October 12, 2026
Mumbai News Kannada
ನಿಧನ ಸುದ್ದಿ

ಹಿರಿಯ ರಂಗನಟಿ ಚಂದ್ರಪ್ರಭಾ ಸುಧಾಕರ ಉದ್ಯಾವರ ನಿಧನ



ಮುಂಬಯಿಯ ತುಳು, ಕನ್ನಡ ಹಾಗೂ ಮರಾಠಿ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ರಂಗ ಕಲಾವಿದೆ ಶ್ರೀಮತಿ ಚಂದ್ರಪ್ರಭಾ ಸುಧಾಕರ ಉದ್ಯಾವರ (1945–2026) ಅವರು ಆಗಸ್ಟ್ 25, 2026ರ ಮಂಗಳವಾರದಂದು ಅಕಾಲಿಕವಾಗಿ ನಿಧನರಾದರು. ಅವರ ನಿಧನದಿಂದ ತುಳು–ಕನ್ನಡ ರಂಗಭೂಮಿ, ರಂಗ ಸಂಸ್ಥೆಗಳು ಹಾಗೂ ಪ್ರೇಕ್ಷಕ ವರ್ಗದಲ್ಲಿ ದುಃಖದ ಛಾಯೆ ಆವರಿಸಿದೆ.
ಖ್ಯಾತ ರಂಗ ತಜ್ಞ ಕೆ. ಕೆ. ಸುವರ್ಣರ ಸುಪುತ್ರಿಯಾಗಿದ್ದ ಚಂದ್ರಪ್ರಭಾ ಅವರು ಆರಂಭದಲ್ಲಿ ತಮ್ಮ ತಂದೆ ಕೆ. ಕೆ. ಸುವರ್ಣರ ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗಭೂಮಿಯ ಅನುಭವ ಪಡೆದರು. ಬಳಿಕ ಮರಾಠಿ ನಾಟಕಗಳಲ್ಲಿ ತಮ್ಮ ಪ್ರತಿಭೆಯನ್ನು ಬಿತ್ತರಿಸಿ, ಹಲವಾರು ತುಳು ಹಾಗೂ ಕನ್ನಡ ನಾಟಕಗಳಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಸೂರೆಗೊಂಡಿದ್ದರು.
ಪ್ರಭಾಕರ್ ಪನ್ಶಿಕರ್ ಅವರ ‘ತೋ ಮಿ ನವೇಚ್’ ಮರಾಠಿ ನಾಟಕದ ಮೂಲಕ ಖ್ಯಾತಿ ಪಡೆದ ಚಂದ್ರಪ್ರಭಾ ಅವರು ಮರಾಠಿಯ ಹಲವಾರು ನಾಟಕ ಮಂಡಳಿಗಳಲ್ಲಿ ಅಭಿನಯಿಸಿದ್ದರು. ತುಳು–ಕನ್ನಡ ನಾಟಕ ಸಂಸ್ಥೆಗಳಾದ ಕಲಾ ಜಗತ್ತುವಿನ ವಿಜಯ ಕುಮಾರ್ ಶೆಟ್ಟಿಯವರ, ಸುವರ್ಣ ಜ್ಯೋತಿಯ ವಿ. ಕೆ. ಸುವರ್ಣ ಪಡುಬಿದ್ರಿಯವರ, ಅಭಿನಯ ಮಂಟಪದ ಕರುಣಾಕರ ಕಾಪುರವರ, ಅಭಿನಯ ಸಾಮ್ರಾಜ್ಯದ ಜಯರಾಮ್ ಆಳ್ವರ, ವೀರ ಕೇಸರಿ ಕಲಾವೃಂದದ ರಮೇಶ್ ಶಿವಪುರರ, ನವೋದಯದ ಶ್ರೀನಾಥ್ ಮುಲ್ಕಿಯವರ, ಉದಯರಂಗದ ದೇವುದಾಸ್ ಸಾಲ್ಯಾನರ, ರಂಗಧ್ವನಿಯ ಜಗದೀಶ್ ಕೆಂಚನಕೆರೆಯವರ, ಜಗಜ್ಯೋತಿ ಕಲಾವೃಂದದ ಸಾ ದಯಾ ಅವರ ಹಾಗೂ ಎಸ್. ಎಸ್. ಕಾರ್ಕಳ್, ಬಿ. ಎಂ. ವಸಂತ್ ಅವರ ನಿರ್ದೇಶನದಲ್ಲಿ ಮತ್ತು ಹಲವಾರು ತುಳು–ಕನ್ನಡಿಗರ ಕಲಾ ಸಂಸ್ಥೆಗಳಲ್ಲಿ ಅಭಿನಯಿಸಿ ರಂಗಭೂಮಿಯನ್ನು ಶ್ರೀಮಂತಗೊಳಿಸಿದ್ದರು.
ಮುಂಬಯಿ ರಂಗಭೂಮಿಯ ಪ್ರಬುದ್ಧ ಕಲಾವಿದರಾದ ವಾಮನ್ ರಾಜ್, ಸದಾಶಿವ ಸಾಲ್ಯಾನ್, ಸುಂದರ ಮೂಡಬಿದ್ರೆ, ಭವಾನಿ ಶಂಕರ್ ಶೆಟ್ಟಿ, ಮೋಹನ್ ಮಾರ್ನಾಡ್, ಗುಣಪಾಲ್ ಉಡುಪಿ, ಡಾ| ಸುರೇಂದ್ರ ಕುಮಾರ್ ಹೆಗ್ಡೆ, ರಮೇಶ್ ಕರ್ಕೇರಾ, ಉಮೇಶ್ ಶೆಟ್ಟಿ, ಅಶೋಕ್ ಕುಮಾರ್ ಕಾರ್ನಾಡ್, ಕುಂದರೇಗೆ, ಅನಸೂಯಾ, ಹೆಲೆನ್ ಮೊಂಟೆರೋ, ಸರೋಜಾದೇವಿ, ಚಂದ್ರಾವತಿ ದೇವಾಡಿಗ, ಜೂಲಿಯೆಟ್ ಪಿರೇರಾ ಮುಂತಾದವರ ಜೊತೆ ಅಭಿನಯಿಸಿದ್ದ ಅವರು ಧೀಮಂತ ಹಾಗೂ ಪ್ರತಿಭಾವಂತ ಕಲಾವಿದೆಯಾಗಿ ಗುರುತಿಸಿಕೊಂಡಿದ್ದರು.
ಚಂದ್ರಪ್ರಭಾ ಅವರ ರಂಗಭೂಮಿಯ ಮೇಲಿನ ಪ್ರೀತಿ, ಬದ್ಧತೆ, ಅಭಿನಯದಲ್ಲಿನ ಸಹಜತೆ ಹಾಗೂ ಸಹನಟರೊಡನೆ ಹೊಂದಿದ್ದ ಆತ್ಮೀಯತೆ ಕಲಾವಿದರ ವಲಯದಲ್ಲಿ ಸದಾ ಸ್ಮರಣೀಯವಾಗಿರಲಿದೆ. ಅವರ ಅಗಲಿಕೆ ತುಳು–ಕನ್ನಡ ರಂಗಭೂಮಿಗೆ ಹಾಗೂ ಮುಂಬಯಿಯ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.



