಡಿಕೊಳ್ಳುತ್ತಿದ್ದರು. ಆದರೆ ಇಂದು ನಾವು ವ್ಯಾಯಾಮ ಕೇಂದ್ರಗಳಿಗೆ ತೆರಳಿ ‘ಡಿಟಾಕ್ಸ್’ ಹೆಸರಿನಲ್ಲಿ ದೇಹಶುದ್ಧಿ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಮಕ್ಕಳಿಗೆ ಆಚರಣೆಗಳ ಮಹತ್ವ ಮತ್ತು ಅದರ ಹಿಂದಿನ ಕಾರಣಗಳನ್ನು ತಿಳಿಸಿಕೊಡುವುದು ನಮ್ಮ ಆದ್ಯ ಕರ್ತವ್ಯ” ಎಂದು ನುಡಿದರು.


​ಇನ್ನೋರ್ವ ಗೌರವ ಅತಿಥಿ ಶ್ರೀಮತಿ ಗೀತಾ ಶ್ರೀಯಾನ್ ಅವರು ಸಂಘದ ಬೆಳವಣಿಗೆಯ ಬಗ್ಗೆ ಸಂತಸ ವ್ಯಕ್ತಪಡಿಸಿ ಶುಭ ಹಾರೈಸಿದರು. ಗೌರವ ಅತಿಥಿ, ನ್ಯಾಯವಾದಿ ಶ್ರೀಮತಿ ವಸಂತಿ ಕುಂದರ್ ಅವರು ಸಂಘದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಪದ್ಮಶಾಲಿ ಸಂಘದ ಮಾಜಿ ಅಧ್ಯಕ್ಷೆ ಶ್ರೀಮತಿ ಸರೋಜಿನಿ ಶೆಟ್ಟಿಗಾರ್ ಅವರು ಭಗವದ್ಗೀತೆಯ ಮಹತ್ವದ ಕುರಿತು ವಿವರವಾಗಿ ತಿಳಿಸಿದರು.
​ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಮೆಂಡನ್ ಅವರು ಮಾತನಾಡಿ, “ಸಮಾಜ ಬಾಂಧವರಿಗೆ ಅನುಕೂಲವಾಗುವಂತಹ ವಿವಿಧ ಸರಕಾರಿ ಯೋಜನೆಗಳ ಕಾರ್ಡ್‌ಗಳನ್ನು ಉಚಿತವಾಗಿ ಮಾಡಿಸಿಕೊಡುವ ಮೂಲಕ ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂದಿದೆ. ಇದಕ್ಕೆ ಕಾರಣೀಭೂತರಾದ ವಿಭಾಗದ ಎಲ್ಲಾ ಸದಸ್ಯೆಯರು ಅಭಿನಂದನಾರ್ಹರು” ಎಂದರಲ್ಲದೆ, ಸಂಘದ ಅಧ್ಯಕ್ಷರ ಪ್ರೋತ್ಸಾಹವನ್ನು ಸ್ಮರಿಸಿದರು.


​ಅತಿಥಿ ಅಭ್ಯಾಗತರು ಹಾಗೂ ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಶ್ರೀಮತಿ ರತಿಕಾ ಸಾಪಲ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ‘ಸಾಫಲ್ಯ’ ಪತ್ರಿಕೆಯ ಸಂಪಾದಕಿ ಡಾ. ಜಿ. ಪಿ. ಕುಸುಮಾ ಅವರು ಆಟಿ ಮಾಸದ ವಿಶೇಷತೆಗಳ ಕುರಿತು ಮಾತನಾಡುತ್ತಾ, ಅಂದಿನ ಅನಿವಾರ್ಯತೆ ಇಂದು ಸಂಭ್ರಮವಾಗಿ ಹೇಗೆ ಮಾರ್ಪಟ್ಟಿದೆ ಎಂಬುದನ್ನು ವಿವರಿಸಿದರು.


