29 C
Mumbai
September 28, 2026
Mumbai News Kannada
ಸುದ್ದಿ

ಮೂಲತ್ವದ ಬೆಳಕಿನಲ್ಲಿ ಅಕ್ಷರ ಕ್ರಾಂತಿ: ಸ್ಕಾಲರ್‌ಶಿಪ್ ಮಾಸ್ಟರ್ ಕೆ. ನಾರಾಯಣ ನಾಯಕ್‌ಗೆ ‘ಮೂಲತ್ವ ವಿಶ್ವ ಪ್ರಶಸ್ತಿ’ಯ ಗೌರವ



ಮೂಲತ್ವ ನಾನೇ ನೀನು ನೀನೆ ನಾನು ಎಂಬ ತತ್ವದ ಅಡಿಯಲ್ಲಿ ದೇವರಲ್ಲಿ ಮನವನನ್ನು, ಮಾನವರಲ್ಲಿ ದೇವರನ್ನು, ಪರಸ್ಪರರಲ್ಲಿ ಪರಸ್ಪರರನ್ನು ಅರ್ಥವಿಸಿಕೊಳ್ಳುವ ಚಿಂತನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು

— ಮನುಷ್ಯರ ನಡುವಿನ ಏಕತೆ, ಕರುಣೆ ಮತ್ತು ಸಹಾನುಭೂತಿಯನ್ನು ಸಾರುವ ಈ ತತ್ವವೇ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ನ ಆತ್ಮ.

ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮೂಲತ್ವ ಫೌಂಡೇಶನ್ ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದ ಸಮಾಜದ ದುರ್ಬಲ ಮತ್ತು ಅಗತ್ಯವಿರುವ ವರ್ಗಗಳ ಬದುಕಿನಲ್ಲಿ ಅರ್ಥಪೂರ್ಣ ಬದಲಾವಣೆ ತರಲು ಶ್ರಮಿಸುತ್ತಿದೆ. “ಮಾನವ ಸೇವೆಯೇ ಪ್ರಾರ್ಥನೆಯ ಕಾರ್ಯರೂಪ” ಎಂಬ ನಂಬಿಕೆಯೊಂದಿಗೆ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಜಾಗೃತಿ, ಆರ್ಥಿಕ ನೆರವು, ಮಹಿಳಾ ಮತ್ತು ಮಕ್ಕಳ ಸಬಲೀಕರಣ ಹಾಗೂ ಪರಿಸರ ಸಂರಕ್ಷಣೆಯಂತಹ ವಿವಿಧ ಕ್ಷೇತ್ರಗಳಲ್ಲಿ ಸಂಸ್ಥೆ ಸೇವೆ ಸಲ್ಲಿಸುತ್ತಿದೆ. ಒಬ್ಬರ ನೋವನ್ನು ಮತ್ತೊಬ್ಬರು ಅರ್ಥಮಾಡಿಕೊಂಡು, ಅಗತ್ಯವಿರುವಲ್ಲಿ ನೆರವಿನ ಹಸ್ತ ಚಾಚುವುದೇ ಮೂಲತ್ವದ ಸೇವಾ ದೃಷ್ಟಿ.

ಶಿಕ್ಷಣವನ್ನು ಕೇವಲ ಜ್ಞಾನವಲ್ಲ, ಬದುಕನ್ನು ಬದಲಿಸುವ ಶಕ್ತಿಯೆಂದು ಪರಿಗಣಿಸುವ ಮೂಲತ್ವ, ಬಡ ಮತ್ತು ಹಿಂದುಳಿದ ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವುದರ ಜೊತೆಗೆ ಸಮಾಜದಲ್ಲಿ ಜಾಗೃತಿ, ಕೌಶಲ್ಯಾಭಿವೃದ್ಧಿ ಮತ್ತು ಸ್ವಾವಲಂಬನೆಯನ್ನೂ ಉತ್ತೇಜಿಸುತ್ತಿದೆ. ಅನ್ನಚತ್ರ, ಮೌಲ್ಯಾಧಾರಿತ ಶಿಕ್ಷಣ ಸಂಸ್ಥೆ ಹಾಗೂ ಹಿಂದುಳಿದ ಮತ್ತು ವಿಶೇಷ ಸಾಮರ್ಥ್ಯ ಹೊಂದಿದವರಿಗಾಗಿ ಉದ್ಯೋಗಾವಕಾಶಗಳಂತಹ ಭವಿಷ್ಯದ ಯೋಜನೆಗಳ ಮೂಲಕವೂ ಸಂಸ್ಥೆ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸುವ ಸಂಕಲ್ಪ ಹೊಂದಿದೆ.

