July 23, 2026
Mumbai News Kannada
ಮುಂಬಯಿ

ಫೋರ್ಟ್‌ನಲ್ಲಿ ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ 81ನೇ ವಾರ್ಷಿಕ ಮಹಾಪೂಜೆ ಸಂಪನ್ನ







ಶೀಘ್ರದಲ್ಲೇ ಭವ್ಯ ಶನಿಮಹಾತ್ಮ ಮಂದಿರ ನಿರ್ಮಾಣದ ಗುರಿ: ರವಿ ಬಂಗೇರ.

ಚಿತ್ರ: ಧನಂಜಯ ಪೂಜಾರಿ, ವರದಿ: ಇನ್ನಂಜೆ ಜಯರಾಮ್

ಮುಂಬಯಿ: “ಭಕ್ತರ, ದಾನಿಗಳ ಹಾಗೂ ಸಮಿತಿಯ ಸರ್ವ ಸದಸ್ಯರ ದಶಕಗಳ ನಿಸ್ವಾರ್ಥ ಸಹಕಾರದಿಂದ ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯು ಇಂದು 81ನೇ ಮೈಲಿಗಲ್ಲನ್ನು ತಲುಪಿದೆ. ಸಮಿತಿಯು ತನ್ನದೇ ಆದ ಭವ್ಯ ಮಂದಿರವನ್ನು ನಿರ್ಮಾಣ ಮಾಡುವ ಮಹದಾಸೆ ಹೊಂದಿದ್ದು, ಶನಿ ದೇವರ ಅನುಗ್ರಹದಿಂದ ಈ ಯೋಜನೆ ಶೀಘ್ರವಾಗಿ ಸಾಕಾರಗೊಳ್ಳಲಿದೆ,” ಎಂದು ಸಮಿತಿಯ ಅಧ್ಯಕ್ಷ ರವಿ ಎಲ್. ಬಂಗೇರ ವಿಶ್ವಾಸ ವ್ಯಕ್ತಪಡಿಸಿದರು.

​ಫೋರ್ಟ್‌ನ ಮಿಂಟ್ ರೋಡ್‌ನಲ್ಲಿರುವ ಖಾ ಖೇಕ್ಸಿ ಚಾರಿಟೀಸ್ ಸಭಾಗೃಹದಲ್ಲಿ ಡಿಸೆಂಬರ್ 20ರ ಶನಿವಾರ ಜರುಗಿದ ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿಯ 81ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಹಾಗೂ ಶ್ರೀ ಶನೀಶ್ವರ ಮಹಾಪೂಜೆಯ ಧಾರ್ಮಿಕ ಸಭೆಯಲ್ಲಿ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು.

ಸಂಸ್ಕಾರವಂತ ಸಮಾಜ ನಿರ್ಮಾಣವಾಗಲಿ: ಅಶೋಕ್ ಪುರೋಹಿತ್

ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅಂತರರಾಷ್ಟ್ರೀಯ ವಾಸ್ತು ತಜ್ಞ ಅಶೋಕ್ ಪುರೋಹಿತ್, “ಮನಸ್ಥಿತಿ ಸಮಸ್ಥಿತಿಯಲ್ಲಿದ್ದಾಗ ಮಾತ್ರ ಜೀವನದ ಪರಿಸ್ಥಿತಿ ಉತ್ತಮವಾಗಿರಲು ಸಾಧ್ಯ. ಮನುಷ್ಯ ಅಹಂಕಾರ ಬಿಟ್ಟು ಮಾನವೀಯತೆಯಿಂದ ಬದುಕಿದಾಗ ಶನಿ ದೇವರ ಕೃಪೆ ಲಭಿಸುತ್ತದೆ. ಇಂದಿನ ಮಕ್ಕಳು ಮೊಬೈಲ್ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದು, ಅವರಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ. ಪಾಲಕರು ಮಕ್ಕಳನ್ನು ಇಂತಹ ಧಾರ್ಮಿಕ ಉತ್ಸವಗಳಿಗೆ ಕರೆತಂದು ಸಂಸ್ಕೃತಿಯ ಅರಿವು ಮೂಡಿಸಬೇಕು,” ಎಂದರು.

