
ಮುಂಬಯಿ:
ಪರಮಪೂಜ್ಯ ಶ್ರೀ ಶ್ರೀ ಶ್ರೀ ಪೇಜಾವರ ಮಠಾಧೀಶರಾದ ವಿಶ್ವೇಶ ತೀರ್ಥ ಸ್ವಾಮೀಜಿಯವರ ಶಿಷ್ಯರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರ ದಿವ್ಯ ಉಪಸ್ಥಿತಿ ಹಾಗೂ ಅವರ ಅಮೃತಹಸ್ತದಿಂದ 2026ರ ಫೆಬ್ರವರಿ 1ರಂದು ಉದ್ಘಾಟನೆಗೊಂಡ, ಪೂಜ್ಯ ಶ್ರೀ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ, ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನ ವಿದ್ಯಾವಿಹಾರ್ ಇದರ ಆಡಳಿತ ಮೊಕ್ತೇಸರರಾದ ಹರಿದಾಸ ಗೋಪಾಲ ಶೆಟ್ಟಿ ಇವರ ಸಂಪೂರ್ಣ ಸಹಕಾರದೊಂದಿಗೆ ‘ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ’ ಹಾಗೂ ‘ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ’ದ ಸಂಯುಕ್ತ ಆಯೋಜನೆಯಲ್ಲಿ ಕಾರ್ಯಕ್ರಮವೊಂದು ನೆರವೇರಲಿದೆ.
ಪ್ರಭು ರಾಮಚಂದ್ರ ದೇವರ ಅವತಾರದ ಆರಂಭದಿಂದ ಶ್ರೀ ದೇವರ ನಿರ್ಯಾಣದವರೆಗಿನ ಸಂಪೂರ್ಣ ಶ್ರೀ ರಾಮಚರಿತ್ರೆ ‘ಶ್ರೀ ರಾಮ ಕಥಾ ಹೃದಯಂ’ ಪುಣ್ಯಪ್ರದ 24 ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ ಹನ್ನೆರಡನೇ ಪ್ರಸ್ತುತಿಯಾಗಿ ‘ವಿಭೀಷಣ ನೀತಿ’ ಎಂಬ ತಾಳಮದ್ದಳೆ ಪ್ರಸಂಗವು ದಿನಾಂಕ 02-08-2026ರ ಭಾನುವಾರದಂದು ವಿದ್ಯಾವಿಹಾರ್ (ಪಶ್ಚಿಮ) ಗಾಂವ್‌ದೇವಿಯ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜರುಗಲಿದೆ.
ಈ ಕಾರ್ಯಕ್ರಮದಲ್ಲಿ ಥಾಣೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಧ್ಯಕ್ಷರಾದ ಉಮೇಶ ಶೆಟ್ಟಿ ಪೊಲ್ಯ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಆ ದಿನ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಪೆರ್ಣಂಕಿಲ ಹರಿದಾಸ ಭಟ್ ಇವರ ಆಶಯದಂತೆ ಮುಂಬೈ ಮಹಾನಗರದ ಹಿರಿಯ ಯಕ್ಷಗಾನ ಕಲಾವಿದರುಗಳಾದ ನೀಲಾಕ್ಷ ಸುವರ್ಣ, ರಮೇಶ ಸುವರ್ಣ, ಲಕ್ಷ್ಮೀನಾರಾಯಣ ರಾವ್ ಹೊಸಬೆಟ್ಟು, ಗಂಗಾಧರ ಸಾಲ್ಯಾನ್, ನಾಗೇಶ ಸುವರ್ಣ ತೆಂಕ ಎರ್ಮಾಳ್, ರಾಜಾ ತುಂಬೆ, ಮಧುಸೂದನ ಪಾಲನ್ ಹಾಗೂ ಆದ್ಯಪಾಡಿ ಬಾಲಕೃಷ್ಣ ಶೆಟ್ಟಿ ಇವರನ್ನು ಸಪತ್ನಿಕರಾಗಿ ಗೌರವಿಸಲಾಗುವುದು.
ಈ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಸಹಕರಿಸಬೇಕಾಗಿ ವಾಸು ಮಾರ್ನಾಡ್ ಹಾಗೂ ಸುರೇಶ್ ನಂದ್ರೊಳ್ಳಿ ವಿನಂತಿಸಿದ್ದಾರೆ.





