July 22, 2026
Mumbai News Kannada
ಮುಂಬಯಿ

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಕಚೇರಿ: ದಶಮಾನೋತ್ಸವ ಉದ್ಘಾಟನೆ







ಯುವಕರನ್ನು ಸಂಘಟನೆಯತ್ತ ಆಕರ್ಷಿಸುವ ಕೆಲಸ ಮಾಡೋಣ: ಸಂತೋಷ್ ಕೆ. ಪುತ್ರನ್

ಚಿತ್ರ: ಧನಂಜಯ ಪೂಜಾರಿ, ವರದಿ: ರವಿ. ಬಿ. ಅಂಚನ್ ಪಡುಬಿದ್ರಿ

ಡೊಂಬಿವಲಿ, ಡಿ. 15: ಮಹಾನಗರದ ಹಿರಿಯ ಸಂಸ್ಥೆಗಳಲ್ಲಿ ಒಂದಾದ ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿಯ ಡೊಂಬಿವಲಿ ಸ್ಥಳೀಯ ಕಚೇರಿಯ ವತಿಯಿಂದ ದಶಮಾನೋತ್ಸವ ಸಂಭ್ರಮವನ್ನು ಡಿ. 14ರ ಭಾನುವಾರದಂದು ಡೊಂಬಿವಲಿ ಪೂರ್ವದ ಭೋಪರ್ ರಸ್ತೆಯಲ್ಲಿರುವ ವರದ ಸಿದ್ದಿವಿನಾಯಕ ಸಭಾಗೃಹದಲ್ಲಿ ಉದ್ಘಾಟಿಸಲಾಯಿತು.

​ಸಂಘದ ಅಧ್ಯಕ್ಷ ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂತೋಷ್ ಕೆ. ಪುತ್ರನ್ ಮಾತನಾಡಿ, “ನಮ್ಮ ಸಮಾಜವು ಬೇರೆ ಸಮಾಜಗಳಂತೆ ಒಗ್ಗಟ್ಟಿನ ಶಕ್ತಿಯಾಗಿ ಹೊರಹೊಮ್ಮಲು ಸಂಘಟಕರ ಇಚ್ಛಾಶಕ್ತಿಯ ಕೊರತೆ ಅಥವಾ ಸಕಾಲದಲ್ಲಿ ಸಂಘಟಿತರಾಗದಿರುವುದು ಕಾರಣವಿರಬಹುದು. ಸಂಘದ ಮೂರು ಸ್ಥಳೀಯ ಕಚೇರಿಗಳಲ್ಲಿ ಡೊಂಬಿವಲಿ ಸಮಿತಿಯು ಅತ್ಯಂತ ಉತ್ಸಾಹದಿಂದ ಕೆಲಸ ಮಾಡುತ್ತಿರುವುದು ಸಂತೋಷ ತಂದಿದೆ,” ಎಂದರು.

​ಮುಂದುವರಿದು ಮಾತನಾಡಿದ ಅವರು, “ಇದೇ ಹುಮ್ಮಸ್ಸಿನೊಂದಿಗೆ ಮಹಿಳಾ ವಿಭಾಗವನ್ನು ಪ್ರಾರಂಭಿಸಲಾಗಿದೆ. ಯುವಕರನ್ನು ಸಂಘಟನೆಯತ್ತ ಆಕರ್ಷಿಸಲು ಜನವರಿ 18ರಂದು ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಇದರ ಮೂಲಕ ಯುವಕ-ಯುವತಿಯರನ್ನು ಸಂಘದ ಮುಖ್ಯವಾಹಿನಿಗೆ ತರುವ ಮಹದಾಸೆ ಕಾರ್ಯಕಾರಿ ಸಮಿತಿಯದ್ದಾಗಿದೆ. ಸಮಾಜದ ಸಶಕ್ತೀಕರಣಕ್ಕಾಗಿ ವೆಬ್‌ಸೈಟ್ ಕಾರ್ಯವನ್ನು ಆರಂಭಿಸಲಾಗಿದೆ. ಸಂಘಕ್ಕೆ ಆದಾಯ ತರುವ ಮೂಲಗಳನ್ನು ನೋಡಿ ಸಭಾಗೃಹ ನಿರ್ಮಿಸುವ ಉದ್ದೇಶವೂ ಇದೆ. ಇಂತಹ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನಿಸಿದಾಗ, ನಮ್ಮ ಸಮಾಜದ ಒಗ್ಗಟ್ಟನ್ನು ನೋಡಿ ಮೀಸಲಾತಿ ಭೂಮಿಯನ್ನು ಪಡೆಯುವ ಕಾರ್ಯಕ್ಕೆ ಡೊಂಬಿವಲಿ ಸಮಿತಿ ಕಾರ್ಯಪ್ರವೃತ್ತರಾಗಬೇಕು. ದಶಮಾನೋತ್ಸವ ಸಮಿತಿ ವತಿಯಿಂದ ದೊಡ್ಡ ಮಟ್ಟದ ನಿಧಿ ಸಂಗ್ರಹಿಸುವ ಯೋಜನೆಯನ್ನು ಹಾಕಿಕೊಳ್ಳಿ, ನಮ್ಮ ಸಹಕಾರ ಸದಾ ಇದೆ,” ಎಂದು ಪ್ರೋತ್ಸಾಹಿಸಿದರು.