​ವಿಶೇಷ ಆಕರ್ಷಣೆ ಮತ್ತು ಉಚಿತ ನೋಂದಣಿ ಶಿಬಿರ:
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ‘ಆಟಿ ಕಳಂಜೆ’ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಂಡವು. ಸಮಾಜದ ಪ್ರತಿಯೊಂದು ಕುಟುಂಬದ ಆರೋಗ್ಯ ಭದ್ರತೆಗಾಗಿ ಸರಕಾರಿ ಯೋಜನೆಗಳಾದ ಆಯುಷ್ಮಾನ್ ಭಾರತ್, ವಯ ವಂದನಾ, ABHA ಹಾಗೂ ಇ-ಶ್ರಮ್ ಕಾರ್ಡ್‌ಗಳ ಉಚಿತ ನೋಂದಣಿ ಶಿಬಿರವನ್ನು ಆಯೋಜಿಸಲಾಗಿದ್ದು, 60ಕ್ಕೂ ಹೆಚ್ಚು ಸಮಾಜ ಬಾಂಧವರು ಇದರ ಲಾಭ ಪಡೆದರು.
​ಶ್ರೀ ಕಿರಣ್ ಪಾಟೀಲ್ ಮತ್ತು ತಂಡದವರು ವಿವಿಧ ಅಂಚೆ ಕಚೇರಿ ಉಳಿತಾಯ ಹಾಗೂ ಹೂಡಿಕೆ ಯೋಜನೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ, ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು. ಬ್ಯಾಂಕ್ ಆಫ್ ಬರೋಡಾದ ಉಳಿತಾಯ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಲಾಯಿತು. ಖ್ಯಾತ ಚರ್ಮರೋಗ ತಜ್ಞೆ ಡಾ. ಪಾರುಲ್ ಜೈಸ್ವಾಲ್ ಅವರು ಮಹಿಳೆಯರ ಆರೋಗ್ಯ ಸಬಲೀಕರಣ ಹಾಗೂ ಚರ್ಮದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿ, ಸೂಕ್ತ ಸಲಹೆಗಳನ್ನು ನೀಡಿದರು.


​ಅಡುಗೆ ಸ್ಪರ್ಧೆಯ ಫಲಿತಾಂಶ:
ಆಷಾಢ ಮಾಸದ ವಿಶೇಷ ಖಾದ್ಯಗಳ ಸ್ಪರ್ಧೆಯಲ್ಲಿ 26 ಸ್ಪರ್ಧಿಗಳು ಭಾಗವಹಿಸಿದ್ದರು. ಶ್ರೀ ವಿಶ್ವನಾಥ್ ಶೆಟ್ಟಿ ಪೇತ್ರಿ ಮತ್ತು ಶ್ರೀ ಮನೋಜ್ ಬಂಗೇರ ತೀರ್ಪುಗಾರರಾಗಿ ಸಹಕರಿಸಿದರು.
​ಪ್ರಥಮ: ದಿವ್ಯ ಸಪಲಿಗ
​ದ್ವಿತೀಯ: ಸಂಧ್ಯಾ ಬಂಗೇರ
​ತೃತೀಯ: ಮೀನಾಕ್ಷಿ ಕೆ. ಸಪಲ್ಯ
​ಪ್ರೋತ್ಸಾಹಕ ಬಹುಮಾನ: ಶಾಂತಿ ಶೇರಿಗಾರ ಮತ್ತು ಅನಿತಾ ಆರ್. ಪುತ್ರನ್
​ಶ್ರೀ ಕಿರಣ್ ಕುಮಾರ್ ಅವರು ಸ್ಪರ್ಧೆಯ ಫಲಿತಾಂಶ ಘೋಷಿಸಿದರು. ಕಲಾ ಬಂಗೇರ ಅವರು ಸ್ಪರ್ಧಿಗಳಿಗೆ ಉಡುಗೊರೆ ನೀಡುವ ಕಾರ್ಯಕ್ರಮ ನಿರ್ವಹಿಸಿದರು.
​ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಿಳಾ ವಿಭಾಗದ ಸದಸ್ಯರು ಮತ್ತು ಶ್ರೀಮತಿ ಪದ್ಮಿನಿ ಬಂಗೇರ ಪ್ರಾರ್ಥನೆ ಸಲ್ಲಿಸಿದರು. ಶ್ರೀಮತಿಯರಾದ ಪ್ರಮೀಳಾ ಶೇರಿಗಾರ್, ಕಲಾವತಿ ಪುತ್ರನ್, ಸುಲೋಚನಾ ಸಪಲಿಗ, ಕುಸುಮಾ ಪ್ರಮೋದ್ ಬಂಗೇರ ಹಾಗೂ ವಾಣಿ ರಘುನಾಥ್ ಅವರು ಅತಿಥಿಗಳನ್ನು ಪರಿಚಯಿಸಿದರೆ, ಪ್ರತಿಭಾ ಸಪಳಿಗ ಅವರು ತೀರ್ಪುಗಾರರನ್ನು ಪರಿಚಯಿಸಿದರು.


