ಮಂಗಳೂರಿನಲ್ಲಿ ಶುಕ್ರವಾರ ನಡೆದ ಚಾರಿತ್ರಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಜನರ ದಶಕಗಳ ಆಶಯಕ್ಕೆ ಸ್ಪಂದಿಸಲಾಗಿದ್ದು, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷಾ ಸ್ಥಾನಮಾನ ನೀಡುವ ಮಹತ್ವದ ಹಾಗೂ ಐತಿಹಾಸಿಕ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಸುದೀರ್ಘ ಮೂರು ಗಂಟೆಗಳ ಕಾಲ ನಡೆದ ಸಚಿವ ಸಂಪುಟ ಸಭೆಯ ಬಳಿಕ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು, “ಸಂಪುಟದಲ್ಲಿ ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯ ಮಾನ್ಯತೆ ನೀಡಲು ಸರ್ವಾನುಮತದ ಸಮ್ಮತಿ ಸೂಚಿಸಲಾಗಿದೆ” ಎಂದು ಅಧಿಕೃತವಾಗಿ ಘೋಷಿಸಿದರು.
ಯು. ಟಿ. ಖಾದರ್ ಅವರ ಶ್ರಮವನ್ನು ಹಾಗೂ ಈ ಕುರಿತು ನಿರಂತರವಾಗಿ ಧ್ವನಿ ಎತ್ತಿದ ಪ್ರತಿಯೊಬ್ಬರನ್ನು ಸ್ಮರಿಸಿದ ಅವರು, “ಯು.ಟಿ. ಖಾದರ್ ಅವರು ಸ್ಪೀಕರ್ ಆದ ಬಳಿಕ ಮೊದಲ ಬಾರಿಗೆ ಸದನದಲ್ಲಿ ಪ್ರಸ್ತಾಪಿಸಿದ್ದೇ ತುಳು ಭಾಷೆಯ ವಿಚಾರ. ಅವರೊಬ್ಬರೇ ಅಲ್ಲ, ಕರಾವಳಿ ಭಾಗದ ಜನಪ್ರತಿನಿಧಿಗಳು ಹಾಗೂ ತುಳು ಪ್ರೇಮಿಗಳ ಸುದೀರ್ಘ ಹೋರಾಟ ಮತ್ತು ಬೇಡಿಕೆಗೆ ಕೊನೆಗೂ ನ್ಯಾಯ ಸಿಕ್ಕಿದೆ. ಈ ಐತಿಹಾಸಿಕ ಘಳಿಗೆ ಕಾರಣರಾದ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಅಭಿನಂದನೆಗಳು” ಎಂದರು.
ತಮ್ಮ ನಿರ್ಧಾರದ ಬಗ್ಗೆ ಮಾತನಾಡುತ್ತಾ, “ಹಿಂದಿನ ಸರ್ಕಾರಗಳು ಈ ಕೆಲಸವನ್ನು ಏಕೆ ಮಾಡಲಿಲ್ಲ ಎಂದು ನಾನು ಯಾರನ್ನೂ ಪ್ರಶ್ನೆ ಮಾಡಲು ಹೋಗುವುದಿಲ್ಲ. ಆದರೆ ನಮ್ಮ ಸರ್ಕಾರಕ್ಕೆ ಜನಪರ ಬದ್ಧತೆ ಇದೆ. ನಾವು ಕೇವಲ ಭಾವನೆಗಳನ್ನು ನೆಚ್ಚಿಕೊಂಡು ರಾಜಕಾರಣ ಮಾಡುವವರಲ್ಲ; ಬದಲಿಗೆ ಜನರ ನಿಜವಾದ ಬದುಕು, ಸಂಸ್ಕೃತಿ ಮತ್ತು ನಾಡಿನ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತೇವೆ” ಎಂದು ಸ್ಪಷ್ಟಪಡಿಸಿದರು.
ಕರಾವಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜಧಾನಿಯಿಂದ ಹೊರಗೆ, ಮಂಗಳೂರಿನ ಮಣ್ಣಿನಲ್ಲಿ ರಾಜ್ಯ ಸಚಿವ ಸಂಪುಟದ ಇಂತಹ ಮಹತ್ವದ ಸಭೆ ಜರುಗಿದ್ದು ವಿಶೇಷವಾಗಿತ್ತು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಹುಸಂಖ್ಯಾತರು ಮಾತನಾಡುವ ಮಾತೃಭಾಷೆಯಾಗಿರುವ ತುಳುವಿಗೆ ಅಧಿಕೃತ ಸ್ಥಾನಮಾನ ದೊರೆತಿರುವುದು, ಕರಾವಳಿ ಜನರ ದಶಕಗಳ ಭಾವನಾತ್ಮಕ ಹಾಗೂ ಸಾಂಸ್ಕೃತಿಕ ಹೋರಾಟಕ್ಕೆ ಸಿಕ್ಕ ದೊಡ್ಡ ಜಯವಾಗಿದೆ. ಸರ್ಕಾರದ ಈ ನಿರ್ಧಾರವು ತುಳು ಭಾಷೆ, ಸಾಹಿತ್ಯ ಮತ್ತು ಜಾನಪದ ಕಲೆಯ ಬೆಳವಣಿಗೆಗೆ ಹೊಸ ದಾರಿದೀಪವಾಗಲಿದೆ.




