ಮುಂಬೈನ ಅತ್ಯಂತ ಜನನಿಬಿಡ ಪ್ರದೇಶವಾದ ದಾದರ್‌ನ ಪ್ಲಾಜಾ ಸಿನಿಮಾ ಟಾಕೀಸ್ ಬಳಿ ಜೂನ್ 8ರ ಸೋಮವಾರ ಬೆಳಗ್ಗೆ ಭೀಕರ ಬಸ್ ಅಪಘಾತ ಸಂಭವಿಸಿದೆ. ಧಾರಾವಿಯಿಂದ ದಾದರ್ ಕಡೆಗೆ ಬರುತ್ತಿದ್ದ ಬೆಸ್ಟ್ (BEST) ಸಂಸ್ಥೆಯ 463 ಸಂಖ್ಯೆಯ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ಆರಂಭದಲ್ಲಿ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಯಲ್ಲಿದ್ದ ಟ್ರೇಲರ್‌ಗೆ ಡಿಕ್ಕಿ ಹೊಡೆದಿದ್ದು, ನಂತರ ಸರಣಿ ಅಪಘಾತಕ್ಕೆ ಕಾರಣವಾಗಿದೆ. ನಿಯಂತ್ರಣವಿಲ್ಲದೆ ನುಗ್ಗಿದ ಬಸ್ ರಸ್ತೆಯಲ್ಲಿದ್ದ ಮೂರರಿಂದ ನಾಲ್ಕು ಕಾರುಗಳು ಹಾಗೂ ದ್ವಿಚಕ್ರ ವಾಹನಗಳಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಈ ಭೀಕರ ಘಟನೆಯಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ತೀವ್ರತೆಗೆ ದ್ವಿಚಕ್ರ ವಾಹನವೊಂದು ಬಸ್ಸಿನ ಅಡಿಯಲ್ಲಿ ಸಿಲುಕಿಕೊಂಡಿದ್ದು, ಹಲವು ಕಾರುಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಅಪಘಾತದ ಸಮಯದಲ್ಲಿ ಬಸ್‌ನಲ್ಲಿದ್ದ ನಾಲ್ಕು ಪ್ರಯಾಣಿಕರು ಸೇರಿದಂತೆ ಹಲವರು ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಗಾಯಗೊಂಡಿರುವ ಎಲ್ಲರನ್ನೂ ತಕ್ಷಣವೇ ಚಿಕಿತ್ಸೆಗಾಗಿ ಸಿಯಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸಿದ ದಾದರ್ ಪ್ಲಾಜಾ ಪ್ರದೇಶವು ಸದಾ ವ್ಯಾಪಾರಿಗಳು, ತರಕಾರಿ ಮಾರಾಟಗಾರರು ಮತ್ತು ಕಾರ್ಮಿಕರಿಂದ ಕೂಡಿರುವ ಜನದಟ್ಟಣೆಯ ಜಾಗವಾದ್ದರಿಂದ ಸ್ಥಳದಲ್ಲಿ ಭಾರೀ ಆತಂಕ ಮೂಡಿದೆ.
ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ಮೃತರ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮುಂಜಾನೆಯಿಂದಲೇ ವಾಹನ ಸಂಚಾರ ಹೆಚ್ಚಾಗಿರುವ ಈ ಪ್ರಮುಖ ರಸ್ತೆಯಲ್ಲಿ ಅಪಘಾತ ಸಂಭವಿಸಿರುವುದರಿಂದ ದಾದರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರಿ ಪ್ರಮಾಣದ ಸಂಚಾರ ದಟ್ಟಣೆ (ಟ್ರಾಫಿಕ್ ಜಾಮ್) ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಸದ್ಯ ಸಂಚಾರವನ್ನು ಸುಗಮಗೊಳಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.




