32 C
Mumbai
October 4, 2026
Mumbai News Kannada
ಮುಂಬಯಿ

ಸಾಯಿನಾಥ್ ಮಿತ್ರ ಮಂಡಳಿಯ ೨೦ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ, ಸನ್ಮಾನ ಹಾಗೂ ಧಾರ್ಮಿಕ ಸಭೆ



ಸಂಸ್ಕೃತಿ, ಹಿರಿಯರ ಗೌರವವೇ ಸುಸಂಸ್ಕೃತ ಸಮಾಜದ ಬುನಾದಿ: ಸೂರ್ಯಕಾಂತ್ ಜೆ. ಸುವರ್ಣ

ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್

ಡೋಂಬಿವಲಿ: “ಮಕ್ಕಳಿಗೆ ವಿದ್ಯೆ ನೀಡುವುದರ ಜತೆಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಕಲಿಸುವುದು ಇಂದಿನ ತುರ್ತು ಅಗತ್ಯ. ಹಿರಿಯರಿಗೆ ಗೌರವ ನೀಡುವ ಸದ್ಗುಣ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಸುಸಂಸ್ಕೃತರಾಗಿ ಬಾಳಲು ಸಾಧ್ಯ,” “ವಿದ್ಯೆಗೆ ಬುದ್ಧಿವಂತಿಕೆ ಮತ್ತು ಸಂಸ್ಕಾರದ ಅಡಿಪಾಯವಿಲ್ಲದಿದ್ದರೆ ಆ ವಿದ್ಯೆ ನಿಷ್ಪ್ರಯೋಜಕ. ಸಾಯಿನಾಥ್ ಮಿತ್ರ ಮಂಡಳಿಯು ಕಳೆದ ೨೦ ವರ್ಷಗಳಿಂದ ಕೇವಲ ಧಾರ್ಮಿಕ ಚಟುವಟಿಕೆಗೆ ಸೀಮಿತವಾಗದೆ, ಸಮಾಜದ ಹಿಂದುಳಿದ ವರ್ಗಗಳಿಗೆ, ಹೋಟೆಲ್ ಕಾರ್ಮಿಕರಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿ ನಿಂತಿರುವುದು ಹೆಮ್ಮೆಯ ಸಂಗತಿ” ಎಂದು ಭಾರತ್ ಬ್ಯಾಂಕ್ ನಿರ್ದೇಶಕ ಸೂರ್ಯಕಾಂತ್ ಜೆ. ಸುವರ್ಣ ಅಭಿಪ್ರಾಯಪಟ್ಟರು.

ಡೊಂಬಿವಲಿ ಇಲ್ಲಿನ ಪಶ್ಚಿಮ ರೈಲು ನಿಲ್ದಾಣದ ಸಮೀಪವಿರುವ ರೇತಿಭವನದ ಮೂರನೇ ಮಹಡಿಯ ಭಾರತ ಸಭಾಗೃಹದಲ್ಲಿ ‘ಶ್ರೀ ಸಾಯಿನಾಥ್ ಮಿತ್ರ ಮಂಡಳಿ’ಯ ವತಿಯಿಂದ ಆಯೋಜಿಸಲಾಗಿದ್ದ 20ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜಾ ಧಾರ್ಮಿಕ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ನಿಷ್ಕಲ್ಮಶ ಭಕ್ತಿಯ ಆಚರಣೆಗಳು ದೇವರಿಗೆ ಪ್ರಿಯವಾಗಲಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸಬೇಕು ಎಂದರು.

