July 23, 2026
Mumbai News Kannada
ಮುಂಬಯಿ

ಸಾರಸ್ವತ ವೈದಿಕ ಸೇವಾ ಪ್ರತಿಷ್ಟಾನ: ದ್ವಿತೀಯ ವಾರ್ಷಿಕ ಕಾರ್ಯಕ್ರಮ ಸಂಪನ್ನ .







ಸಚಿತ್ರ ವರದಿ : ಪಿ.ಆರ್.ರವಿಶಂಕರ್

ಮುಂಬೈ :13.ಜುಲೈ 2025

     ಸಾರಸ್ವತ ವೈದಿಕ ಪ್ರತಿಷ್ಟಾನಮ್ (ರಿ) ಹಿರ್ಗಾನ ~ ಕಾರ್ಕಳ ಇದರ ದ್ವಿತೀಯ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಹಾರಾಷ್ಟ್ರದ ಡೊಂಬಿವಿಲಿಯಲ್ಲಿ  ಜರಗಿತು. ಮಹಾರಾಷ್ಟ್ರ  , ಗೋವಾ ಹಾಗೂ ಕರ್ನಾಟಕ ರಾಜ್ಯದಲ್ಲಿನ ಸಾರಸ್ವತ ವೈದಿಕರನ್ನೊಳಗೊಂಡ ಈ ವೇದಿಕೆಯು ತನ್ನ ಎರಡನೆಯ ವಾರ್ಷಿಕ ಸಮಾವೇಶವನ್ನು ಡೊಂಬಿವಿಲಿ ಪೂರ್ವದ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲದ ಸಭಾಭವನದಲ್ಲಿ ನವಚಂಡಿಕಾ ಪಾರಾಯಣ , ಆದಿತ್ಯಾದಿ ನವಗ್ರಹ ಹೋಮ ಮತ್ತು   ರುದ್ರ ಮಹಾ   ಮೃತ್ಯುಂಜಯ ಹೋಮ ಮತ್ತು ಧನ್ವಂತರಿ  ಜಪ ಮುಂತಾದ ವಿದ್ಯುಕ್ತ ಧಾರ್ಮಿಕ ಅನುಷ್ಟಾನಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಹಿರಿಯ ಪುರೋಹಿತರಾದ ಕರ್ವಾಲು ರಘುರಾಮ್ ಭಾಗವತ್ ” ದಶಾಕಾಲ , ಸರ್ವ ಅರಿಷ್ಟ ಹಾಗೂ ಕ್ಲೇಷ ನಿವಾರಕ , ಆಯುರ್ವೇದ ಮತ್ತು ವೈದ್ಯಕೀಯ ಅಧಿ ದೇವತೆಯಾದ ನಾರಾಯಣ ಸ್ವರೂಪಿ ಧನ್ವಂತರೀ ಯ  ಮಹತ್ವ ಹಾಗೂ ಸಮುದ್ರ ಮಥನದಲ್ಲಿ ಉಗಮವಾದ ಬಗ್ಗೆ ಸಭಿಕರಿಗೆ ವಿಶ್ಲೇಷಣೆ ನೀಡಿದರು. 

ಶ್ರೀಮತಿ ಸೃಷ್ಟೀ  ಮತ್ತು ಸುರೇಶ್ ಭಟ್ ದಂಪತಿ ವಿವಿಧ ಪೂಜಾಕಾರ್ಯಗಳ  ಯಜಮಾನತ್ವ ವಹಿಸಿದ್ದು ಸೇವೆಯನ್ನು ಜರಗಿಸಿದರು. 

ಜಪ ಹಾಗೂ ಹೋಮದ ಪೂರ್ಣಾಹುತಿಯ ಬಳಿಕ ನವಚಂಡೀ ಮಹಾಪೂಜೆಯ  ಮಂಗಳ ಆರತಿಯು ಜರಗಿತು.

ಮಧುಸೂಧನ್  ಭಟ್  “ಭಗವದ್ಗೀತೆಯ 11 ನೆಯ ಅಧ್ಯಾಯದಲ್ಲಿ ನಾರಾಯಣೀ ಅವತಾರದ ಉಲ್ಲೇಖವಿದ್ದು , ಸೃಷ್ಟಿ ಸ್ಥಿತಿ ಲಯ ದ ಕಾರಣೀಭೂತೆ ಆದಿಮಾಯೆ ದುರ್ಗಾಪರಮೇಶ್ವರಿಯನ್ನು ನಾವೆಲ್ಲರೂ ಒಟ್ಟಾಗಿ ಬಂದು ಪೂಜಿಸಿದ್ದೇವೆ. ದಾನವರ ಆಕ್ರಮಣದ ಸಂದರ್ಭದಲ್ಲಿ ದೇವಿಯು ಉಗ್ರರೂಪಿಯಾಗಿ ದೈತ್ಯ ಸಂಹಾರ ಹಾಗೂ ವಿಶ್ವಶಾಂತಿಗೆ ಕಾರಣೀಭೂತವಾಗಿದ್ದಾಳೆ. ನಮ್ಮ ಅಂತರಾತ್ಮದಲ್ಲಿ ಸಾಕ್ಷಾತ್ಕಾರ ಗೊಂಡ ದೇವಿಯು  ದುಷ್ಟ ಶಕ್ತಿ ಗಳನ್ನು ನಿಗ್ರಹಿಸುತ್ತಾ ಸಮಾಜದಲ್ಲಿಯೂ ಉದ್ಭವಿಸುವ ಅಂತಃ ಕಲಹಗಳನ್ನು ನಿರ್ಮೂಲನ ಮಾಡಿ , ಶತ್ರು ನಾಶ ಮಾಡುತ್ತಾ ದೇಶದಲ್ಲಿಯೂ ಸುಖ ಶಾಂತಿ ಸಮೃದ್ಧಿ ನೆಲೆಸಲಿ. ನಮ್ಮ ವೈದಿಕ ಪ್ರತಿಷ್ಟಾನದ ಸದುದ್ದೇಶಗಳು ಸಫಲವಾಗಲಿ ” ಎಂದು ಪ್ರಾರ್ಥಿಸಿದರು. 

ಆ ಬಳಿಕ ಜರಗಿದ ಕಿರು ಸಭಾ ಕಾರ್ಯಕ್ರಮದಲ್ಲಿ ಮುಂಬೈ ಮಲಾಡ್ ನ ಹಿರಿಯ ವೈದಿಕ ವೇದಮೂರ್ತಿ ರಮೇಶ್ ಭಟ್ ಹಾಗೂ ಶ್ರೀಮತಿ  ಸರಸ್ವತೀ ಭಟ್ ಇವರನ್ನು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. 

ವೈದಿಕ ಪ್ರತಿಷ್ಟಾನದ ಪ್ರತಿಭಾವಂತ ವಿದ್ಯಾರ್ಥಿಗಳಾದ ಶರ್ವ ರಮೇಶ್ ಭಟ್ ( ಪಿಯುಸಿ 97%), ಕು• ಜನನಿ ಸಚಿನ್ ಭಟ್ ( ಎಸ್ ಎಸ್ ಎಲ್ ಸಿ 93%) ಹಾಗೂ ಉದಯೋನ್ಮುಖ ಚಿತ್ರಕಲಾವಿದ ಆಶೀರ್ವಾದ್ ನಾಗೇಶ್ ಭಟ್ ಇವರನ್ನು ಪ್ರತಿಷ್ಟಾನದ ವತಿಯಿಂದ ಗೌರವಿಸಲಾಯಿತು. ರಂಜಿತ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಷ್ಟಾನದ ಅಧ್ಯಕ್ಷ ಸುರೇಶ್ ಭಟ್ ” ವರ್ಷಂಪ್ರತಿಯಂತೆ ಲೋಕಕಲ್ಯಾಣಕ್ಕಾಗಿ ನಡೆದ ಇಂದಿನ ಕಾರ್ಯಕ್ರಮಕ್ಕೆ ನಮ್ಮ ಆಹ್ವಾನವನ್ನು ಗೌರವಿಸಿ ದೂರದ ಸ್ಥಳಗಳಿಂದ ಸಮಾಜ ಬಾಂಧವರು ಬಂದು ಭಾಗವಹಿಸಿದ್ದಾರೆ. ಭಾರತದಾದ್ಯಂತ ವಿವಿಧೆಡೆ ವೈದಿಕರ ಸಂಘಟನೆಗಳು ಇವೆ. ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠದ ಶ್ರೀ ಶಿವಾನಂದ ಸರಸ್ವತೀ ಸ್ವಾಮಿ ಮಹಾರಾಜ್ ಇವರ ಆಶೀರ್ವಾದ ಪಡೆದು ನಾವು ಆರಂಭಿಸಿದ ಈ ಸಂಸ್ಥೆಗೆ ಯಾರ ಜೊತೆಯೂ ಸ್ಪರ್ಧೆಯ ಉದ್ದೇಶವಿಲ್ಲ. ಬದಲಾಗಿ ವೈದಿಕ ಸದಸ್ಯರ ಶಿಕ್ಷಣ , ಆರೋಗ್ಯ ವಿಚಾರಗಳಲ್ಲಿ ಸಹಾಯ , ಆನ್ ಲೈನ್ ನಲ್ಲಿ ಸಂಧ್ಯಾವಂದನೆ , ಸಂಸ್ಕೃತ ಶಿಕ್ಷಣ ನೀಡುವುದು ಇತ್ಯಾದಿ ಭವಿಷ್ಯದಲ್ಲಿನ ಹಲವು ಸದುದ್ದೇಶಗಳನ್ನು ಹೊಂದಿದೆ ” ಎಂದು ಸ್ಪಷ್ಟ ಪಡಿಸಿದರು. ಪ್ರಸ್ತುತಃ ಮುಂಬೈಯಲ್ಲಿನ ಈ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ  ಹೆಚ್ಚಿನ ಮುತುವರ್ಜಿ ವಹಿಸಿದ ನಾಗೇಶ್ ಭಟ್ ಚಾರ್ಕೋಪ್ ಇವರ ಸೇವೆಯನ್ನು ಸಭೆಯಲ್ಲಿ ಪರಿಗಣಿಸಲಾಯಿತು.  ಸುಮಾರು 400 ಔಷದೀಯ ಗಿಡಮೂಲಿಕೆಗಳಿಂದ ಸ್ಥಳದಲ್ಲಿಯೇ ತಯಾರಿಸಿದ ವಿಶೇಷ ಧನ್ವಂತರೀ ಸರ್ವಮೂಲಾರಿಷ್ಟ ಕಷಾಯವನ್ನು ಎಲ್ಲರಿಗೂ ವಿತರಿಸಲಾಯಿತು.

   ಜುಲೈ 13 ನೇ ರವಿವಾರದಂದು ಜರಗಿದ ಪೂರ್ಣ ದಿನದ ಈ ಕಾರ್ಯಕ್ರಮದಲ್ಲಿ ಸಾರಸ್ವತ ವೈದಿಕ ಪ್ರತಿಷ್ಟಾನದ ಪದಾಧಿಕಾರಿಗಳು ಅವರ ಕುಟುಂಬಸ್ಥರು ,

   ಸಾರಸ್ವತರ ವಿವಿಧ ಸಂಸ್ಥೆಯ ಪದಾಧಿಕಾರಿಗಳು , ಮರಾಠೀ ಸೇರಿದಂತೆ ಬೇರೆ ಬೇರೆ ಸ್ಥಳಗಳಿಂದ ಆಗಮಿಸಿದ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

  ಕಾರ್ಯಕ್ರಮದ ಬಳಿಕ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ಜರಗಿತು.

ಚಿತ್ರ ಹಾಗೂ ವಿವರ : ಪಿ.ಆರ್.ರವಿಶಂಕರ್

                        Cell : 8483980035



Related posts

ಜಿ. ಎಸ್. ಬಿ. ಮಂಡಲಿ ಕಲ್ಯಾಣ – ಸಾಮೂಹಿಕ ಚೂಡಿ ಪೂಜೆ ಹಾಗೂ ಸತ್ಯನಾರಾಯಣ ಪೂಜೆ.

Mumbai News Desk

ಡೊಂಬಿವಲಿ: ಶ್ರೀ ಜಗದಂಬಾ ಮಂದಿರದಲ್ಲಿ ಭಕ್ತಿಪೂರ್ವಕ ಮಹಾಶಿವರಾತ್ರಿ ಮತ್ತು ಭಜನೋತ್ಸವ

Mumbai News Desk

ಮಲಾಡ್ ಶ್ರೀಮಹತೋಭಾರ ಶನೀಶ್ವರ ದೇವಸ್ಥಾನದಲ್ಲಿ ಸುವರ್ಣ ಸಂಭ್ರಮದ ಸರಣಿ ಕಾರ್ಯಕ್ರಮ.

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಧಾರವಿ ಶಾಖೆಯಲ್ಲಿ 46 ನೇ ಸಂಸ್ಥಾಪನಾ ದಿನಾಚರಣೆ .

Mumbai News Desk

ಬಂಟರ ಸಂಘ ಮುಂಬಯಿ ಗುರುಪೂರ್ಣಿಮೆ ಆಚರಣೆಯಂದು ಶ್ರೀ ಮಹಾವಿಷ್ಣು ಭಜನಾ ತಂಡ ಚಾಲನೆ.

Mumbai News Desk

ಎಸ್. ಎಸ್. ಸಿ. ಫಲಿತಾಂಶ: ಕರ್ನಾಟಕ ಸಂಘ ಡೊಂಬಿವಲಿ ಸಂಚಾಲಿತ ಮಂಜುನಾಥ ವಿದ್ಯಾಲಯಕ್ಕೆ ಶೇ. 100 ಫಲಿತಾಂಶ

Mumbai News Desk