
ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಮಹಿಳೆಯರ ಪಾತ್ರವನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು: ಶಿಕ್ಷಕಿ ರೇಣುಕಾ ಪೂಜಾರಿ ಪುತ್ತೂರು
ಹೆಜಮಾಡಿ, ಆ. 1: ಹೆಜಮಾಡಿ ಮಹಿಳಾ ಮಂಡಳಿ ಬಿಲ್ಲವರ ಸಂಘದ ಆಶ್ರಯದಲ್ಲಿ ಬಿಲ್ಲವರ ಸಭಾಭವನದಲ್ಲಿ ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ “ಆಟಿಡೊಂಜಿ ದಿನ” ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಶಿಕ್ಷಕಿ ಹಾಗೂ ಖ್ಯಾತ ನಿರೂಪಕಿ ರೇಣುಕಾ ಪೂಜಾರಿ ಪುತ್ತೂರು, “ಆಟಿ ತಿಂಗಳು ತುಳುನಾಡಿನ ಸಂಸ್ಕೃತಿ, ಪ್ರಕೃತಿ ಮತ್ತು ಜೀವನಶೈಲಿಯೊಂದಿಗೆ ಬೆಸೆದುಕೊಂಡಿರುವ ಅಮೂಲ್ಯ ಪರಂಪರೆಯಾಗಿದೆ. ನಮ್ಮ ಹಿರಿಯರು ಅನುಸರಿಸಿಕೊಂಡು ಬಂದಿರುವ ಆಚಾರ-ವಿಚಾರಗಳು, ಆರೋಗ್ಯಪೂರ್ಣ ಆಹಾರ ಪದ್ಧತಿ, ಔಷಧೀಯ ಗುಣಗಳಿರುವ ಆಟಿ ತಿಂಗಳ ವಿಶೇಷ ಆಹಾರಗಳು ಹಾಗೂ ಸಂಸ್ಕೃತಿಯ ಮೌಲ್ಯಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂತಹ ಕಾರ್ಯಕ್ರಮಗಳು ಕೇವಲ ಆಚರಣೆಗೆ ಸೀಮಿತವಾಗದೇ, ನಮ್ಮ ಸಂಸ್ಕೃತಿಯ ಉಳಿವು ಮತ್ತು ಬೆಳವಣಿಗೆಗೆ ಸೇತುವೆಯಾಗಬೇಕು. ಮಹಿಳೆಯರೇ ನಮ್ಮ ಸಂಸ್ಕೃತಿಯ ನಿಜವಾದ ರಾಯಭಾರಿಗಳು” ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷರಾದ ಮೋಹನ್‌ದಾಸ್ ಹೆಜಮಾಡಿ ಮಾತನಾಡಿ, “ಆಟಿಡೊಂಜಿ ದಿನವು ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಸಂಪ್ರದಾಯ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ಶ್ಲಾಘನೀಯ. ಮಹಿಳಾ ಮಂಡಳಿಯ ಈ ಪ್ರಯತ್ನ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದೆ” ಎಂದು ಅಭಿಪ್ರಾಯಪಟ್ಟರು.





ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೆಜಮಾಡಿ ಮಹಿಳಾ ಮಂಡಳಿಯ ಅಧ್ಯಕ್ಷೆ ಲಾವಣ್ಯ ಪ್ರಬೋಧ್, “ಮಹಿಳೆಯರು ಕುಟುಂಬದಷ್ಟೇ ಅಲ್ಲ, ಸಮಾಜದ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಕರಾಗಿದ್ದಾರೆ. ನಮ್ಮ ಆಚರಣೆ, ಆಹಾರ ಪದ್ಧತಿ, ಜನಪದ ಕಲೆ ಹಾಗೂ ಸಂಸ್ಕೃತಿಯನ್ನು ಮಕ್ಕಳಿಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂತಹ ಕಾರ್ಯಕ್ರಮಗಳು ಮಹಿಳೆಯರಲ್ಲಿ ಒಗ್ಗಟ್ಟು ಬೆಳೆಸುವುದರ ಜೊತೆಗೆ ಸಂಸ್ಕೃತಿಯ ಮೇಲಿನ ಅಭಿಮಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ” ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಆಟಿ ತಿಂಗಳಿಗೆ ಸಂಬಂಧಿಸಿದ ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳು ನಡೆದವು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಸದಸ್ಯರಿಂದ ತುಳುನಾಡಿನ ಜನಪದ ನೃತ್ಯ ವೈಭವ ಪ್ರದರ್ಶನಗೊಂಡಿತು. ಆಟಿ ತಿಂಗಳ ವಿವಿಧ ಬಗೆಬಗೆಯ ತಿಂಡಿ-ತಿನಿಸು, ಆಹಾರವನ್ನು ಉಣಬಡಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಕಿ ಹಾಗೂ ಖ್ಯಾತ ನಿರೂಪಕಿ ರೇಣುಕಾ ಪೂಜಾರಿ ಪುತ್ತೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ದಯಾನಂದ ಹೆಜಮಾಡಿ, ಬಿಲ್ಲವರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಬೋಧ್ ಚಂದ್ರ ಹೆಜಮಾಡಿ, ಮಾಜಿ ಅಧ್ಯಕ್ಷ ಜೀನರಾಜ್ ಬಂಗೇರ, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್., ಯುವ ವಾಹಿನಿ ಘಟಕದ ಅಧ್ಯಕ್ಷ ಪ್ರಥಮೇಶ್ ಬಂಗೇರ, ಬಿರುವೆರ್ ಬ್ರದರ್ಸ್ ಅಧ್ಯಕ್ಷ ಗುರುಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಲಾವಣ್ಯ ಪ್ರಬೋಧ್ ಸ್ವಾಗತಿಸಿದರು. ಕಾರ್ಯದರ್ಶಿ ಆಶಾ ನವೀನ್ ವಂದಿಸಿದರು. ಧೀರಜ್ ಹೆಜಮಾಡಿ ಹಾಗೂ ಪ್ರಾಪ್ತಿ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.




