32 C
Mumbai
April 24, 2026
Mumbai News Kannada
ಮುಂಬಯಿ

ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿ: ನವರಾತ್ರಿ ಉತ್ಸವ, ದಾಂಡಿಯಾ ರಾಸ್





​ಆಚರಣೆಗಳಿಂದ ಮಾತ್ರ ಸನಾತನ ಸಂಸ್ಕೃತಿಯನ್ನು ಉಳಿಸಲು ಸಾಧ್ಯ.– ಪ್ರವೀಣ್ ಭೋಜ ಶೆಟ್ಟಿ

ಮುಂಬಯಿ: ಹಿಂದೂ ಸಮಾಜಕ್ಕೆ ಸನಾತನ ಸಂಸ್ಕೃತಿಯು ಅತ್ಯಂತ ಅವಶ್ಯಕ. ಇಂತಹ ದೇವತಾ ಆರಾಧನಾ ಕ್ರಮಗಳು, ಆಚರಣೆಗಳಿಂದ ಮಾತ್ರ ಸನಾತನ ಸಂಸ್ಕೃತಿಯನ್ನು ಉಳಿಸಲು ಸಾಧ್ಯ. ಸನಾತನ ಸಂಸ್ಕೃತಿಗೆ ಆದಿ-ಅಂತ್ಯವಿಲ್ಲ, ಅದು ನಿತ್ಯ-ನಿರಂತರವಾಗಿರಲಿ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಭೋಜ ಶೆಟ್ಟಿಯವರು ಕರೆ ನೀಡಿದರು.

​ಬಂಟರ ಸಂಘ ಮುಂಬಯಿಯ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ವತಿಯಿಂದ ನವರಾತ್ರಿ ಉತ್ಸವದ ನಿಮಿತ್ತ ಸೆಪ್ಟೆಂಬರ್ 27ರಂದು ವಿಜೃಂಭಣೆಯ ಶ್ರೀ ದುರ್ಗಾ ಉಪಾಸನೆ, ಲಲಿತಾ ಸಹಸ್ರನಾಮ ಪಠಣ, ಭಜನೆ, ರಥಯಾತ್ರೆ ಮತ್ತು ದಾಂಡಿಯಾ ರಾಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

​ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್‌ನ ಅವೆನ್ಯೂ ಹೋಟೆಲಿನ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು, ಇತಿಹಾಸದಲ್ಲೇ ಪ್ರಥಮ ಎನ್ನಬಹುದಾದ ಶ್ರೀ ದೇವಿಯ ರಥಯಾತ್ರೆಯಲ್ಲಿ ಭಾಗವಹಿಸಿದ ಸೌಭಾಗ್ಯ ತಮ್ಮದಾಗಿದ್ದು, ಇದನ್ನು ಯಶಸ್ವಿಗೊಳಿಸಿದ ಮಹಿಳಾ ವಿಭಾಗವನ್ನು ವಿಶೇಷವಾಗಿ ಅಭಿನಂದಿಸಿದರು. ಬೊರಿವಲಿ ಶಿಕ್ಷಣ ಸಂಸ್ಥೆಯ ನಿರ್ಮಾಣದಲ್ಲಿ ದೊಡ್ಡಮಟ್ಟದ ದೇಣಿಗೆ ನೀಡಿದ ಖ್ಯಾತ ಉದ್ಯಮಿ ಶ್ರೀ ಶಶಿಕಿರಣ್ ಶೆಟ್ಟಿ ಹಾಗೂ ಸಹಕರಿಸಿದ ಎಲ್ಲ ದಾನಿಗಳನ್ನು ಸ್ಮರಿಸಿದರು. ಶಿಕ್ಷಣ ಸಂಸ್ಥೆಯು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಂಡಿದ್ದು, ಸಂಪೂರ್ಣ ಆಕ್ಯುಪೇಶನ್ ಸರ್ಟಿಫಿಕೇಟ್ (Complete OC) ಪಡೆದಿರುವುದು ಸಮಾಜದ ಮಹತ್ತರ ಸಾಧನೆ ಎಂದು ಹೆಮ್ಮೆಯಿಂದ ನುಡಿದರು. ಇತ್ತೀಚೆಗೆ ನಡೆದ ಯುವ ವಿಭಾಗದ ‘ಆಕಾಂಕ್ಷಾ 2025’ ಸೌಂದರ್ಯ ಸ್ಪರ್ಧೆಯಲ್ಲಿ ಈ ಪ್ರಾದೇಶಿಕ ಸಮಿತಿಯಿಂದ ಆರು ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದು, ಅದರಲ್ಲಿ ಮಿಸ್ ಬಂಟ್ಸ್ ಪ್ರಥಮ ಹಾಗೂ ಮಿಸೆಸ್ ಬಂಟ್ಸ್ ಪ್ರಥಮ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದು ಸಮಿತಿಯ ಕೀರ್ತಿ ಹೆಚ್ಚಿಸಿದ ಎಲ್ಲ ಸ್ಪರ್ಧಾಳುಗಳನ್ನು ಅವರು ಅಭಿನಂದಿಸಿದರು.

​ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಪ್ರೇಮನಾಥ ಶೆಟ್ಟಿ ಕೊಂಡಾಡಿ ಹಾಗೂ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುನಿತಾ ಎನ್. ಹೆಗ್ಡೆಯವರ ನೇತೃತ್ವದಲ್ಲಿ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.

​ಆರಂಭದಲ್ಲಿ ಎಲ್ಲರನ್ನು ಸ್ವಾಗತಿಸಿದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸುನಿತಾ ಎನ್. ಹೆಗ್ಡೆಯವರು, ಈ ಶಕ್ತಿಯ ಆರಾಧನೆಯ ಹಬ್ಬದಲ್ಲಿ ಕೇವಲ ಭಕ್ತಿ ಮಾತ್ರವಲ್ಲದೆ ಲಲಿತಾ ಸಹಸ್ರನಾಮ ಪಠಣದಿಂದ ಸಮಷ್ಟಿ ಶಕ್ತಿಯು ಉದ್ದೀಪನಗೊಂಡು, ಎಲ್ಲರಿಗೂ ಶ್ರೀ ದುರ್ಗಾ ಮಾತೆಯ ಅನುಗ್ರಹ ದೊರೆಯಲಿ ಎಂದು ಹಾರೈಸಿದರು.

​ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾರ್ಯಾಧ್ಯಕ್ಷ ಶ್ರೀ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರು, ನವರಾತ್ರಿಯ ಆರನೇ ದಿನವಾದ ಇಂದು ಶಕ್ತಿಯ ದೇವಿಯನ್ನು ಆರಾಧಿಸಲಾಗುತ್ತಿದ್ದು, ಶ್ರೀಮತಿ ಸುನಿತಾ ಹೆಗ್ಡೆಯವರ ನೇತೃತ್ವದ ಕಾರ್ಯಕ್ರಮದಲ್ಲಿ ಮಹಿಳಾ ಶಕ್ತಿಯು ಎದ್ದು ಕಾಣುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆಯೋಜಕರಿಗೂ, ಅವರ ತಂಡಕ್ಕೂ ಅಭಿನಂದನೆ ಸಲ್ಲಿಸಿ ಎಲ್ಲರಿಗೂ ದೇವಿಯ ಆಶೀರ್ವಾದ ಕೋರಿದರು.

​ಬೊರಿವಲಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಶ್ರೀ ನಿತ್ಯಾನಂದ ಹೆಗ್ಡೆಯವರು ಮಾತನಾಡಿ, ಬೊರಿವಲಿ ಪಶ್ಚಿಮದ ಐ. ಸಿ. ಕಾಲೋನಿಯಲ್ಲಿ ಪದ್ಮನಾಭ ಪಯ್ಯಡೆಯವರು ಬಂಟರ ಸಂಘದ ಅಧ್ಯಕ್ಷರಾಗಿದ್ದ ಸಮಯದಲ್ಲಿ ಈ ಸಂಸ್ಥೆಯ ಕಾರ್ಯಾರಂಭವಾಯಿತು ಎಂದು ಸ್ಮರಿಸಿದರು. ಇದು ಮುಂಬಯಿಯ ಇತರ ಶಿಕ್ಷಣ ಸಂಸ್ಥೆಗಳಿಗಿಂತ ವಿಭಿನ್ನವಾಗಿದ್ದು, ಎಲ್ಲಾ ರೀತಿಯ ಸೌಲಭ್ಯಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿದೆ. ಎಲ್ಲರೂ ಸಂಸ್ಥೆಗೆ ಭೇಟಿ ನೀಡಬೇಕೆಂದು ವಿನಂತಿಸಿದರು.

