27.7 C
Mumbai
July 23, 2026
Mumbai News Kannada
ಕರಾವಳಿ

ಪುರಭವನದಲ್ಲಿ  ‘ಬಣ್ಣಗಳ ಭಾವಲೋಕ’ ಶಿಷ್ಯೆ-ಪ್ರಶಿಷ್ಯೆಯರ ಸಾಧನೆಯ ಸಂಭ್ರಮ: ಡಾ.ವಸುಂಧರಾ ದೊರೆಸ್ವಾಮಿ







ಮಂಗಳೂರು : ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್ (ರಿ.) ಆಯೋಜಿಸಿದ ‘ಬಣ್ಣಗಳ ಭಾವಲೋಕ’ ಭರತನಾಟ್ಯ ಕಾರ್ಯಕ್ರಮ ಮೇ 18ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.

      ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದ ವಿದುಷಿ ಡಾ.ವಸುಂಧರಾ ದೊರೆಸ್ವಾಮಿ ಮಾತನಾಡಿ ‘ನಾದ ನೃತ್ಯ ಕೇಂದ್ರವನ್ನು ನಡೆಸಿಕೊಂಡು ಬಂದಿರುವ ಶಿಷ್ಯೆ ಭ್ರಮರಿ ಶಿವಪ್ರಕಾಶ್ ತಾನು ನೃತ್ಯ ಪ್ರದರ್ಶಿಸುವುದಲ್ಲದೆ ತನ್ನ ಶಿಷ್ಯೆಯರಿಗೆ ಆ ವಿದ್ಯೆಯನ್ನು ಧಾರೆಯೆರೆದು  ಆ ಮಕ್ಕಳ ಜೊತೆಯಲ್ಲಿ ನೃತ್ಯ ಕಾರ್ಯಕ್ರಮ ನೀಡುತ್ತಿದ್ದಾರೆ. ಇದು ಗುರುವಾಗಿ ಶಿಷ್ಯೆಯನ್ನು ಪ್ರಶಿಷ್ಯೆಯರ ಜೊತೆ ನೋಡುವ ಸಂಭ್ರಮ’ ಎಂದು ಹರ್ಷ ವ್ಯಕ್ತಪಡಿಸಿದರು.

     ‘ಭ್ರಮರಿ ಪ್ರಸ್ತುತ ಪಡಿಸಿದ ಬಣ್ಣಗಳ ಭಾವ ಲೋಕ ಪದವರ್ಣದಲ್ಲಿ ಎಲ್ಲವೂ ನಾಯಕ ಹಾಗೂ ನಾಯಕಿ ಭಾವದಲ್ಲಿದ್ದರೂ ಮೊದಲು ಏಕವ್ಯಕ್ತಿಯಾಗಿ ಅಭಿನಯಿಸಿ, ಎರಡನೇ ನೃತ್ಯ ಪ್ರದರ್ಶನದಲ್ಲಿ ಇಬ್ಬರು ಜೊತೆಯಾಗಿ ದ್ವಿಗುಳ ನೃತ್ಯಬಂಧವನ್ನು ಪ್ರದರ್ಶಿಸಿ, ಅಂತಿಮವಾಗಿ ನೃತ್ಯ ರೂಪಕದ ಪ್ರಸ್ತುತಿ ಹಾಗೂ ನೃತ್ಯ ಚೌಕಟ್ಟಿನಲ್ಲಿ ಇದೆಲ್ಲವನ್ನು ಪ್ರದರ್ಶಿಸುತ್ತಿರುವುದು ಅವರ ಒಳಗಿರುವ ಕ್ರಿಯಾಶೀಲತೆಗೆ ಹಿಡಿದ ಕೈಗನ್ನಡಿ’ ಎಂದವರು ಹೇಳಿದರು.

       ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ಕರಾವಳಿ ನೃತ್ಯ ಪರಿಷತ್ ಅಧ್ಯಕ್ಷ ವಿದ್ವಾನ್ ಯು. ಕೆ. ಪ್ರವೀಣ್ ಮಾತನಾಡಿ ‘ಭ್ರಮರಿಯವರ ಅಧ್ಭುತವಾದ ನೃತ್ಯ ಸಂಯೋಜನೆ ಹಾಗೂ ಪ್ರಸ್ತುತಪಡಿಸಿದ ರೀತಿ ಶ್ಲಾಘನೀಯ. ಬಣ್ಣದ ಭಾವಲೋಕ ಎಂಬ ಹೆಸರನ್ನು ಕಾರ್ಯಕ್ರಮಕ್ಕೆ ಇಟ್ಟಂತೆ ಪ್ರೇಕ್ಷಕರನ್ನು ಹಿಡಿದಿಟ್ಟು ಭಾವ ಲೋಕಕ್ಕೆ ಕೊಂಡೊಯ್ದ  ಕಾರ್ಯಕ್ರಮ ಉತ್ತಮ ಯಶಸ್ಸನ್ನು ಕಂಡಿದೆ’ ಎಂದರು.