Related posts

ಖಾಸಗಿ ಹೋಟೆಲ್ ಉದ್ಯೋಗಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕಲ್ಮಾಡಿ ನಿವಾಸಿ ಕೃತಿ ಬಂಗೇರಾ ಆತ್ಮಹತ್ಯೆ

Mumbai News Desk

ಮೀರಾರೋಡ್: ಖ್ಯಾತ ದಂತವೈದ್ಯ ಡಾ. ಅವಿನಾಶ್ ಶೆಟ್ಟಿ ನಿಧನ

Mumbai News Desk

ಹೆಜಮಾಡಿ : ಶ್ರೀಧರ್ ಸುವರ್ಣ ನಿಧನ

Mumbai News Desk

ಜೋಗೇಶ್ವರಿ: ಹೋಟೆಲ್ ಉದ್ಯಮಿ, ಸಂಘಟಕ ನಾರಾಯಣ ಪೂಜಾರಿ ನಿಧನ

Mumbai News Desk

ಬಿಕರ್ಣಕಟ್ಟೆ: ಸುಂದರಿ ಎಸ್. ಕುಲಾಲ್ ನಿಧನ

Mumbai News Desk

ಕಲಾವಿದ, ಜೈ ಕರ್ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯ ಉದಯ ಕುಮಾರ್ ಹೆಜಮಾಡಿ ನಿಧನ

Mumbai News Desk