29.4 C
Mumbai
June 27, 2026
Mumbai News Kannada
ಸುದ್ದಿ

ಸಾಧಕ ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳಿಗೆ ಉಡುಪಿಯಲ್ಲಿ ಭವ್ಯ ಸನ್ಮಾನ: ದೇಶದ ಭವಿಷ್ಯ ಕಟ್ಟಲು ಮಕ್ಕಳಿಗೆ ಸಂಸ್ಕಾರ ಅಗತ್ಯ – ಶ್ರೀ ಶೀರೂರು ಶ್ರೀಗಳು





ಭಾರತವು ವಿಶ್ವ ಗುರುವಾಗಲು ಮತ್ತು ದೇಶದ ಭವಿಷ್ಯವನ್ನು ಉಜ್ವಲವಾಗಿ ಕಟ್ಟಲು ಇಂದಿನ ಮಕ್ಕಳಿಗೆ ಬಾಲ್ಯದಲ್ಲಿಯೇ ಒಳ್ಳೆಯ ವಿದ್ಯೆ, ಬುದ್ಧಿ ಹಾಗೂ ಸಂಸ್ಕಾರಗಳನ್ನು ಕಲಿಸುವುದು ಅತ್ಯಗತ್ಯವಾಗಿದೆ. ಉತ್ತಮ ಶಿಕ್ಷಣ ಹಾಗೂ ಸಂಸ್ಕಾರವನ್ನು ಪಡೆದ ಮಕ್ಕಳು ಭವಿಷ್ಯದಲ್ಲಿ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ ಎಂದು ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಉಡುಪಿ ಜಿಲ್ಲಾ ಸಂಸ್ಥೆಯ ವತಿಯಿಂದ, ಪರ್ಯಾಯ ಶೀರೂರು ಮಠ ಮತ್ತು ಶ್ರೀ ಕೃಷ್ಣ ಮಠದ ಸಹಯೋಗದೊಂದಿಗೆ ಶುಕ್ರವಾರ ತಾರೀಕು 26/6/26 ರಂದು ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕ ಗಳಿಸಿದ ಸ್ಕೌಟ್ಸ್-ಗೈಡ್ಸ್ ಮತ್ತು ರೋವರ್ಸ್-ರೇಂಜರ್ಸ್ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ನಾವೆಲ್ಲರೂ ಸಮಾಜಮುಖಿಗಳಾಗಿ ಬಾಳಬೇಕು. ನಮ್ಮಿಂದ ನಾಲ್ಕು ಜನರಿಗೆ ಉಪಕಾರವಾಗಬೇಕು. ಪರೋಪಕಾರಕ್ಕಾಗಿಯೇ ಈ ಶರೀರ ಇದ್ದು, ಸಮಾಜದ ಸೇವೆ ಮಾಡುವುದರಿಂದಲೇ ಜೀವನದಲ್ಲಿ ಎಲ್ಲರ ಋಣವನ್ನು ತೀರಿಸಲು ಸಾಧ್ಯ ಎಂದರು.


ಕಳೆದ ಐದು ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ಸ್ಕೌಟ್ಸ್-ಗೈಡ್ಸ್, ರೇಂಜರ್ಸ್ ಹಾಗೂ ರೋವರ್ಸ್ ತರಬೇತಿಯನ್ನು ಪ್ರಾರಂಭಿಸಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ರಾಜ್ಯ ಮುಖ್ಯ ಆಯುಕ್ತರಾದ ಡಾ. ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, ಮಕ್ಕಳನ್ನು ಸರಿಯಾದ ಮಾರ್ಗದರ್ಶನದೊಂದಿಗೆ ದೇಶದ ಭವಿಷ್ಯದ ಪ್ರಗತಿಗಾಗಿ ಬಳಸಿಕೊಳ್ಳಬೇಕು. ಪ್ರಸ್ತುತ ರಾಜ್ಯದಲ್ಲಿ 8.5 ಲಕ್ಷ ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರಾಗಿದ್ದು, ಮುಂದಿನ 5 ವರ್ಷಗಳ ಅವಧಿಯಲ್ಲಿ ಈ ಸಂಖ್ಯೆಯನ್ನು 15 ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದಕ್ಕಾಗಿ ಶಿಕ್ಷಕರಿಗೆ ತರಬೇತಿ ನೀಡುವ ಅಗತ್ಯವಿದೆ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮಾಜದಲ್ಲಿ ಶಿಸ್ತು, ಸಹನೆ, ಸಂಯಮ, ಔದಾರ್ಯ ಹಾಗೂ ಗೌರವ ನೀಡುವ ಉದಾತ್ತ ಸಂಸ್ಕಾರವನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ನೀಡುತ್ತದೆ ಎಂದರು. ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಅವರು ಸಾಧಕ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.