ನೃತ್ಯ- ಸಾಹಿತ್ಯದ ಎರಕ: ಭಾಸ್ಕರ ರೈ

       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಲೇಖಕ ಮತ್ತು ಯಕ್ಷಗಾನ ವಿದ್ವಾಂಸ  ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ‘ಹೊಸ ಪರಿಕಲ್ಪನೆಯ  ಬಣ್ಣಗಳ ಭಾವಲೋಕ  ಸಾಹಿತ್ಯ ಮತ್ತು ನೃತ್ಯವನ್ನು ಎರಕ ಹೊಯ್ದ ವಿಶಿಷ್ಟ ಕಾರ್ಯಕ್ರಮ. ಇದರಿಂದ ಹೊಸತನ್ನು ಬಯಸುವ ಜನರ ನಿರೀಕ್ಷೆ ಸುಳ್ಳಾಗದು. ಉದಿಸಿ ಒಂದು ದಶಕ ದಾಟಿದ ನಾದ ನೃತ್ಯ ಸ್ಕೂಲ್ ಆಫ್ ಡಾನ್ಸ್ ಜನರಲ್ಲಿ ಹೊಸ ಅಭಿರುಚಿ ಹುಟ್ಟಿಸುವ ವಿನೂತನ ಕಾರ್ಯಕ್ರಮಗಳ ಮೂಲಕ ಪ್ರಗತಿಯತ್ತ ಹೆಜ್ಜೆ ಹಾಕುತ್ತಿರುವುದು ಸ್ತುತ್ಯ’ ಎಂದರು.

ತ್ರಿವಿಧ ಭಾವಲೋಕ :

           ನೃತ್ಯ ಕಾರ್ಯಕ್ರಮದಲ್ಲಿ ಮೊದಲಿಗೆ ಏಕವ್ಯಕ್ತಿ ಪ್ರದರ್ಶನದಲ್ಲಿ ಪ್ರಣಯಿನಿಯಾದ ಹಿಡಿಂಬೆಯ ಮನೋ ಪ್ರಪಂಚ ಅಭಿವ್ಯಕ್ತಗೊಂಡರೆ, ದ್ವಿಗುಳ ನೃತ್ಯ ಪ್ರದರ್ಶನದಲ್ಲಿ ನಾಯಕಿಯಾದ ಗೋಪಿಕೆಯು ಶ್ರೀ ಕೃಷ್ಣರಾಯನ ಬರವನ್ನೇ ಎದುರು ನೋಡುತ್ತ ತನ್ನ ಸಖಿಯ ಮೂಲಕ ಶ್ರೀ ಕೃಷ್ಣನನ್ನು ತನ್ನೆಡೆಗೆ ಕರೆಸಿಕೊಳ್ಳುವ ನೃತ್ಯವನ್ನು ಪ್ರಸ್ತುತಪಡಿಸಲಾಯ್ತು. ಅಂತಿಮವಾಗಿ ಮೀನಾಕ್ಷಿ ಕಲ್ಯಾಣ ನೃತ್ಯ ನಾಟಕದ ಮೂಲಕ ಕಾರ್ಯಕ್ರಮ ಮುಕ್ತಾಯ ಗೊಂಡಿತು.

           ಕಲಾವಿದರಿಗೆ ನಟುವಾಂಗದಲ್ಲಿ ಡಾ. ವಸುಂಧರಾ ದೊರೆಸ್ವಾಮಿ, ಹಾಡುಗಾರಿಕೆಯಲ್ಲಿ ಕುಮಾರಿ ಶ್ರೀರಕ್ಷಾ, ಮೃದಂಗದಲ್ಲಿ ವಿದ್ವಾನ್ ವಿ. ಕೆ. ಹೆಚ್. ರವಿಕುಮಾರ್, ವಯಲಿನ್ ನಲ್ಲಿ ವಿ. ಗಣರಾಜ ಕಾರ್ಲೆ ಹಾಗೂ ಕೊಳಲಿನಲ್ಲಿ ವಿ. ಕೃಷ್ಣ ಪವನ್ ಕುಮಾರ್ ಸಹಕರಿಸಿದರು.



Related posts

ಯಕ್ಷಧ್ರುವ ಪಟ್ಲ ಸಂಭ್ರಮದ ಉದ್ಘಾಟನೆ 

Mumbai News Desk

ಮಂಗಳೂರು : ಕರಾವಳಿ ಭಾಗದ ಅಭಿವೃದ್ಧಿ ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನಕ್ಕೆ ಜನಪ್ರತಿನಿಧಿಗಳ ಆಗ್ರಹ

Mumbai News Desk

ಕುಂದಾಪುರ ಕನ್ನಡ ಸಂಸ್ಕೃತಿ ಪ್ರತಿಷ್ಠಾನ ಬೈಂದೂರು ಕೆಸರಲ್ಲೊಂದು ದಿನ ಗಮ್ಮತ್,

Mumbai News Desk

ಶಿಬರೂರು ಬ್ರಹ್ಮಕಲಶೋತ್ಸವ ಮತ್ತು ನಾಗಮಂಡಲ ಪೂರ್ವಭಾವಿ ಸಭೆ,* ನಟಿ ಶಿಲ್ಪಾ ಶೆಟ್ಟಿಯಿಂದ ಬೆಳ್ಳಿಕಲಶ ಸಮರ್ಪಣೆ

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ಕುಂಭ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Mumbai News Desk

ಜನವರಿ 26ರಂದು ಕರಾವಳಿ ಕಡಲತೀರದಲ್ಲೊಂದು ವಿಶೇಷ, ತಪ್ಪದೇ ಭಾಗವಹಿಸಿ

Mumbai News Desk