ಆದರೆ ಮೂಲತ್ವದ ವಿಶೇಷತೆ ತನ್ನದೇ ಸೇವಾ ಕಾರ್ಯಗಳಲ್ಲಿ ಮಾತ್ರವಲ್ಲ. ಸಮಾಜಕ್ಕಾಗಿ ನಿಸ್ವಾರ್ಥವಾಗಿ ಬದುಕುತ್ತಿರುವ ಅಪರೂಪದ ವ್ಯಕ್ತಿತ್ವಗಳನ್ನು ಪ್ರಪಂಚದಧ್ಯಂತ ಗುರುತಿಸಿ, ಅವರ ಸೇವೆಗೆ ಗೌರವ ಸಲ್ಲಿಸುವುದು ಸಂಸ್ಥೆಯ ಮತ್ತೊಂದು ಮಹತ್ವದ ಪರಂಪರೆ. ಇದೇ ಚಿಂತನೆಯಿಂದ ರೂಪುಗೊಂಡದ್ದು “ಮೂಲತ್ವ ವಿಶ್ವ ಪ್ರಶಸ್ತಿ.”

2015ರಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಮೊದಲ ಪುರಸ್ಕೃತರಾಗಿ ಗೌರವಿಸುವ ಮೂಲಕ ಆರಂಭವಾದ ಈ ಪ್ರಶಸ್ತಿ ಪಯಣ, ವಿವಿಧ ಕ್ಷೇತ್ರಗಳಲ್ಲಿ ಮಾನವೀಯತೆ ಮತ್ತು ಸಮಾಜಸೇವೆಯನ್ನು ತಮ್ಮ ಬದುಕಿನ ಧ್ಯೇಯವನ್ನಾಗಿಸಿಕೊಂಡ ಅನೇಕ ಸಾಧಕರನ್ನು ಗುರುತಿಸುತ್ತಾ ಬಂದಿದೆ.

ಇದೀಗ ಆ ಗೌರವದ ಪಯಣ 12ನೇ ಮೂಲತ್ವ ವಿಶ್ವ ಪ್ರಶಸ್ತಿಯ ಹಂತ ತಲುಪಿದೆ.

ಈ ಬಾರಿ ಮೂಲತ್ವ ಗೌರವಿಸುತ್ತಿರುವವರು — ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಶ್ರೀ ಕೆ. ನಾರಾಯಣ ನಾಯಕ್, ಪ್ರೀತಿಯಿಂದ “ಸ್ಕಾಲರ್‌ಶಿಪ್ ಮಾಸ್ಟರ್” ಎಂದು ಕರೆಯಲ್ಪಡುವ ನಿವೃತ್ತ ಶಿಕ್ಷಕರು.

ತಮ್ಮ ಬಾಲ್ಯದಲ್ಲೇ ಶಿಕ್ಷಣಕ್ಕಾಗಿ ಹೋರಾಡಿದ ನಾರಾಯಣ ನಾಯಕ್, 38 ವರ್ಷಗಳ ಶಿಕ್ಷಕ ಸೇವೆಯ ನಂತರ ನಿವೃತ್ತರಾದರೂ ಸೇವೆಯಿಂದ ಹಿಂದೆ ಸರಿಯಲಿಲ್ಲ. ಬದಲಾಗಿ, ಆರ್ಥಿಕ ಸಂಕಷ್ಟದಿಂದಾಗಿ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣ ನಿಲ್ಲಬಾರದು ಎಂಬ ಸಂಕಲ್ಪದೊಂದಿಗೆ ತಮ್ಮ ಜೀವನವನ್ನು ವಿದ್ಯಾರ್ಥಿವೇತನದ ಅರಿವು ಮೂಡಿಸುವ ಕಾರ್ಯಕ್ಕೆ ಸಮರ್ಪಿಸಿದರು.

