33 C
Mumbai
October 7, 2026
Mumbai News Kannada
ಸುದ್ದಿ

ಶ್ರೀ ಸಚ್ಚಿದಾನಂದ ಸರಸ್ವತೀ ಕೃಪಾಪೋಷಿತ ಯಕ್ಷಗಾನ ಮಂಡಳಿಯ 23 ನೆಯ ವಾರ್ಷಿಕೋತ್ಸವ




ವರದಿ : ಪಿ.ಆರ್.ರವಿಶಂಕರ್ ಡಹಾಣೂ ರೋಡ್

” ಕಲಾಸಕ್ತ ಪ್ರೋತ್ಸಾಹಕರ ಜೊತೆ ಅಭಿಮಾನಿ ಪ್ರೇಕ್ಷಕರೂ ಆವಶ್ಯ : ರಮಾನಂದ ನಾಯಕ್

“ಪಶ್ಚಿಮ ಕರಾವಳಿಯ ಶ್ರೇಷ್ಟ ಯಕ್ಷಕಲೆಯ ಪರಂಪರೆಯನ್ನು ಪೋಷಿಸುತ್ತಾ ಸಮಾಜದಲ್ಲಿ ಆಧ್ಯಾತ್ಮದ ಜೊತೆಗೆ ಸಾಮಾಜಿಕ ಅರಿವು ಮೂಡಿಸುವ ಪೌರಾಣಿಕ ಕಥಾನಕಗಳನ್ನೇ ಹೊಂದಿರುವ ಸುಮಾರು 250 ಕ್ಕೂ ಹೆಚ್ಚು ಯಶಸ್ವಿ ಯಕ್ಷಗಾನ ಪ್ರದರ್ಶನಗಳನ್ನು ಕಳೆದ 23 ವರ್ಷಗಳಲ್ಲಿ ನಮ್ಮ ಮಂಡಲಿ ನೀಡಿದೆ. ಅರ್ಥಗಾರಿಕೆಯಲ್ಲಿ ಬಳಸುವ ಕನ್ನಡ ಭಾಷೆಯು ಅನನುಕೂಲ ವಾಗುವುದರಿಂದ ಕೊಂಕಣಿ ಭಾಷಾ ಪ್ರಯೋಗದೊಂದಿಗೆ ಮುಂಬೈಯಲ್ಲಿನ ಕಲಾಸಕ್ತ ಮಕ್ಕಳನ್ನು ಪ್ರೋತ್ಸಾಹಿಸಿದ್ದೇವೆ. ಯಕ್ಷಗಾನ ಪ್ರದರ್ಶನಗಳು ಯಶಸ್ವಿಗೊಳ್ಳಲು ಕಲಾಸಕ್ತ ಪ್ರೋತ್ಸಾಹಕರ ಜೊತೆಗೆ ಅಭಿಮಾನಿ ಪ್ರೇಕ್ಷಕರೂ ಅತೀ ಆವಶ್ಯ ” ಎಂದು ಸಭಾಧ್ಯಕ್ಷತೆ ವಹಿಸಿದ್ದ ಮಂಡಳಿಯ ಹಿರಿಯ ಕಲಾವಿದ ರಮಾನಂದ ಎಸ್.ನಾಯಕ್ ಇವರು ಅಭಿಪ್ರಾಯ ಪಟ್ಟರು. ಮಹಾನಗರದಲ್ಲಿನ ಮೊತ್ತಮೊದಲ ಬಡಗುತಿಟ್ಟು ಯಕ್ಷಕಲಾ ಸಂಸ್ಥೆಯಾದ ಸಚ್ಚಿದಾನಂದ ಸರಸ್ವತೀ ಕೃಪಾಪೋಷಿತ ಯಕ್ಷಗಾನ ಮಂಡಳಿಯ 23 ನೆಯ ವಾರ್ಷಿಕೋತ್ಸವದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.


