
ಡೊಂಬಿವಲಿ: ಶ್ರೀ ಮಹಾವಿಷ್ಣು ಮಂದಿರ, ಡೊಂಬಿವಲಿ ಸಂಚಾಲಿತ ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿಯ 49ನೇ ವಾರ್ಷಿಕ ಮಹಾಸಭೆಯು ಡೊಂಬಿವಲಿ ಪೂರ್ವದ ಮೊಗವೀರ ವ್ಯವಸ್ಥಾಪಕ ಮಂಡಳಿಯ ವೇದಬ್ರಹ್ಮ ಬಿಲ್ಡಿಂಗ್, 2ನೇ ಮಹಡಿ, ಮಹಾತ್ಮಾ ಗಾಂಧಿ ರಸ್ತೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಮೀಪದ ಸಭಾಂಗಣದಲ್ಲಿ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.
ಮಹಾಸಭೆಯ ಆರಂಭದಲ್ಲಿ ಸಮಾಜದ 60 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳು ಹಾಗೂ ಶಾಲಾ ಪರಿಕರಗಳನ್ನು ವಿತರಿಸಲಾಯಿತು. ಶಾಲಾ ಪರಿಕರಗಳನ್ನು ಉದಾರವಾಗಿ ನೀಡಿದ ಶ್ರೀಯುತ ಅರವಿಂದ್ ಪದ್ಮಶಾಲಿ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಪುಸ್ತಕಗಳ ವ್ಯವಸ್ಥೆ ಮಾಡಿಕೊಟ್ಟ ಯುವ ರಾಜಕೀಯ ನೇತಾರ ಶ್ರೀಯುತ ರತನ್ ಪೂಜಾರಿ ಅವರಿಗೆ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು.

ಮಂದಿರದ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸಚಿನ್ ಜಿ. ಪೂಜಾರಿ ಅವರು ಸಭೆಗೆ ಸ್ವಾಗತ ಕೋರಿದ ಬಳಿಕ, ಕಳೆದ ವರ್ಷದ ವಾರ್ಷಿಕ ವರದಿ ಹಾಗೂ ಹಿಂದಿನ ಮಹಾಸಭೆಯ ನಡಾವಳಿಯನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು. ಕೋಶಾಧಿಕಾರಿ ಶ್ರೀ ಪ್ರವೀಣ್ ಶೆಟ್ಟಿ ಅವರು ವಾರ್ಷಿಕ ಆದಾಯ–ವ್ಯಯ ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು.
ಸಭೆಯಲ್ಲಿ ಮಂದಿರದ ಸುವರ್ಣ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವಿವಿಧ ಸರಣಿ ಕಾರ್ಯಕ್ರಮಗಳ ಕುರಿತು ಅಧ್ಯಕ್ಷರು ಹಾಗೂ ಕಾರ್ಯದರ್ಶಿಯವರು ಸದಸ್ಯರಿಗೆ ವಿವರಿಸಿದರು. ಮೊದಲ ಕಾರ್ಯಕ್ರಮವಾದ ‘ಆಟಿಡ್ ಒಂಜಿ ದಿನ’ ಕಾರ್ಯಕ್ರಮವು 19-07-2026 ರಂದು ವಿಜೃಂಭಣೆಯಿಂದ ನಡೆದಿರುವುದಾಗಿ ತಿಳಿಸಲಾಯಿತು. ಎರಡನೇ ಕಾರ್ಯಕ್ರಮವಾಗಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಶಾಲಾ ಪರಿಕರ ವಿತರಣೆಯು ಇದೇ ದಿನ ಯಶಸ್ವಿಯಾಗಿ ನೆರವೇರಿತು.

ಮುಂದಿನ ಕಾರ್ಯಕ್ರಮಗಳ ವೇಳಾಪಟ್ಟಿ:
30-08-2026: ವೃದ್ಧಾಶ್ರಮಕ್ಕೆ ಭೇಟಿ ನೀಡಿ ಸಹಾಯಧನ ಹಾಗೂ ಅಗತ್ಯ ವಸ್ತುಗಳ ವಿತರಣೆ.
27-09-2026: ದಾಸರ ಭಜನಾ ಸ್ಪರ್ಧೆ (20 ವರ್ಷಕ್ಕಿಂತ ಮೇಲ್ಪಟ್ಟವರಿಗೆ), ಕುಣಿತ ಭಜನಾ ಸ್ಪರ್ಧೆ (20 ವರ್ಷಕ್ಕಿಂತ ಒಳಗಿನ ಮಕ್ಕಳಿಗೆ) ಹಾಗೂ ಸುವರ್ಣ ಮಹೋತ್ಸವದ ಮನವಿ ಪತ್ರ ಬಿಡುಗಡೆ.
11-10-2026: ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ.
14-11-2026: ಸಾಮೂಹಿಕ ಶನಿ ಗ್ರಂಥ ಪಾರಾಯಣ.
21-11-2026: ಶ್ರೀ ವಿಷ್ಣು ಸಹಸ್ರನಾಮ ಪಠಣ ಹಾಗೂ ಕಾರ್ತಿಕ ದೀಪೋತ್ಸವ.
