September 13, 2026
Mumbai News Kannada
ಮುಂಬಯಿ

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ





ಸಾಂತಾಕ್ರೂಜ್: ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯು ದಿನಾಂಕ 07/09/2026ರಂದು ಸಂಜೆ 8 ಗಂಟೆಗೆ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಮಿತಿಯ ಕಾರ್ಯಾಧ್ಯಕ್ಷ ರವಿ ಸನಿಲ್ ಅವರು ಮಾತನಾಡಿ, “ದೇಶ ಕಂಡ ಶ್ರೇಷ್ಠ ಶಿಕ್ಷಕ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯ ಪ್ರಯುಕ್ತ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ತಾಯಿಯೇ ಮೊದಲ ಪಾಠಶಾಲೆ. ‘ಗುರು’ ಶಬ್ದದ ಅರ್ಥ ಹೀಗಿದೆ—’ಗು’ ಎಂದರೆ ಅಂಧಕಾರ, ‘ರು’ ಎಂದರೆ ಅದನ್ನು ಹೋಗಲಾಡಿಸುವವನು. ಶಿಷ್ಯರಿಗೆ ಜ್ಞಾನ ನೀಡುವವರೇ ಗುರು; ತಾಯಿಯೇ ಮೊದಲ ಶಿಕ್ಷಕಿ. ವಿವಿಧ ನೆಲೆಯಲ್ಲಿ ಜೀವನದ ದಾರಿ ತೋರಿಸುವವರೇ ಮಾರ್ಗದರ್ಶಕರು. ವಿದ್ಯಾರ್ಜನೆ ನೀಡುವವರು ಶಿಕ್ಷಕರು. ಶಿಕ್ಷಣ ನೀಡಿದ ಗುರುವನ್ನು ಶಿಷ್ಯರು ಗೌರವಿಸಬೇಕು. ಅವರಿಂದ ಶಿಕ್ಷಣ ಪಡೆದು ಮಕ್ಕಳು ಸಂಸ್ಕಾರ, ಸಂಸ್ಕೃತಿ ಮತ್ತು ಜೀವನದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು,” ಎಂದು ಹೇಳುತ್ತಾ ಶಿಕ್ಷಕರ ದಿನಾಚರಣೆಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಮಾತೃಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲಿಯಾನ್ ಅವರು ಮಾತನಾಡುತ್ತ, “ನಮ್ಮ ಶಾಲೆಯ ಶಿಕ್ಷಕರು ಉತ್ತಮ ಸಮಯಪ್ರಜ್ಞೆ ಉಳ್ಳವರು. ಇತ್ತೀಚೆಗೆ ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದರೂ, ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಡಿಗೇರ ಮತ್ತು ಶಿಕ್ಷಕರ ಪರಿಶ್ರಮದಿಂದಲೇ ವಿದ್ಯಾರ್ಥಿಗಳ ಸಂಖ್ಯೆ ಸಮಾಧಾನಕರ ಮಟ್ಟದಲ್ಲಿದೆ. ನಮ್ಮ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಉತ್ತಮ ಸ್ಥಾನಮಾನಗಳನ್ನು ಗಳಿಸಿಕೊಂಡಿದ್ದಾರೆ. ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದದ್ದು; ಅಂತಹ ಶಿಕ್ಷಕರನ್ನು ಗೌರವದಿಂದ ಕಾಣಬೇಕು,” ಎಂದರು. ನಂತರ ಶಿಕ್ಷಕ-ಶಿಕ್ಷಕೇತರ ವೃಂದಕ್ಕೆ ಪುಷ್ಪಗುಚ್ಛ ಹಾಗೂ ಗುರುಕಾಣಿಕೆ ನೀಡಿ ಗೌರವಿಸಲಾಯಿತು.

ಶಾಲೆಯ ಮುಖ್ಯಾಧ್ಯಾಪಕ ಮಲ್ಲಿಕಾರ್ಜುನ ಬಡಿಗೇರ ಅವರು ಮಾತನಾಡುತ್ತ, “ಶಿಕ್ಷಕ ವೃತ್ತಿ ಪವಿತ್ರವಾದದ್ದು. ಪ್ರತಿಯೊಬ್ಬರ ಬಾಳಿಗೆ ದಾರಿ ತೋರಿಸಲು ಒಬ್ಬ ಗುರು ಬೇಕು. ಅಂತಹ ಗುರುವರ್ಯರಾದ ರಮಾಕಾಂತ್ ಅಚ್ರೇಕರ್ ಅವರು ದೇಶದ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಗುರು; ಸಮರ್ಥ ರಾಮದಾಸರು ಛತ್ರಪತಿ ಶಿವಾಜಿಗೆ, ವಿಶ್ವಾಮಿತ್ರ ಮತ್ತು ವಸಿಷ್ಠರು ರಾಮ-ಲಕ್ಷ್ಮಣರಿಗೆ ಹಾಗೂ ರಾಮಕೃಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರಿಗೆ ಗುರುಗಳಾಗಿದ್ದರು. ಇಂತಹ ಶ್ರೇಷ್ಠ ಗುರುಗಳ ಮಾರ್ಗದರ್ಶನದಿಂದಲೇ ರಾಷ್ಟ್ರಪತಿ ಹಾಗೂ ವಿಜ್ಞಾನಿಗಳನ್ನು ಕಂಡ ಪ್ರಗತಿಪರ ದೇಶ ನಮ್ಮದಾಗಿದೆ. ದೇಶ ಸುರಕ್ಷಿತವಾಗಿ ಮುನ್ನಡೆಯಬೇಕಾದರೆ ಶಿಕ್ಷಕ ಮತ್ತು ಸೈನಿಕರಿಬ್ಬರ ಪಾತ್ರವೂ ಅತ್ಯಂತ ಪ್ರಮುಖವಾಗಿದೆ; ಇವರಿಬ್ಬರೂ ದೇಶದ ರಕ್ಷಕರು,” ಎಂದು ಗುರುವಿನ ಮಹತ್ವವನ್ನು ವಿವರಿಸಿದರು.