ಸಮಾಜ ಸೇವೆಯೇ ನಮ್ಮ ಮಂಡಳಿಯ ಉಸಿರು’: ಮೋಹನ್ ಸಾಲ್ಯಾನ್

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಡಳಿಯ ಅಧ್ಯಕ್ಷ ಮೋಹನ್ ಸಾಲ್ಯಾನ್, “ತಂದೆ-ತಾಯಿಗಳು ಕಲಿಸಿಕೊಟ್ಟ ಸಂಸ್ಕಾರ ಮತ್ತು ಹಿರಿಯರ ಮಾರ್ಗದರ್ಶನವೇ ನಮ್ಮ ಈ ಸಮಾಜಸೇವೆಯ ಬದುಕಿಗೆ ಪ್ರೇರಣೆ. ಕಳೆದ ೨೦ ವರ್ಷಗಳ ಹಿಂದೆ ಗಣೇಶ್ ಮೊಗವೀರ ಸೇರಿದಂತೆ ಹಲವು ಯುವಕರ ಪರಿಶ್ರಮದಿಂದ ಸ್ಥಾಪನೆಯಾದ ಈ ಮಂಡಳಿಯು ಇಂದು ಹೆಮ್ಮರವಾಗಿ ಬೆಳೆದಿದೆ. ಸಮಾಜದಲ್ಲಿ ನಿಸ್ವಾರ್ಥವಾಗಿ, ಸತ್ಯವಂತರಾಗಿ ಬಾಳಬೇಕು ಹಾಗೂ ಕಷ್ಟದಲ್ಲಿರುವವರಿಗೆ ಕೈಲಾದ ನೆರವು ನೀಡಬೇಕು ಎಂಬುದು ನಮ್ಮ ಸಂಸ್ಥೆಯ ಮುಖ್ಯ ಧ್ಯೇಯ. ಸದಸ್ಯರೆಲ್ಲರ ಒಗ್ಗಟ್ಟು ಮತ್ತು ಸಾರ್ವಜನಿಕರ ಅಪಾರ ಸಹಕಾರವೇ ಮಂಡಳಿಯ ಎಲ್ಲಾ ಯಶಸ್ಸುಗಳಿಗೆ ಕಾರಣ. ಮುಂದಿನ ದಿನಗಳಲ್ಲೂ ಇಂತಹ ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಗಳು ಇನ್ನಷ್ಟು ವಿಸ್ತಾರವಾಗಿ ಮುಂದುವರಿಯಲಿವೆ” ಎಂದು ತಿಳಿಸಿದರು.

ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಆನಂದ್ ಶೆಟ್ಟಿ ಎಕ್ಕಾರು ಮಾತನಾಡಿ, “ಸಾಯಿನಾಥ್ ಮಿತ್ರ ಮಂಡಳಿಯ ಸದಸ್ಯರು ಉದಾರ ಮನಸ್ಸಿನಿಂದ ಸಮಾಜಮುಖಿ ಸೇವೆಗಳನ್ನು ಮಾಡುತ್ತಾ ಬಂದಿದ್ದು, ಇವರ ಕಾರ್ಯಗಳು ನಿರಂತರವಾಗಿ ಬೆಳೆಯಲಿ” ಎಂದು ಹಾರೈಸಿದರು.

ನ್ಯಾಯವಾದಿ ರಾಮಣ್ಣ ಭಂಡಾರಿ ಆಶಯ ವ್ಯಕ್ತಪಡಿಸಿ, ಮಂಡಳಿಯ ಶೈಕ್ಷಣಿಕ ಹಾಗೂ ವೈದ್ಯಕೀಯ ನೆರವು ಸದಾ ಮುಂದುವರಿಯಲಿ ಎಂದು ಹಾರೈಸಿದರು. ಧೀರಜ್ ಶೆಟ್ಟಿ ಮಿಜಾರು ಮಾತನಾಡಿ ಸಂಸ್ಥೆಯ ಸಾಮಾಜಿಕ ಕಾಳಜಿಯನ್ನು ಕೊಂಡಾಡಿದರು.

ಆಶೀರ್ವಚನ & ಸನ್ಮಾನ: ಕಳೆದ ಎರಡು ದಶಕಗಳಿಂದ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿರುವ ಕಾನಂಗಿ ಪ್ರಕಾಶ್ ಭಟ್ ಆಶೀರ್ವಚನ ನೀಡಿ, ಅಧ್ಯಕ್ಷ ಮೋಹನ್ ಸಾಲ್ಯಾನ್ ನೇತೃತ್ವದ ತಂಡದ ಇಷ್ಟಾರ್ಥಗಳನ್ನು ಶ್ರೀ ಸತ್ಯನಾರಾಯಣ ದೇವರು ಈಡೇರಿಸಲಿ ಎಂದು ಶುಭಕೋರಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹರೀಶ್ ಶೆಟ್ಟಿ (ಬ್ಯಾಂಕಿಂಗ್ ಹಾಗೂ ಹೋಟೆಲ್ ಉದ್ಯಮಿ), ನಿತಿನ್ ಪ್ರಕಾಶ್ ಪುತ್ರನ್ (ಟೀಮ್ ಲೀಡರ್ ಲಾಜಿಸ್ಟಿಕ್ಸ್ ನಿರ್ದೇಶಕರು), ಲಕ್ಷ್ಮಣ್ ಪೂಜಾರಿ (ಪ್ರೀತಿ ಹೋಟೆಲ್ ಮಾಲೀಕರು), ಶ್ರೀಮತಿ ಕಸ್ತೂರಿ ಸಂಜೀವ ಶೆಟ್ಟಿ ಹಾಗೂ ಸತೀಶ್ ಕೋಟ್ಯಾನ್ (ಮಮತಾ ಡೆಂಟಲ್ ಲ್ಯಾಬ್) ಅವರಿಗೆ ಸನ್ಮಾನ ನೆರವೇರಿಸಲಾಯಿತು. ಸನ್ಮಾನ ಸ್ವೀಕರಿಸಿ ಹರೀಶ್ ಡಿ. ಶೆಟ್ಟಿ ಹಾಗೂ ನಿತಿನ್ ಪ್ರಕಾಶ್ ಪುತ್ತನ್ ಕೃತಜ್ಞತೆ ಸಲ್ಲಿಸಿದರು.