ಹಿರಿಯರ ಹಾದಿ ನಮಗೆ ದಾರಿದೀಪ: ಸುರೇಂದ್ರ ಶೆಟ್ಟಿ

ಬೋಂಬೆ ಬಂಟ್ಸ್ ಅಸೋಸಿಯೇಶನ್‌ನ ಮಾಜಿ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ ಮಾತನಾಡಿ, “ನಮ್ಮ ಹಿರಿಯರು ಕಠಿಣ ಪರಿಶ್ರಮ ಮತ್ತು ದೈವಭಕ್ತಿಯಿಂದ ಈ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಅವರ ದೂರದೃಷ್ಟಿಯಿಂದಾಗಿ ಇಂದು ನಮ್ಮ ಸಂಸ್ಕೃತಿ ಮುಂಬಯಿಯಂತಹ ನಗರದಲ್ಲಿ ಜೀವಂತವಾಗಿದೆ. ಈ ಸಮಿತಿಯಲ್ಲಿ ಯುವಶಕ್ತಿ ಸಕ್ರಿಯವಾಗಿರುವುದು ಸಂತಸದ ಸಂಗತಿ,” ಎಂದರು.

ಶನಿ ದೇವರ ನ್ಯಾಯ ಎಲ್ಲರಿಗೂ ಸಮಾನ: ರವಿ ಆಚಾರ್ಯ

ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಅಧ್ಯಕ್ಷ ರವಿ ಆಚಾರ್ಯ ಮಾತನಾಡಿ, “ಶನಿ ದೇವರು ನ್ಯಾಯಾಧಿಪತಿ. ಧರ್ಮದ ಹಾದಿಯಲ್ಲಿ ನಡೆಯುವವರಿಗೆ ಅವರು ಸದಾ ಅನುಗ್ರಹಿಸುತ್ತಾರೆ. 81 ವರ್ಷಗಳಿಂದ ಈ ಸಂಸ್ಥೆ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವುದು ಶನಿ ದೇವರ ಕೃಪಾಕಟಾಕ್ಷಕ್ಕೆ ಸಾಕ್ಷಿ,” ಎಂದು ಶ್ಲಾಘಿಸಿದರು.

ಈ ಸಂಸ್ಥೆಯು ಉತ್ತರೋತ್ತರ ಅಭಿವೃದ್ಧಿ ಹೊಂದಲಿ: ಸುಂದರ್ ಡಿ ಅಡಪ

ಉದ್ಯಮಿ ಸುಂದರ್ ಡಿ. ಅಡಪ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಹಿರಿಯರ ನಿಸ್ವಾರ್ಥ ಸೇವೆ ಹಾಗೂ ದಾನಿಗಳ ಸಹಕಾರವೇ ಅಡಿಪಾಯ ಎಂದರು.

ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ:

ಸೇವಾ ಸಮಿತಿಯ ವತಿಯಿಂದ ಹಿರಿಯ ಸಮಾಜ ಸೇವಕ, ಶ್ರೀ ಶನಿ ಮಹಾತ್ಮ ತ್ರಿಭುವನೇಶ್ವರಿ ಸೇವಾ ಸಮಿತಿ ಫೋರ್ಟ್ ಅಧ್ಯಕ್ಷ ಬಪ್ಪನಾಡು ಕೂಸಪ್ಪ ಅವರಿಗೆ ‘ನಾರಾಯಣ ಬಿ. ಸಾಲ್ಯಾನ್ ಸ್ಮರಣಾರ್ಥ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಹಿರಿಯ ಸದಸ್ಯ ಮಹೇಶ್ ನಾಯಕ್ ದಂಪತಿ ಹಾಗೂ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನವೀನ್ ಪೂಜಾರಿ ಪಡು ಇನ್ನ ದಂಪತಿಯನ್ನು ಸನ್ಮಾನಿಸಲಾಯಿತು. ಹರೀಶ್ ಶಾಂತಿ ಹೆಜಮಾಡಿ ಸನ್ಮಾನ ಪತ್ರ ವಾಚಿಸಿದರು.

