32.3 C
Mumbai
June 7, 2026
Mumbai News Kannada
ಮುಂಬಯಿ

ತುಳುಕೂಟ ಫೌಂಡೇಶನ್ ನಾಲಾಸೋಪಾರ ಮತ್ತು ಶ್ರೀದೇವಿ ಯಕ್ಷಕಲಾ ನಿಲಯದ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ





“ಒಗ್ಗಟ್ಟಿನಲ್ಲಿ ಸೇವೆ ಮಾಡಿದಾಗ ಫಲ ಎಲ್ಲರಿಗೂ ಲಭಿಸುತ್ತದೆ”: ಶಶಿಧರ ಕೆ. ಶೆಟ್ಟಿ ಇನ್ನಂಜೆ

ವರದಿ: ದಿನೇಶ್ ಕುಲಾಲ್

ನಾಲಾಸೋಪಾರ: ತುಳುಕೂಟ ಫೌಂಡೇಶನ್ (ರಿ.) ನಾಲಾಸೋಪಾರ ಇದರ ಮಹಿಳಾ ವಿಭಾಗ ಮತ್ತು ಶ್ರೀದೇವಿ ಯಕ್ಷಕಲಾ ನಿಲಯದ ಜಂಟಿ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ ಕಾರ್ಯಕ್ರಮವು ಮಾರ್ಚ್ 19, ಗುರುವಾರದಂದು ನಾಲಾಸೋಪಾರ ಪಶ್ಚಿಮದ ಹೋಟೆಲ್ ಗ್ಯಾಲಕ್ಸಿ ಸಭಾಂಗಣದಲ್ಲಿ ನಡೆಯಿತು. ತುಳುಕೂಟದ ಅಧ್ಯಕ್ಷರಾದ ಶಶಿಧರ ಕೆ. ಶೆಟ್ಟಿ ಇನ್ನಂಜೆ ಅವರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ಜರುಗಿತು.

​ಮಧ್ಯಾಹ್ನ ಕಾರ್ಯಕ್ರಮದ ಆರಂಭದಲ್ಲಿ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ ಯಶೋಧಾ ಎಸ್. ಕೋಟ್ಯಾನ್ ಮತ್ತು ಪದಾಧಿಕಾರಿಗಳು ಶ್ರೀ ದೇವರಿಗೆ ಆರತಿ ಬೆಳಗಿಸಿ, ಪ್ರಾರ್ಥನೆ ಸಲ್ಲಿಸುವ ಮೂಲಕ ಹಳದಿ ಕುಂಕುಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆ ಬಳಿಕ ಸಂಸ್ಥೆಯ ಸದಸ್ಯರಿಂದ ಭಜನೆ, ಸ್ವಾಗತ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆದವು.

​ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ, ತುಳುಕೂಟ ಫೌಂಡೇಶನ್ ವತಿಯಿಂದ ಪ್ರತಿವರ್ಷ ನೀಡಲಾಗುವ ಡಾ. ಸುನೀತಾ ಎಂ. ಶೆಟ್ಟಿ ಪ್ರಾಯೋಜಕತ್ವದ ‘ತುಳುನಾಡ ಐಸಿರಿ’ ಪ್ರಶಸ್ತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ನೀಡಿ ಸನ್ಮಾನಿಸಲಾಯಿತು.

ಅಧ್ಯಕ್ಷೀಯ ನುಡಿ:

ಅಧ್ಯಕ್ಷರಾದ ಶಶಿಧರ ಕೆ. ಶೆಟ್ಟಿ ಇನ್ನಂಜೆಯವರು ಮಾತನಾಡಿ, “ನಮ್ಮ ಸಂಸ್ಥೆಯ ಯಾವುದೇ ಕಾರ್ಯಕ್ರಮಕ್ಕೆ ತುಳು-ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ನಮಗೆ ಶಕ್ತಿ ತುಂಬುತ್ತಿರುವುದು ಹೆಮ್ಮೆಯ ವಿಷಯ. ಸಂಸ್ಥೆಯು ಸ್ಥಾಪನೆಯಾದಂದಿನಿಂದ ಯಶಸ್ವಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ನಮ್ಮ ಸದಸ್ಯರು ಭಜನೆ ಮತ್ತು ಕುಣಿತ ಭಜನೆಗಳಲ್ಲಿ ಬಹುಮಾನ ಪಡೆಯುತ್ತಿರುವುದು ಖುಷಿಯ ಸಂಗತಿ. ಸರ್ಕಾರದ ಪ್ರಶಸ್ತಿಯೂ ನಮ್ಮ ಕಾರ್ಯಕ್ಕೆ ಸಂದ ಗೌರವವಾಗಿದೆ. ಇಂದು ಸನ್ಮಾನಿತರಾದ ವಿಶು ಶೆಟ್ಟಿಯವರು ಅತ್ಯಂತ ಸರಳ ವ್ಯಕ್ತಿತ್ವದವರು. ಅಹಂಕಾರವಿಲ್ಲದೆ ಸೇವಕರಾಗಿ ಬದುಕಿದಾಗ ಜೀವನ ಅರ್ಥಪೂರ್ಣವಾಗುತ್ತದೆ. ಒಗ್ಗಟ್ಟಿನ ಸೇವೆಯೇ ಸಂಘಟನೆಯ ಯಶಸ್ಸು,” ಎಂದರು.

ಮುಖ್ಯ ಅತಿಥಿಗಳ ಮಾತು:

ಮಾತೃಭೂಮಿ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ ನಿರ್ದೇಶಕಿ ಸಿಎ ರಾಜಶ್ರೀ ಜಿ. ಶೆಟ್ಟಿ ಮಾತನಾಡಿ, “ತುಳುಕೂಟವು ಎಲ್ಲಾ ಸಮಾಜದವರನ್ನು ಒಗ್ಗೂಡಿಸಿ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇಂದಿನ ಮಕ್ಕಳು ಮಾತೃಭಾಷೆ ಮಾತನಾಡಲು ಹಿಂಜರಿಯಬಾರದು. ಭಾಷೆಯ ಮೇಲೆ ಅಭಿಮಾನವಿರಲಿ. ಸಮಾಜದಲ್ಲಿ ಸ್ತ್ರೀ-ಪುರುಷರು ಪರಸ್ಪರ ಗೌರವದಿಂದ ಬದುಕಬೇಕು. ಕೋವಿಡ್ ನಂತರ ಜೀವನದ ಅನಿಶ್ಚಿತತೆ ನಮಗೆಲ್ಲರಿಗೂ ಅರ್ಥವಾಗಿದೆ, ಆದ್ದರಿಂದ ಬದುಕಿರುವಾಗಲೇ ಇತರರಿಗೆ ಸಹಾಯ ಮಾಡೋಣ,” ಎಂದು ಕರೆ ನೀಡಿದರು.

​ಸಾಹಿತಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಮಾತನಾಡಿ, “ಅನಾಥ ಮತ್ತು ಅನಾರೋಗ್ಯ ಪೀಡಿತ ಮಹಿಳೆಯರಿಗೆ ಆಸರೆಯಾಗಿರುವ ವಿಶು ಶೆಟ್ಟಿಯವರನ್ನು ಸನ್ಮಾನಿಸಿದ್ದು ಈ ಬಾರಿಯ ಮಹಿಳಾ ದಿನಾಚರಣೆಗೆ ವಿಶೇಷ ಅರ್ಥ ತಂದಿದೆ. ಮಹಿಳೆಯರು ತಮ್ಮಲ್ಲಿರುವ ಪ್ರತಿಭೆಯನ್ನು ಗುರುತಿಸಿಕೊಂಡು, ಸಂಸ್ಕೃತಿಯನ್ನು ಮರೆಯದೆ ಬದುಕಿನ ಶಿಲ್ಪಿಗಳಾಗಬೇಕು,” ಎಂದರು.

​ಯೋಗ ಗುರು ಸುಮತಿ ಒಮಯ್ಯ ಪೂಜಾರಿ ಮಾತನಾಡಿ, ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಯೋಗದ ಮಹತ್ವವನ್ನು ತಿಳಿಸಿದರು. ಮೀರಾ-ಡಹಾಣು ಬಂಟ್ಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಶೆಟ್ಟಿ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿಯ ಜೊತೆಗೆ ಆತ್ಮಸ್ಥೈರ್ಯ ತುಂಬುವ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.

​ಇದೇ ಸಂದರ್ಭದಲ್ಲಿ ಸ್ಥಳೀಯ ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು. ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆ ಯಶೋಧಾ ಎಸ್. ಕೋಟ್ಯಾನ್ ಸ್ವಾಗತಿಸಿದರು. ವೇದಿಕೆಯಲ್ಲಿ ಓ.ಪಿ. ಪೂಜಾರಿ, ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಹರೀಶ್ ಶೆಟ್ಟಿ ಗುರ್ಮೆ, ಜಗನಾಥ್ ಡಿ. ಶೆಟ್ಟಿ ಪಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮಲ್ಲಿಕಾ ಆರ್. ಪೂಜಾರಿ ಮತ್ತು ವಾಣಿ ರಘುನಾಥ್ ಕಾರ್ಯಕ್ರಮ ನಿರೂಪಿಸಿದರು.

​ಕಾರ್ಯಕ್ರಮದ ಕೊನೆಯಲ್ಲಿ ಉಡುಪಿಯ ‘ಶ್ರೀ ಕೃಷ್ಣ ಕಲಾವಿದರು’ ತಂಡದಿಂದ ‘ಅನಿದಾ ಮನದಾನಿ’ ಎಂಬ ತುಳು ನಾಟಕ ಪ್ರದರ್ಶನಗೊಂಡಿತು.

“ಅಹಂಕಾರ ಮರೆತು ನಿಷ್ಠೆಯಿಂದ ಸೇವೆ ಮಾಡೋಣ” – ವಿಶು ಶೆಟ್ಟಿ ಅಂಬಲಪಾಡಿ

‘ತುಳುನಾಡ ಐಸಿರಿ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಶು ಶೆಟ್ಟಿಯವರು, “ಮಕ್ಕಳಿಗೆ ಕೇವಲ ಅಂಕಗಳಿಕೆಯ ಶಿಕ್ಷಣ ನೀಡಿದರೆ ಸಾಲದು, ಸಂಸ್ಕಾರವನ್ನೂ ನೀಡಬೇಕು. ಸಂಸ್ಕಾರದ ಕೊರತೆಯಿಂದಾಗಿ ಇಂದಿನ ಯುವ ಪೀಳಿಗೆ ದಾರಿ ತಪ್ಪುತ್ತಿರುವುದು ವಿಷಾದನೀಯ. ಹೆತ್ತವರ ಆಶೀರ್ವಾದವೇ ದೊಡ್ಡದು. ನಮ್ಮೊಳಗಿನ ಅಹಂಕಾರವನ್ನು ಬದಿಗಿಟ್ಟು ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆಗೆ ಸನ್ನದ್ಧರಾಗೋಣ,” ಎಂದು ಭಾವುಕರಾಗಿ ನುಡಿದರು.



Related posts

ಬಂಟರ ಸಂಘ ಮುಂಬಯಿ, ಮೀರಾ – ಭಾಯಂದರ್ ಪ್ರಾದೇಶಿಕ ಸಮಿತಿಯ ಪದಗ್ರಹಣ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ )ಥಾಣೆ ಸಮಿತಿಯ ಅಧ್ಯಕ್ಷರಾಗಿ ಗೋಪಾಲ ಎಸ್ ಚಂದನ್ ಆಯ್ಕೆ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಸಮಾಜ ಕಲ್ಯಾಣ ಸಹಾಯಹಸ್ತ

Mumbai News Desk

2023/24 ಎಚ್ ಎಸ್ ಸಿ . ಪರೀಕ್ಷೆಯಲ್ಲಿ  ಆಶಿಶ್ ಅಶೋಕ್ ಕುಲಾಲ್ ಶೇ.84.33%

Mumbai News Desk

ನಾನಿಲ್ತಾರ್ ಅಭಿಮಾನಿ ಬಳಗ ಮುಂಡ್ಕೂರು : ನಾನಿಲ್ತಾರ್ನಲ್ಲಿ  ಸ್ನೇಹ ಸಮ್ಮಿಲನದ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಮುಂಬಯಿ : ಏನ್ ಸಿ ಪಿ ಮುಖಂಡ ಬಾಬಾ ಸಿದ್ಧಿಕ್ ಅವರನ್ನು ಗುಂಡಿಕ್ಕಿ ಹತ್ಯೆ

Mumbai News Desk