ಕೊಂಕಣ ರೈಲ್ವೆ ಮಾರ್ಗದಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು, ರೈಲ್ವೆ ಜಾಲದ ಸಾಮರ್ಥ್ಯ ವಿಸ್ತರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ವೇಗಗೊಳಿಸುವ ಉದ್ದೇಶದಿಂದ ‘ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್’ (KRCL) ಅನ್ನು ಸಂಪೂರ್ಣವಾಗಿ ತನ್ನ ಸುಪರ್ದಿಗೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಕುರಿತು ಲೋಕಸಭೆಯಲ್ಲಿ ಮಾಹಿತಿ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, KRCL ಸಂಸ್ಥೆಯನ್ನು ಭಾರತೀಯ ರೈಲ್ವೆಯೊಂದಿಗೆ ಸಂಪೂರ್ಣವಾಗಿ ವಿಲೀನಗೊಳಿಸಲು ಶೇಕಡಾ 100ರಷ್ಟು ಶೇರುಗಳು ಕೇಂದ್ರದ ವಶವಾಗಬೇಕಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಸ್ತುತ ಕೇಂದ್ರ ರೈಲ್ವೆ ಸಚಿವಾಲಯವು ಶೇ. 66.79 ಪಾಲು ಹೊಂದಿದ್ದು, ಮಹಾರಾಷ್ಟ್ರ (ಶೇ. 14.91), ಕರ್ನಾಟಕ (ಶೇ. 10.17), ಗೋವಾ (ಶೇ. 4.07) ಮತ್ತು ಕೇರಳ (ಶೇ. 4.07) ರಾಜ್ಯಗಳು ಉಳಿದ ಪಾಲುದಾರಿಕೆಯನ್ನು ಹೊಂದಿವೆ.
ಕೊಂಕಣ ರೈಲ್ವೆಯ ಮೂಲಸೌಕರ್ಯಗಳಿಗೆ ಸುಮಾರು 30 ವರ್ಷಗಳಾಗಿದ್ದು, ಸುರಂಗಗಳ ನವೀಕರಣ, ಹಳೆಯ ಆಸ್ತಿಗಳ ಬದಲಾವಣೆ ಹಾಗೂ ಸಾಮರ್ಥ್ಯ ಹೆಚ್ಚಳದಂತಹ ತುರ್ತು ಅಭಿವೃದ್ಧಿ ಕೆಲಸಗಳಿಗೆ ಬೃಹತ್ ಪ್ರಮಾಣದ ಬಂಡವಾಳ ವೆಚ್ಚದ (Capex) ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಪಾಲುದಾರ ರಾಜ್ಯಗಳಿಗೆ ತಮ್ಮ ಪಾಲಿನ ಬಂಡವಾಳ ಹೂಡುವುದು ಅಥವಾ ಶೇರುಗಳನ್ನು ಸಚಿವಾಲಯಕ್ಕೆ ಬಿಟ್ಟುಕೊಡುವ ಎರಡು ಆಯ್ಕೆಗಳನ್ನು ನೀಡಿದೆ. ಪ್ರಸ್ತುತ ಗೋವಾ ಸರ್ಕಾರ ಮಾತ್ರವೇ ತನ್ನ ಶೇರುಗಳನ್ನು ಉಚಿತವಾಗಿ ವರ್ಗಾಯಿಸಲು ಒಪ್ಪಿಗೆ ಸೂಚಿಸಿದ್ದರೆ, ಮಹಾರಾಷ್ಟ್ರ ಸರ್ಕಾರವು ತನ್ನ ಹೂಡಿಕೆಯ ಬಂಡವಾಳವನ್ನು ಮರಳಿಸುವಂತೆ ಕೋರಿದೆ ಹಾಗೂ ಕರ್ನಾಟಕ ಸರ್ಕಾರವು ಸೂಕ್ತ ಎಕ್ಸಿಟ್ (ಹೊರನಡೆಯುವ) ಆಯ್ಕೆಗಳನ್ನು ನೀಡುವಂತೆ ಮನವಿ ಮಾಡಿದೆ. ಮಹಾರಾಷ್ಟ್ರದ ರೋಹಾದಿಂದ ಕರ್ನಾಟಕದ ತೋಕೂರ್ವರೆಗೆ ಹರಡಿರುವ 739 ಕಿಲೋಮೀಟರ್ ಉದ್ದದ ಈ ಮಾರ್ಗದಲ್ಲಿ ಈಗಾಗಲೇ 55 ಕಿಲೋಮೀಟರ್ ದ್ವಿಪಥ ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ 263 ಕಿಲೋಮೀಟರ್ ಮಾರ್ಗವನ್ನು ದ್ವಿಪಥಗೊಳಿಸಲು ಸಾಧ್ಯತಾ ಸಮೀಕ್ಷೆಗೆ ಅನುಮೋದನೆ ನೀಡಿ ಯೋಜನೆಯನ್ನು ಮುಂದುವರಿಸಲಾಗುತ್ತಿದೆ.
previous post