05-12-2026: ಮಹಾವಿಷ್ಣು ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಹಾಗೂ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿ.
12 ಮತ್ತು 13-12-2026: ಭಜನಾ ಮಂಗಲೋತ್ಸವದ ಅಂಗವಾಗಿ ಏಕಾಹ ಭಜನೆ ಹಾಗೂ ಅಖಂಡ ಹರಿನಾಮ ಸಂಕೀರ್ತನೆ.
27-12-2026: ರಕ್ತದಾನ ಶಿಬಿರ ಹಾಗೂ ಉಚಿತ ವೈದ್ಯಕೀಯ ನೆರವು ಕಾರ್ಯಕ್ರಮ.
10-01-2027: ಆಧ್ಯಾತ್ಮಿಕ ಚಿಂತನೆಗಾಗಿ ತಾಳಮದ್ದಳೆ ಕಾರ್ಯಕ್ರಮ.
17-01-2027: ಮಹಿಳಾ ವಿಭಾಗದ ವತಿಯಿಂದ ಅರಿಶಿನ-ಕುಂಕುಮ ಕಾರ್ಯಕ್ರಮ.
31-01-2027: ಮಕ್ಕಳ ಹಾಗೂ ಹಿರಿಯರಿಗಾಗಿ ಏಕಪಾತ್ರಾಭಿನಯ ಸ್ಪರ್ಧೆ (ವಿಷ್ಣು ದೇವರು ಅಥವಾ ಅವರ ಅವತಾರಗಳ ಕುರಿತು) ಮತ್ತು ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ (ವಿಷ್ಣು ದೇವರು ಅಥವಾ ಅವರ ಅವತಾರಗಳ ವಿಷಯ).
14-02-2027: ಆಧ್ಯಾತ್ಮಿಕ ಚಿಂತನೆಗಾಗಿ ಹರಿಕಥಾ ಕಾರ್ಯಕ್ರಮ.
ಫೆಬ್ರವರಿ ತಿಂಗಳಲ್ಲಿ ಕ್ಷೇತ್ರದರ್ಶನದ ಅಂಗವಾಗಿ ಕೇರಳದ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಭಜನಾ ಸಂಕೀರ್ತನೆ ನಡೆಸುವ ಸಂಕಲ್ಪವನ್ನೂ ಸಭೆಯಲ್ಲಿ ಪ್ರಕಟಿಸಲಾಯಿತು.
2027ರ ಏಪ್ರಿಲ್ ತಿಂಗಳ ಕೊನೆಯಲ್ಲಿ ಸುವರ್ಣ ಮಹೋತ್ಸವದ ಸಮಾರೋಪ ಸಮಾರಂಭ, ಸ್ಮರಣಿಕೆ ಬಿಡುಗಡೆ, ಮಹಾದಾನಿಗಳಿಗೆ ಗೌರವಾರ್ಪಣೆ, ಮಂದಿರದಲ್ಲಿ ಸೇವೆಗೈದ ಹಿರಿಯ ಸದಸ್ಯರಿಗೆ ಸನ್ಮಾನ ಹಾಗೂ ಪೌರಾಣಿಕ ನಾಟಕ ಪ್ರದರ್ಶನವನ್ನು ಆಯೋಜಿಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಸುವರ್ಣ ಮಹೋತ್ಸವದ ಅಂಗವಾಗಿ ಮಂದಿರದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳಾದ ರಜತ ಮೂರ್ತಿ ಮತ್ತು ಪ್ರಭಾವಳಿ, ಗರ್ಭಗುಡಿಯ ಬಾಗಿಲಿಗೆ ತಾಮ್ರದ ಹೊದಿಕೆ, ಏಕಶಿಲಾ ಪಾಣಿಪೀಠ, ಗಣಪತಿ ಹಾಗೂ ದುರ್ಗಾದೇವಿ ಮೂರ್ತಿಗಳಿಗೆ/ಚಿತ್ರಗಳಿಗೆ ಬೆಳ್ಳಿಯ ಅಲಂಕಾರ ಮತ್ತು ಭಕ್ತರ ಅನುಕೂಲಕ್ಕಾಗಿ ಸ್ವಾಗತ ಗೋಪುರ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಒಟ್ಟು ಸುಮಾರು ₹60 ಲಕ್ಷ ವೆಚ್ಚ ನಿಗದಿಪಡಿಸಲಾಯಿತು.
ಸಭೆಯಲ್ಲಿ ಅನೇಕ ಸದಸ್ಯರು ಮಂದಿರದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಅಮೂಲ್ಯ ಸಲಹೆ-ಸೂಚನೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಸುಮಾರು 12 ಮಂದಿ ನೂತನ ಸದಸ್ಯರು ಭಜನಾ ಮಂಡಳಿಗೆ ಸೇರ್ಪಡೆಯಾದರು.
ಕೊನೆಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಶ್ರೀ ಸಚಿನ್ ಜಿ. ಪೂಜಾರಿ ಅವರು ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರು, ದಾನಿಗಳು ಹಾಗೂ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿ ಮಹಾಸಭೆಯನ್ನು ಮುಕ್ತಾಯಗೊಳಿಸಿದರು.





