30 C
Mumbai
September 9, 2026
Mumbai News Kannada
ಸುದ್ದಿ

ಕಾಪು ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ವೈ.ಎನ್. ಶೆಟ್ಟಿ ಆಯ್ಕೆ





ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಘಟಕದ 8ನೇ ಕನ್ನಡ ಸಾಹಿತ್ಯ ಸಮ್ಮೇಳನವು ಅಕ್ಟೋಬರ್ 3ರಂದು ಕಾಪುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ. ಈ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಖ್ಯಾತ ಜಾನಪದ ಸಂಶೋಧಕ ಹಾಗೂ ಆಯುರ್ವೇದ ವೈದ್ಯರಾದ ಡಾ. ವೈ.ಎನ್. ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಹಾಗೂ ಕಾಪು ತಾಲೂಕು ಘಟಕದ ಅಧ್ಯಕ್ಷರಾದ ಬಿ. ಪುಂಡಲೀಕ ಮರಾಠೆ ಅವರು ಈ ಕುರಿತು ಪ್ರಕಟಣೆಯಲ್ಲಿ ಮಾಹಿತಿ ತಿಳಿಸಿದ್ದಾರೆ.

ತುಳುನಾಡಿನ, ವಿಶೇಷವಾಗಿ ಕಾಪು ತಾಲೂಕಿನ ಜಾನಪದ, ಪರಂಪರೆ ಮತ್ತು ಇತಿಹಾಸಕ್ಕೆ ಸಂಬಂಧಿಸಿದಂತೆ ಅಪಾರ ಅಧ್ಯಯನ ನಡೆಸಿರುವ ಡಾ. ವೈ.ಎನ್. ಶೆಟ್ಟಿ ಅವರು ದಾಖಲೆ ಸಹಿತ ಮಾಹಿತಿಯನ್ನು ಒದಗಿಸುವ ಕೆಲವೇ ಕೆಲವು ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ. ನಿರಂತರ ಅಧ್ಯಯನಶೀಲರಾಗಿರುವ ಅವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದು, ವಿವಿಧ ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಆಸ್ಪತ್ರೆಯಲ್ಲಿ ಸುಮಾರು 20 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಹಾಗೂ ವೈದ್ಯಕೀಯ ಅಧೀಕ್ಷಕರಾಗಿ ಸೇವೆ ಸಲ್ಲಿಸಿರುವ ಅವರು, ರಾಜೀವ್ ಗಾಂಧಿ ವೈದ್ಯಕೀಯ ಮಹಾವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, 17 ವರ್ಷಗಳ ಕಾಲ ಎನ್‌.ಐ.ಟಿ.ಕೆ ಆರೋಗ್ಯ ಕೇಂದ್ರದಲ್ಲಿ ಸಂದರ್ಶಕ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಡಾ. ವೈ.ಎನ್. ಶೆಟ್ಟಿ ಅವರು ಮಾತು (ಸಣ್ಣಕಥೆ), ಒಂದು ಆಧ್ಯಾತ್ಮ ಚಿಂತನೆ, ನಾಗ ಸನ್ನಿಧಿಗೆ ಸಮಾಧಿ ಕಟ್ಟುವ ಮುನ್ನ, ಹುಲಿಯಪ್ಪ ದೇವರು, ಪ್ರಕೃತಿ ಆರಾಧನೆಯ ಅಪೂರ್ವತಾಣ, ಪವಿತ್ರವನ ಸಂರಕ್ಷಣೆ, ತುಳುವರ ಜೀವನಾವರ್ತನ ಸೇರಿದಂತೆ ಹಲವು ಕೃತಿಗಳು ಹಾಗೂ ಲೇಖನಗಳನ್ನು ರಚಿಸಿದ್ದಾರೆ. ಬಂಟರ ಬದುಕು (ಅಜಕತ್ತಿ ಬಂಟ ಬದುಕು-ತುಳು), ಎನ್‌ಸಿರೇರಿಯಲ್-ತುಳುವಕನ, ತುಳುವೇರೆತುತೆ-ತುಳು ಮೊದಲಾದ ಕೃತಿಗಳಲ್ಲಿಯೂ ಅವರ ಕೊಡುಗೆಯಿದೆ. ಅಣೆಯರಡಳ ಸಿರಿಸಿಂಗಾರ ಹಾಗೂ ಸಿರಿ ನಡೆಪೇರು ಮೊದಲಾದ ಪುಸ್ತಕಗಳ ಸಂಪಾದಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.

ಪ್ರಾಣಿಜಾನಪದ, ಮಾಯ ಮತ್ತು ಜೋಗ (ಅಂಶಿಕ ಪ್ರಾಯೋಜನೆ), ದಿನಕ್ಕೊಂದು ದೈವದ ಕಥೆ (ವಾರಪೂರ್ತಿ ಕಾರ್ಯಕ್ರಮದ ಪ್ರಾಯೋಜನೆ), ನೆನಪು (ಕಾಲೇಜು ವಿದ್ಯಾರ್ಥಿಗಳಿಗೆ ಶಾಸನ ಕಲಿಕೆಯ ಉಚಿತ ತರಬೇತಿ) ಮುಂತಾದ ಜಾನಪದ ಸಂಬಂಧಿತ ಕಾರ್ಯಗಳಲ್ಲಿಯೂ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಉಡುಪಿಯಲ್ಲಿ ನಡೆದ ತುಳುವ ಸಿರಿ ಸಮ್ಮೇಳನ, ಮುಲ್ಕಿಯಲ್ಲಿ ನಡೆದ ತುಳುನಾಡು ಐಸಿರ ಸಮ್ಮೇಳನ-2016ರ ಕಾರ್ಯಾಧ್ಯಕ್ಷತೆ, 2015ರಲ್ಲಿ ದುಬೈನಲ್ಲಿ ನಡೆದ ತುಳುವ ಸಿರಿ ಸಮ್ಮೇಳನದ ಅಧ್ಯಕ್ಷತೆ, 2018ರಲ್ಲಿ ದುಬೈನಲ್ಲಿ ನಡೆದ ತುಳು ಸಮ್ಮೇಳನದ ಗೋಷ್ಠಿಯ ಅಧ್ಯಕ್ಷತೆ, ಉಜಿರೆಯಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಪ್ರಾಂತೀಯ ಸಂಚಾಲಕತ್ವ ಸೇರಿದಂತೆ ಹಲವು ಪ್ರಮುಖ ಜಾನಪದ ಕಾರ್ಯಗಳನ್ನು ಅವರು ನಿರ್ವಹಿಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರಗೊಂಡ ‘ಪಟ್ಟಾಂಗ’ ಕಾರ್ಯಕ್ರಮದ ಮೂಲಕವೂ ಅವರು ಜನಪ್ರಿಯರಾಗಿದ್ದಾರೆ.

ಡಾ. ವೈ.ಎನ್. ಶೆಟ್ಟಿ ಅವರು 2017ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸನ್ಮಾನ, ‘ಅಲೇವೂರು’ ಶೈಕ್ಷಣಿಕ ಸೇವಾ ಪ್ರಶಸ್ತಿ ಹಾಗೂ ‘ಜಾನಪದ ಸಿರಿ’ ಜಾನಪದ ಪರಿಷತ್ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿದ್ದಾರೆ.



Related posts

ತುಳುವ ಸಿರಿ ಕಲಾವಿದೆರ್ ನಂದಳಿಕೆ ನಾಟಕ ತಂಡ – “ಆಯೆ ಮನಿಪುಜೆ” ವರ್ಷದ ನೂತನ ತುಳು ನಾಟಕದ ಶೀರ್ಷಿಕೆ ಬಿಡುಗಡೆ.

Mumbai News Desk

ಸಚಿವೆ ಲಕ್ಶ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ : ವಿಧಾನ ಪರಿಷತ್ ಸದಸ್ಯ ಸಿ ಟಿ ರವಿ ಬಂಧನ

Mumbai News Desk

1,000 ಕ್ಕೂ ಹೆಚ್ಚು ವಿಮಾನ ರದ್ದತಿಗೆ ಇಂಡಿಗೋ ಕ್ಷಮೆಯಾಚಣೆ ; ಡಿಸೆಂಬರ್ 10 ರಿಂದ ಸಾಮಾನ್ಯ ಸ್ಥಿತಿಗೆ ಮರಳುವ ನಿರೀಕ್ಷೆ

Mumbai News Desk

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ದಿ. ಎಸ್ ಎಸ್ ಮನೋಹರ್ ಶೆಟ್ಟಿ ಅವರಿಗೆ ನುಡಿ ನಮನ.

Mumbai News Desk

ಡಾ. ಜಿ. ಪಿ. ಕುಸುಮ ಅವರಿಗೆ ಮಾತ್ರ ವಿಯೋಗ

Mumbai News Desk

ಯಕ್ಷಕಿರೀಟಿ ಸುಬ್ರಾಯ ಹೊಳ್ಳರಿಗೆ ದುಬಾಯಿ ಯಕ್ಷ ಶ್ರೀ ರಕ್ಷಾ ಗೌರವ ಪ್ರಶಸ್ತಿ 2025

Mumbai News Desk