ಅನ್ನದಾನದ ಸೇವೆ ನೀಡಿದ ಅಭಿಷೇಕ್ ಸತೀಶ್ ಕೋಟ್ಯಾನ್ ಹಾಗೂ ಡಾ. ಭವ್ಯಾ ಅಭಿಷೇಕ್ ಕೋಟ್ಯಾನ್ ಪರವಾಗಿ ಅರ್ಚಕ ಸತೀಶ್ ಎನ್. ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಭಾಗವತಿಕೆಯಲ್ಲಿ ಸಹಕರಿಸಿದ ಸಂಧ್ಯಾ ಪೂಜಾರಿ ದರ್ಜೆ ಹಾಗೂ ಗರಿಷ್ಠ ನಿಧಿ ಸಂಗ್ರಹಿಸಿದ ಗೌರವ ಪ್ರಧಾನ ಕಾರ್ಯದರ್ಶಿ ಶರತ್ ಜಿ. ಪೂಜಾರಿ ಪಡುಬೆಳ್ಳೆ, ಮಧುಕರ್ ಟಿ. ಕೋಟ್ಯಾನ್ ಮತ್ತು ಸಲಹೆಗಾರ ಜೆ. ಜೆ. ಕೋಟ್ಯಾನ್ ಅವರನ್ನು ಸತ್ಕರಿಸಲಾಯಿತು.

ಧಾರ್ಮಿಕ ಕೈಂಕರ್ಯಗಳು:

ಬೆಳಿಗ್ಗೆ ಪುರೋಹಿತ ಹರೀಶ್ ಶಾಂತಿ ಪೌರೋಹಿತ್ಯದಲ್ಲಿ ಗಣಹೋಮ, ಪ್ರಾರ್ಥನೆ ಹಾಗೂ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿತು. ಸಮಿತಿಯ ಸದಸ್ಯ ಸುರೇಶ್ ಪೂಜಾರಿ ದಂಪತಿ ಪೂಜಾ ವೃತಕೈಗೊಂಡರು. ವಿದ್ಯಾದಾಯಿನಿ ಭಜನಾ ಮಂಡಳಿ ಫೋರ್ಟ್ ಹಾಗೂ ಮಹಾವಿಷ್ಣು ಮಂದಿರ ಮುಂಬ್ರಾ ಮಿತ್ರ ಭಜನಾ ಮಂಡಳಿಯಿಂದ ಕುಣಿತ ಭಜನೆ ನಡೆಯಿತು.

ಸಮಾರಂಭದಲ್ಲಿ ಸಮಿತಿಯ ಅಧ್ಯಕ್ಷ ರವಿ ಎಲ್. ಬಂಗೇರ ಅವರೊಂದಿಗೆ ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರ ಡೊಂಬಿವಲಿ ಅಧ್ಯಕ್ಷ ಸೋಮನಾಥ ಪೂಜಾರಿ, ಶನೀಶ್ವರ ಮಂದಿರ ಭಟ್ಟಪಾಡಾ ಭಾಂಡೂಪ್ ಗೌರವ ಕಾರ್ಯದರ್ಶಿ ಸದಾನಂದ ಎಮ್. ಅವಿನ್, ಘಾಟ್ಕೋಪರ್ ಮೌಲನಾ ಕಂಪೌಂಡ್ ಶನೀಶ್ವರ ಮಂದಿರದ ಪ್ರಧಾನ ಕಾರ್ಯದರ್ಶಿ ನವೀನ್ ಸುವರ್ಣ ಬೇಂದ್ರೆ ಹಾಗೂ ಘಾಟ್ಕೋಪರ್ ಸಾರಂಗ್ ಚಾಲ್ ಜೈ ಭವಾನಿ ಶನೀಶ್ವರ ಮಂದಿರದ ಅಧ್ಯಕ್ಷ ಶಂಕರ್ ಪೂಜಾರಿ ಉಪಸ್ಥಿತರಿದ್ದು ಜ್ಯೋತಿ ಬೆಳಗಿಸಿದರು.

