September 15, 2026
Mumbai News Kannada
ಮುಂಬಯಿ

ವಿದ್ಯಾವಿಹಾರ್ ಪಶ್ಚಿಮದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಾದುಕಾ ಪ್ರದಾನ, ಪಂಚವಟಿ ತಾಳಮದ್ದಳೆ ಹಾಗೂ ಸನ್ಮಾನ





​.

.

ಶ್ರೀರಾಮ ಚರಿತ್ರೆಯು ಸರಳತೆಯ ಜೀವನವನ್ನು ಕಲಿಸಿಕೊಡುತ್ತದೆ: ಶ್ರೀವತ್ಸ ಹರಿದಾಸ ಭಟ್ ಪೆರ್ಣಂಕಿಲ

ಚಿತ್ರ ವರದಿ: ದಿನೇಶ್ ಕುಲಾಲ್

ಮುಂಬಯಿ, ಏ. 17: ಶ್ರೀ ರಾಮಾಭಿವಂದ್ಯ ಯಕ್ಷಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಂಯುಕ್ತ ಆಯೋಜನೆಯಲ್ಲಿ, ಪ್ರಭು ಶ್ರೀ ರಾಮಚಂದ್ರದೇವರ ಅವತಾರದ ಆರಂಭದಿಂದ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮ ಚರಿತ್ರೆ – ‘ಶ್ರೀ ರಾಮ ಕಥಾ ಹೃದಯಂ’ ಎಂಬ ಪುಣ್ಯಪ್ರದ 24 ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ ಐದನೆಯ ಪ್ರಸ್ತುತಿ “ಪಾದುಕಾ ಪ್ರದಾನ – ಪಂಚವಟಿ” ಏಪ್ರಿಲ್ 12ರಂದು ವಿದ್ಯಾವಿಹಾರ್ ಪಶ್ಚಿಮದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

​ಇದೇ ಸಂದರ್ಭದಲ್ಲಿ ದಶಕಗಳ ಕಾಲದಿಂದ ಯಕ್ಷಮಾತೆಯ ಸೇವೆಗೈಯುತ್ತಿರುವ ನಾರಾಯಣ ಕಿಂಞಣ್ಣ ಶೆಟ್ಟಿ ಕುಂಬಳೆ ದಂಪತಿಯನ್ನು ಸನ್ಮಾನಿಸಲಾಯಿತು.

​ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದ ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀವತ್ಸ ಹರಿದಾಸ ಭಟ್ ಪೆರ್ಣಂಕಿಲ ಅವರು ಆಶೀರ್ವಚನ ನೀಡುತ್ತಾ, “ಇಂದಿನ ತಾಳಮದ್ದಳೆ ಪ್ರಸಂಗವಾದ ಪಾದುಕಾ ಪ್ರದಾನ ಮತ್ತು ಪಂಚವಟಿಯಲ್ಲಿ ಸಹೋದರರ ಪ್ರೀತಿ-ವಾತ್ಸಲ್ಯ ಹಾಗೂ ಸಂಬಂಧದ ಮಹತ್ವ ತಿಳಿಯುತ್ತದೆ. ಶ್ರೀರಾಮಚಂದ್ರ ದೇವರು ತಾನು ದೇವರೆಂದು ತಿಳಿದಿದ್ದರೂ ಅತ್ಯಂತ ಸರಳತೆಯಿಂದ ಬದುಕಿದವರು. ಅದರಂತೆ ನಾವು ಕೂಡ ಜೀವನದಲ್ಲಿ ಸರಳತೆಯನ್ನು ಅಳವಡಿಸಿಕೊಳ್ಳಬೇಕು. ಈಗಿನ ಕಾಲದಲ್ಲಿ ಸಹೋದರರಲ್ಲಿ ಬಾಂಧವ್ಯ ಕಡಿಮೆಯಾಗುತ್ತಿದೆ. ರಾಮಾಯಣದ ಕಥೆಯನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಪರಿವಾರದವರೊಂದಿಗೆ ಹೇಗೆ ಬದುಕಬೇಕೆಂದು ತಿಳಿಯುತ್ತದೆ. ಈ ಕಥೆಯನ್ನು ಯುವ ಸಮುದಾಯ ಹೆಚ್ಚು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳು ಬದುಕಿನಿಂದ ದೂರವಾಗುತ್ತಿವೆ. ಹಿಂದಿನ ಕಾಲ ಕಷ್ಟವಾಗಿದ್ದರೂ ನೆಮ್ಮದಿ ಇತ್ತು, ಈಗ ಎಲ್ಲ ಸೌಲಭ್ಯಗಳಿದ್ದರೂ ಸುಖನಿದ್ರೆ ಇಲ್ಲ. ಆದ್ದರಿಂದ ಅಹಂಕಾರವನ್ನು ದೂರ ಮಾಡಿ ಶ್ರೀರಾಮನ ನಾಮಸ್ಮರಣೆ ಮಾಡುತ್ತಾ, ಮಕ್ಕಳಿಗೂ ಅದರ ಮಹತ್ವವನ್ನು ತಿಳಿಸೋಣ” ಎಂದರು.

​ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಧರ್ಮಶಾಸ್ತ ಭಕ್ತ ವೃಂದದ ಅಧ್ಯಕ್ಷ ರಾಮಣ್ಣ ದೇವಾಡಿಗ ಮಾತನಾಡಿ, “ಇಂದು ನಡೆದ ಸನ್ಮಾನವು ಯಕ್ಷಗಾನದ ಗುರುವಿಗೆ ಸಂದ ಗೌರವವಾಗಿದೆ. ನಾರಾಯಣ ಶೆಟ್ಟಿಯವರು ಯಾವುದೇ ಪಾತ್ರವನ್ನಾದರೂ ಸಮರ್ಥವಾಗಿ ನಿರ್ವಹಿಸುವವರು ಹಾಗೂ ಕಲಾವಿದರಿಗೆ ಸ್ಫೂರ್ತಿಯಾದವರು. ಯಕ್ಷಗಾನದಲ್ಲಿ ‘ಕುಂಬ್ಳೆ’ ಎಂಬ ಹೆಸರಿಗೆ ದೊಡ್ಡ ಪ್ರಸಿದ್ಧಿಯಿದೆ, ಅದನ್ನು ಉಳಿಸುವಲ್ಲಿ ಇವರು ಶ್ರಮಿಸಿದ್ದಾರೆ. ನಾನು ಕುಂಬ್ಳೆ ಪರಿಸರದವನಾದ್ದರಿಂದ ನಮ್ಮೂರಿಗೆ ಸನ್ಮಾನವಾದಷ್ಟು ಸಂತೋಷವಾಗುತ್ತಿದೆ. ನಾವು ಮಾಡುವ ಯಾವುದೇ ಸೇವೆ ನಿಸ್ವಾರ್ಥವಾಗಿರಲಿ. ಯಕ್ಷಗಾನವು ಕನ್ನಡದ ರಾಯಭಾರಿಯಾಗಿದ್ದು, ಶುದ್ಧ ಕನ್ನಡ ಮಾತನಾಡಲು ಯಕ್ಷಗಾನದಿಂದ ಮಾತ್ರ ಸಾಧ್ಯ. ಯಕ್ಷಗಾನವನ್ನು ಉಳಿಸಿದರೆ ಕನ್ನಡ ಭಾಷೆಯನ್ನು ಉಳಿಸಿದಂತೆ” ಎಂದರು.

​ಕಲಾ ಪೋಷಕಿ ಶಾಂತ ಪ್ರಭಾಕರ ಶೆಟ್ಟಿ ಮಾತನಾಡಿ, “ರಾಮಾಯಣವು ನಮ್ಮ ಜೀವನಕ್ಕೆ ಸತ್ಯ, ಧರ್ಮ ಮತ್ತು ಶಾಂತಿಯ ಮೌಲ್ಯಗಳನ್ನು ತಿಳಿಸುವ ಜ್ಞಾನ ಭಂಡಾರವಾಗಿದೆ. ಇಂತಹ ಮೌಲ್ಯಗಳನ್ನು ತಿಳಿಸುವ ತಾಳಮದ್ದಳೆಗೆ ನಮ್ಮ ಸಹಕಾರ ಸದಾ ಇರುತ್ತದೆ” ಎಂದರು.

​ವಿಶ್ವ ಹಿಂದೂ ಪರಿಷತ್ತಿನ ಠಾಣೆ ಪ್ರಾಂತ್ಯದ ಮುಖ್ಯಸ್ಥರಾದ ಪುಲ ಉಮೇಶ್ ಶೆಟ್ಟಿ ಮಾತನಾಡಿ, “ರಾಮಾಯಣ ಮತ್ತು ಮಹಾಭಾರತದ ಎಲ್ಲಾ ಪಾತ್ರಗಳೂ ಶ್ರೇಷ್ಠವಾಗಿವೆ. ಆದರೆ ಯಕ್ಷಗಾನದಲ್ಲಿ ಯಾವುದೇ ಪಾತ್ರವನ್ನು ಕೆಟ್ಟದಾಗಿ ವೈಭವೀಕರಿಸುವುದು ಸರಿಯಲ್ಲ. ರಾಮ-ಕೃಷ್ಣರ ದಿವ್ಯ ಕಥೆಗಳನ್ನು ಕಲಾವಿದರು ಅರಿತು, ಅಭ್ಯಾಸ ಮಾಡಿ ಪ್ರಸ್ತುತಪಡಿಸಬೇಕು. ಯಕ್ಷಗಾನದಲ್ಲಿ ಅಸಭ್ಯತೆ ಇರಬಾರದು, ಬದಲಾಗಿ ಮೌಲ್ಯಗಳು ಸಮಾಜಕ್ಕೆ ತಿಳಿಯಬೇಕು” ಎಂದು ನುಡಿದರು.

​ಯಕ್ಷಗಾನ ಕಲಾವಿದ ಹಾಗೂ ಅರ್ಥದಾರಿಗಳಾದ ವಾಸು ಮಾರ್ನಾಡ್ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ನಂದೊಳ್ಳಿ ಅವರು ಅತಿಥಿಗಳನ್ನು ಮತ್ತು ಸನ್ಮಾನಿತರನ್ನು ಪರಿಚಯಿಸಿದರು. ಸಭಾ ಕಾರ್ಯಕ್ರಮದ ಬಳಿಕ ತಾಳಮದ್ದಳೆ ಪ್ರದರ್ಶನಗೊಂಡಿತು.

​ತಾಳಮದ್ದಳೆ ಕಲಾವಿದರ ವಿವರ:

  • ಹಿಮ್ಮೇಳ:
    • ಭಾಗವತರು: ಜಯಲಕ್ಷ್ಮಿ ದೇವಾಡಿಗ
    • ಮದ್ದಳೆ: ಹರೀಶ್ ಸಾಲ್ಯಾನ್
    • ಚಂಡೆ: ಪ್ರವೀಣ್ ಶೆಟ್ಟಿ ಕಟೀಲ್, ಆಶೀಷ್ ದೇವಾಡಿಗ
  • ಮುಮ್ಮೇಳ (ಅರ್ಥದಾರಿಗಳು):
    • ಭರತ: ವಾಸುದೇವ ಶೆಟ್ಟಿ ಮಾರ್ನಾಡ್
    • ಶ್ರೀರಾಮ 1: ಸುರೇಶ್ ಶೆಟ್ಟಿ ನಂದ್ರೋಳ್ಳಿ
    • ಶ್ರೀರಾಮ 2: ನಾರಾಯಣ ಶೆಟ್ಟಿ ಕುಂಬ್ಳೆ
    • ಲಕ್ಷ್ಮಣ: ಮಾನಸ್ ಶೆಟ್ಟಿ
    • ಮುನಿಗಳು: ರತ್ನಾಕರ ಶೆಟ್ಟಿ, ಭವ್ಯ ಪೂಜಾರಿ, ಜಯ ಶೆಟ್ಟಿ
    • ಸೀತೆ: ದೇವಿಕಾ ಶೆಟ್ಟಿ

​ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ಹರಿದಾಸ ಗೋಪಾಲ ಶೆಟ್ಟಿ ಅವರ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ನವೋದಯ ಕನ್ನಡ ಸೇವಾ ಸಂಘ ಠಾಣೆ ಇವರಿಂದ ಶ್ರೀ ರಾಮ ಸಂಕೀರ್ತನೆ ನೆರವೇರಿತು.



Related posts

ಬೆಸ್ಟ್ ಡಾಕ್ಟರ್ ಅವಾರ್ಡ್ ವಿಜೇತ ಡಾ. ಸದಾನಂದ ಶೆಟ್ಟಿಯವರಿಗೆಕರ್ನಾಟಕ ಸಂಘ ಸಯನ್ ನ ವತಿಯಿಂದ ಆತ್ಮೀಯ ಸನ್ಮಾನ.

Mumbai News Desk

ಬಿಲ್ಲವರ ಅಸೋಸಿಯೇಶನ್ ಇದರ ವಸಯಿ ಸ್ಥಳೀಯ ಕಚೇರಿಯ ವತಿಯಿಂದ ವಿಜ್ರಂಭಣೆಯ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯೋತ್ಸವ ಆಚರಣೆ

Mumbai News Desk

ಕರ್ನಾಟಕ ಸಂಘ ಕಲ್ಯಾಣ: ಕರ್ನಾಟಕ ರಾಜ್ಯೋತ್ಸವ, 23ನೇ ವಾರ್ಷಿಕೋತ್ಸವ

Mumbai News Desk

ಸೇವಾ ಪಥದಲ್ಲಿ ಮೂರು ದಶಕ: ಭಾರತ್ ಬ್ಯಾಂಕ್ ಬಾಂದ್ರಾ ಪೂರ್ವ ಶಾಖೆಯ 30ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದಸಮಾಜದ ವಿದ್ಯಾರ್ಥಿಗಳಿಗಾಗಿ ಏರ್ಪಟ್ಟ ಚಿತ್ರಕಲಾ ಸ್ಪರ್ಧೆ :

Mumbai News Desk

ನವಿ ಮುಂಬೈ ವಿಮಾನ ನಿಲ್ದಾಣ : ಡಿಸೆಂಬರ್ 25 ರಿಂದ ಕಾರ್ಯಾಚರಣೆ ಆರಂಭ

Mumbai News Desk