ಇದೇ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಿಂದ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಇತರ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಬಂದಾಗ ಪ್ರಮಾಣಪತ್ರ ನೀಡಿ ಗೌರವಿಸುವ ಕಾರ್ಯಕ್ರಮಕ್ಕಾಗಿ ಶ್ರಮಿಸುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಇಂದ್ರಾಳಿ ಜಯಕರ್ ಶೆಟ್ಟಿ, ಬೆಂಗಳೂರಿನ ಸ್ಕೌಟ್ ರಾಜ್ಯ ಸಂಘಟನಾ ಆಯುಕ್ತ ಎಮ್. ಪ್ರಭಾಕರ್ ಭಟ್ ಮತ್ತು ರಾಜ್ಯ ಸಹಾಯಕ ಆಯುಕ್ತೆ ಸುಮನಾ ಶೇಖರ್ ಅವರನ್ನು ಭಾರತ್ ಸ್ಕೌಟ್ಸ್ ಪ್ರಧಾನ ಕಾರ್ಯದರ್ಶಿ ಪಿ.ಜಿ.ಆರ್. ಸಿಂಧ್ಯಾ ಅವರು ಸನ್ಮಾನಿಸಿ ಗೌರವಿಸಿದರು. ಸ್ಕೌಟ್ ರಾಜ್ಯ ಸಂಘಟನಾ ಆಯುಕ್ತ ಎಮ್. ಪ್ರಭಾಕರ್ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಮಾರಂಭದಲ್ಲಿ ಡಿಡಿಪಿಯು ಮಾರುತಿ, ಡಿಡಿಪಿಐ ಲೋಕೇಶ್, ರೋವರ್ಸ್ ಹಾಗೂ ರೇಂಜರ್ಸ್ ರಾಜ್ಯ ಉಸ್ತುವಾರಿ ಮಲ್ಲೇಶ್ವರಿ ಜೂಜಾರೆ, ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್ ಕೋಶಾಧಿಕಾರಿ ಹರಿಪ್ರಸಾದ್ ರೈ, ಜಿಲ್ಲಾ ಗೈಡ್ಸ್ ಆಯುಕ್ತೆ ಜ್ಯೋತಿ ಜಿ. ಪೈ, ಶೇಖರ್ ಮನ್ಸೇರ್, ಎಡಿಸಿ ಜ್ಯೋತಿ, ಸುನಿಲ್ ಕುಮಾರ್ ಶೆಟ್ಟಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನ್ ಶೇಖರ್, ಜಿಲ್ಲಾ ಕಾರ್ಯದರ್ಶಿ ಆನಂದ್ ಬಿ. ಅಡಿಗ, ಜಿಲ್ಲಾ ಉಪಾಧ್ಯಕ್ಷರಾದ ಮೊಹಮ್ಮದ್ ಮೌಲಾ ಹಾಗೂ ಗುಣರತ್ನ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ವಿದ್ಯಾರ್ಥಿಗಳಿಗೆ ಗೋಲ್ಡನ್ ಆರೋ ಹಾಗೂ ಸ್ಕೌಟ್ಸ್-ಗೈಡ್ಸ್‌ನಲ್ಲಿ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇದೇ ವೇಳೆ ಮುಂಬೈನ ಮದರ್ ಇಂಡಿಯಾ ಕನ್ನಡ ರಾತ್ರಿ ಶಾಲೆಯ ಸ್ಕೌಟ್ ಮಿತ್ರರಾದ ಜಯ ಸಿ. ಪೂಜಾರಿ ಹಾಗೂ ಸುದೇಶ್ ಭಂಡಾರಿ ಅವರನ್ನು ಸಹ ಗೌರವಿಸಲಾಯಿತು.


ರಾಜ್ಯದ ವಿವಿಧೆಡೆಗಳಿಂದ ಸುಮಾರು 650 ವಿದ್ಯಾರ್ಥಿಗಳು ಪೋಷಕರು ಸೇರಿದಂತೆ ಒಟ್ಟು 1,500ಕ್ಕೂ ಅಧಿಕ ಮಂದಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಇಂದ್ರಾಳಿ ಜಯಕರ್ ಶೆಟ್ಟಿ ಸ್ವಾಗತಿಸಿದರು. ಕಾರ್ಕಳ ತಾಲೂಕು ಕಾರ್ಯದರ್ಶಿ ಗಣೇಶ್ ಜಾಲ್ಸೂರು ಹಾಗೂ ಶುಭ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಆಯುಕ್ತ ಉದಯ ಭಾಸ್ಕರ್ ಶೆಟ್ಟಿ ವಂದಿಸಿದರು.



Related posts

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಎಸ್.ಕೋಡಿ ತೋಕೂರಿನಲ್ಲಿ ಬೇಸಿಗೆ ಶಿಬಿರ – ಚಿನ್ನರ ಹಬ್ಬ-2025ಕ್ಕೆ ಚಾಲನೆ

Mumbai News Desk

ನಾಸಿಕ್ ತುಳು ಸೇವಾ ಸಂಘದ 36ನೇ ವಾರ್ಷಿಕೋತ್ಸವ:

Mumbai News Desk

ಯೋಗೇಶ್ ಗೌಡ ಕೊಲೆ ಪ್ರಕರಣ: ಕಾಂಗ್ರೇಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 19 ಮಂದಿ ದೋಷಿ

Mumbai News Desk

ಶ್ರೀ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ : ಹೊಸ ರಥ ನಿರ್ಮಾಣ, ಅಷ್ಟಮಂಗಳ ಪ್ರಶ್ನೆಗೆ ಶೀಘ್ರ ನಿರ್ಧಾರ

Mumbai News Desk

ಬೆಲ್ಜಿಯಂನಲ್ಲಿ ಭಾರತದಿಂದ ಪರಾರಿಯಾಗಿದ್ದ ವಜ್ರೋದ್ಯಮಿ ಮೆಹುಲ್ ಚೋಕ್ಸಿ ಬಂಧನ

Mumbai News Desk

ಉಡುಪಿ : ಉದ್ಯಮಿ, ರೌಡಿ ಶೀಟರ್ ಸೈಪುದ್ದೀನ್ ಭೀಕರ ಹತ್ಯೆ

Mumbai News Desk