ನೆರವು ವಿತರಣೆ ಹಾಗೂ ಗಣ್ಯರ ಉಪಸ್ಥಿತಿ: ಕಾರ್ಯಕ್ರಮದಲ್ಲಿ ಸುರೇಶ್ ಅವರಿಗೆ ವೈದ್ಯಕೀಯ ಧನಸಹಾಯ ನೀಡಲಾಯಿತು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಯಶಾರ್ಥ ಶ್ರೀನಿವಾಸ ಮೊಗವೀರ, ದೀಪಿಕಾ, ಧನ್ಯ ಮೊಗವೀರ ಹಾಗೂ ಶ್ಲೋಕಾ ಮೊಗವೀರ ಅವರಿಗೆ ಶೈಕ್ಷಣಿಕ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು.

ಕೋಶಾಧಿಕಾರಿ ವಾಸು ಮೊಗವೀರ ಮಂಡಳಿಯ ಸೇವಾ ಸಾಧನೆಗಳಾದ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಕೊರೊನಾ ಕಾಲದ ಆಹಾರ-ದಿನಸಿ ಕಿಟ್ ವಿತರಣೆ, ರೋಗಿಗಳಿಗೆ ನೆರವು, ಶಿವರಾತ್ರಿಯ ಪಾನಕ ಸೇವೆ ಹಾಗೂ ಧಾರ್ಮಿಕ ಕೇಂದ್ರಗಳಿಗೆ ಹೊರೆಕಾಣಿಕೆ ಸಮರ್ಪಣೆ ಕುರಿತು ಪ್ರಾಸ್ತಾವಿಕ ವರದಿ ಮಂಡಿಸಿದರು.

ವೇದಿಕೆಯಲ್ಲಿ ಸಂಜೀವ ಪೂಜಾರಿ, ಸತೀಶ್ ಶೆಟ್ಟಿ ಅಜೆಕಾರು, ಪುರುಷೋತ್ತಮ ಆಚಾರ್ಯ, ರವೀಂದ್ರ ಶೆಟ್ಟಿ, ಅಜಿತ್ ಶೆಟ್ಟಿ ಉಪಸ್ಥಿತರಿದ್ದರು. ಚಿನ್ಮಯ್ ಸಾಲ್ಯಾನ್, ಅಶೋಕ್ ಶೆಟ್ಟಿ ಪರಿಚಯಿಸಿದರು. ಚಿನ್ಮಯ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ದೀಪ ಪ್ರಜ್ವಲನೆ ಹಾಗೂ ಸತ್ಯನಾರಾಯಣ ಮಹಾಪೂಜೆ ಕಾರ್ಯಕ್ರಮಕ್ಕೆ ಪ್ರಧಾನ ಅರ್ಚಕರಾದ ಶ್ರೀ ಪ್ರಕಾಶ್ ಭಟ್ ಕಾನಂಗಿ ಅವರ ಪೌರೋಹಿತ್ಯದಲ್ಲಿ ದೀಪ ಪ್ರಜ್ವಲನೆಯೊಂದಿಗೆ ವಿದ್ಯುಕ್ತ ಚಾಲನೆ ದೊರೆಯಿತು. ಚಂದ್ರಹಾಸ್ ರೈ ಪುತ್ತೂರು ಗಣಪತಿ ಪ್ರಾರ್ಥನೆ ಸಲ್ಲಿಸಿದರು. ಯಜಮಾನರಾದ ಸೋಮನಾಥ್, ಶ್ರೀಮತಿ ಚಂದ್ರಾವತಿ ಮತ್ತು ಪುತ್ರಿ ಕೃತಿ ಪರಿವಾರದವರ ನೇತೃತ್ವದಲ್ಲಿ ಸಂಕಲ್ಪ, ಪೀಠ ಪೂಜೆ, ಕಲಶಾರ್ಚನೆ, ಅಷ್ಟೋತ್ತರ ಶತನಾಮಾವಳಿ, ಪಂಚಾಮೃತಾಭಿಷೇಕ, ವ್ರತಕಥಾ ಶ್ರವಣ ಹಾಗೂ ಮಹಾಮಂಗಳಾರತಿ ನೆರವೇರಿತು.

ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಶಹಾಡು ಮೂಕಾಂಬಿಕಾ ದೇವಸ್ಥಾನದ ಸಲಹೆಗಾರರು ಹಾಗೂ ಬಂಟರ ಸಂಘದ ಸಂಚಾಲಕರಾದ ರವೀಂದ್ರ ವೈ. ಶೆಟ್ಟಿ, ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರಿ ಮಂಡಳಿಯ ಧರ್ಮದರ್ಶಿ ಅಶೋಕ್ ದಾಸ್ ಶೆಟ್ಟಿ, ಅಧ್ಯಕ್ಷ ಗೋಪಾಲ್ ಶೆಟ್ಟಿ, ಹೋಟೆಲ್ ಉದ್ಯಮಿ ಜಯಂತ್ ಎನ್. ದೇವಾಡಿಗ, ಶರತ್ ಪೂರ್ಣಾಕರ್ ಶೆಟ್ಟಿ, ಚಿನ್ನರ ಬಿಂಬ ಡೊಂಬಿವಲಿ ವಲಯ ಪ್ರಮುಖರಾದ ಶ್ರೀಮತಿ ಮೈನಾ ಪದ್ಮನಾಭ ಶೆಟ್ಟಿ, ನವರಾತ್ರಿ ಮಂಡಳಿಯ ಮಹಿಳಾ ವಿಭಾಗದ ಅಧ್ಯಕ್ಷೆ ಶ್ರೀಮತಿ ವಿಲಾಸಿನಿ ಶೆಟ್ಟಿ, ರತ್ನಾಕರ್ ಹೆಗ್ಡೆ, ಸುರೇಶ್ ಶೆಟ್ಟಿ ಪೂಜಾ ಸಮಿತಿ ಅಧ್ಯಕ್ಷ ರಘುರಾಮ ಶೆಟ್ಟಿ ಹಾಗೂ ಕಾರ್ಯದರ್ಶಿ ಸುರೇಶ್ ಮೊಗವೀರ ಉಪಸ್ಥಿತರಿದ್ದರು.ಉಪಸ್ಥಿತರಿದ್ದರು.



Related posts

ಗೋಕುಲದಲ್ಲಿ ಅತ್ಯಂತ ಸಂಭ್ರಮದಿಂದ ವೈಭವೀಕರಿಸಿದ  “ಪುರುಷರ ಮಹಾ ದಿನ” – ಪ್ರತಿಭಾ ಪ್ರದರ್ಶನ”

Mumbai News Desk

ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್: ಭಜನಾ ಮಂಡಳಿಯ ವರ್ಷಾಚರಣೆ

Mumbai News Desk

ಮಲಾಡ್ ಇರಾನಿ ಕಾಲೋನಿ  ಶ್ರೀ ಶನಿ ಮಂದಿರದಲ್ಲಿ ಭಕ್ತಿ ಸಂಭ್ರಮದೊಂದಿಗೆ ವೈಶಾಖ ಅಮಾವಾಸ್ಯೆ ಆಚರಣೆ, 

Mumbai News Desk

ಶಹಾಡ್: ಶ್ರೀ ಮೂಕಾಂಬಿಕಾ ದೇವಿ ಸನ್ನಿಧಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ.

Mumbai News Desk

ಗೋರೆಗಾಂವ್ ಶ್ರೀ ಶಾಂತಾ ದುರ್ಗಾದೇವಿ ದೇವಸ್ಥಾನ -ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ .

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ದೇವಸ್ಥಾನ, ಡೊಂಬಿವಲಿಯ ನೂತನ ಅಧ್ಯಕ್ಷರಾಗಿ ಸೂರಜ್ ಡಿ. ಸಪಲಿಗ ಆಯ್ಕೆ 

Mumbai News Desk