ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಎಂದರೆ ದೇಶದಾದ್ಯಂತ ಭಕ್ತಿಭಾವದಿಂದ ಆಚರಿಸುವ ಪ್ರಮುಖ ಹಬ್ಬ. ಭಾರತದ ಪ್ರತಿಯೊಂದು ರಾಜ್ಯದಲ್ಲಿಯೂ ಆಯಾ ಊರುಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ರಾತ್ರಿ ಶ್ರೀಕೃಷ್ಣನ ಜನನದ ಸಮಯದಲ್ಲಿ ಚಂದ್ರೋದಯವಾಗುತ್ತಿದ್ದಂತೆ ಭಕ್ತರು ಚಂದ್ರನಿಗೆ ಕೈಮುಗಿದು, ಶ್ರೀಕೃಷ್ಣನನ್ನು ಭಕ್ತಿಯಿಂದ ಸ್ಮರಿಸಿ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.
ಜನ್ಮಾಷ್ಟಮಿಯ ನಂತರದ ದಿನಗಳಲ್ಲಿ ಮನೆ-ಮನೆಗಳಲ್ಲಿ ಹಾಗೂ ಊರಿನ ದೇವಸ್ಥಾನಗಳ ಆವರಣದಲ್ಲಿ ಪುಟಾಣಿ ಮಕ್ಕಳಿಗೆ ‘ಮುದ್ದು ಕೃಷ್ಣ’ ವೇಷ ಸ್ಪರ್ಧೆಗಳನ್ನು ಆಯೋಜಿಸುವುದು ಹಬ್ಬದ ಪ್ರಮುಖ ಆಕರ್ಷಣೆಯಾಗಿದೆ. ತಾಯಂದಿರು ತಮ್ಮ ಮಕ್ಕಳನ್ನು ಕೃಷ್ಣನ ವೇಷದಲ್ಲಿ ಸಿಂಗರಿಸಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ.
ಅದೇ ರೀತಿ ಉಡುಪಿ ತಾಲೂಕಿನ ಕೆಳಾರ್ಕಳ ಬೆಟ್ಟು ಪರಿಸರದ ಶ್ರೀದೇವಿ ಭೂದೇವಿ ವಿಷ್ಣುಮೂರ್ತಿ ದೇವಸ್ಥಾನದ ಸಮಿತಿಯ ವತಿಯಿಂದಲೂ ಮುದ್ದು ಕೃಷ್ಣ ವೇಷ ಸ್ಪರ್ಧೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಶ್ರೀಕೃಷ್ಣ ಜನ್ಮಾಷ್ಟಮಿ ಎಂದರೆ ಭಕ್ತಿ, ಸಂಭ್ರಮದ ಜೊತೆಗೆ ಮಕ್ಕಳ ಮುಗ್ಧತೆ ಮತ್ತು ಮುದ್ದುತನವನ್ನು ಕಣ್ತುಂಬಿಕೊಳ್ಳುವ ಹಬ್ಬವೂ ಹೌದು. ಪುಟ್ಟ ಮಕ್ಕಳು ಕೃಷ್ಣನ ವೇಷ ಧರಿಸಿ, ತಲೆಗೆ ನವಿಲುಗರಿ, ಕೈಯಲ್ಲಿ ಕೊಳಲು, ಮೈಮೇಲೆ ಹಳದಿ ಪೀತಾಂಬರ ಧರಿಸಿ ಕಂಗೊಳಿಸುವ ದೃಶ್ಯ ಎಲ್ಲರ ಮನಸೂರೆಗೊಳ್ಳುತ್ತದೆ.
ಮುದ್ದು ಕೃಷ್ಣರಂತೆ ಅಲಂಕೃತಗೊಂಡ ಪುಟಾಣಿ ಮಕ್ಕಳು ಮನೆ, ಶಾಲೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಅವರ ಮುಗ್ಧ ನಗು, ಚಿಣ್ಣರ ಆಟ-ಪಾಟ ಮತ್ತು ಕೃಷ್ಣನ ವೇಷದಲ್ಲಿನ ಮುದ್ದಾದ ನೋಟಗಳು ಜನ್ಮಾಷ್ಟಮಿಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತವೆ.
‘ಕೃಷ್ಣನ ಬಾಲಲೀಲೆ’ಯನ್ನು ನೆನಪಿಸುವ ಈ ಪುಟ್ಟ ಕಂದಮ್ಮಗಳು ಎಲ್ಲರಿಗೂ ಸಂತೋಷವನ್ನು ಹಂಚುತ್ತಾರೆ. ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಶ್ರೀಕೃಷ್ಣನ ಜೀವನ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ.
ಪುಟ್ಟ ಹೆಜ್ಜೆಗಳಲ್ಲಿ ಕೃಷ್ಣನ ಸೊಬಗು, ಮುಗ್ಧ ನಗುವಿನಲ್ಲಿ ಗೋಕುಲದ ಸಂಭ್ರಮ—ಈ ಮುದ್ದು ಕೃಷ್ಣರೇ ಜನ್ಮಾಷ್ಟಮಿಯ ನಿಜವಾದ ಆಕರ್ಷಣೆ.
ಕೆಳಾರ್ಕಳ ಬೆಟ್ಟು ಪರಿಸರದ ಶ್ರೀದೇವಿ ಭೂದೇವಿ ವಿಷ್ಣುಮೂರ್ತಿ ದೇವಸ್ಥಾನದ ಆವರಣದಲ್ಲಿ ಸೆಪ್ಟೆಂಬರ್ 6, 2026ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮುದ್ದು ಕೃಷ್ಣ ವೇಷ ಸ್ಪರ್ಧೆ ನಡೆಯಿತು. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಬಹುಮಾನ ವಿತರಣಾ ಸಮಾರಂಭ ಜರುಗಿತು.
ಕಾರ್ಯಕ್ರಮದ ವಿಶೇಷತೆಯಾಗಿ ಕೃಷ್ಣ ವೇಷ ಸ್ಪರ್ಧೆಯೊಂದಿಗೆ ಕುಣಿತ ಭಜನೆ ಮತ್ತು ಸಮಾಜಸೇವಾ ಕಾರ್ಯಕ್ರಮವೂ ನಡೆಯಿತು. ಕಾರ್ಯಕ್ರಮದ ಖರ್ಚು-ವೆಚ್ಚದ ಬಳಿಕ ಉಳಿದ ಹಣವನ್ನು ಸಹಾಯದ ನಿರೀಕ್ಷೆಯಲ್ಲಿದ್ದ ಎರಡು ಅಶಕ್ತ ಕುಟುಂಬವೊಂದಕ್ಕೆ ನೆರವಿನ ರೂಪದಲ್ಲಿ ನೀಡಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಶಿಕ್ಷಕರು, ಕ್ರೀಡಾ ಸಕ್ತರು, ಸಾಧನೆ ಮಾಡಿದ ಹಲವಾರು ಸಾಧಕರನ್ನು ಸನ್ಮಾನಿಸಲಾಯಿತು.

ಮುದ್ದು ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಪುಟಾಣಿ ಮಗುವಿಗೂ ಮುಖ್ಯ ಅತಿಥಿಗಳಾದ ಪ್ರವೀಣ್ ಎಂ. ಪೂಜಾರಿ, ದಯಾನಂದ್ ಆಚಾರ್ಯ, ಸದಾನಂದ ನಾಯ್ಕ್, ಸುರೇಶ್ ಪೂಜಾರಿ ಅಜಿತ್ ಕುಮಾರ್ ಕೊಡವೂರು, ಕೃಷ್ಣ ಕುಲಾಲ್, ರವೀಂದ್ರ ಆಚಾರ್ಯ, ಭಾಸ್ಕರ್ ಸಿ ಅಂಚನ್ ಶ್ರೀನಗರ, ಹಾಗೂ ಶ್ರೀಮತಿ ಮಮತಾ ಪಿ. ಶೆಟ್ಟಿ ಶ್ರೀ ನಗರ ಅವರು ಅಭಿನಂದನಾ ಪತ್ರ ಹಾಗೂ ಪದಕಗಳನ್ನು ವಿತರಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ತೇಜಸ್ ಬಂಗೇರ ಅದ್ಯಕ್ಷತೆಯಲ್ಲಿ ಪ್ರಾಸ್ತವಿಕ ನುಡಿಯಲ್ಲಿ ಅವರು ಪುಟಾಣಿ ಮಕ್ಕಳ ತಾಯಂದಿರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳು ಹಾಗೂ ಸನ್ಮಾನಿತರ ಪರಿಚಯವನ್ನು ಮಾಡಿಕೊಟ್ಟು, ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಲಾಯಿತು.
ಮಹಿಳಾ ವಿಭಾಗದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ವಿಶೇಷ ಸಹಕಾರ ನೀಡಿದರು ಧಾರ್ಮಿಕತೆ, ಮಕ್ಕಳ ಪ್ರತಿಭೆ, ಸಂಸ್ಕೃತಿ ಹಾಗೂ ಸಮಾಜಸೇವೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಕಾರ್ಯಕ್ರಮವು ಜನ್ಮಾಷ್ಟಮಿಯ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು. ಈ ಕಾರ್ಯಕ್ರಮ ದ ನಿರೂಪಕರಾಗಿ ವೀಣಾ, ಮಹೇಶ್ ಮಲ್ಪೆ, ಸಚಿಂದ್ರ ಅಂಬಾಗಿಲು ಕಾರ್ಯ ನಿರ್ವಹಿಸಿದರು.
ವರದಿ: ಜಯ ಸಿ. ಪೂಜಾರಿ
ಕೆಳಾರ್ಕಳ ಬೆಟ್ಟು.