ಶಾಲೆ-ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿದ್ಯಾರ್ಥಿವೇತನಗಳ ಮಾಹಿತಿ ನೀಡುವುದು, ಅರ್ಜಿಗಳನ್ನು ಸಲ್ಲಿಸಲು ನೆರವಾಗುವುದು ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶಗಳನ್ನು ತಲುಪಿಸುವುದು ಅವರ ನಿರಂತರ ಸೇವೆಯಾಗಿದೆ. ಹೀಗೆ, ತಮ್ಮ ಜೀವನದ ಅನುಭವವನ್ನು ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಸಾಧನವನ್ನಾಗಿ ಮಾಡಿಕೊಂಡಿದ್ದಾರೆ.

ಹರೇಕಳ ಹಾಜಬ್ಬ ಅವರಿಂದ ಆರಂಭವಾದ ಮೂಲತ್ವ ವಿಶ್ವ ಪ್ರಶಸ್ತಿಯ ಪಯಣದಲ್ಲಿ, ನಾರಾಯಣ ನಾಯಕ್ ಅವರ ಆಯ್ಕೆ ಅತ್ಯಂತ ಅರ್ಥಪೂರ್ಣವಾಗಿದೆ.

ಒಬ್ಬರು ಬಡ ಮಕ್ಕಳಿಗಾಗಿ ಶಾಲೆ ನಿರ್ಮಿಸುವ ಕನಸನ್ನು ನನಸಾಗಿಸಿದರು.
ಮತ್ತೊಬ್ಬರು ಬಡ ಮಕ್ಕಳ ಶಿಕ್ಷಣದ ಕನಸು ನನಸಾಗಲು ವಿದ್ಯಾರ್ಥಿವೇತನದ ದಾರಿಯನ್ನು ಹುಡುಕಿಕೊಟ್ಟರು.

ಸೇವೆಯ ರೂಪ ಬೇರೆ; ಆದರೆ ಉದ್ದೇಶ ಒಂದೇ — ಶಿಕ್ಷಣದ ಮೂಲಕ ಬದುಕಿನಲ್ಲಿ ಬೆಳಕು ಮೂಡಿಸುವುದು.

ಹೀಗಾಗಿ, 12ನೇ ಮೂಲತ್ವ ವಿಶ್ವ ಪ್ರಶಸ್ತಿ ಕೇವಲ ಒಬ್ಬ ವ್ಯಕ್ತಿಗೆ ನೀಡುವ ಸನ್ಮಾನವಲ್ಲ. ಅದು ನಿಸ್ವಾರ್ಥ ಸೇವೆಗೆ ಸಲ್ಲಿಸುವ ಗೌರವ; ಶಿಕ್ಷಣಕ್ಕಾಗಿ ಬದುಕನ್ನು ಮುಡಿಪಾಗಿಟ್ಟ ಒಬ್ಬ ಶಿಕ್ಷಕನಿಗೆ ಸಲ್ಲಿಸುವ ಕೃತಜ್ಞತೆ; ಮತ್ತು “ನಾನೇ ನೀನು, ನೀನೇ ನಾನು” ಎಂಬ ಮೂಲತ್ವದ ತತ್ವಕ್ಕೆ ಜೀವಂತ ಗೌರವ.

ಸೇವೆಯನ್ನು ಮಾಡುವವರು ಹಲವರು.

ಆ ಸೇವೆಯ ಹಿಂದಿರುವ ಮಾನವೀಯತೆಯನ್ನು ಗುರುತಿಸಿ ಗೌರವಿಸುವ ಪರಂಪರೆಯೇ — ಮೂಲತ್ವ.



Related posts

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (28/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಜೆ ಸಿ ಐ ಶಂಕರಪುರ ಇದರ 2024 ರ ಸಾಲಿನ ಅಧ್ಯಕ್ಷರಾಗಿ ಇನ್ನಂಜೆ ಹರೀಶ್ ಪೂಜಾರಿ ಆಯ್ಕೆ.

Mumbai News Desk

ಉಡುಪಿ ಜಿಲ್ಲೆಯಲ್ಲಿ ವರುಣನ ಸಿಂಚನ: ಬಿಸಿಲಿನ ಬೇಗೆಯಿಂದ ಜನರಿಗೆ ತಂಪು ನೀಡಿದ ಮಳೆ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (18/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಮುಂಬೈ : ಪ್ರವೀಣ್ ಭಟ್ ಅವರಿಗೆ ಪಿತೃ ವಿಯೋಗ

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ತೃತೀಯ ವಾರ್ಷಿಕ ಪ್ರತಿಷ್ಠ ಮಹೋತ್ಸವ.

Mumbai News Desk