ಇದೇ ರವಿವಾರ ತಾ.16 ರಂದು ಡೊಂಬಿವಿಲಿ ಪೂರ್ವದ ಶ್ರೀ ವರದಸಿದ್ಧಿ ವಿನಾಯಕ ಸೇವಾ ಭವನದಲ್ಲಿ ಜರಗಿದ ಪೂರ್ಣದಿನದ ಕಾರ್ಯಕ್ರಮದಲ್ಲಿ ಮಂಡಳಿಯ ಸದಸ್ಯರು ಹಾಗೂ ವಿವಿಧ ಊರುಗಳಿಂದ ಆಗಮಿಸಿದ ಯಕ್ಷ ಕಲಾಭಿಮಾನಿಗಳು ಉಪಸ್ಥಿತರಿದ್ದರು.
ಪ್ರಾತಃಕಾಲದಲ್ಲಿ ಶ್ರೀ ದುರ್ಗಾಪೂಜೆ ಹಾಗೂ ಮಹಿಳಾ ಮಂಡಳಿಯ ಭಜನಾ ಕಾರ್ಯಕ್ರಮದೊಂದಿಗೆ ಆರಂಭಗೊಂಡಿತು. 11.30ಕ್ಕೆ ದೀಪಪ್ರಜ್ವಲನೆಯೊಂದಿಗೆ , ಗಾಯಕಿ ಆಶಾ ನಾಯಕ್ ಇವರ ಪ್ರಾರ್ಥನೆ ಮತ್ತು ವೇದಮೂರ್ತಿ ವಸಂತ್ ಭಟ್ ಇವರ ಆಶೀರ್ವಚನ ನುಡಿಯೊಂದಿಗೆ ವಾರ್ಷಿಕೋತ್ಸವದ ವಿಶೇಷ ಸಭೆಯು ಆರಂಭಗೊಂಡಿತು.
ಕಾರ್ಯಕ್ರಮ ನಿರೂಪಕರಾದ
ಪತ್ರಕರ್ತ ಪಿ.ಆರ್.ರವಿಶಂಕರ್ ಡಹಾಣೂ ಸಭಿಕರನ್ನು ಸ್ವಾಗತಿಸಿ , ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ” ತೆಂಕು ಮತ್ತು ಬಡಗು ಎಂಬ ಎರಡು ಪ್ರಕಾರಗಳಿದ್ದು ಗಾಯನ , ಅಭಿನಯ, ನೃತ್ಯ ಹಾಗೂ ಸಂಭಾಷಣೆ ಒಳಗೊಂಡ ಯಕ್ಷಕಲೆಯ ವಿಶಿಷ್ಟ ಸ್ಥಾನಮಾನ ಹಾಗೂ ವೈಶಿಷ್ಟ್ಯಗಳನ್ನು ವಿವರಿಸಿ , ಮುಂಬೈ ಮಹಾನಗರದಲ್ಲಿನ ಮೊತ್ತಮೊದಲ ಬಡಗುತಿಟ್ಟು ಯಕ್ಷಕಲಾ ತಂಡವೆಂಬ ಹೆಗ್ಗಳಿಕೆ ಉಳ್ಳ ಈ ಮಂಡಳಿಯ ಬಗ್ಗೆ ಕಿರುಪರಿಚಯ ನೀಡಿದರು.
ಮಂಡಳಿಯ ಸ್ಥಾಪನಾ ಸಂದರ್ಭದಲ್ಲಿ ವಿವಿಧ ರೀತಿಯಲ್ಲಿ ಸಹಾಯ ಮಾಡಿದವರು ಮತ್ತು ಕಲಾಸೇವೆ ನ‌ಡೆಸುತ್ತಾ ಅಗಲಿರುವ ಕಲಾವಿದರಿಗೆ ಸಭೆಯಲ್ಲಿ ಮೌನಪ್ರಾರ್ಥನೆಯೊಂದಿಗೆ ಗೌರವ ಸಲ್ಲಿಸಲಾಯಿತು.
ಕಾರ್ಯದರ್ಶಿ ಪ್ರಕಾಶ್ ಶೆವ್ಡೆ “ಆರಂಭದ ದಿನಗಳಲ್ಲಿ ಮಹಾ ನಗರದಲ್ಲಿ ಯಕ್ಷಗಾನ ಮಂಡಳಿಯು ಎದುರಿಸಿದ ಸವಾಲುಗಳ ಬಗ್ಗೆ ಹಾಗೂ ಸಾರಸ್ವತರ ಅತೀ ಪುರಾತನ ಗುರುಪರಂಪರೆ ಉಳ್ಳ ಗೋವಾದಲ್ಲಿನ ಕವಳೆ ಮಠದ ಸ್ವಾಮೀಜಿಯವರ ಆಶೀರ್ವಚನ ಹಾಗೂ ಹೆಸರಿನಲ್ಲಿ ಶುಭಾರಂಭಗೊಂಡ ಮುಂಬೈ ಮಹಾನಗರದ ಮೊತ್ತಮೊದಲ ಬಡಗುತಿಟ್ಟು ಮಂಡಳಿಯಾದ ಸಚ್ಚಿದಾನಂದ ಸರಸ್ವತೀ ಕೃಪಾಪೋಷಿತ ಯಕ್ಷಕಲಾ ಸಂಸ್ಥೆಯು 23 ವರ್ಷಗಳಲ್ಲಿ ಬೆಳೆದುಬಂದ ಹಾದಿಯ ಕುರಿತು ಪರಿಚಯಿಸಿದರು.
ಮಂಡಳಿಯ ಹಿರಿಯ ಸದಸ್ಯರು ಮತ್ತು ಬಡಗುತಿಟ್ಟು ಕಲಾವಿದರಾದ ಹೆರ್ಮುಂಡೆ ಸದಾನಂದ ಪಾಟ್ಕರ್ ಇವರ ವಿಶಿಷ್ಟ ಕಲಾಸೇವೆಯನ್ನು ಗುರುತಿಸಿ ಗಣ್ಯರ ಉಪಸ್ಥಿತಿಯಲ್ಲಿ ಶಾಲು ಹೊದೆಸಿ ಶ್ರೀಫಲ ಸ್ಮರಣಿಕೆಗಳನ್ನು ಇತ್ತು ವೇದಿಕೆಯಲ್ಲಿ ಸಮ್ಮಾನಿಸಲಾಯಿತು. ಸಮ್ಮಾನ ಪತ್ರವನ್ನು ಜಯಾರಾಮ್ ನಾಯಕ್ ವಾಚಿಸಿದರು.
” ಯಕ್ಷಗಾನ ಕಲೆಯನ್ನು ಬಲುವಾಗಿ ಪ್ರೀತಿಸಿ ಅದರಲ್ಲಿ ಸಂಪೂರ್ಣ ತೊಡಗಿರುವ ನನ್ನಂತಹ ಹಲವಾರು ಕಲಾವಿದರು ಈ ಮುಂಬೈ ಮಹಾನಗರದಲ್ಲಿ ಇದ್ದಾರೆ. ಅವರೆಲ್ಲರಿಗೂ ಇದೇ ರೀತಿಯ ಪ್ರೋತ್ಸಾಹ ದೊರೆಯಲಿ ” ಎಂದು ಸದಾನಂದ್ ಪಾಟ್ಕರ್ ನುಡಿದರು.
ಅತಿಥಿಗಳಾಗಿ ಆಗಮಿಸಿದ್ದ ಸಮಾಜ ಸೇವಕ ವಿಟ್ಟಲ್ ಪಾಟ್ಕರ್ ” ಇಸವಿ 2000 ರಿಂದ 2010 ರ ತನಕ ಜರಗಿದ ಮುಂಬೈಯಲ್ಲಿನ ಪ್ರಗತಿಪರ ಸಮಾಜ ಕಾರ್ಯಗಳ ಬಗ್ಗೆ ಅವಲೋಕನ ” ನಡೆಸಿದರು. ಅತಿಥಿ ಸುಕುಮಾರ್ ಪ್ರಭು ” ನಮ್ಮ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಸಮಾಜಕ್ಕೆ ಪರಿಚಯಿಸುವ ಮಾಧ್ಯಮವೇ ಯಕ್ಷಗಾನ.ಇದನ್ನು ಪ್ರೋತ್ಸಾಹಿಸಿ ಬೆಳೆಸಬೇಕು ” ಎಂದು ನುಡಿದರು. ಮುಖ್ಯ ಅತಿಥಿ ಪ್ರಭಾಕರ್ ಡಿ. ಬೋರ್ಕರ್ ” ಕೋವಿಡ್ ಕಾಲದಲ್ಲಿ ಸ್ತಬ್ದವಾಗಿದ್ದ ಮಂಡಳಿಯ ಚಟುವಟಿಕೆಗಳು ನಿಧಾನವಾಗಿ ಚೇತರಿಸುತ್ತಿವೆ. ಮಾಧವ್ ಪಿ.ನಾಯ್ಕ್ ಅಧ್ಯಕ್ಷತೆಯಲ್ಲಿ ಯಕ್ಷಮಂಡಳಿಯು ಆರ್ಥಿಕವಾಗಿ ಭೌತಿಕವಾಗಿ ಶೀಘ್ರವೇ ಬಹಳ ಪ್ರಗತಿ ಹೊಂದಲಿ ” ಎಂದು ಹಾರೈಸಿದರು. ಅತಿಥಿ ರವೀಂದ್ರ ಜಿ.ನಾಯಕ್ ಸಂದರ್ಭೋಚಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಆಹ್ವಾನಿತರಾಗಿ ಸಭೆಯಲ್ಲಿ ಉಪಸ್ಥಿತರಿದ್ದ ವಿವಿಧ ಸಂಸ್ಥೆಗಳು ಹಾಗೂ ಮಹಾನಗರದಲ್ಲಿನ ವಿವಿಧ ಯಕ್ಷಗಾನ ಮಂಡಳಿಯ ಪ್ರತಿನಿಧಿಗಳು ಹಾಗೂ ಹಿಮ್ಮೇಳದ ಕಲಾವಿದರನ್ನು ವಾರ್ಷಿಕೋತ್ಸವದ ವೇದಿಕೆಯಲ್ಲಿ ಸ್ವಾಗತಿಸಿ ಗೌರವಿಸಲಾಯಿತು.
ಕೋಶಾಧಿಕಾರಿ ಜಯಾರಾಮ್ ನಾಯಕ್ ವಂದನಾರ್ಪಣೆಗೈದರು.
ಅಪರಾಹ್ನ ಕಾಲದಲ್ಲಿ ಮಕ್ಕಳಿಂದ ಕೊಂಕಣಿ ಬಾಷೆಯ ಕಥಾ ಪ್ರಸಂಗ “ಶಶಿಪ್ರಭಾ ಪರಿಣಯ ” ಮತ್ತು ಮಂಡಳಿಯ ಕಲಾವಿದರಿಂದ ” ಭಸ್ಮಾಸುರ ಮೋಹಿನಿ ” ಕನ್ನಡದಲ್ಲಿ ಯಕ್ಷಗಾನ ಪ್ರದರ್ಶನ ಜರಗಿತು..