ಮಧ್ಯಾಹ್ನ ಅರ್ಚಕ ಸತೀಶ್ ಎನ್. ಸಾಲ್ಯಾನ್ ಅವರ ನೇತೃತ್ವದಲ್ಲಿ ಕಲಶ ಪ್ರತಿಷ್ಠಾಪನೆ ಹಾಗೂ ‘ಶ್ರೀ ಶನೀಶ್ವರ ಮಹಾತ್ಮ’ ಯಕ್ಷಗಾನ ತಾಳಮದ್ದಳೆ ಜರುಗಿತು. ನಗರದ ಪ್ರಸಿದ್ಧ ಭಾಗವತರುಗಳು, ಹಿಮ್ಮೇಳ ಕಲಾವಿದರು ಹಾಗೂ ಅರ್ಥದಾರಿಗಳು ಯಕ್ಷಗಾನ ತಾಳಮದ್ದಳೆಯಲ್ಲಿ ಪಾಲ್ಗೊಂಡಿದ್ದರು.

​ವೇದಿಕೆಯಲ್ಲಿ ಉಪಾಧ್ಯಕ್ಷ ವಿಶ್ವನಾಥ್ ಭಂಡಾರಿ, ಕೋಶಾಧಿಕಾರಿ ಪ್ರಸಾದ್ ಎಸ್. ಕರ್ಕೇರ, ಕಾನೂನು ಸಲಹೆಗಾರ ಸುದೇಶ್ ಪೂಜಾರಿ ಉಪಸ್ಥಿತರಿದ್ದರು. ಜೆ.ಜೆ. ಕೋಟ್ಯಾನ್ ಅತಿಥಿಗಳನ್ನು ಪರಿಚಯಿಸಿದರು. ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಕಾರ್ಯಕ್ರಮ ನಿರೂಪಿಸಿದರೆ, ಶರತ್ ಜಿ. ಪೂಜಾರಿ ವಂದಿಸಿದರು.



Related posts

ಬಂಟ್ಸ್ ಫೋರಮ್ ಮೀರಾ ಭಾಯಂದರಿನ ಬಂಟರಕೂಟ-2026 ಕಾರ್ಯಕ್ರಮದ ಪೂರ್ವಭಾವಿ ಸಭೆ.

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ 4 ಯ ಆರಾಧನ ಮಹೋತ್ಸವ.

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ ಮಹಿಳಾ ದಿನಾಚರಣೆ, ಪ್ರಶಸ್ತಿ ಪ್ರಧಾನ ಸಮಾರಂಭ

Mumbai News Desk

ಮಲಾಡ್ ಕನ್ನಡ ಸಂಘ ಮಹಿಳಾ ವಿಭಾಗದ ಅರಸಿನ ಕುಂಕುಮ,

Mumbai News Desk

ಅಭಿನವ ಮಂತ್ರಾಲಯ ಜೋಗೇಶ್ವರಿ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ 354ನೇ ಆರಾಧನಾ ಮಹೋತ್ಸವ ಸಂಪನ್ನ

Mumbai News Desk

ಪಡುಬಿದ್ರಿ ಕಾಡಿಪಟ್ನ ಮೊಗವೀರ ವೆಲ್ಫೇರ್ ಎಸೋಸಿಯೆಷನ್, ಮುಂಬಯಿ : ವಾರ್ಷಿಕ ವಿಹಾರಕೂಟ

Mumbai News Desk