​ಬೊರಿವಲಿ ಶಿಕ್ಷಣ ಸಂಸ್ಥೆಯ ನಿಧಿ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಶ್ರೀ ಮುಂಡಪ್ಪ ಪಯ್ಯಡೆಯವರು ಮಾತನಾಡಿ, ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿ, ಈ ಸಂದರ್ಭದಲ್ಲಿ ದೊಡ್ಡ ಮಟ್ಟದ ಧನ ಸಹಾಯ ಮಾಡಿದ ಎಲ್ಲ ದಾನಿಗಳನ್ನು ನೆನಪಿಸಿಕೊಂಡರು.

​ನವರಾತ್ರಿ ಉತ್ಸವಕ್ಕೆ ಹಾಗೂ ಬೊರಿವಲಿ ಶಿಕ್ಷಣ ಸಂಸ್ಥೆಗೆ ಬೃಹತ್ ಮೊತ್ತದ ದೇಣಿಗೆ ನೀಡಿದ ಅವೆನ್ಯೂ ಹೋಟೆಲಿನ ಮಾಲಕ ಶ್ರೀ ರಘುರಾಮ ಶೆಟ್ಟಿ ದಂಪತಿ ಹಾಗೂ ತಮ್ಮ ಹೆಸರಿನಲ್ಲಿ ಒಂದು ತರಗತಿ ಕೊಠಡಿಗೆ ದೇಣಿಗೆ ನೀಡಿದ ಹಿರಿಯ ನಾಗರಿಕ ಶ್ರೀ ಎಕ್ಕಾರು ಕೃಷ್ಣ ಶೆಟ್ಟಿ ದಂಪತಿಯವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

​ಇತ್ತೀಚೆಗೆ ಆಕಾಂಕ್ಷಾ 2025 ರಲ್ಲಿ ಮಿಸ್ ಬಂಟ್ಸ್ ಆಗಿ ಆಯ್ಕೆಯಾದ ಕು. ದ್ವಿಪ್ತಾ ಪಿ. ಶೆಟ್ಟಿ ಮತ್ತು ಮಿಸೆಸ್ ಬಂಟ್ಸ್ ಪ್ರಥಮ ರನ್ನರ್ ಅಪ್ ಆಗಿ ವಿಜೇತರಾದ ಶ್ರೀಮತಿ ಆಮ್ರತಾ ಎ. ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಇತರ ಎಲ್ಲರನ್ನೂ ಅಭಿನಂದಿಸಿ ಗೌರವಿಸಲಾಯಿತು. ಗಿನ್ನೆಸ್ ಬುಕ್ಸ್ ಆಫ್ ರೆಕಾರ್ಡ್ಸ್‌ನಲ್ಲಿ ತಮ್ಮ ಹೆಸರನ್ನು ದಾಖಲಿಸಿದ ಡಾ. ಆರ್. ಕೆ. ಶೆಟ್ಟಿಯವರನ್ನು ಹಾಗೂ ಶ್ರೀ ಪ್ರಕಾಶ್ ಎ. ಶೆಟ್ಟಿಯವರನ್ನು ಅಭಿನಂದಿಸಿ ಗೌರವಿಸಲಾಯಿತು. ಜೊತೆಗೆ, ಪ್ರಾದೇಶಿಕ ಸಮಿತಿಯಲ್ಲಿ ಸೇವೆ ಸಲ್ಲಿಸಿದ ಎಲ್ಲ ಮಾಜಿ ಕಾರ್ಯಾಧ್ಯಕ್ಷರು, ಕಾರ್ಯಾಧ್ಯಕ್ಷೆಯರು, ಕಾರ್ಯಕರ್ತರು ಹಾಗೂ ಸಲಹೆಗಾರರನ್ನು ಗೌರವಿಸಲಾಯಿತು.

​ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಶ್ರೀ ಮಹೇಶ್ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಪೊವಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಶ್ರೀ ರತ್ನಾಕರ ಶೆಟ್ಟಿ ಮುಂಡ್ಕೂರು, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ಕವಿತಾ ಐ. ಆರ್. ಶೆಟ್ಟಿ, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ಶ್ರೀ ಗೌರವ್ ಪಯ್ಯಡೆ, ಪ್ರಾದೇಶಿಕ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಅಕ್ಷಜ್ ಆರ್. ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ಶ್ರೀಮತಿ ಶೈಲಜಾ ಎ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಶ್ರೀಮತಿ ರೇಖಾ ವೈ. ಶೆಟ್ಟಿ, ಕಾರ್ಯದರ್ಶಿ ಶ್ರೀಮತಿ ಸರಿತಾ ಎಂ. ಶೆಟ್ಟಿ, ಕೋಶಾಧಿಕಾರಿ ಶ್ರೀಮತಿ ಶುಭಾಂಗಿ ಎಸ್. ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀಮತಿ ಯೋಗಿನಿ ಎಸ್. ಶೆಟ್ಟಿ ಮತ್ತು ಜೊತೆ ಕೋಶಾಧಿಕಾರಿ ಶ್ರೀಮತಿ ಪ್ರಭಾವತಿ ಎಚ್. ಶೆಟ್ಟಿ ಉಪಸ್ಥಿತರಿದ್ದರು.

​ಕಾರ್ಯಕ್ರಮದ ಯಶಸ್ಸಿಗೆ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಶ್ರೀ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ಶ್ರೀ ರಮೇಶ್ ಎಂ. ಶೆಟ್ಟಿ, ಕೋಶಾಧಿಕಾರಿ ಶ್ರೀ ಅವಿನಾಶ್ ಎಂ. ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀ ಜಯ ಶೆಟ್ಟಿ, ಜೊತೆ ಕೋಶಾಧಿಕಾರಿ ಶ್ರೀ ರಮೇಶ್ ಎಚ್. ಶೆಟ್ಟಿ, ಯುವ ವಿಭಾಗದ ಉಪ ಕಾರ್ಯಾಧ್ಯಕ್ಷ ಶ್ರೀ ಪ್ರಜ್ವಲ್ ಶೆಟ್ಟಿ, ಕಾರ್ಯದರ್ಶಿ ಕು. ಸಮೀಕ್ಷಾ ಶೆಟ್ಟಿ, ಕೋಶಾಧಿಕಾರಿ ಕು. ವಿಭಾ ಶೆಟ್ಟಿ, ಜೊತೆ ಕಾರ್ಯದರ್ಶಿ ಶ್ರೀ ಕಾರ್ತಿಕ್ ಶೆಟ್ಟಿ, ಜೊತೆ ಕೋಶಾಧಿಕಾರಿ ಶ್ರೀ ವಿಶ್ವಾಸ್ ಶೆಟ್ಟಿ, ಸಲಹೆಗಾರರಾದ ಶ್ರೀ ಮನೋಹರ ಎನ್. ಶೆಟ್ಟಿ, ಶ್ರೀ ವಿಜಯ ಆರ್. ಭಂಡಾರಿ ಸೇರಿದಂತೆ ಸಮಿತಿಯ ಎಲ್ಲ ಸದಸ್ಯರು, ಕಾರ್ಯಾಕಾರಿ ಸಮಿತಿ, ಉಪಸಮಿತಿ, ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸದಸ್ಯರು ಸಹಕರಿಸಿದರು.

​ಪ್ರಾರಂಭದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಿಂದ ಶ್ರೀ ಲಲಿತಾ ಸಹಸ್ರನಾಮ ಪಠಣದೊಂದಿಗೆ ನೆರೆದ ಎಲ್ಲ ಮಹಿಳೆಯರು ಶ್ರೀದೇವಿಗೆ ಕುಂಕುಮಾರ್ಚನೆ ಸೇವೆಯನ್ನು ಸಲ್ಲಿಸಿದರು. ಬಳಿಕ ಮಹಿಳಾ ವಿಭಾಗದ “ಇಂಚರ” ತಂಡದ ಸದಸ್ಯೆಯರು ಸುಶ್ರಾವ್ಯ ಭಜನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ಚೆಂಡೆ ಮೇಳದೊಂದಿಗೆ ಶ್ರೀ ದೇವಿಯ ಭವ್ಯ ರಥಯಾತ್ರೆ ನೆರವೇರಿ, ಆರತಿಯನ್ನು ಬೆಳಗಲಾಯಿತು. ನಂತರ ನಡೆದ ದಾಂಡಿಯಾ ರಾಸ್ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೇವಿಯ ಪ್ರಸಾದ ಹಾಗೂ ಪ್ರಸಾದ ಭೋಜನವನ್ನು ಸ್ವೀಕರಿಸಿದರು.

​ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀಮತಿ ಶುಭಾಂಗಿ ಎಸ್. ಶೆಟ್ಟಿ ಹಾಗೂ ಶ್ರೀಮತಿ ಸರಿತಾ ಎಂ. ಶೆಟ್ಟಿ ನಡೆಸಿಕೊಟ್ಟರೆ, ಸಭಾ ಕಾರ್ಯಕ್ರಮವನ್ನು ಶ್ರೀಮತಿ ಯೋಗಿನಿ ಎಸ್. ಶೆಟ್ಟಿ ಮತ್ತು ಶ್ರೀಮತಿ ರೇಖಾ ವೈ. ಶೆಟ್ಟಿ ನಿರೂಪಿಸಿದರು. ಶ್ರೀ ರಘುನಾಥ ಎನ್. ಶೆಟ್ಟಿ ಕಾಂದಿವಲಿ, ಶ್ರೀ ಅಶೋಕ್ ವಿ. ಶೆಟ್ಟಿ ಬೊರಿವಲಿ ಮತ್ತು ಶ್ರೀ ರೋಹಿತ್ ಶೆಟ್ಟಿ ಅಹುರಾ ಸಹಕರಿಸಿದರು. ಕೊನೆಯಲ್ಲಿ ಜೊತೆ ಕೋಶಾಧಿಕಾರಿ ಶ್ರೀಮತಿ ಪ್ರಭಾವತಿ ಎಚ್. ಶೆಟ್ಟಿಯವರು ಅಭಾರ ಮನ್ನಿಸಿದರು.



Related posts

ಕಾಲಘೋಡ ಶ್ರೀ ಸಾಯಿಬಾಬಾ ಪೂಜಾ ಸಮಿತಿಯ 53ನೇ ವಾರ್ಷಿಕ ಮಹಾಪೂಜೆ

Mumbai News Desk

ಹಸ್ಮೀತ್ ಶೆಟ್ಟಿಗೆ ಶೇ. 92.20 ಅಂಕ.

Mumbai News Desk

ಅ  29   ಗೋರೆಗಾಂವ್ ಪಶ್ಚಿಮದಲ್ಲಿ ಕಡಬ ಸಂಸ್ಕರಣಾ ಸಮಿತಿಯ ವಾರ್ಷಿಕೋತ್ಸವ –

Mumbai News Desk

ತಿಂಗಳಾಯ ಮೂಲಸ್ಥಾನ ಸಭಾ, ಮುಂಬಯಿ ಶಾಖೆಯ ಮಹಿಳಾ ವಿಭಾಗದಿಂದ ಅದ್ದೂರಿಯ ‘ಮಹಿಳಾ ದಿನಾಚರಣೆ’ ಸಾಧಕಿಯರಿಗೆ ಸನ್ಮಾನ

Mumbai News Desk

ಗಣಪನ ಭಕ್ತಿ ಸಿಂಚನದಲ್ಲಿ ತೇಲಿದ ಕಾಂದಿವಲಿ ಕನ್ನಡ ಸಂಘ

Mumbai News Desk

ಬಿಲ್ಲವರ ಅಸೋಸಿಯೇಶನ್ ಮೀರಾ ರೋಡ್ ಸ್ಥಳೀಯ ಕಚೇರಿಯಿಂದ ಅದ್ಧೂರಿ ಸ್ನೇಹ ಸಮ್ಮಿಲನ;

Mumbai News Desk