ವರದಿ : ಪಿ.ಆರ್.ರವಿಶಂಕರ್
8483980035



Related posts

ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ನಿಧನ

Mumbai News Desk

ದೇವಿಪುರ ಶ್ರೀ ದುರ್ಗಾಪರಮೇಶ್ವರಿ ಯುವಕ ಮಂಡಲದ ಅಮೃತ ಮಹೋತ್ಸವ ‘ಶ್ರೀ ದುರ್ಗಾಮೃತ’ ಸ್ಮರಣ ಸಂಚಿಕೆ ಬಿಡುಗಡೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಪತ್ರಿಕಾ ಗೋಷ್ಠಿ: ಜಿಲ್ಲೆಗಳ ಶಾಂತಿ ಸೌಹಾರ್ದತೆ, ಘನ ಕೈಗಾರಿಕೋಧ್ಯಮಕ್ಕೆ ಪೂರಕ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ

Mumbai News Desk

ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರ ಬ್ಯಾಗ್ ಕಳವು: ಗೋವಾದ ಮಡಗಾಂವ್ ನಿಲ್ದಾಣದಲ್ಲಿ ಘಟನೆ

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ಜಾರ್ಜ್ ಫರ್ನಾಂಡಿಸ್ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿ ನಿಮಿತ್ತ ಪೂರ್ವಬಾವೀ ಸಭೆ

Mumbai News Desk

ಕರ್ನಿರೆ ಫೌಂಡೇಷನ್ ವತಿಯಿಂದ 27ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮ,

Mumbai News Desk