25 ಲಕ್ಷ ನಿಧಿ ಯೋಜನೆ ಸ್ವಾಗತಾರ್ಹ: ಸುರೇಶ್ ಕಾಂಚನ್

​ದಶಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಗೌರವ ಅಧ್ಯಕ್ಷ ಸುರೇಶ್ ಕಾಂಚನ್, “ಸಮಾಜ ಬಾಂಧವರನ್ನು ಒಗ್ಗೂಡಿಸುವ ಇಂತಹ ಕಾರ್ಯಕ್ರಮಗಳು ಸದಾ ನಡೆಯುತ್ತಿರಬೇಕು. ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಕಾರ್ಯಾಧ್ಯಕ್ಷ ರಾಜು ಮೊಗವೀರ ಮತ್ತು ಕಾರ್ಯದರ್ಶಿ ಸಂತೋಷ್ ಪುತ್ರನ್ ಅವರು ಅಣ್ಣ-ತಮ್ಮಂದಿರಂತೆ ಸಮಾಜದ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇದೇ ರೀತಿ ಸಮಾಜ ಬಾಂಧವರು ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಸಮಾಜ ಇನ್ನಷ್ಟು ಸದೃಢವಾಗುವುದರಲ್ಲಿ ಸಂದೇಹವಿಲ್ಲ,” ಎಂದರು.

​ಸಮಾಜದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಸಲುವಾಗಿ 25 ಲಕ್ಷದ ನಿಧಿ ಸಂಗ್ರಹಿಸುವ ಯೋಜನೆಯು ಸ್ವಾಗತಾರ್ಹ. “ಈ ಕಾರ್ಯಕ್ಕೆ ನಾನು ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ನೀಡುತ್ತೇನೆ. ಆದರೆ ಜಮಾ ಮಾಡಿದ ಹಣ ದುರುಪಯೋಗವಾಗಬಾರದು. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಒಗ್ಗಟ್ಟಿನಿಂದ ಕೆಲಸ ಮಾಡಿ ಸಮಾಜವನ್ನು ಇನ್ನಷ್ಟು ಬಲಿಷ್ಠಗೊಳಿಸೋಣ. ನಿಮ್ಮ ನಿಧಿ ಸಂಗ್ರಹಿಸುವ ಮಹದಾಸೆ ಯಶಸ್ವಿಯಾಗಲಿ, ತಾಯಿ ಮಹಿಷಮರ್ದಿನಿಯ ಆಶೀರ್ವಾದ ಸದಾ ಇರಲಿ,” ಎಂದು ಹಾರೈಸಿದರು.