ಶಿಕ್ಷಕ ದಸಮಾನೆ ಅವರು ಮಾತನಾಡಿ, “ಶಿಕ್ಷಣದಿಂದ ಸೃಜನಶೀಲತೆ ಬೆಳೆಯುತ್ತದೆ. ಪ್ರತಿಯೊಬ್ಬರೂ ಗುರಿ ಮುಟ್ಟಬೇಕಾದರೆ ಅದರ ಹಿಂದೆ ಗುರು ಇರಬೇಕು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ದಾಸರು ಹೇಳಿದಂತೆ, ಗುರುವಿನ ಸೇವೆ ಮಾಡಿದರೆ ಜೀವನಕ್ಕೆ ಮುಕ್ತಿ ದೊರೆಯುತ್ತದೆ; ಅಂತಹ ಗುರುವಿನ ಮಾರ್ಗದರ್ಶನದಿಂದ ಉತ್ತಮ ಜೀವನಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯ. ಇಂದಿನ ತಂತ್ರಜ್ಞಾನ ಯುಗದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ಈ ಪದ್ಧತಿಯಿಂದ ಕೌಶಲ್ಯಪೂರ್ಣ ಶಿಕ್ಷಣ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಬೇಕು,” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಶಿಕ್ಷಕರ ದಿನಾಚರಣೆಯ ಕುರಿತು ವಿದ್ಯಾರ್ಥಿಗಳಾದ ತರುಣ್ ಗುತ್ತೇದಾರ್, ಭಾವಿಶ್ ಪೂಜಾರಿ, ಸುನೀತಾ ರಾಠೋಡ್, ಸುಮನ ಫುಲೆ, ಚಾಂದಿನಿ ಚವ್ಹಾಣ್, ನೈನಾ ರಾಠೋಡ್, ರೋಹಿಣಿ ಶೆಟ್ಟಿ ಹಾಗೂ ವಿಜಯ್ ಪೂಜಾರಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಶಿಕ್ಷಕ-ಶಿಕ್ಷಕೇತರ ವೃಂದದ ಸಿದ್ಧರಾಮ ದಸಮಾನೆ, ವಿಮಲಾ ಪೂಜಾರಿ, ಲಕ್ಷ್ಮಣ ಪೂಜಾರಿ, ನಮಿತಾ ಸುವರ್ಣ ಮತ್ತು ಹಳೆಯ ವಿದ್ಯಾರ್ಥಿಗಳಾದ ರಾಧಿಕಾ ರಾಠೋಡ್, ಸುಜಾತಾ ಪವಾರ್, ರಾಧಿಕಾ ಭಾವಿಮನಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರಾದ ಸುನೀತಾ ರಾಠೋಡ್, ಸುಮನ ಫುಲೆ, ಚಾಂದಿನಿ ಚವ್ಹಾಣ್, ಸೋನು ಚಂದ್ರು ಚವ್ಹಾಣ್, ಪಲ್ಲವಿ ರಾಠೋಡ್ ಹಾಗೂ ನೈನಾ ಪ್ರಾರ್ಥಿಸಿದರು. ಸೋನು ಚಂದ್ರು ಚವ್ಹಾಣ್ ಕಾರ್ಯಕ್ರಮ ನಿರೂಪಿಸಿ, ಸಂಗೀತಾ ಚಂದ್ರು ಚವ್ಹಾಣ್ ವಂದಿಸಿದರು.



Related posts

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ (ರಿ) ಕಾಮೋಟೆ ಇದರ ಮಹಿಳಾ ವಿಭಾಗದ ವತಯಿಂದ ಜಾಗತಿಕ ಮಹಿಳಾ ದಿನಾಚರಣೆ,

Mumbai News Desk

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆ: ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಂಡಿದ್ದ ನ್ಯೂ ಪನ್ವೇಲ್‌ನ ಮಾಜಿ ಕಾರ್ಪೊರೇಟರ್ ಸಂತೋಷ್ ಜಿ ಶೆಟ್ಟಿ

Mumbai News Desk

ಭಾರತ್ ಬ್ಯಾಂಕ್ ಕಾಂದಿವಿಲಿ ಪೂರ್ವ ಶಾಖೆಯಲ್ಲಿ ಸಂಸ್ಥಾಪನಾ ದಿನಾಚರಣೆ

Mumbai News Desk

12ನೇ ತರಗತಿಯ ಫಲಿತಾಂಶ : ಪ್ರಿಷಾ ಸದಾಶಿವ ಶೆಟ್ಟಿ , 88% ಅಂಕ 

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಕುರ್ಲಾ ಪಶ್ಚಿಮ ಶಾಖೆಯಲ್ಲಿ 48 ನೇ ಸಂಸ್ಥಾಪನಾ ದಿನ ಹಾಗೂ 13ನೇ ವಾರ್ಷಿಕೋತ್ಸವದ ವೈಭವದ ಆಚರಣೆ

Mumbai News Desk

ಶ್ರೀ ಕಟೀಲು ದುರ್ಗಾಪರಮೇಶ್ವರಿ ಕಲ್ಲುರ್ಟಿ ಮಂತ್ರದೇವತಾ ಸಾನಿಧ್ಯ ಕೋಪರಖೈರಣೆ, ಧರ್ಮದೈವ ತಾಯಿ ಕಲ್ಲುರ್ಟಿಯ ಮಾಸಿಕ ಸಂಕ್ರಾಂತಿ ಸೇವೆ

Mumbai News Desk