​ಗೌರವ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಸಪಳಿಗ ಅವರು ಹಿರಿಯ ಸದಸ್ಯರನ್ನು ಹಾಗೂ ದಾನಿಗಳನ್ನು ಪುಷ್ಪಗುಚ್ಛ ನೀಡಿ ಗೌರವಿಸಿದರು. ವಾಣಿ ರಘುನಾಥ್ ಮತ್ತು ಉಷಾ ಸಪಳಿಗ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ವಿಮಲಾ ಬಂಗೇರ ಧನ್ಯವಾದ ಸಮರ್ಪಿಸಿದರು.
​ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಸಪಲ್ಯ, ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ಲಕ್ಷ್ಮಿ ಮೆಂಡನ್, ಉಪಾಧ್ಯಕ್ಷೆ ವಿಮಲಾ ಬಂಗೇರ ಹಾಗೂ ಗಣ್ಯ ಅತಿಥಿಗಳು ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಸದಸ್ಯೆಯರು, ಆಡಳಿತ ಸಮಿತಿ ಪದಾಧಿಕಾರಿಗಳು ಹಾಗೂ ಯುವ ವಿಭಾಗದ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.



Related posts

ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ ಮಹಾಶಿವರಾತ್ರಿ ಉತ್ಸವ

Mumbai News Desk

ಕನ್ನಡ ಸಂಘ ಸಾಂತಾಕ್ರೂಜ್ ನ ಶೈಕ್ಷಣಿಕ ಆರ್ಥಿಕ ನೆರವು ವಿತರಣಾ, ದತ್ತು ಸ್ವೀಕರ,

Mumbai News Desk

ಕರ್ನಾಟಕ ಸಂಘ ಪನ್ವೆಲ್ ಗಣೇಶೋತ್ಸವ, ಸತ್ಯನಾರಾಯಣ ಮಹಾಪೂಜೆ,ಮಾತಾ ಕಿ ಚೌಕಿ, ಭಕ್ತಿ ಸಂಭ್ರಮದೊಂದಿಗೆ ಆಚರಣೆ .

Mumbai News Desk

ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್: ನವರಾತ್ರಿ ಉತ್ಸವದಲ್ಲಿ ಶಾರದಾ ಪೂಜೆಯ ವಿಜೃಂಭಣೆ

Mumbai News Desk

ಬಂಟರ ಸಂಘ ಮುಂಬಯಿ ; ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯಿಂದ ಆಟಿಡೊಂಜಿ – ಬಂಟ ಕೂಟ ಮತ್ತು ಡಾ| ಆರ್ ಕೆ ಶೆಟ್ಟಿ ಪ್ರಾಯೋಜಿತ “ಸಂಜೀವಿನಿ” ಲೋಕಾರ್ಪಣೆ.

Mumbai News Desk

ಬಂಟರ ಸಂಘ ಮುಂಬಯಿ, ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಪದಗ್ರಹಣ

Mumbai News Desk