September 6, 2026
Mumbai News Kannada
ಮುಂಬಯಿ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ರಾಮಚಂದ್ರ ಬೈಕಂಪಾಡಿ ಹಾಗೂ ಪ್ರತಾಪ್ ಕೋಟ್ಯಾನ್‌ಗೆ ನುಡಿ ನಮನ





ರಾಮಚಂದ್ರ ಬೈಕಂಪಾಡಿಯವರು ಅವಿಭಜಿತ, ಜಿಲ್ಲೆಯ ಅಭಿವೃದ್ಧಿಗೆ ಸಮಿತಿಯೊಂದಿಗೆ ಮುಂಚೂಣಿಯ ಹೋರಾಟ ನಡೆಸಿದವರು: ತೋನ್ಸೆ ಜಯಕೃಷ್ಣ ಶೆಟ್ಟಿ

ಮುಂಬಯಿ: ಸಾಮಾಜಿಕ ಹೋರಾಟಗಾರ, ಪರಿಸರ ಪ್ರೇಮಿ, ಕನ್ನಡ-ತುಳು ಸಾಹಿತ್ಯದ ಸಾರಥಿ, ನಾಟಕರಂಗದ ಕಲಾವಿದ, ಕರಾವಳಿ ಕರ್ನಾಟಕದ ಪ್ರಭಾವಿ ಮೊಗವೀರ ಮುಖಂಡ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ಬಹುಮುಖ ಪ್ರತಿಭೆಯ ಧೀಮಂತ ವ್ಯಕ್ತಿತ್ವದ ರಾಮಚಂದ್ರ ಬೈಕಂಪಾಡಿ ಅವರು ಏಪ್ರಿಲ್ 14ರಂದು ದೈವಾಧೀನರಾದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಜಿಲ್ಲಾ ಸಮಿತಿಯ ಉಪಾಧ್ಯಕ್ಷರಾಗಿದ್ದ ರಾಮಚಂದ್ರ ಬೈಕಂಪಾಡಿ ಮತ್ತು ಸಮಿತಿಯ ಸದಸ್ಯ ಪ್ರತಾಪ್ ಕೋಟ್ಯಾನ್ ಅವರ ನಿಧನಕ್ಕೆ ಏಪ್ರಿಲ್ 15ರಂದು ಸಾಂದಿವಾಲಿಯ ಪೆನೆನ್ಸುಲಾ ಹೋಟೆಲ್‌ನಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಜರುಗಿದ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

​ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಮಾತನಾಡಿ, “ನಾವು ಸಮಿತಿಯನ್ನು ಪ್ರಾರಂಭಿಸುವಾಗ ರಾಜಕಾರಣಿಗಳ ಅಗತ್ಯವಿದ್ದಾಗ ರಾಮಚಂದ್ರ ಬೈಕಂಪಾಡಿಯವರಂತಹ ಗಣ್ಯ ವ್ಯಕ್ತಿ ನಮಗೆ ಶಕ್ತಿಯಾಗಿ ಕಾರ್ಯನಿರ್ವಹಿಸಿದರು. ನಮ್ಮ ಹೋರಾಟದಲ್ಲಿ ಇವರ ಸಹಕಾರ ಅಪಾರ. ಒಬ್ಬ ದಕ್ಷ ವ್ಯಕ್ತಿಯನ್ನು ನಾವು ಅಗಲಿದ್ದು, ಸಮಿತಿಗೆ ಇವರ ನಿಧನದಿಂದ ಬಹಳ ನೋವಾಗಿದೆ. ರಾಮಚಂದ್ರ ಬೈಕಂಪಾಡಿಯವರ ಅಂತಿಮ ಯಾತ್ರೆಯಲ್ಲಿ ಜಿಲ್ಲೆಯ ಅಪಾರ ಅಭಿಮಾನಿಗಳು ಪಾಲ್ಗೊಂಡಿದ್ದು ಜಿಲ್ಲೆಗೆ ಅವರ ಕೊಡುಗೆಯನ್ನು ತೋರಿಸುತ್ತದೆ. ಇವರು ಗೌರವಾನ್ವಿತ ವ್ಯಕ್ತಿಯಾಗಿದ್ದು, ಸಮಿತಿಯು ನಡೆಸಿದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಎಲ್ಲಾ ಯೋಜನೆಗಳಿಗೆ ಶಕ್ತಿ ತುಂಬಿದವರು. ಮೊಗವೀರ ಸಮಾಜದ ಹಲವಾರು ಬೇಡಿಕೆಗಳ ಬಗ್ಗೆ ಸರ್ಕಾರದೊಂದಿಗೆ ಸ್ಪಂದಿಸಿದವರು. ರಾಜಕೀಯದಲ್ಲಿಯೂ ಅವರಿಗೆ ಅಪಾರ ಗೌರವವಿತ್ತು. ಇತ್ತೀಚಿನ ವರ್ಷಗಳಲ್ಲಿ ಸಮಿತಿಯಲ್ಲಿ ಸಕ್ರಿಯರಾಗಿದ್ದ ಪ್ರತಾಪ್ ಕೋಟ್ಯಾನ್ ಅವರ ಅಗಲಿಕೆಯೂ ನಮಗೆ ಬಹಳ ದುಃಖ ತಂದಿದೆ,” ಎಂದು ನುಡಿದರು.

​ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಮಾತನಾಡಿ, “ಜಿಲ್ಲೆಗಳಲ್ಲಿ ಉನ್ನತ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ರಾಮಚಂದ್ರ ಬೈಕಂಪಾಡಿಯವರ ಮಹತ್ತರ ಕೊಡುಗೆಯಿದೆ. ಪ್ರಾರಂಭದಿಂದಲೇ ಸಮಿತಿಯೊಂದಿಗೆ ಇದ್ದ ಇವರು ನಮಗೆ ಆಧಾರಸ್ತಂಭದಂತಿದ್ದರು. ಸಮಿತಿಯು ಒಬ್ಬ ದಕ್ಷ ನಾಯಕನನ್ನು ಕಳೆದುಕೊಂಡಂತಾಗಿದೆ. ಮುಂಬಯಿಯಲ್ಲಿ ಸಾಮಾಜಿಕ ಸೇವೆಗಳನ್ನು ನಡೆಸುತ್ತಾ ಊರಿನಲ್ಲಿ ನೆಲೆಸಿದ್ದ ಪ್ರತಾಪ್ ಕೋಟ್ಯಾನ್ ಅವರು ಸಮಿತಿಯ ಎಲ್ಲಾ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡು, ಕಾರ್ಯಕ್ರಮಗಳ ಯಶಸ್ಸಿಗೆ ಶ್ರಮಿಸಿದವರು. ಇವರಿಬ್ಬರ ಅಗಲಿಕೆ ಸಂಸ್ಥೆಗೆ ದೊಡ್ಡ ನಷ್ಟವನ್ನುಂಟು ಮಾಡಿದೆ,” ಎಂದರು.

​ಸಮಿತಿಯ ಮಾಜಿ ಅಧ್ಯಕ್ಷ ಧರ್ಮಪಾಲ ದೇವಾಡಿಗರು ಸಂತಾಪ ವ್ಯಕ್ತಪಡಿಸುತ್ತಾ, “ಇವರು ಪ್ರಾರಂಭದಿಂದಲೇ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿದ್ದರು. ಸಮಿತಿಯ ಎಲ್ಲಾ ಯೋಜನೆಗಳ ಹೋರಾಟಕ್ಕೆ ಇವರ ಕೊಡುಗೆ ಅಪಾರ. ಸಾವಿರಾರು ಜನರನ್ನು ಒಗ್ಗೂಡಿಸಿ ಹೋರಾಟಕ್ಕೆ ಶಕ್ತಿ ತುಂಬಿದ ಇವರ ಆತ್ಮಕ್ಕೆ ಸದ್ಗತಿ ದೊರೆಯಲಿ,” ಎಂದರು.

​ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್ ಮಾತನಾಡಿ, ರಾಮಚಂದ್ರ ಬೈಕಂಪಾಡಿಯವರು ಸಮಿತಿಯೊಂದಿಗೆ ಹೊಂದಿದ್ದ ನಿಕಟ ಸಂಬಂಧ ಮತ್ತು ಅವರು ಮಾಡಿದ ಜನಪರ ಕಾರ್ಯಗಳ ಬಗ್ಗೆ ವಿವರಿಸಿದರು. ಪ್ರತಾಪ್ ಕೋಟ್ಯಾನ್ ಅವರ ಸೇವೆಯನ್ನು ಸ್ಮರಿಸಿ ಇಬ್ಬರಿಗೂ ಸಂತಾಪ ಸೂಚಿಸಿದರು.