ನಿಧಿ ಸಂಗ್ರಹದ ಗುರಿ ಒಂದು ಕೋಟಿ ಇರಲಿ: ಮಹಾಬಲ ಕುಂದರ್

​ಸಂಘದ ಮಾಜಿ ಅಧ್ಯಕ್ಷ ಮಹಾಬಲ ಕುಂದರ್ ಮಾತನಾಡಿ, “ಡೊಂಬಿವಲಿ ಪರಿಸರದಲ್ಲಿ ಸ್ವಜಾತಿ ಬಾಂಧವರು ಬಹಳಷ್ಟಿದ್ದಾರೆ. ಅವರೆಲ್ಲರನ್ನು ಒಂದೇ ಛತ್ರದಡಿಯಲ್ಲಿ ತರುವ ಸಾಹಸದ ಕೆಲಸ ಡೊಂಬಿವಲಿ ಸಮಿತಿಯಿಂದ ನಡೆಯಬೇಕು. ಇಂದು ಉತ್ತಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಅತೀವ ಸಂತೋಷವಾಗಿದೆ. ನಿಧಿ ಸಂಗ್ರಹಿಸುವ ನಿಮ್ಮ ಯೋಚನೆ ಇನ್ನಷ್ಟು ದೊಡ್ಡದಾಗಿರಲಿ. ಸಂಘದ ಅಧ್ಯಕ್ಷರ ಮುತುವರ್ಜಿಯಲ್ಲಿ ಸಭಾಗೃಹ ಮಾಡುವ ದೊಡ್ಡ ಯೋಜನೆ ಶೀಘ್ರವಾಗಿ ನಡೆಯುವ ಭರವಸೆ ಇದೆ. ನೀವು ವಿದ್ಯಾರ್ಥಿವೇತನಕ್ಕೆ ಒಂದು ಕೋಟಿ ರೂ. ಸಂಗ್ರಹಿಸುವ ಯೋಜನೆ ಹಾಕಿ ಮುನ್ನಡೆಯಿರಿ, ಆಗ ಗುರಿ ಪೂರ್ಣಗೊಳ್ಳುವುದು ಖಂಡಿತ,” ಎಂದು ಸಲಹೆ ನೀಡಿದರು.

​ಮೊಗವೀರ ವ್ಯವಸ್ಥಾಪಕ ಮಂಡಳಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಯಧುವೀರ ಪುತ್ರನ್ ಮಾತನಾಡಿ, “ನಿಮ್ಮ ಮಹತ್ವಾಕಾಂಕ್ಷೆಯ ನಿಧಿ ಸಂಗ್ರಹಿಸುವ ಯೋಜನೆ ಉತ್ತಮವಾಗಿದೆ. ಸ್ಥಳೀಯ ಕಚೇರಿ ಸಂಘಟಿತರಾಗಬೇಕಾದರೆ ಇಂತಹ ಯೋಜನೆಗಳನ್ನು ಸದಾ ಹಮ್ಮಿಕೊಳ್ಳಬೇಕು. ಮಾಡಿಟ್ಟು ಶ್ರೀಮಂತನಾಗುವ ಬದಲು ಕೊಟ್ಟು ಶ್ರೀಮಂತನಾಗಬೇಕು. ಈ ಕಾರ್ಯಕ್ಕೆ ಸಮಾಜ ಬಾಂಧವರು ತುಂಬು ಹೃದಯದಿಂದ ಸಹಕರಿಸೋಣ. ಸಾಂಸ್ಕೃತಿಕ ನಗರ ಡೊಂಬಿವಲಿಯಲ್ಲಿ ಮೊಗವೀರ ಮಹಾಜನ ಸೇವಾ ಸಂಘ ಉತ್ತಮವಾದ ಕೆಲಸಗಳನ್ನು ಮಾಡುತ್ತಿದೆ. ಮೊಗವೀರ ವ್ಯವಸ್ಥಾಪಕ ಮಂಡಳಿ ಮತ್ತು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ-ಹೋಬಳಿ ಒಂದೇ ಮುಖದ ನಾಣ್ಯಗಳು. ಈ ಎರಡು ಸಂಸ್ಥೆಗಳು ಒಟ್ಟಿಗೆ ಸೇರಿ ಕಾರ್ಯಕ್ರಮ ಮಾಡೋಣ,” ಎಂದು ಕರೆ ನೀಡಿದರು.

​ಸ್ಥಳೀಯ ಸಮಿತಿಯ ಗೌರವ ಅಧ್ಯಕ್ಷ ಭಾಸ್ಕರ್ ಕಾಂಚನ್ ಪ್ರಸ್ತಾವಿಕ ಮಾತುಗಳನ್ನಾಡುತ್ತಾ, “ನಮ್ಮ ಪೂರ್ವಜರು ಹಾಕಿಕೊಟ್ಟ ರೂಪರೇಷೆಯಂತೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಮಾಜಿ ಅಧ್ಯಕ್ಷರಾದ ಮಹಾಬಲ ಕುಂದರ್ ಅವರ ಪ್ರೇರಣೆಯಂತೆ ಇಲ್ಲಿ ಸ್ಥಳೀಯ ಕಚೇರಿಯ ರಚನೆಯಾಗಿದೆ. ನಾವು ಹಳದಿ-ಕುಂಕುಮ, ಪುಸ್ತಕ ವಿತರಣೆ, ಡ್ರಾಯಿಂಗ್ ಸ್ಪರ್ಧೆ, ವಿದ್ಯಾರ್ಥಿವೇತನ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಎಲ್ಲರ ಸಹಕಾರದಿಂದ ಪಗಡಿ ಕಟ್ಟಡದಲ್ಲಿ ಸ್ವಂತ ಕಚೇರಿಯನ್ನು ಮಾಡಿದ್ದೇವೆ. ಸಂಘದ ಸದಸ್ಯರ ಬೆಂಬಲ ಸಿಕ್ಕರೆ ನಾವು ಇನ್ನೂ ಹೆಚ್ಚಿನ ಕಾರ್ಯಕ್ರಮಗಳನ್ನು ಮಾಡಲು ತಯಾರಿದ್ದೇವೆ,” ಎಂದು ವಿವರಿಸಿದರು.

​ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಾಜು ಮೊಗವೀರ ಅತಿಥಿ ಗಣ್ಯರನ್ನು ಸ್ವಾಗತಿಸಿದರು.

​ಕಾರ್ಯಕ್ರಮಕ್ಕೆ ಮುನ್ನ ಅತಿಥಿ ಗಣ್ಯರು ಶ್ರೀ ಮಹಿಷಮರ್ದಿನಿ ಅಮ್ಮನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ನಮಿಸಿದರು. ಪೂಜಾ ಬಂಗೇರ, ಸಾನಿಕ ಮೊಗವೀರ, ಜ್ಯೋತಿ ನಾಯ್ಕ್, ಆಶಾ ಪೂಜಾರಿ, ಅಮೃತಾ ಮೊಗವೀರ ಅವರ ಪ್ರಾರ್ಥನೆಯೊಂದಿಗೆ ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

​ವೇದಿಕೆಯ ಮೇಲೆ ರಾಜು ಮೊಗವೀರ, ಹರೀಶ್ ಶೆಟ್ಟಿ, ಲಕ್ಷಣ ಪೂಜಾರಿ, ಗಣೇಶ್ ಮೆಂಡನ್, ರತ್ನಾಕರ್ ಚಂದನ್, ನಾಗರಾಜ ಶ್ರೀಯಾನ್, ಸಂತೋಷ ಪುತ್ರನ್, ಭಾಸ್ಕರ್ ನಾಯ್ಕ್, ಶೇಖರ್ ನಾಯ್ಕ್, ಭಾರತಿ ನಾಯ್ಕ್, ವಸಂತಿ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

​ಸಾಂಸ್ಕೃತಿಕ ಕಾರ್ಯಕ್ರಮವನ್ನು ಜಯಶ್ರೀ ನಾಯ್ಕ್ ನಿರೂಪಿಸಿದರೆ, ಸಭಾ ಕಾರ್ಯಕ್ರಮವನ್ನು ವಸಂತ ಸುವರ್ಣ ನಿರೂಪಿಸಿದರು. ಕೊನೆಯಲ್ಲಿ ಸಂತೋಷ್ ಪುತ್ರನ್ ವಂದಿಸಿದರು.

​ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿವಿಧ ನೃತ್ಯಗಳು ಹಾಗೂ ಸಿರಿ ಕಲಾ ಮೇಳ ಬೆಂಗಳೂರು ಮತ್ತು ಅತಿಥಿ ಕಲಾವಿದರಿಂದ ಶ್ರೀ ಕೃಷ್ಣ ಪಾರಿಜಾತ ಎಂಬ ಪೌರಾಣಿಕ ಯಕ್ಷಗಾನ ನಡೆಯಿತು.



Related posts

ಸಮಾಜ ಸೇವಕ ಡಾ. ಪಿ.ವಿ. ಶೆಟ್ಟಿಗೆ ಕರ್ನಾಟಕ ಸಂಘ ಮುಂಬಯಿ ಗೌರವಾರ್ಪಣೆ

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ ಬದ್ಲಾಪುರದ ಮೋಯಾ ನಗರಿಯಲ್ಲಿ ಗಣ-ಹೋಮ, ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ

Mumbai News Desk

ವಾಲ್ಕೇಶ್ವರ ಕವಳೆ ಮಠ ದಲ್ಲಿ  ಪ್ರತಿಷ್ಠಾ ವರ್ಧಂತಿ ಉತ್ಸವ. 

Mumbai News Desk

ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣೆ ಶಿಬಿರ

Mumbai News Desk

ಮುಂಬೈಯ ಪತ್ರಕರ್ತರ ಹೆಸರಲ್ಲಿ ನಡೆಸುತ್ತಿರುವ ಸಂಘಟನೆ ಯಲ್ಲಿ ಗೊಂದಲ.

Mumbai News Desk

ಕುಲಾಲ ಪರ್ಬ  ಮುಂಬೈಯಲ್ಲಿ ಆಮಂತ್ರಣ ಪತ್ರಿಕೆ ವಿತರಣೆ.

Mumbai News Desk