​ಕೋಶಾಧಿಕಾರಿ ಸದಾನಂದ ಆಚಾರ್ಯ ಧನ್ಯವಾದ ಸಮರ್ಪಿಸಿದರು. ಸಭೆಯಲ್ಲಿ ಸಮಿತಿಯ ಉಪಾಧ್ಯಕ್ಷರಾದ ಪಿ.ಡಿ. ಶೆಟ್ಟಿ, ಎಚ್. ಮೋಹನ್ ದಾಸ್, ಸಮಿತಿಯ ವಕ್ತಾರ ದಯಾಸಾಗರ ಚೌಟ, ಗೌರವ ಕಾರ್ಯದರ್ಶಿಗಳಾದ ಸಿ.ಎಸ್. ಗಣೇಶ್ ಶೆಟ್ಟಿ, ಹ್ಯಾರಿ ಸಿಕ್ವೇರಾ, ಹಿರಿಯ ರಾಜಕಾರಣಿ ಲಕ್ಷ್ಮಣ್ ಪೂಜಾರಿ, ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಸಾಫಲ್ಯ, ಭಂಡಾರಿ ಸೇವಾ ಸಂಘದ ಮಾಜಿ ಅಧ್ಯಕ್ಷ ನ್ಯಾಯವಾದಿ ಆರ್.ಎಂ. ಭಂಡಾರಿ, ದೇವಾಡಿಗ ಸಂಘದ ಅಧ್ಯಕ್ಷ ರವಿ ದೇವಾಡಿಗ, ಮಾಜಿ ಅಧ್ಯಕ್ಷ ವಾಸು ದೇವಾಡಿಗ, ಸಂತೋಷ್ ರೈ ಬೆಳ್ಳಿಪಾಡಿ, ನ್ಯಾಯವಾದಿ ಸಂತೋಷ್ ಕುಮಾರ್ ಹೆಗ್ಡೆ, ತೋನ್ಸೆ ಅಶೋಕ್ ಶೆಟ್ಟಿ, ನ್ಯಾಯವಾದಿ ಡಿ.ಕೆ. ಶೆಟ್ಟಿ, ಕರುಣಾಕರ್ ಹೆಜಮಾಡಿ, ಉತ್ತಮ್ ಶೆಟ್ಟಿಗರ್ ಉಪಸ್ಥಿತರಿದ್ದು, ಅಗಲಿದ ಗಣ್ಯರ ಸಾಧನೆಯನ್ನು ಸ್ಮರಿಸಿ ಸಂತಾಪ ಸೂಚಿಸಿದರು.



Related posts

ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕಿನ ಮೇಲೆ ನಿರ್ಬಂಧ ಹೇರಿದ ಆರ್ ಬಿ ಐ – ಆತಂಕದಲ್ಲಿ ಗ್ರಾಹಕರು

Mumbai News Desk

ಪೌರಾಣಿಕ ವಾಚಕ ಸಮಿತಿ ಮುಂಬಯಿ: ಸುವರ್ಣ ಮಹೋತ್ಸವ ಸಮಾರಂಭಕ್ಕೆ ಚಾಲನೆ.

Mumbai News Desk

ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ – ಪುಣ್ಯ ಕ್ಷೇತ್ರಗಳಿಗೆ ಧಾರ್ಮಿಕ ಯಾತ್ರೆ

Mumbai News Desk

ಡೊಂಬಿವಲಿಯಲ್ಲಿ ಜಗಜ್ಯೋತಿ ಕಲಾವೃಂದದ 39ನೇ ವಾರ್ಷಿಕೋತ್ಸವ ಸಂಭ್ರಮ: ಸಾಹಿತಿಗಳಾದ ಪ್ರಜ್ಞಾ ಮತ್ತಿಹಳ್ಳಿ ಹಾಗೂ ತೇಜಾವತಿ ಎಚ್.ಡಿ ಅವರಿಗೆ ಪ್ರತಿಷ್ಠಿತ ಸ್ಮಾರಕ ಪ್ರಶಸ್ತಿ ಪ್ರದಾನ

Mumbai News Desk

ಬಿಲ್ಲವರ ಎಸೋಶಿಯೇಶನ್ ಮುಂಬಯಿ, ಬೊರಿವಿಲಿ ದಹಿಸರ್ ಸ್ಥಳೀಯ ಕಚೇರಿ ಮಹಿಳಾ ಸದಸ್ಯರಿಂದ ಅರಸಿನಶಕುಂಕುಮ

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ ಎಂಟನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk